ಪದ್ಯ ೫೧: ಭೀಮನು ದುಶ್ಯಾಸನನನ್ನು ಹೇಗೆ ಮೂದಲಿಸಿದನು?

ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ ಹಿಂದೆ ಜೂಜಿನ
ಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು
ಚುಕ್ಕಿಗಳಲಾ ನಿನ್ನವರು ಕೈ
ಯಿಕ್ಕ ಹೇಳಾ ನಿನ್ನನೊಬ್ಬನ
ನಿಕ್ಕಿ ನೋಡಿದರಕಟೆನುತ ಮೂದಲಿಸಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲಾ ಸ್ವಾಮಿದ್ರೋಹಿಯೇ ನನಗೆ ಸಿಕ್ಕಿದೆಯಲಾ ಈಗ, ಬಹಳ ಮದದಿಂದ ಬೀಗುತ್ತಿದ್ದೆ! ಹಿಂದೆ ಜೂಜಾಟದಲ್ಲಿ ಹೊಟ್ಟೆಕಿಚ್ಚು ಪಟ್ಟು ದ್ರೌಪದಿಯ ಮುಡಿಗೆ ಕೈಹಾಕಿ ನಿನ್ನ ಕೋಪವನ್ನು ತೋರಿಸಿದೆಯಲ್ಲವೇ? ನಿನ್ನವರು ಕ್ಷುಲ್ಲಕರು, ನಿನ್ನೊಬ್ಬನನ್ನು ಕೈಬಿಟ್ಟು ನೋಡುತ್ತಿದ್ದಾರೆ, ಯುದ್ಧಕ್ಕೆ ಬಾ ಎಂದು ಹೇಳು, ಹೀಗೆ ಹೇಳುತ್ತಾ ಭೀಮನು ದುಶ್ಯಾಸನನನ್ನು ಮೂದಲಿಸಿದನು.

ಅರ್ಥ:
ಸಿಕ್ಕು: ಬಂಧಿಸು; ಸ್ವಾಮಿದ್ರೋಹಿ: ವಿಶ್ವಾಸಘಾತುಕ; ಸ್ವಾಮಿ: ಒಡೆಯ; ದ್ರೋಹಿ: ವಂಚಕ; ಸೊಕ್ಕು: ಅಮಲು, ಮದ; ಹಿಂದೆ: ಮೊದಲು; ಜೂಜು: ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಅಕ್ಕಜ: ಹೊಟ್ಟೆಕಿಚ್ಚು; ಮಾನಿನಿ: ಹೆಣ್ಣು; ಮುಡಿ: ತಲೆ; ವಿಡಿದು: ಹಿಡಿ, ಬಂಧಿಸು; ಚುಕ್ಕಿಗಳು: ಅಲ್ಪರು; ಅಕಟ: ಅಯ್ಯೋ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಸಿಕ್ಕಿದೆಯಲಾ+ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ +ಹಿಂದೆ +ಜೂಜಿನಲ್
ಅಕ್ಕಜವ+ ಮಾಡಿದೆಯಲಾ+ ಮಾನಿನಿಯ+ ಮುಡಿವಿಡಿದು
ಚುಕ್ಕಿಗಳಲಾ+ ನಿನ್ನವರು +ಕೈ
ಯಿಕ್ಕ +ಹೇಳಾ +ನಿನ್ನನೊಬ್ಬನನ್
ಇಕ್ಕಿ+ ನೋಡಿದರ್+ಅಕಟೆನುತ +ಮೂದಲಿಸಿದನು +ಭೀಮ

ಅಚ್ಚರಿ:
(೧) ಸಿಕ್ಕಿ, ಸೊಕ್ಕಿ, ಚುಕ್ಕಿ, ಇಕ್ಕಿ – ಪ್ರಾಸ ಪದಗಳು
(೨) ನಿನ್ನವರು ಹೇಡಿಗಳು ಎಂದು ಹೇಳಲು – ಚುಕ್ಕಿಗಳಲಾ ನಿನ್ನವರು

ನಿಮ್ಮ ಟಿಪ್ಪಣಿ ಬರೆಯಿರಿ