ಪದ್ಯ ೨೨: ಧರ್ಮಜನು ಕರ್ಣನ ವೀರತನದ ಬಗ್ಗೆ ಹೇಗೆ ನುಡಿದನು?

ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನ ಬಡ ಸಾಹಸಿಕರೆಣೆಯೇ ಸೂತತನಯಂಗೆ (ಕರ್ಣ ಪರ್ವ, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನ ನಾನು ಏನೆಂದು ಹೇಳಲಿ, ನನ್ನ ಸೇನೆಯ ಜೊತೆ, ಭೀಮನ ಸೈನ್ಯದೆದುರು, ಸಹದೇವ, ಸಾತ್ಯಕಿ ದ್ರುಪದರ ದಳಗಳ ವಿರುದ್ಧ, ಎಲ್ಲಿ ನೋಡಿದರೂ ಅಲ್ಲಿ ಕರ್ಣನೇ ಕಾಣುತ್ತಿದ್ದನು, ಪಾಂಡವ ಸೇನೆಯ ಅಲ್ಪ ವೀರರು ಅವನಿಗೆ ಸರಿಸಮಾನರೇ ಎಂದು ಕರ್ಣನ ಪರಾಕ್ರಮವನ್ನು ಅರ್ಜುನನೆದುರು ಧರ್ಮಜನು ಹೇಳಿದ.

ಅರ್ಥ:
ಹೇಳು: ತಿಳಿಸು; ದಳ: ಸೈನ್ಯ; ಥಟ್ಟು: ಗುಂಪು; ಬಳಿಕ: ನಂತರ; ಒಡ್ಡು: ಸೈನ್ಯ, ಪಡೆ; ಮಾನ: ಮರ್ಯಾದೆ, ಗೌರವ; ನಿಧಿ: ಸಂಪತ್ತು; ರಾಧೇಯ: ಕರ್ಣ; ತನು: ದೇಹ; ಮಯ: ತುಂಬು; ಬಡ: ದುರ್ಬಲ; ಸಾಹಸಿಕ: ಪರಾಕ್ರಮಿ; ಎಣೆ: ಸಮಾನ; ಸೂತ: ರಥವನ್ನು ಓಡಿಸುವವ; ತನಯ: ಮಗ;

ಪದವಿಂಗಡಣೆ:
ಏನ +ಹೇಳುವೆನ್+ಎನ್ನ +ದಳದಲಿ
ತಾನು +ಭೀಮನ +ಥಟ್ಟಿನಲಿ +ಬಳಿ
ಕೀ+ ನಕುಲ +ಸಹದೇವ+ ಸಾತ್ಯಕಿ+ ದ್ರುಪದರ್+ಒಡ್ಡಿನಲಿ
ಮಾನನಿಧಿ +ರಾಧೇಯನ್+ಅತ್ತಲು
ತಾನೆ +ತನುಮಯವಾಯ್ತು +ಪಾಂಡವ
ಸೇನ+ ಬಡ+ ಸಾಹಸಿಕರ್+ಎಣೆಯೇ +ಸೂತತನಯಂಗೆ

ಅಚ್ಚರಿ:
(೧) ಸೂತತನಯ, ಮಾನನಿಧಿ, ರಾಧೇಯ – ಕರ್ಣನಿಗೆ ಬಳಸಿದ ಪದಗಳು
(೨) ದಳ, ಥಟ್ಟು, ಒಡ್ಡು – ಸಾಮ್ಯಾರ್ಥ ಪದಗಳು

ಪದ್ಯ ೨೧: ಕರ್ಣನ ಪರಾಕ್ರಮವನ್ನು ಧರ್ಮಜನು ಹೇಗೆ ವರ್ಣಿಸಿದನು?

