ಪದ್ಯ ೭: ಕರ್ಣನನ್ನು ಕೊಲ್ಲದಿದ್ದರೆ ಅರ್ಜುನನು ಯಾವ ಸ್ಥಿಗೆ ಬಯಸಿದನು?

ಖಳನ ಹಿಂಸಾಪರನ ಡಂಬನ
ಚಳಮತಿಯ ನಾಸ್ತಿಕನ ನಿಂದಾ
ಕುಳನ ಪರಧನಬಾಧಕನ ದತ್ತಾಪಹಾರಕನ
ಜ್ವಲನದನ ಶಿಶುಘಾತಕನ ಪರಿ
ದಳಿತಧರ್ಮನ ಗತಿಗಳಲಿ ತಾ
ನಿಳಿವೆನೆಂದೇ ಕೊಲ್ಲದಿರ್ದರೆ ಸೂತನಂದನನ (ಕರ್ಣ ಪರ್ವ, ೧೮ ಸಂಧಿ, ೭ ಪದ್ಯ)

ತಾತ್ಪರ್ಯ:
ದುಷ್ಟ, ಹಿಂಸಾಪರ, ದಾಂಭಿಕ, ಚಂಚಲ ಮತಿಯುಳ್ಳವನು, ನಾಸ್ತಿಕ, ನಿಂದೆಯಲ್ಲೇ ಇರುವವನು, ಪರದ್ರವ್ಯಾಪಹಾರಿ, ದತ್ತಾಪಹಾರಿ, ಮೋಸದಿಂದ ಪರರ ಆಸ್ತಿಗೆ ಬೆಂಕಿ ಹಚ್ಚುವವನು, ಶಿಶುಘಾತಕಿ, ಧರ್ಮಹೀನ, ಇವರ ಗತಿಯು ಇಂದೇ ಕರ್ಣನನ್ನು ಕೊಲ್ಲದಿದ್ದರೆ ನನಗೆ ಬರಲಿ.

ಅರ್ಥ:
ಖಳ: ದುಷ್ಟ; ಹಿಂಸ: ತೊಂದರೆ; ಡಂಬನ: ಡಿಂಬ, ದೇಹ; ಚಳಮತಿ: ಅಲುಗುವ ಬುದ್ಧಿ; ನಾಸ್ತಿಕ: ನಿರೀಶ್ವರವಾದಿ; ನಿಂದನೆ: ಬಯ್ಗಳು, ದೂಷಣೆ; ಆಕುಳ: ; ಪರಧನ: ಬೇರೆಯವರ ಹಣ; ಬಾಧಕ: ತೊಂದರೆ ಮಾಡುವವನ; ದತ್ತ: ಲಭ್ಯ, ಕೊಡಲ್ಪಟ್ಟ; ಅಪಹಾರ: ಕಿತ್ತುಕೊಳ್ಳುವುದು; ಜ್ವಲನ: ಪ್ರಕಾಶಿಸು, ಹೊಳೆಯುವಿಕೆ; ಶಿಶು: ಚಿಕ್ಕ ಮಗು; ಘಾತಕ: ಕೊಲೆಗೆಡುಕ; ಪರಿದಳಿತ: ; ಅಧರ್ಮ: ನ್ಯಾಯವಲ್ಲದುದು; ಗತಿ: ಸ್ಥಿತಿ; ಕೊಲ್ಲು: ಸಾಯಿಸು; ಸೂತ: ರಥವನ್ನು ಓಡಿಸುವವ; ನಂದನ: ಮಗ;

ಪದವಿಂಗಡಣೆ:
ಖಳನ +ಹಿಂಸಾಪರನ +ಡಂಬನ
ಚಳಮತಿಯ +ನಾಸ್ತಿಕನ +ನಿಂದಾ
ಕುಳನ +ಪರಧನ+ಬಾಧಕನ+ ದತ್ತಾಪಹಾರಕನ
ಜ್ವಲನದನ+ ಶಿಶುಘಾತಕನ+ ಪರಿ
ದಳಿತ+ಧರ್ಮನ +ಗತಿಗಳಲಿ +ತಾ
ನಿಳಿವೆನ್+ಇಂದೇ +ಕೊಲ್ಲದಿರ್ದರೆ +ಸೂತ+ನಂದನನ

ಪದ್ಯ ೬: ಅರ್ಜುನನು ಧರ್ಮಜನಿಗೆ ಯಾವ ಭಾಷೆಯನ್ನು ನೀಡಿದನು?

ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿ ಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ (ಕರ್ಣ ಪರ್ವ, ೧೮ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನಿಗೆ ಅತ್ಯಂತ ಉತ್ಸಾಹದಿಂದ, ರಾಜ ಇದನ್ನು ಬರೆದುಕೋ, ಕರ್ಣನ ತಲೆ ಉಳಿದುಕೊಂಡು, ಕಮಲಗಳು ಮುಚ್ಚಿದರೆ, ಚಕ್ರವಾಕ ಸಂತಸದಿಂದ ಸೇರುವುದನ್ನು ಬಿಟ್ಟರೆ, ರಾತ್ರಿಯು ಕತ್ತಲಿನ ಬೀಜವನ್ನು ಆಗಸದಲ್ಲಿ ಬಿತ್ತಿದರೆ, ಗಾಳಿ ನಿಂತರೆ ನಾನು ನಿಮ್ಮ ತಮ್ಮನೇ ಅಲ್ಲ ಎಂದು ನುಡಿದನು.

ಅರ್ಥ:
ಬರಸು: ಲಿಖಿತವಾಗಿಸು; ಭಾಷೆ: ಮಾತು, ಆಣೆ; ಶಿರ: ತಲೆ; ಉಳಿ: ಜೀವಿಸು, ಹೊರತಾಗು; ತಾವರೆ: ಕಮಲ; ನಗೆ: ಅರಳು, ಸಂತಸ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ;ಮೈ: ತನು; ಬೆಸುಗೆ: ಪರಸ್ಪರ ಸೇರುವುದು, ಒಂದಾಗುವುದು; ಬಿಡು: ತ್ಯಜಿಸು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಇರುಳು: ರಾತ್ರಿ; ಬೀಜ:ಉತ್ಪತ್ತಿ ಸ್ಥಾನ, ಮೂಲ; ಹರಹು: ಹಬ್ಬುವಿಕೆ, ಪ್ರಸರ; ನಭ: ಆಗಸ; ಕಲಿ: ಶೂರ; ಅಯ್ಯ: ತಂದೆ; ನಿಂದರೆ: ನಿಲ್ಲು, ತಡೆ; ಬಳಿಕ: ನಂತರ; ತಮ್ಮ: ಸಹೋದರ;

ಪದವಿಂಗಡಣೆ:
ಬರಸು +ಭಾಷೆಯನ್+ಇಂದು +ಕರ್ಣನ
ಶಿರವುಳಿದು+ ತಾವರೆಯ +ನಗೆ +ಪೈ
ಸರಿಸಿದರೆ +ಮೈಬೆಸುಗೆ +ಬಿಟ್ಟರೆ +ಜಕ್ಕವಕ್ಕಿಗಳ
ಇರುಳ +ಬೀಜವನ್+ಇಂದು+ ನಭದಲಿ
ಹರಹಿದರೆ +ಕಲಿ +ಭೀಮನ್+ಅಯ್ಯನ
ಹರಹು +ನಿಂದರೆ +ಬಳಿಕ +ನಿಮ್ಮಯ +ತಮ್ಮನಲ್ಲೆಂದ

ಅಚ್ಚರಿ:
(೧) ಕಮಲ ಮುದುಡಿದರೆ ಎಂದು ಹೇಳಲು – ತಾವರೆಯ ನಗೆ ಪೈಸರಿಸಿದರೆ
(೨) ವಾಯು ಎಂದು ಹೇಳಲು – ಭೀಮನಯ್ಯನ ಹರಹು ಎಂದು ಬಳಸಿರುವುದು

ಪದ್ಯ ೫: ಪಾರ್ಥನು ಯಾವುದಕ್ಕೆ ನೇಮ ಕೇಳಿದನು?

