ಪದ್ಯ ೧೧: ಧರ್ಮಜನೆದುರಿನಲ್ಲಿ ಸೈನ್ಯವು ಹೇಗೆ ಸೇರಿತು?

ನುಡಿವ ವಾದ್ಯದ ಜಡಿವ ಕಹಳೆಯ
ಹೊಡೆವ ಭೇರಿಯ ರವದ ರಭಸದೊ
ಳೊಡೆದುದಾ ದಿಗುಭಿತ್ತಿಯೆನೆ ಚಲಿಸುವ ಚತುರ್ಬಲದ
ತುಡುಕು ಚಮರಿಯ ಝಾಡಿಗೆದರಿನ
ಗಡಣಿಸುವ ಝಲ್ಲರಿಯ ದಳ ಬರ
ಸಿಡಿಲ ಮೇಳವದಂತೆ ನೆರೆದುದು ನೃಪತಿಯಿದಿರಿನಲಿ (ಕರ್ಣ ಪರ್ವ, ೧೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ವಾದ್ಯಗಳು ನುಡಿಯಲಾರಂಭಿಸಿದವು, ಕಹಳೆ ಮೊಳಗಿತು, ಭೇರಿಗಳು ಜೋರಾಗಿ ಶಬ್ದಮಾಡಲು ಪ್ರಾರಂಭಿಸಿದವು, ಈ ಸದ್ದಿನಿಂದ ದಿಕ್ಕುಗಳ ಗೋಡೆಯೇ ಬಿರುಕುಬಿಡುವುದೋ ಎಂಬಂತಿತ್ತು. ಚತುರಂಗ ಬಲವು ಚಲಿಸುತ್ತಿತ್ತು. ಚಾಮರಗಳನ್ನು ಝಲ್ಲೈಗಳನ್ನು ಹಿಡಿದು, ಧರ್ಮಜನೆದುರಿನಲ್ಲಿ ಸೈನ್ಯವು ಸಿಡಿಲಿನಜಾತ್ರೆ ಯಂಗೆ ಸೇರಿತು.

ಅರ್ಥ:
ನುಡಿ: ಮಾತು; ವಾದ್ಯ: ಸಂಗೀತದ ಸಾಧನ; ಜಡಿ:ಕೂಗು, ಧ್ವನಿಮಾಡು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಹೊಡೆ: ಚರ್ಮ ವಾದ್ಯಗಳನ್ನು ಬಾರಿಸು, ಹೊಡೆ; ಭೇರಿ:ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ರವ: ಶಬ್ದ; ರಭಸ: ವೇಗ, ಜೋರು; ದಿಗು: ದಿಕ್ಕು; ಭಿತ್ತಿ: ಗೋಡೆ; ಚಲಿಸು: ನಡೆಸು, ಅಲ್ಲಾಡಿಸು; ಚತುರ್ಬಲ:ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ತುಡುಕು: ಹೋರಾಡು, ಸೆಣಸು; ಚಮರಿ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಝಾಡಿ: ಕಾಂತಿ; ಕೆದರು: ಹರಡು; ಗಡಣೆ: ಸರಣಿ; ಝಲ್ಲರಿ: ಕುಚ್ಚು, ಗೊಂಡೆ; ದಳ: ಸೈನ್ಯ; ಬರಸಿಡಿಲ: ಅನಿರೀಕ್ಷಿತವಾದ ಆಘಾತ; ಮೇಳ: ಗುಂಪು; ನೆರೆ: ಸೇರು; ನೃಪತಿ: ರಾಜ; ಇದಿರು: ಎದುರು;

ಪದವಿಂಗಡಣೆ:
ನುಡಿವ +ವಾದ್ಯದ +ಜಡಿವ +ಕಹಳೆಯ
ಹೊಡೆವ +ಭೇರಿಯ +ರವದ +ರಭಸದೊಳ್
ಒಡೆದುದ್+ಆ+ ದಿಗು+ಭಿತ್ತಿಯೆನೆ +ಚಲಿಸುವ +ಚತುರ್ಬಲದ
ತುಡುಕು +ಚಮರಿಯ +ಝಾಡಿ+ಕೆದರಿನ
ಗಡಣಿಸುವ +ಝಲ್ಲರಿಯ +ದಳ+ ಬರ
ಸಿಡಿಲ +ಮೇಳವದಂತೆ +ನೆರೆದುದು +ನೃಪತಿ+ಯಿದಿರಿನಲಿ

ಅಚ್ಚರಿ:
(೧) ನುಡಿವ, ಹೊಡೆವ, ಒಡೆದು, ಚಲಿಸುವ – ವಾದ್ಯಗಳ ನುಡಿಸುವ ಬಗೆ

ಪದ್ಯ ೧೦: ಅರ್ಜುನನೊಡನೆ ಯಾರು ಹೊರಟರು?

