ಪದ್ಯ ೨೦: ಧರ್ಮಜನನ್ನು ಕೊಲ್ಲುವುದೇಕೆ ಸೂಕ್ತವಲ್ಲ?

ಪಿತೃಸಮೋಭ್ರಾತಾ ಎನಿಪ್ಪುದು
ಶ್ರುತಿವಚನವರಸಂಗೆ ನೀನುಪ
ಹತಿಯ ಮಾಡಲು ನೆನೆದ ಮಾತಿನ ವಾಸಿ ಬೇಕೆಂದು
ಕ್ಷಿತಿಯೊಳಬುಜ ಮೃಣಾಳಕೋಸುಗ
ಕೃತತಟಾಕವನೊಡೆದವೊಲು ಭೂ
ಪತಿ ವಧವ್ಯಾಪಾರ ನಿರ್ಮಳ ಧರ್ಮವಹುದೆಂದ (ಕರ್ಣ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಹಿರಿಯಣ್ಣನು ತಂದೆಯ ಸಮಾನ ಎಂದು ವೇದವಾಕ್ಯವಿದೆ. ಮಾತನ್ನು ಉಳಿಸಿಕೊಳ್ಳವೆನೆಂದು ಅಣ್ಣನನ್ನು ಕೊಲ್ಲಲು ಉಜ್ಜುಗಿಸಿದೆ. ಕಮಲದ ನಾಳವನ್ನು ಪಡೆಯಲು ಕೆರೆಯ ಕಟ್ಟೆಯನ್ನೊಡೆಯುವಂತೆ, ನಿನ್ನ ಮಾತನ್ನುಳಿಸಿಕೊಳ್ಳಲು ಅಣ್ನನನ್ನು ಕೊಲ್ಲಲು ನೆನೆದೆ ಎಂದು ಕೃಷ್ಣನು ಅರ್ಜುನನಿಗೆ ಹೇಳಿದನು.

ಅರ್ಥ:
ಪಿತೃ: ತಂದೆ; ಭ್ರಾತ: ಅಣ್ಣ; ಸಮ: ಸರಿಸಮಾನನು; ಶ್ರುತಿ: ವೇದ; ವಚನ: ಮಾತು, ನುಡಿ; ಅರಸ: ರಾಜ; ಉಪಹತಿ: ಕೊಲ್ಲು; ನೆನೆ: ಮನನ ಮಾಡಿ; ಮಾತು: ವಾಣಿ, ವಾಕ್; ವಾಸಿ: ಪ್ರತಿಜ್ಞೆ, ಶಪಥ; ಕ್ಷಿತಿ: ಭೂಮಿ; ಅಬುಜ: ಕಮಲ; ಮೃಣಾಳ: ನಾಳ; ಕೃತ: ಕಟ್ಟಿದ; ತಟಾಕ: ಕೆರೆ, ಜಲಾಶಯ; ಒಡೆ: ಕೆಡವು; ಭೂಪತಿ: ರಾಜ; ವಧ: ಹತ್ಯೆ; ವಧವ್ಯಾಪಾರ: ಕೊಲ್ಲುವ ಕಾರ್ಯ; ನಿರ್ಮಳ: ಸ್ವಚ್ಛವಾದ; ಧರ್ಮ: ಧಾರಣೆ ಮಾಡಿದುದು, ನಿಯಮ;

ಪದವಿಂಗಡಣೆ:
ಪಿತೃ+ಸಮೋ+ಭ್ರಾತಾ +ಎನಿಪ್ಪುದು
ಶ್ರುತಿ+ವಚನವ್+ಅರಸಂಗೆ ನೀನ್+ಉಪ
ಹತಿಯ +ಮಾಡಲು +ನೆನೆದ +ಮಾತಿನ +ವಾಸಿ +ಬೇಕೆಂದು
ಕ್ಷಿತಿಯೊಳ್+ಅಬುಜ +ಮೃಣಾಳಕೋಸುಗ
ಕೃತ+ತಟಾಕವನ್+ಒಡೆದವೊಲು +ಭೂ
ಪತಿ +ವಧವ್ಯಾಪಾರ+ ನಿರ್ಮಳ +ಧರ್ಮವಹುದೆಂದ