ದೇವ ಪರಿವಾರಕ್ಕೆ ನೇಮವ
ನೀವ ಸಮಯದಲಿಂದು ನಿಮ್ಮ ಕೃ
ಪಾವಲೋಕನವಾದುದೆನ್ನ ಪರಾಕ್ರಮಾನಳಕೆ
ಜೀವಸಖನಲ್ಲಾ ಸುಯೋಧನ
ನಾವ ಪಾಡು ವಿರೋಧಿಕುಲ ವಿ
ದ್ರಾವಣಕೆ ಕೊಡು ತನಗೆ ನೇಮವನೆಂದನಾ ಪಾರ್ಥ (ಕರ್ಣ ಪರ್ವ, ೧೮ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮರಾಯನ ಮಾತಿಗೆ ಅರ್ಜುನನು, ದೇವ ಪರಿವಾರಕ್ಕೆ ನೇಮವನ್ನು ಕೊಡುವಾಗ ನಿಮ್ಮ ಕೃಪಾವಲೋಕನ ನನ್ನ ಮೇಲಾಯಿತು. ನನ್ನ ಪರಾಕ್ರಮಾಗ್ನಿಗೆ ಸುಯೋಧನನ ಜೀವಸಖನಾದ ಕರ್ಣನು, ವೈರಿಗಳ ಕುಲವನ್ನು ನಾಶಗೊಳಿಸಲು ನನಗೆ ಅಪ್ಪಣೆಕೊಡು ಎಂದನು.

ಅರ್ಥ:
ದೇವ: ಭಗವಂತ; ಪರಿವಾರ: ಸಂಬಂಧಿಕರು, ಪರಿಜನ; ನೇಮ:ವ್ರತ; ಈವ: ನೀಡುವ; ಸಮಯ: ಕಾಲ; ಕೃಪ: ಕರುಣೆ, ದಯೆ; ಅವಲೋಕನೆ: ವೀಕ್ಷಣೆ; ಪರಾಕ್ರಮ: ಶೌರ್ಯ; ಜೀವಸಖ: ಪ್ರಾಣಸ್ನೇಹಿತ; ಪಾಡು: ಪಂಥ, ಪ್ರತಿಜ್ಞೆ; ವಿರೋಧಿ: ವೈರಿ; ಕುಲ: ವಂಶ; ವಿದ್ರಾವಣ: ಕರಗಿಸುವಿಕೆ; ಕೊಡು: ನೀಡು; ನೇಮ: ಅಪ್ಪಣೆ;

ಪದವಿಂಗಡಣೆ:
ದೇವ +ಪರಿವಾರಕ್ಕೆ+ ನೇಮವನ್
ಈವ+ ಸಮಯದಲ್+ಇಂದು +ನಿಮ್ಮ +ಕೃ
ಪಾವಲೋಕನವಾದುದ್+ಎನ್ನ +ಪರಾಕ್ರಮಾನಳಕೆ
ಜೀವಸಖನಲ್ಲಾ+ ಸುಯೋಧನನ್
ಆವ+ ಪಾಡು +ವಿರೋಧಿಕುಲ +ವಿ
ದ್ರಾವಣಕೆ+ ಕೊಡು +ತನಗೆ+ ನೇಮವನೆಂದನಾ +ಪಾರ್ಥ

ಅಚ್ಚರಿ:
(೧) ವಿ ಕಾರದ ಜೋಡಿ ಪದ – ವಿರೋಧಿಕುಲ ವಿದ್ರಾವಣಕೆ

ಪದ್ಯ ೪: ಧರ್ಮಜನು ಏನು ಅಪ್ಪಣೆಕೊಟ್ಟನು?