ಜಾಳ ಜರೆದು ಜಢಾತ್ಮರಿಗೆ ಜಂ
ಘಾಳತನವನು ಮೆರೆದು ಖೋಡಿಯ
ಖೂಳರನು ಖೋಪ್ಪರಿಸಿ ಚೂಣಿಯ ಚರರ ಚಪ್ಪರಿಸಿ
ಆಳುತನದಲಿ ಮೆರೆವ ನಿನಗವ
ಸೋಲಲರಿಯನು ನಿನ್ನ ಗಂಟಲ
ಗಾಳವೆನಿಸುವ ಕರ್ಣನಾರೆಂದರಿಯೆ ನೀನೆಂದ (ಕರ್ಣ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಬಲರನ್ನು ಜರೆದು, ಸೋಮಾರಿಗಳೆದುರಿಗೆ ಪರಾಕ್ರಮವನ್ನು ಪ್ರದರ್ಶಿಸಿ, ಕ್ಷುಲ್ಲಕರನ್ನು ತುಳಿದು, ಚತುರಂಗದ ಕಾಲಾಳುಗಳನ್ನು ಬದಿದು ಪರಾಕ್ರಮಿಯೆಂದು ಹೇಳಿಕೊಳ್ಳುವ ನಿನಗೆ ಅವನು ಸೋಲುವುದಿಲ್ಲ. ರಣರಂಗದಲ್ಲಿ ನೀನು ಮೀನಾದರೆ ನಿನ್ನ ಗಂಟಲಿಗೆ ಕರ್ಣನೇ ಗಾಳ. ಅವನಾರೆಂದು ನೀನು ತಿಳಿದಿಲ್ಲ ಎಂದು ಹೇಳುತ್ತಾ ಕರ್ಣನ ಪರಾಕ್ರಮವನ್ನು ಅರ್ಜುನನಿಗೆ ವರ್ಣಿಸಿದನು.

ಅರ್ಥ:
ಜಾಳ: ದುರ್ಬಲ; ಜರೆ: ಬಯ್ಯು, ತೆಗಳು; ಜಢಾತ್ಮ: ಸೋಮಾರಿ; ಜಂಘಾಳ: ಪರಾಕ್ರಮ; ಮೆರೆ: ಪ್ರದರ್ಶಿಸು; ಖೋಡಿ: ದುರುಳತನ; ಖೂಳ: ದುಷ್ಟ; ಖೊಪ್ಪರಿಸು: ಮೀರು, ಹೆಚ್ಚು; ಚೂಣಿ: ಮುಂದಿನ ಸಾಲು; ಚರ: ಚಲಿಸುವವನು, ಗೂಢಾಚಾರ; ಚಪ್ಪರಿಸು: ಸವಿ, ರುಚಿನೋಡು; ಆಳುತನ: ಪರಾಕ್ರಮ; ಬೆರೆ: ಕೂಡು, ಸೇರು; ಸೋಲು: ಪರಾಭವ; ಅರಿ: ತಿಳಿ; ಗಂಟಲ: ಕಂಠ; ಗಾಳ: ಕೊಕ್ಕೆ ;ಅರಿ: ತಿಳಿ;

ಪದವಿಂಗಡಣೆ:
ಜಾಳ+ ಜರೆದು +ಜಢಾತ್ಮರಿಗೆ +ಜಂ
ಘಾಳತನವನು +ಮೆರೆದು +ಖೋಡಿಯ
ಖೂಳರನು+ ಖೋಪ್ಪರಿಸಿ+ ಚೂಣಿಯ +ಚರರ+ ಚಪ್ಪರಿಸಿ
ಆಳುತನದಲಿ +ಮೆರೆವ +ನಿನಗವ
ಸೋಲಲ್+ಅರಿಯನು +ನಿನ್ನ +ಗಂಟಲ
ಗಾಳವೆನಿಸುವ +ಕರ್ಣನ್+ಆರೆಂದ್+ಅರಿಯೆ +ನೀನೆಂದ

ಅಚ್ಚರಿ:
(೧) ಜ, ಖ, ಚ ಅಕ್ಷರಗಳ ತ್ರಿವಳಿ ಪದಗಳ ರಚನೆ – ಜಾಳ ಜರೆದು ಜಢಾತ್ಮರಿಗೆ ಜಂ
ಘಾಳತನವನು; ಖೋಡಿಯ ಖೂಳರನು ಖೋಪ್ಪರಿಸಿ; ಚೂಣಿಯ ಚರರ ಚಪ್ಪರಿಸಿ

ಪದ್ಯ ೨೦: ಕರ್ಣನನ್ನು ಗೆಲ್ಲುವುದು ಏಕೆ ಕಷ್ಟಸಾಧ್ಯ?

ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಳವಿಯಲಿ ಕಳವಿನ
ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ
ಸಾಣೆಗಂಡಲಗಿವನು ಸಮರಕೆ
ಹೂಣಿಗನು ರಿಪುಬಲದ ಹಾಣಾ
ಹಾಣಿಕಾರನು ಕರ್ಣನಳುಕುವನಲ್ಲ ನಿನಗೆಂದ (ಕರ್ಣ ಪರ್ವ, ೧೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಧರ್ಮಜನು ಅರ್ಜುನನ ಜೊತೆ ತನ್ನ ಮಾತನ್ನು ಮುಂದುವರೆಸುತ್ತಾ, ಕರ್ಣನು ಜಾಣತನದಿಂದ ಯುದ್ಧ ಮಾಡುತ್ತಲೇ ಹಿಮ್ಮೆಟ್ಟಿ ಹೋಗುವ ದ್ರೋಣನಲ್ಲ. ಕದ್ದು ಹೋಗಿ ಹೊಗಳಿ ಒಲಿಸಿಕೊಳ್ಳೋಣವೆಂದರೆ ಇವನು ಭೀಷ್ಮನೂ ಅಲ್ಲ. ಇವನು ಸಾಣೆಮಾಡಿಸಿದ ಹರಿತವಾದ ವೀರ, ನುಗ್ಗಿ ಹುಡುಕಿ ಶತ್ರುಗಳನ್ನು ಹಾಣಾಹಾಣಿಯಲ್ಲಿ ಸೋಲಿಸುವಂತಹ ವೀರ. ಇವನು ನಿನಗೆ ಅಳುಕುವವನಲ್ಲ ಎಂದು ಧರ್ಮಜನು ಕರ್ಣನ ವೀರತನವನ್ನು ಅರ್ಜುನನ ಬಳಿ ಹೇಳಿದನು.

ಅರ್ಥ:
ಜಾಣತನ: ಬುದ್ಧಿವಂತಿಕೆ, ಕುಶಲತೆ; ಕಾದು: ಹೋರಾಡಿ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಅಳವಿ: ಯುದ್ಧ; ಕಳವು: ಕದ್ದು ಮುಚ್ಚಿ; ಕೇಣ: ಕೋಪ, ದ್ವೇಷ; ಕೊಂಡಾಡು: ಹೊಗಳು; ಗಾಂಗೇಯ: ಭೀಷ್ಮ; ಸಾಣೆ: ಆಯುಧವನ್ನು ಹರಿತಗೊಳಿಸಲು ಮಸೆಯುವ ಕಲ್ಲು;ಸಮರ: ಯುದ್ಧ; ಹೂಣಿಗ: ಸಾಹಸಿ, ಶೂರ; ರಿಪುಬಲ: ವೈರಿ; ಹಾಣಾಹಣಿಕಾರ: ಪ್ರತ್ಯಕ್ಷವಾಗಿ ಯುದ್ಧ ಮಾಡುವವ; ಅಳುಕು: ಹೆದರು;

ಪದವಿಂಗಡಣೆ:
ಜಾಣತನದಲಿ+ ಕಾದಿ +ಹಿಂಗುವ
ದ್ರೋಣನಲ್ಲ್+ಅಳವಿಯಲಿ +ಕಳವಿನ
ಕೇಣದಲಿ +ಕೊಂಡಾಡುವರೆ+ ಗಾಂಗೇಯನಿವನಲ್ಲ
ಸಾಣೆಗಂಡಲಗ್+ಇವನು +ಸಮರಕೆ
ಹೂಣಿಗನು+ ರಿಪುಬಲದ+ ಹಾಣಾ
ಹಾಣಿಕಾರನು+ ಕರ್ಣನ್+ಅಳುಕುವನಲ್ಲ+ ನಿನಗೆಂದ

ಅಚ್ಚರಿ:
(೧) ಕರ್ಣನ ವೀರತನದ ವರ್ಣನೆ – ಸಾಣೆಗಂಡಲಗಿವನು ಸಮರಕೆ ಹೂಣಿಗನು ರಿಪುಬಲದ ಹಾಣಾಹಾಣಿಕಾರನು ಕರ್ಣನಳುಕುವನಲ್ಲ
(೨) ಕ ಕಾರದ ತ್ರಿವಳಿ ಪದ – ಕಳವಿನ ಕೇಣದಲಿ ಕೊಂಡಾಡುವರೆ

ಪದ್ಯ ೧೯: ಯಾರ ಒಟ್ಟುಗೂಡಿದರೆ ಕರ್ಣನನ್ನು ಸೋಲಿಸಲು ಸಾಧ್ಯ?

