ಪದ್ಯ ೧: ಧರ್ಮಜನ ಅರ್ಜುನನ ಮಿಲನ ಹೇಗಾಯಿತು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನನು ಸಾಮದಲಿ ಮುರರಿಪು
ಬೋಳವಿಸಿ ಭಾವಜ್ಞ ನಂದಿಸಿದನು ಮನೋವ್ಯಥೆಯ
ಮೇಲುಸುರ ಬಿಕ್ಕುಳಿನ ಬಿಗುಹಿನ
ತಾಳಿಗೆಯ ನೀರುಗಳ ಮುಕ್ಕುಳಿ
ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ (ಕರ್ಣ ಪರ್ವ, ೧೮ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಎಲೈ ರಾಜನೇ ಕೇಳು, ಭಾವಜ್ಞನಾದ ಕೃಷ್ಣನು ಸಾಮೋಪಾಯದಿಂದ ಧರ್ಮಜನ ಮನಸ್ಸಿನ ವ್ಯಥೆಯನ್ನು ಕಳೆದನು. ನಿಟ್ಟುಸಿರು ಬಿಡುತ್ತಾ, ಬಿಕ್ಕುಳಿಸುತ್ತಾ, ಗಂಟಲು ಕಟ್ಟಿ ಗದ್ಗದಿತನಾಗಿ ಕಣ್ಣೀರು ಸುರಿಸುತ್ತಾ ಧರ್ಮಜನು ಅರ್ಜುನನನ್ನು ಆಲಂಗಿಸಿದನು.

ಅರ್ಥ:
ಕೇಳು: ಆಲಿಸು ಅವನಿಪ: ರಾಜ; ಭೂಪಾಲ: ರಾಜ; ಸಾಮ: ಒಡಂಬಡಿಕೆ, ರಾಜಿ, ಶಾಂತಗೊಳಿಸು; ಮುರರಿಪು: ಕೃಷ್ಣ; ಬೋಳೈಸು: ಸಮಾಧಾನಪಡಿಸು; ಭಾವಜ್ಞ: ಜ್ಞಾನಿ; ನಂದಿಸು: ಶಮನಗೊಳಿಸು; ಮನೋವ್ಯಥೆ: ಮನಸ್ಸಿನ ಯಾತನೆ; ಮೇಲುಸುರ: ನಿಟ್ಟುಸಿರು; ಬಿಕ್ಕುಳು: ಬಿಕ್ಕು; ಬಿಗುಹು:ಗಟ್ಟಿ, ಕಷ್ಟ; ತಾಳಿಗೆ: ಗಂಟಲು; ಆಲಿ: ಕಣ್ಣು; ನೀರು: ಜಲ; ಮುಕ್ಕುಳಿ: ತುಂಬಿದ; ನರನಾಥ: ರಾಜ; ಅಪ್ಪು: ಅಪ್ಪುಗೆ, ಆಲಂಗಿಸು;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ+ಅವನಿಪ +ಭೂ
ಪಾಲನನು +ಸಾಮದಲಿ +ಮುರರಿಪು
ಬೋಳವಿಸಿ+ ಭಾವಜ್ಞ +ನಂದಿಸಿದನು +ಮನೋವ್ಯಥೆಯ
ಮೇಲುಸುರ +ಬಿಕ್ಕುಳಿನ+ ಬಿಗುಹಿನ
ತಾಳಿಗೆಯ +ನೀರುಗಳ +ಮುಕ್ಕುಳಿನ್
ಆಲಿಗಳ +ನರನಾಥ +ತೆಗೆದಪ್ಪಿದನು +ಫಲುಗುಣನ

ಅಚ್ಚರಿ:
(೧) ಅವನಿಪ, ಭೂಪಾಲ, ನರನಾಥ – ಸಮನಾರ್ಥಕ ಪದ
(೨) ದೂರಮಾಡಿದನು ಎಂದು ಹೇಳಲು ನಂದಿಸು ಪದದ ಬಳಕೆ
(೩) ಭಾವನೆಗಳು ಕೂಡಿ ಬಂದಾಗುವ ಚಿತ್ರಣ: ೩-೬ ಸಾಲು

ನಿಮ್ಮ ಟಿಪ್ಪಣಿ ಬರೆಯಿರಿ