ಇಟ್ಟಣಿಸುವರಿಸೈನ್ಯಜಲಧಿಗೆ
ಕಟ್ಟೆಯಾದನು ಭೀಮನೊಬ್ಬನ
ಬಿಟ್ಟು ನೋಡುವುದುಚಿತವೇ ಪರಿವಾರ ಪಂಥದಲಿ
ಕೊಟ್ಟ ನೇಮವ ಯಮಳರಿಗೆ ಜಗ
ಜಟ್ಟಿ ಸಾತ್ಯಕಿ ಕಮಲಮುಖಿಯೊಡ
ಹುಟ್ಟಿದನು ಮೊದಲಾಗಿ ನೃಪಜನವೇಳಿ ನೀವೆಂದ (ಕರ್ಣ ಪರ್ವ, ೧೮ ಸಂಧಿ, ೪ ಪದ್ಯ)

ತಾತ್ಪರ್ಯ:
ಅರಸನು ಮುನ್ನುಗ್ಗಿ ಬರುವ ಶತ್ರುಸೈನ್ಯ ಸಮುದ್ರಕ್ಕೆ ಭೀಮನೊಬ್ಬನೇ ಕಟ್ಟೆಯಾಗಿ ಅಡ್ಡ ನಿಂತಿದ್ದಾನೆ. ಅವನೊಬ್ಬನನ್ನೇ ಬಿಟ್ಟು ನೋಡುವುದು ಉಚಿತವಲ್ಲ. ನಕುಲ ಸಹದೇವರು, ಸಾತ್ಯಕಿ, ಧೃಷ್ಟದ್ಯುಮ್ನ ಮೊದಲಾದ ರಾಜರು ಸಿದ್ಧರಾಗಿ ಎಂದು ಅಪ್ಪಣೆಕೊಟ್ಟನು.

ಅರ್ಥ:
ಇಟ್ಟಣಿಸು: ದಟ್ಟವಾಗು; ಅರಿ: ವೈರಿ; ಸೈನ್ಯ: ದಳ; ಜಲಧಿ: ಸಮುದ್ರ; ಕಟ್ಟೆ:ಒಡ್ಡು; ಬಿಡು: ತೊರೆ; ನೋಡು: ಗೋಚರಿಸು; ಉಚಿತ: ಸರಿಯಾದ; ಪರಿವಾರ: ಸಂಬಂಧಿಕರು; ಪಂಥ: ಮಾರ್ಗ; ನೇಮ: ವ್ರತ; ಯಮಳ: ಅವಳಿ ಮಕ್ಕಳು; ಜಗಜಟ್ಟಿ: ಪರಾಕ್ರಮಿ; ಕಮಲಮುಖಿ: ಕಮಲದಂತಹ ಮುಖ (ದ್ರೌಪದಿ); ಹುಟ್ಟು: ಜನನ; ಮೊದಲು: ಆದಿ; ನೃಪ: ರಾಜ;

ಪದವಿಂಗಡಣೆ:
ಇಟ್ಟಣಿಸುವ್+ಅರಿ+ಸೈನ್ಯ+ಜಲಧಿಗೆ
ಕಟ್ಟೆಯಾದನು+ ಭೀಮನೊಬ್ಬನ
ಬಿಟ್ಟು +ನೋಡುವುದ್+ಉಚಿತವೇ +ಪರಿವಾರ +ಪಂಥದಲಿ
ಕೊಟ್ಟ +ನೇಮವ +ಯಮಳರಿಗೆ +ಜಗ
ಜಟ್ಟಿ +ಸಾತ್ಯಕಿ +ಕಮಲಮುಖಿಯೊಡ
ಹುಟ್ಟಿದನು +ಮೊದಲಾಗಿ+ ನೃಪಜನವ್+ಏಳಿ +ನೀವೆಂದ

ಅಚ್ಚರಿ:
(೧) ಧೃಷ್ಟದ್ಯುಮ್ನ ಎಂದು ಹೇಳಲು ಕಮಲಮುಖಿಯೊಡಹುಟ್ಟಿದನು ಎಂಬ ಪದದ ಬಳಕೆ

ಪದ್ಯ ೩: ಧರ್ಮಜನು ಯಾರನ್ನು ಮನ್ನಿಸಿದನು?

