ಪದ್ಯ ೪೮: ದುಶ್ಯಾಸನನ ಮೇಲೆ ಭೀಮನು ಹೇಗೆ ಎರಗಿದನು?

ಹೊಯ್ದು ತರುಬನು ಹಿಡಿದು ತಡೆಗಾ
ಲ್ವೊಯ್ದು ಕೆಡಹಿದನಸಬಡಿದು ಹೊಯ್
ಹೊಯ್ದು ಬಿಡೆ ಖೊಪ್ಪರಿಸಿ ಡೊಕ್ಕರವಿಕ್ಕಿ ರಾಘೆಯಲಿ
ಹಾಯ್ದ ವಾಲಿಗಳುಸುರ ಪಾಳೆಯ
ವೆಯ್ದೆ ಬಿಟ್ಟುದು ಮೂಗಿನಲಿ ಕೈ
ಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಭೀಮನು ದುಶ್ಯಾಸನನನ್ನು ಹೊಯ್ದು ತಲೆಗೂದಲನ್ನು ಹಿಡಿದು ತಡೆಗಾಲಿನಿಂದ ಹೊಡೆದು ಕೆಡವಿ ಬಟ್ಟೆಯನ್ನು ಬಂಡೆಗೆ ಸೆಳೆದಂತೆ ಬಡಿ ಬಡಿದು, ಪಕ್ಕೆಗಳಲ್ಲಿ ಗುದ್ದಿದನು. ದುಶ್ಯಾಸನನ ಕಣ್ಣಾಲಿಗಳು ಮುಂದೆ ಬಂದವು. ಕಂಠದಲ್ಲಿದ್ದ ಪ್ರಾಣ ವಾಯುಗಳ ಬೀಡು ಮೂಗಿಗೆ ಬಂದವು. ದುಶ್ಯಾಸನನ ರಕ್ತವನ್ನು ತುಡುಕಲು ಭೀಮನು ಅತಿ ಆತುರದಿಂದ ಕೈಚಾಚಿದನು.

ಅರ್ಥ:
ಹೊಯ್ದು: ಹೊಡೆದು; ತುರುಬು: ಕೂದಲು ಗಂಟು; ಹಿಡಿ: ಮುಟ್ಟಿಗೆ, ಮುಷ್ಟಿ; ತಡೆಗಾಲು: ತಡೆಯುತ್ತಿರುವ ಕಾಲು; ಓಯ್ದು: ಒದೆದು; ಕೆಡಹು: ಕೆಳಕ್ಕೆ ಬೀಳಿಸು; ಅಸಗ: ಅಗಸ; ಬಡಿ: ಹೊಡೆ; ಹೊಯ್: ಬಟ್ಟೆಯೊಗೆವಾಗ ಬರುವ ಶಬ್ದ, ಬಡಿ ಬಡಿದು; ಖೊಪ್ಪರಿಸು: ಮೀರು, ಹೆಚ್ಚು; ಡೊಕ್ಕರ: ಗುದ್ದು, ಮಲ್ಲಯುದ್ಧದಲ್ಲಿ ಒಂದು ವರಸೆ; ರಾಘೆ: ಕುದುರೆಯನ್ನು ಹತ್ತಲು ಅದರ ಮಗ್ಗುಲಲ್ಲಿ ನೇತು ಬಿಟ್ಟಿರುವ ಬಳೆ; ಹಾಯ್ದು: ಹೊಡೆ; ಆಲಿ: ಕಣ್ಣು; ಉಸುರು: ವಾಯು; ಪಾಳೆಯ: ಸ್ಥಾನ; ಬಿಟ್ಟುದು: ತೊರೆ; ಮೂಗು: ನಾಸಿಕ; ಕೈ: ಹಸ್ತ; ತುಡುಕು: ಬೇಗನೆ ಹಿಡಿಯುವುದು, ಹಿಡಿ; ಶೋಣಿತ: ರಕ್ತ; ಲಟಕಟ: ಚಕಿತನಾಗು, ಉದ್ರೇಕಗೊಳ್ಳು;

ಪದವಿಂಗಡಣೆ:
ಹೊಯ್ದು +ತರುಬನು +ಹಿಡಿದು +ತಡೆಗಾಲ್
ಒಯ್ದು +ಕೆಡಹಿದನ್+ಅಸಬಡಿದು +ಹೊಯ್
ಹೊಯ್ದು+ ಬಿಡೆ +ಖೊಪ್ಪರಿಸಿ +ಡೊಕ್ಕರವಿಕ್ಕಿ +ರಾಘೆಯಲಿ
ಹಾಯ್ದವ್ + ಆಲಿಗಳ್+ಉಸುರ+ ಪಾಳೆಯವ್
ಎಯ್ದೆ +ಬಿಟ್ಟುದು +ಮೂಗಿನಲಿ +ಕೈಗ್
ಎಯ್ದು+ ತುಡುಕಿದ +ಶೋಣಿತಕೆ+ ಲಟಕಟಿಸಿದನು +ಭೀಮ

ಅಚ್ಚರಿ:
(೧) ಹೊಯ್ದು, ಎಯ್ದು, ಒಯ್ದು – ಪ್ರಾಸ ಪದಗಳು
(೨) ಉಪಮಾನದ ಪ್ರಯೋಗ – ಕೆಡಹಿದನಸಬಡಿದು ಹೊಯ್ ಹೊಯ್ದು;
(೩) ಉಸುರು ನಿಲ್ಲುತ್ತಿತ್ತು ಎಂದು ಹೇಳಲು – ಉಸುರ ಪಾಳೆಯವೆಯ್ದೆ ಬಿಟ್ಟುದು ಮೂಗಿನಲಿ
(೪) ದುಶ್ಯಾಸನ ರಕ್ತವನ್ನು ಕುಡಿಯುವ ಕಾತುರ – ಕೈಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ

ನಿಮ್ಮ ಟಿಪ್ಪಣಿ ಬರೆಯಿರಿ