ಅಚ್ಚರಿ:
(೧) ಕ್ಷಿತಿ, ಪತಿ, ಹತಿ, ಶ್ರುತಿ – ಪ್ರಾಸ ಪದಗಳು
(೨) ಉಪಮಾನದ ಪ್ರಯೋಗ – ಕ್ಷಿತಿಯೊಳಬುಜ ಮೃಣಾಳಕೋಸುಗ ಕೃತತಟಾಕವನೊಡೆದವೊಲು
(೩) ಸಂಸ್ಕೃತದ ಪದಗುಚ್ಛದ ಬಳಕೆ – ಪಿತೃಸಮೋಭ್ರಾತಾ

ಪದ್ಯ ೧೯: ಬಳಾಕನನ್ನು ಯಾರು ಕರೆದೊಯ್ದರು?

ವರವವಂಗೆ ಕುಟುಂಬ ರಕ್ಷಾ
ಕರಣ ಕಾರಣವಾದ ಹಿಂಸಾ
ಚರಣೆಯೆಂದೇ ಬರಹ ಧರ್ಮನ ಸೇನಬೋವನಲಿ
ಮರಣವಾತಂಗಾಗೆ ಕೊಂಡೊ
ಯ್ದರು ಸುರಾಂಗನೆಯರು ಧನಂಜಯ
ಪರಮ ಧರ್ಮರಹಸ್ಯವಾವಂಗರಿಯಬಹುದೆಂದ (ಕರ್ಣ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕುಟುಂಬರಕ್ಷಣೆಗಾಗಿ ಹಿಂಸೆಯನ್ನು ಬಲಾಕನು ಮಾಡುತ್ತಿದ್ದುದರಿಂದ ಯಮಧರ್ಮನ ಶಾನುಭೋಗರು ಅದು ಧರ್ಮವೆಂದೇ ಬರೆದಿದ್ದನು. ಬಲಾಕನು ಸಾಯಲು ಅಪ್ಸರೆಯರು ಅವನನ್ನು ಸ್ವರ್ಗಕ್ಕೆ ಕರೆದೊಯ್ದರು. ಅರ್ಜುನ ಧರ್ಮರಹಸ್ಯದ ಸೂಕ್ಷ್ಮವನ್ನು ತಿಳಿಯಲು ಯಾರಿಗೆ ಸಾಧ್ಯವೆಂದು ಕೃಷ್ಣನು ಅರ್ಜುನನನ್ನು ಪ್ರಶ್ನಿಸಿದನು.

ಅರ್ಥ:
ವರ: ಅನುಗ್ರಹ, ಕೊಡುಗೆ; ಕುಟುಂಬ: ಪರಿವಾರ; ರಕ್ಷ: ಕಾಪಾಡು; ಕಾರಣ: ನಿಮಿತ್ತ, ಹೇತು; ಹಿಂಸ: ತೊಂದರೆ, ನೋವು; ಆಚರಣೆ:ಅನುಸರಿಸುವುದು; ಬರಹ: ಬರೆದಿರುವುದು; ಧರ್ಮ: ಯಮ; ಸೇನಬೋವ: ಶ್ಯಾನುಭೋಗ; ಮರಣ: ಸಾವು; ಕೊಂಡೊಯ್ದು: ತೆಗೆದುಕೊಂಡು ಹೋಗು; ಸುರಾಂಗನೆ:ದೇವತಾ ಸ್ತ್ರೀ, ಅಪ್ಸರೆ; ಪರಮ: ಶ್ರೇಷ್ಠ; ರಹಸ್ಯ: ಗುಪ್ತ; ಆವಂಗೆ: ಯಾರಿಗೆ; ಅರಿ: ತಿಳಿ;

ಪದವಿಂಗಡಣೆ:
ವರವ್+ಅವಂಗೆ +ಕುಟುಂಬ +ರಕ್ಷಾ
ಕರಣ+ ಕಾರಣವಾದ +ಹಿಂಸಾ
ಚರಣೆಯೆಂದೇ +ಬರಹ+ ಧರ್ಮನ+ ಸೇನಬೋವನಲಿ
ಮರಣವ್+ಆತಂಗ್+ಆಗೆ +ಕೊಂಡೊ
ಯ್ದರು +ಸುರಾಂಗನೆಯರು +ಧನಂಜಯ
ಪರಮ +ಧರ್ಮ+ರಹಸ್ಯವ್+ಆವಂಗ್+ಅರಿಯ+ಬಹುದೆಂದ