ಮುರಹರನ ಮಂತ್ರದಲಿ ಶೋಕ
ಜ್ವರಕೆ ಬಿಡುಗಡೆಯಾಯ್ತು ಬಳಿಕಿನೊ
ಳರಸ ಸಿರಿಮೊಗದೊಳೆದು ವಸನಾಂಚಲದೊಳಾನನವ
ಒರಸಿ ಪಾರ್ಥನ ಸಂತವಿಸಿ ಮಂ
ದಿರಕೆ ಬಿಜಯಂಗೈದು ಮುದದಲಿ
ಕರಸಿ ಕಾಣಿಕೆಗೊಂಡು ಪರಿವಾರವನು ಮನ್ನಿಸಿದ (ಕರ್ಣ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ಕೃಷ್ಣನ ಬೋಧನೆಯಿಂದ ಶೋಕತಾಪವು ಬಿಟ್ಟುಹೋಗಲು ಅರಸನು ಮುಖತೊಳೆದುಕೊಂಡು ಉತ್ತರೀಯದ ಸೆರಗಿನಿಂದ ಮುಖವನ್ನೊರಸಿಕೊಂಡು, ಅರ್ಜುನನನ್ನು ಸಂತೈಸಿ, ಮನೆಗೆ ಬಂದು ಪರಿವಾರದವರನ್ನು ಕರೆಸಿ ಕಾಣಿಕೆಯನ್ನು ತೆಗೆದುಕೊಂಡು, ಅವರೆಲ್ಲರನ್ನು ಮನ್ನಿಸಿದನು.

ಅರ್ಥ:
ಮುರಹರ: ಕೃಷ್ಣ; ಮಂತ್ರ: ಯೋಚನೆ, ವಿಚಾರ; ಶೋಕ: ದುಃಖ; ಜ್ವರ: ತಾಪ; ಬಿಡುಗಡೆ: ವಿಮೋಚನೆ, ಮುಕ್ತಿ; ಬಳಿಕ: ನಂತರ; ಅರಸ: ರಾಜ; ಸಿರಿ: ಐಶ್ವರ್ಯ; ಮೊಗ: ಮುಖ; ಸಿರಿಮೊಗ: ಸೊಗಸಾದ ಚೆಲುವಾದ ಮುಖ; ತೊಳೆ: ಸ್ವಚ್ಚಮಾಡು; ವಸನ: ಬಟ್ಟೆ, ವಸ್ತ್ರ; ಅಂಚು: ತುದಿ; ಆನನ: ಮುಖ; ಒರಸು: ಸಾರಿಸು; ಸಂತವಿಸು: ಸಮಾಧಾನಪಡಿಸು; ಮಂದಿರ: ಆಲಯ; ಬಿಜಯಂಗೈ: ದಯಮಾಡಿಸು; ಮುದ: ಸಂತೋಷ; ಕರಸು: ಬರೆಮಾಡು; ಕಾಣಿಕೆ: ಉಡುಗೊರೆ; ಪರಿವಾರ: ಸಂಬಂಧಿಕರು; ಮನ್ನಿಸು: ಗೌರವಿಸು;