ನೇಮವಾಯಿತು ಮತ್ತೆ ನೃಪತಿ
ಸ್ತೋಮವರ್ಜುನನೊಡನೆ ಕದನೋ
ದ್ಧಾಮರುಬ್ಬರಿಸಿದರು ಪತಿಕರಣೆಗೆ ಮಹೀಪತಿಯ
ಸೋಮಕರು ನಕುಲಾದಿಗಳು ಸುತ
ಸೋಮಕಾದಿ ಕುಮಾರರಖಿಳ ಸ
ನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ (ಕರ್ಣ ಪರ್ವ, ೧೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಮತ್ತೆ ಧರ್ಮಜನು ನಿಯಮವನ್ನು ವಿವರಿಸಲು ಯುದ್ಧದಲ್ಲಿ ಮಹಾಪರಾಕ್ರಮಿಗಳಾದ ರಾಜರನ್ನು ಕರೆದು ಅವರೆಲ್ಲರಿಗೂ ಸನ್ಮಾನಿಸಲು ಅವರೆಲ್ಲರೂ ಉತ್ಸಾಹದಿಂದ ಉಬ್ಬಿದರು. ಸೋಮಕರು, ನಕುಲನೇ ಮೊದಲಾದವರು, ಸುತಸೋಮನೇ ಮೊದಲಾದ ಪಾಂಡವಕುಮಾರರು, ಕಾಲಿನ ತೊಡರು ಖಡೆಯಗಳು ಝಣಝಣ ಸದ್ದು ಮಾಡುತ್ತಿರಲು ಅರ್ಜುನನೊಡನೆ ಹೊರಟರು.

ಅರ್ಥ:
ನೇಮ: ನಿಯಮ; ಮತ್ತೆ: ಪುನಃ; ನೃಪತಿ: ರಾಜ; ಸ್ತೋಮ: ಗುಂಪು; ಒಡನೆ: ಜೊತೆ; ಕದನ: ಯುದ್ಧ; ಉದ್ಧಾಮ: ಶ್ರೇಷ್ಠ; ಉಬ್ಬರ: ಹೆಚ್ಚಳ; ಪತಿಕರಣೆ: ಮೆಚ್ಚು, ಮೆಚ್ಚಿಗೆ; ಮಹೀಪತಿ: ರಾಜ; ಆದಿ: ಮೊದಲಾದ; ಅಖಿಳ: ಎಲ್ಲಾ; ಸನಾಮ: ಪ್ರಖ್ಯಾತ; ಎದ್ದು: ಮೇಲೇಳು; ತೊಡರು: ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಝಣಝಣ: ಶಬ್ದವನ್ನು ಹೇಳುವ ಪದ; ರವ: ಶಬ್ದ; ಖಡೆ: ಕಾಲ ಖಡಗ, ನೂಪುರ;

ಪದವಿಂಗಡಣೆ:
ನೇಮವಾಯಿತು +ಮತ್ತೆ +ನೃಪತಿ
ಸ್ತೋಮವ್+ಅರ್ಜುನನೊಡನೆ+ ಕದನ
ಉದ್ಧಾಮರ್+ಉಬ್ಬರಿಸಿದರು +ಪತಿಕರಣೆಗೆ +ಮಹೀಪತಿಯ
ಸೋಮಕರು +ನಕುಲಾದಿಗಳು +ಸುತ
ಸೋಮಕಾದಿ +ಕುಮಾರರ್+ಅಖಿಳ +ಸ
ನಾಮರ್+ಎದ್ದುದು +ತೊಡರ +ಝಣಝಣ +ರವದ+ ಖಡೆಯದಲಿ

ಅಚ್ಚರಿ:
(೧) ಎದ್ದಾಗ ಆಗುವ ಶಬ್ದವನ್ನು ಚಿತ್ರಿಸಿರುವುದು – ಸನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ
(೨) ಸ್ತೋಮ, ಸೋಮ, ಸುತಸೋಮ – ಪದಗಳ ಬಳಕೆ

ಪದ್ಯ ೯: ಧರ್ಮಜನು ಎಲ್ಲರಿಗೆ ಏನನ್ನು ನೀಡಿದನು?

