ಪದ್ಯ ೩೫: ಅರ್ಜುನನು ಕೃಷ್ಣನಿಗೆ ಏನು ಹೇಳಿದ?

ಏನ ಹೇಳುವೆನಡ್ಡ ಹಾಯಿದು
ನೀನೆ ಕೆಡಿಸಿದೆಯೆಮ್ಮನಲ್ಲದ
ಡೇನ ಮಾಡೆನು ಸತ್ಯಶೌರ್ಯದ ಹಾನಿ ಹರಿಬದಲಿ
ಈ ನರೇಂದ್ರನ ಕೊಂದ ನನಗಿ
ನ್ನೇನು ದೇಹಕೆ ತಲೆಯೊಡನೆ ಸಂ
ಧಾನವೇ ಸಾಕೆನ್ನ ಕೈದುವನೆನಗೆ ನೀಡೆಂದ (ಕರ್ಣ ಪರ್ವ, ೧೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅರ್ಜುನನು, ಏನೆಂದು ಹೇಳಲಿ ಕೃಷ್ಣ, ಅಡ್ಡಬಂದು ಕೆಲಸವನ್ನು ಕೆಡಿಸಿ ಬಿಟ್ಟೆ, ನನ್ನ ಸತ್ಯದ ಹಾನಿಯನ್ನು ತಪ್ಪಿಸಲು ಮಾತಿನ ಬಾಣಗಲೀಮ್ದ ಅರಸನನ್ನು ಕೊಂದ ನನಗೆ, ದೇಹದ ಮೇಲೆ ತಲೆ ಇರಬಹುದೇ? ಸಾಕು ನನ್ನ ಆಯುಧವನ್ನು ನನಗೆ ಕೊಡು ಎಂದು ಅರ್ಜುನನು ಕೃಷ್ಣನಿಗೆ ತಿಳಿಸಿದನು.

ಅರ್ಥ:
ಹೇಳು: ತಿಳಿಸು; ಅಡ್ಡ: ಮಧ್ಯ; ಹಾಯಿ: ಮೇಲೆಬೀಳು; ಕೆಡಿಸು: ಹಾಳುಮಾಡು; ಸತ್ಯ: ದಿಟ, ನಿಜ; ಶೌರ್ಯ: ಬಲ; ಹಾನಿ: ಹಾಳು; ಹರಿಬ: ಕೆಲಸ, ಕಾರ್ಯ; ನರೇಂದ್ರ: ರಾಜ; ಕೊಂದು: ಸಾಯಿಸು; ದೇಹ: ಶರೀರ; ತಲೆ: ಶಿರ; ಸಂಧಾನ: ಹೊಂದಿಸುವುದು; ಸಾಕು: ನಿಲ್ಲಿಸು; ಕೈದು: ಕತ್ತಿ; ನೀಡು: ಕೊಡು;

ಪದವಿಂಗಡಣೆ:
ಏನ+ ಹೇಳುವೆನ್+ಅಡ್ಡ +ಹಾಯಿದು
ನೀನೆ +ಕೆಡಿಸಿದೆ+ಎಮ್ಮನ್+ಅಲ್ಲದಡ್
ಏನ+ ಮಾಡೆನು +ಸತ್ಯ+ಶೌರ್ಯದ +ಹಾನಿ +ಹರಿಬದಲಿ
ಈ +ನರೇಂದ್ರನ +ಕೊಂದ +ನನಗಿ
ನ್ನೇನು +ದೇಹಕೆ +ತಲೆಯೊಡನೆ +ಸಂ
ಧಾನವೇ +ಸಾಕೆನ್ನ +ಕೈದುವನ್+ಎನಗೆ +ನೀಡೆಂದ

ನಿಮ್ಮ ಟಿಪ್ಪಣಿ ಬರೆಯಿರಿ