ಪದವಿಂಗಡಣೆ:
ಮುರಹರನ+ ಮಂತ್ರದಲಿ +ಶೋಕ
ಜ್ವರಕೆ +ಬಿಡುಗಡೆಯಾಯ್ತು +ಬಳಿಕಿನೊಳ್
ಅರಸ +ಸಿರಿಮೊಗ+ತೊಳೆದು ವಸನ+ಅಂಚಲದೊಳ್+ಆನನವ
ಒರಸಿ+ ಪಾರ್ಥನ +ಸಂತವಿಸಿ+ ಮಂ
ದಿರಕೆ+ ಬಿಜಯಂಗೈದು +ಮುದದಲಿ
ಕರಸಿ+ ಕಾಣಿಕೆಗೊಂಡು +ಪರಿವಾರವನು +ಮನ್ನಿಸಿದ

ಅಚ್ಚರಿ:
(೧) ದುಃಖ ಕಳೆಯಿತು ಎಂದು ಹೇಳಲು – ಮುರಹರನ ಮಂತ್ರದಲಿ ಶೋಕಜ್ವರಕೆ ಬಿಡುಗಡೆಯಾಯ್ತು

ಪದ್ಯ ೨: ಪಾಂಡವರು ಹೇಗೆ ಭಾವೋದ್ವೇಗದಲಿ ಮುಳುಗಿದರು?

ಒರಲುತರಸನ ಮುರುಚಿಕೊಂಡಡಿ
ಗೆರಗೆ ಕೈಯೊಡನವನಿಪತಿ ಮುರಿ
ದೆರಗಿ ಪಾರ್ಥನ ಸೇರಿ ತಕ್ಕೈಸಿದನು ಗೋಳಿಡುತ
ಮರುಗಿದಳು ದ್ರೌಪದಿ ದೃಗಂಬುಗ
ಳೊರತೆಯಲಿ ಸಹದೇವ ನಕುಳರ
ಲರಿಯೆನುಪಮಿಸಲವರ ಬಹುಳಾಕ್ರಂದನಧ್ವನಿಯ (ಕರ್ಣ ಪರ್ವ, ೧೮ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನನು ಜೋರಾಗಿ ಅಳುತ್ತಾ ಅಣ್ಣನನ್ನು ತನ್ನೆಡೆಗೆ ತಿರುಗಿಸಿಕೋಂಡು ಪಾದಗಳಿಗೆ ಬೀಳಲು, ಧರ್ಮಜನು ಗೋಳಾಡುತ್ತಾ ಅರ್ಜುನನನ್ನು ಅಪ್ಪಿಕೊಂಡನು. ಕಣ್ಣೀರು ಸುರಿಸುತ್ತಾ ದ್ರೌಪದಿಯು ಮರುಗಿದಳು. ನಕುಲ ಸಹದೇವರ ಆಕ್ರಂದನಕ್ಕೆ ಹೋಲಿಕೆಯನ್ನು ಕೊಡಲಾರೆ ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಅರಸ: ರಾಜ; ಮುರುಚು: ಹಿಂದಿರುಗಿಸು; ಅಡಿಗೆರಗಿ: ನಮಸ್ಕರಿಸು; ಕೈ: ಕರ, ಹಸ್ತ; ಅವನಿಪತಿ: ರಾಜ; ಮುರಿ: ಬಾಗು; ಎರಗು: ನಮಸ್ಕರಿಸು; ಸೇರಿ: ಜೊತೆ; ತಕೈಸು: ಅಪ್ಪಿಕೊಳ್ಳು; ಗೋಳು: ಅಳು; ಮರುಗು:ಕನಿಕರಿಸು, ಸಂಕಟ; ದೃಗಂಬು: ಕಣ್ಣೀರು; ಒರತೆ: ನೀರು ಜಿನುಗುವ ತಗ್ಗು, ಚಿಲುಮೆ; ಅರಿ: ತಿಳಿ; ಉಪಮಿಸು: ಹೋಲಿಸು, ಒಳಪಡಿಸು; ಬಹುಳ: ತುಂಬ; ಆಕ್ರಂದನ: ಅಳು; ಧ್ವನಿ: ಶಬ್ದ;