ತಾಯೆನುತ ಘನಸಾರದುರು ತವ
ಲಾಯಿಗಳ ನೂಕಿದನು ಮುದದಲಿ
ಬಾಯ ತಂಬುಲವಿತ್ತು ತಮ್ಮನ ಮತ್ತೆ ತಕ್ಕೈಸಿ
ರಾಯ ಕೇಳೈ ಬಳಿಕಖಿಳ ದಳ
ನಾಯಕರ ಕರೆಕರೆದು ಕದನ ಪ
ಸಾಯತರಿಗಿತ್ತನು ನೃಪತಿ ಕರ್ಪುರದ ವೀಳೆಯವ (ಕರ್ಣ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಸಾರವುಳ್ಳ ಕರ್ಪೂರದ ಹಲಗೆಗಳ ತಟ್ಟೆಗಲನ್ನು ತರಿಸಿ ಅರ್ಜುನನ ಮುಂದಿಟ್ಟನು. ತನ್ನ ಬಾಯಲ್ಲಿದ್ದ ವೀಳೆಯನ್ನು ತೆಗೆದು ಅರ್ಜುನನಿಗೆ ಕೊಟ್ಟ ಅರ್ಜುನನನ್ನು ಬಿಗಿದಪ್ಪಿಕೊಂಡನು ಬಳಿಕ ಆಪ್ತರಾದ ಸೇನಾಧಿಪತಿಗಳೆಲ್ಲರನ್ನು ಕರೆದು ಅವರೆಲ್ಲರಿಗೂ ಕರ್ಪೂರ ವೀಳೆಯನಿತ್ತನು.

ಅರ್ಥ:
ತಾ: ಕೊಡು; ಘನ: ಶ್ರೇಷ್ಠ; ಸಾರ: ತಿರುಳು; ಉರು: ಹೆಚ್ಚಾದ, ಶ್ರೇಷ್ಠ; ತವಲಾಯಿ: ಕರ್ಪೂರದ ಭರಣಿ; ನೂಕು: ತಳ್ಳು; ಮುದ: ಸಂತೋಷ; ಬಾಯಿ: ಮುಖದೊಂದು ಅಂಗ; ತಂಬುಲ: ವೀಳೆ, ತಾಂಬೂಲ; ತಕ್ಕೈಸು: ಆಲಂಗಿಸು; ರಾಯ: ರಾಜ; ಬಳಿಕ: ನಂತರ; ಅಖಿಳ: ಎಲ್ಲಾ; ದಳ: ಸೈನ್ಯ; ನಾಯಕ: ಒಡೆಯ; ಕರೆ: ಬರೆಮಾಡು; ಕದನ: ಯುದ್ಧ; ಪಸಾಯ್ತ: ಸಾಮಂತರಾಜ; ಇತ್ತನು: ನೀಡಿದನು; ವೀಳೆ: ತಾಂಬೂಲ; ತಮ್ಮ: ಸಹೋಹರ;

ಪದವಿಂಗಡಣೆ:
ತಾಯೆನುತ +ಘನ+ಸಾರದುರು +ತವ
ಲಾಯಿಗಳ+ ನೂಕಿದನು+ ಮುದದಲಿ
ಬಾಯ+ ತಂಬುಲವಿತ್ತು +ತಮ್ಮನ +ಮತ್ತೆ +ತಕ್ಕೈಸಿ
ರಾಯ+ ಕೇಳೈ +ಬಳಿಕ+ಅಖಿಳ +ದಳ
ನಾಯಕರ+ ಕರೆಕರೆದು +ಕದನ+ ಪ
ಸಾಯತರಿಗ್+ಇತ್ತನು +ನೃಪತಿ+ ಕರ್ಪುರದ+ ವೀಳೆಯವ

ಅಚ್ಚರಿ:
(೧) ಬಾಯ, ರಾಯ, ಪಸಾಯ – ಪ್ರಾಸ ಪದಗಳು
(೨) ತಂಬುಲ, ವೀಳೆ – ಸಮನಾರ್ಥಕ ಪದ

ಪದ್ಯ ೮: ಧರ್ಮಜನು ಅರ್ಜನನ ಬಗ್ಗೆ ಯಾವ ಹೆಮ್ಮೆಯ ನುಡಿಗಳನ್ನು ನುಡಿದನು?