ಅಚ್ಚರಿ:
(೧) ಶಾನುಭೋಗ (ಸೇನಬೋವ) – ಅಚ್ಚಕನ್ನಡದ ಪದದ ಬಳಕೆ
(೨) ಕರಣ, ಮರಣ, ಚರಣ – ಪ್ರಾಸ ಪದಗಳು

ಪದ್ಯ ೧೮: ಬಳಾಕನ ಕಥೆಯೇನು?

ಬನದೊಳೊಬ್ಬ ಬಳಾಕನೆಂಬವ
ವನಚರನು ತನ್ನಯ ಕುಟುಂಬವ
ನನುದಿನವು ಮೃಗವಧೆಯಲೇ ಸಲಹಿದನು ಬೇಸರದೆ
ತನಗೆ ಕಡೆಪರಿಯಂತ ಮತ್ತೊಂ
ದನುವನರಿಯನು ರಾಗ ಲೋಭವ
ನೆನೆಯನದರಿಂ ಹಿಂಸೆ ಸಂದುದು ವೃತ್ತಿರೂಪದಲಿ (ಕರ್ಣ ಪರ್ವ, ೧೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಬಳಾಕನೆಂಬ ಬೇಡನಿದ್ದನು. ಅನುದಿನವು ಅವನು ಮೃಗಗಳನ್ನು ಬೇಟೆಯಾಡಿ ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ಮರಣಕಾಲದವರೆಗೂ ಅವನು ಇನ್ನೊಂದು ಕರ್ಮಕ್ಕೆ ಹೋಗಲಿಲ್ಲ. ಆದರೆ ಅವನಿಗೆ ರಾಗ, ಲೋಭಗಳಿರಲಿಲ್ಲ. ಅವನ ವೃತ್ತಿಯೀಮ್ದೇ ಅವನು ಹಿಂಸೆಯನ್ನು ಮಾಡಿದನು.

ಅರ್ಥ:
ಬನ: ವನ, ಕಾಡು; ವನಚರ: ಬೇಟೆಗಾರ; ಕುಟುಂಬ: ಪರಿವಾರ; ಅನುದಿನ: ಪ್ರತಿನಿತ್ಯ; ಮೃಗ: ಪ್ರಾಣಿ; ವಧೆ: ಸಾಯಿಸು; ಸಲಹು: ಕಾಪಾಡು, ಪೋಷಿಸು; ಬೇಸರ: ನಿರುತ್ಸಾಹ, ಬೇಜಾರು; ಕಡೆ: ಅಂತ್ಯ; ಪರಿ: ರೀತಿ; ಅನುವು: ರೀತಿ, ಹೊಂದಿಕೆ; ಅರಿ: ತಿಳಿ; ರಾಗ: ಒಲಮೆ, ಪ್ರೀತಿ; ಲೋಭ: ಅತಿಯಾಸೆ, ದುರಾಸೆ ; ನೆನೆ: ಜ್ಞಾಪಿಸಿಕೊಳ್ಳದೆ; ಹಿಂಸೆ: ನೋವು; ಸಂದು: ಸಂದರ್ಭ ; ವೃತ್ತಿ: ಕೆಲಸ;

ಪದವಿಂಗಡಣೆ:
ಬನದೊಳ್+ಒಬ್ಬ +ಬಳಾಕನ್+ಎಂಬವ
ವನಚರನು +ತನ್ನಯ +ಕುಟುಂಬವನ್
ಅನುದಿನವು +ಮೃಗ+ವಧೆಯಲೇ +ಸಲಹಿದನು+ ಬೇಸರದೆ
ತನಗೆ +ಕಡೆಪರಿಯಂತ+ ಮತ್ತೊಂ
ದನುವನ್+ಅರಿಯನು +ರಾಗ +ಲೋಭವ
ನೆನೆಯನ್+ಅದರಿಂ +ಹಿಂಸೆ+ ಸಂದುದು +ವೃತ್ತಿರೂಪದಲಿ