ಪದವಿಂಗಡಣೆ:
ಒರಲುತ್+ಅರಸನ +ಮುರುಚಿಕೊಂಡ್+ಅಡಿ
ಗೆರಗೆ +ಕೈಯೊಡನ್+ಅವನಿಪತಿ +ಮುರಿದ್
ಎರಗಿ+ ಪಾರ್ಥನ +ಸೇರಿ +ತಕ್ಕೈಸಿದನು +ಗೋಳಿಡುತ
ಮರುಗಿದಳು +ದ್ರೌಪದಿ + ದೃಗ್+ಅಂಬುಗಳ್
ಒರತೆಯಲಿ +ಸಹದೇವ +ನಕುಳರಲ್
ಅರಿಯೆನ್+ಉಪಮಿಸಲ್+ಅವರ +ಬಹುಳ+ಆಕ್ರಂದನ+ಧ್ವನಿಯ

ಅಚ್ಚರಿ:
(೧) ದೃಗಂಬು, ಆಕ್ರಂದನ, ಗೋಳಿಡು, ಒರಲು, ಒರತೆ, ಮರುಗು – ಭಾವಪರವಶತೆಯನ್ನು ಚಿತ್ರಿಸುವ ಪದಗಳು
(೨) ಅರಸ, ಅವನಿಪತಿ – ಸಮನಾರ್ಥಕ ಪದಗಳು

ಪದ್ಯ ೧: ಧರ್ಮಜನ ಅರ್ಜುನನ ಮಿಲನ ಹೇಗಾಯಿತು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನನು ಸಾಮದಲಿ ಮುರರಿಪು
ಬೋಳವಿಸಿ ಭಾವಜ್ಞ ನಂದಿಸಿದನು ಮನೋವ್ಯಥೆಯ
ಮೇಲುಸುರ ಬಿಕ್ಕುಳಿನ ಬಿಗುಹಿನ
ತಾಳಿಗೆಯ ನೀರುಗಳ ಮುಕ್ಕುಳಿ
ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ (ಕರ್ಣ ಪರ್ವ, ೧೮ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಎಲೈ ರಾಜನೇ ಕೇಳು, ಭಾವಜ್ಞನಾದ ಕೃಷ್ಣನು ಸಾಮೋಪಾಯದಿಂದ ಧರ್ಮಜನ ಮನಸ್ಸಿನ ವ್ಯಥೆಯನ್ನು ಕಳೆದನು. ನಿಟ್ಟುಸಿರು ಬಿಡುತ್ತಾ, ಬಿಕ್ಕುಳಿಸುತ್ತಾ, ಗಂಟಲು ಕಟ್ಟಿ ಗದ್ಗದಿತನಾಗಿ ಕಣ್ಣೀರು ಸುರಿಸುತ್ತಾ ಧರ್ಮಜನು ಅರ್ಜುನನನ್ನು ಆಲಂಗಿಸಿದನು.

ಅರ್ಥ:
ಕೇಳು: ಆಲಿಸು ಅವನಿಪ: ರಾಜ; ಭೂಪಾಲ: ರಾಜ; ಸಾಮ: ಒಡಂಬಡಿಕೆ, ರಾಜಿ, ಶಾಂತಗೊಳಿಸು; ಮುರರಿಪು: ಕೃಷ್ಣ; ಬೋಳೈಸು: ಸಮಾಧಾನಪಡಿಸು; ಭಾವಜ್ಞ: ಜ್ಞಾನಿ; ನಂದಿಸು: ಶಮನಗೊಳಿಸು; ಮನೋವ್ಯಥೆ: ಮನಸ್ಸಿನ ಯಾತನೆ; ಮೇಲುಸುರ: ನಿಟ್ಟುಸಿರು; ಬಿಕ್ಕುಳು: ಬಿಕ್ಕು; ಬಿಗುಹು:ಗಟ್ಟಿ, ಕಷ್ಟ; ತಾಳಿಗೆ: ಗಂಟಲು; ಆಲಿ: ಕಣ್ಣು; ನೀರು: ಜಲ; ಮುಕ್ಕುಳಿ: ತುಂಬಿದ; ನರನಾಥ: ರಾಜ; ಅಪ್ಪು: ಅಪ್ಪುಗೆ, ಆಲಂಗಿಸು;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ+ಅವನಿಪ +ಭೂ
ಪಾಲನನು +ಸಾಮದಲಿ +ಮುರರಿಪು
ಬೋಳವಿಸಿ+ ಭಾವಜ್ಞ +ನಂದಿಸಿದನು +ಮನೋವ್ಯಥೆಯ
ಮೇಲುಸುರ +ಬಿಕ್ಕುಳಿನ+ ಬಿಗುಹಿನ
ತಾಳಿಗೆಯ +ನೀರುಗಳ +ಮುಕ್ಕುಳಿನ್
ಆಲಿಗಳ +ನರನಾಥ +ತೆಗೆದಪ್ಪಿದನು +ಫಲುಗುಣನ