ನೀನಿನಿತ ನೆರೆ ನುಡಿವರೇ ತ
ನ್ನಾಣೆ ಬಾರೈ ಬಂದೆ ಬಾ ಎನು
ತಾ ನರೇಶ್ವರ ತೆಗೆದು ಬಿಗಿಯಪ್ಪಿದನು ಫಲುಗುಣನ
ದಾನವಾಮರರೊಳಗೆ ನಿನಗೆ ಸ
ಮಾನ ಭಟರಿಲ್ಲೆಂಬುದೀ ಸ್ನೇ
ಹಾನುಗುಣವೇ ಲೋಕವರಿಯದೆ ಪಾರ್ಥ ಹೇಳೆಂದ (ಕರ್ಣ ಪರ್ವ, ೧೮ ಸಂಧಿ, ೮ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ತಮ್ಮನಾದ ಅರ್ಜುನನ್ನು ಮೇಲಕ್ಕೇಳಿಸುತ್ತಾ, ತಮ್ಮಾ ನೀನು ಇಂತಹ ಶಪಥವನ್ನು ಮಾಡುವ ಅಗತ್ಯವೇನಿದೆ, ಅಪ್ಪಾ ತಂದೆ ಇತ್ತ ಬಾ, ಎಂದು ಧರ್ಮಜನು ಪ್ರೀತಿಯಿಂದ ಅರ್ಜುನನಪ್ಪಿಕೊಂಡನು. ದೇವ ದಾನವರಲ್ಲಿಯೂ ನಿನಗೆ ಸರಿಸಮಾನರಾದ ವೀರರಿಲ್ಲವೆಂದು ನಾನು ಹೇಳಿದರೆ ಅದು ಅಭಿಮಾನದ ಮಾತಲ್ಲ, ಈ ಮಾತನ್ನು ಲೋಕವೇ ತಿಳಿದಿದೆ ಎಂದು ಅರ್ಜುನನ ವೀರತ್ವವನ್ನು ಕೊಂಡಾಡಿದನು.

ಅರ್ಥ:
ಇನಿತ: ಈ ರೀತಿ; ನೆರೆ: ಅತಿಶಯ; ನುಡಿ: ಮಾತು, ಶಪಥ; ಆಣೆ: ಪ್ರಮಾಣ; ಬಾರೈ: ಬಾ, ಆಗಮಿಸು; ತಂದೆ: ಪಿತ; ನರೇಶ್ವರ: ರಾಜ; ತೆಗೆ: ಮೇಲ ಕ್ಕೆತ್ತು; ಬಿಗಿಯಪ್ಪಿ: ಆಲಂಗಿಸು; ದಾನವ: ರಾಕ್ಷಸ; ಅಮರ: ದೇವತೆ; ಸಮಾನ: ಸರಿಯಾದ; ಭಟರು: ಸೈನಿಕರು; ಸ್ನೇಹ: ಮಿತ್ರ; ಗುಣ: ನಡತೆ; ಲೋಕ: ಜಗತ್ತು; ಅರಿ: ತಿಳಿ; ಹೇಳು: ತಿಳಿಸು; ಅನುಗುಣ: ಯೋಗ್ಯ;

ಪದವಿಂಗಡಣೆ:
ನೀನ್+ಇನಿತ +ನೆರೆ +ನುಡಿವರೇ +ತ
ನ್ನಾಣೆ +ಬಾರೈ +ಬಂದೆ +ಬಾ +ಎನು
ತಾ +ನರೇಶ್ವರ+ ತೆಗೆದು+ ಬಿಗಿಯಪ್ಪಿದನು +ಫಲುಗುಣನ
ದಾನವ+ಅಮರರೊಳಗೆ +ನಿನಗೆ+ ಸ
ಮಾನ +ಭಟರಿಲ್ಲೆಂಬುದ್+ಈ +ಸ್ನೇಹ
ಅನುಗುಣವೇ +ಲೋಕವರಿಯದೆ +ಪಾರ್ಥ +ಹೇಳೆಂದ

ಅಚ್ಚರಿ:
(೧) ತ್ರಿವಳಿ ಪದಗಳ ಬಳಕೆ – ನೀನಿನಿತ ನೆರೆ ನುಡಿವರೇ; ಬಾರೈ +ಬಂದೆ +ಬಾ