ಅಚ್ಚರಿ:
(೧) ಅವನಿಪ, ಭೂಪಾಲ, ನರನಾಥ – ಸಮನಾರ್ಥಕ ಪದ
(೨) ದೂರಮಾಡಿದನು ಎಂದು ಹೇಳಲು ನಂದಿಸು ಪದದ ಬಳಕೆ
(೩) ಭಾವನೆಗಳು ಕೂಡಿ ಬಂದಾಗುವ ಚಿತ್ರಣ: ೩-೬ ಸಾಲು

ನುಡಿಮುತ್ತುಗಳು: ಕರ್ಣ ಪರ್ವ, ೧೮ ಸಂಧಿ

  • ಮೇಲುಸುರ ಬಿಕ್ಕುಳಿನ ಬಿಗುಹಿನ ತಾಳಿಗೆಯ ನೀರುಗಳ ಮುಕ್ಕುಳಿ ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ – ಪದ್ಯ ೧
  • ಮುರಹರನ ಮಂತ್ರದಲಿ ಶೋಕಜ್ವರಕೆ ಬಿಡುಗಡೆಯಾಯ್ತು ಬಳಿಕಿನೊಳರಸ ಸಿರಿಮೊಗದೊಳೆದು ವಸನಾಂಚಲದೊಳಾನನವ – ಪದ್ಯ ೩
  • ಸನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ – ಪದ್ಯ ೧೦
  • ಆನೆಗಳೀಡಿರಿದು ಬರಿಕಯ್ಯನೆತ್ತಿದವೊಲೆದವಡಿಗಡಿಗೆ – ಪದ್ಯ ೧೩
  • ನಡುಗಿದವು ಕೈದುಗಳು ಜೋಧರ ಕೊಡಹಿದವು ಗಜರಾಜಿ ವಾಜಿಯ ಗಡಣವೀಡಾಡಿದವು ರಾವ್ತರನಿವರ ಥಟ್ಟಿನಲಿ – ಪದ್ಯ ೧೬
  • ಜೋಡು ಬಿರಿದುದು ಹರುಷಜಲ ಕಡೆಗೋಡಿವರಿದುದು ರೋಮಪುಳಕದ
    ಬೀಡು ಬಿಟ್ಟುದು ಮೈಯನುಬ್ಬಿದನೊಲೆದನಡಿಗಡಿಗೆ – ಪದ್ಯ ೧೮
  • ತನ್ನ ಕರ ಕಂಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ –  ಪದ್ಯ ೨೪
  • ಘಾಯದ ಸುಗ್ಗಿಯಲಿ ಲಘುವಾಗಿ ಹರುಷದ ಮುಗ್ಗಿಲೊಣಗಿಲ ಮೋರೆಯಲಿ ತಿರುಗಿದನು ಮೋಹರಕೆ – ಪದ್ಯ ೨೯
  • ಭೀಮಸೇನನ ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ – ಪದ್ಯ ೩೦