ಬಲನ ಜಂಭದ ಕೈಟಭನ ದಶ
ಗಳನ ನಮುಚಿಯ ಕಾಲನೇಮಿಯ
ಬಲ ನಿಶುಂಬ ಹಿರಣ್ಯಕಾದಿಯ ಖಳರ ಸಂದೋಹ
ಅಳವಿಗೊಡುವರೆ ಪಾಡಹುದು ನೀ
ನಿಲುಕಲಳವೇ ಕರ್ಣಜಯವತಿ
ಸುಲಭವೇ ನಿನ್ನಂದದವರಿಗೆ ಪಾರ್ಥ ಹೇಳೆಂದ (ಕರ್ಣ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಬಲ, ಜಂಭ, ಕೈಟಭ, ರಾವಣ, ನಮುಚಿ, ಕಾಲನೇಮಿ, ನಿಶುಂಭ, ಹಿರಣ್ಯಾಕ್ಷ, ಮೊದಲಾದ ರಾಕ್ಷಸರು ಒಟ್ಟಾಗಿ ಕರ್ಣನ ಮೇಲೆ ಬಿದ್ದರೆ ಆಗ ಸರಿ ಹೋದೀತು. ನೀನು ಅವನೊಡನೆ ನಿಂತು ಗೆಲ್ಲಬಲ್ಲೆಯಾ? ನಿನ್ನಂತಹವರಿಗೆ ಕರ್ಣನನ್ನು ಗೆಲ್ಲುವುದು ಸುಲಭವೇ ಅರ್ಜುನ ಹೇಳು ಎಂದು ಧರ್ಮಜನು ಅರ್ಜುನನನ್ನು ಹಂಗಿಸಿದ.

ಅರ್ಥ:
ದಶಗಳ: ದಶಮುಖ (ರಾವಣ); ಆದಿ: ಮುಂತಾದ; ಖಳ:ದುಷ್ಟ; ಸಂದೋಹ: ಗುಂಪು; ಆಳವಿ: ಯುದ್ಧ; ಪಾಡು:ರೀತಿ, ಬಗೆ; ನಿಲುಕು: ದೊರಕು; ಸುಲಭ: ಕಠಿಣವಲ್ಲದ, ನಿರಾಯಾಸ; ಜಯ: ಗೆಲುವು; ಹೇಳು: ತಿಳಿಸು;

ಪದವಿಂಗಡಣೆ:
ಬಲನ +ಜಂಭದ +ಕೈಟಭನ +ದಶ
ಗಳನ +ನಮುಚಿಯ +ಕಾಲನೇಮಿಯ
ಬಲ ನಿಶುಂಬ +ಹಿರಣ್ಯಕಾದಿಯ +ಖಳರ+ ಸಂದೋಹ
ಅಳವಿಗೊಡುವರೆ+ ಪಾಡಹುದು +ನೀ
ನಿಲುಕಲ್+ಅಳವೇ +ಕರ್ಣ+ಜಯವ್+ಅತಿ
ಸುಲಭವೇ +ನಿನ್ನಂದದವರಿಗೆ+ ಪಾರ್ಥ +ಹೇಳೆಂದ

ಅಚ್ಚರಿ:
(೧) ೮ ರಾಕ್ಷಸರ ಹೆಸರುಗಳನ್ನು ಹೇಳಿರುವ ಪದ್ಯ – ಬಲ, ಜಂಭ, ಕೈಟಭ ದಶಗಳ, ನಮುಚಿ, ಕಾಲನೇಮಿ, ನಿಶುಂಬ, ಹಿರಣ್ಯ
(೨) ಅರ್ಜುನನನ್ನು ಹಂಗಿಸುವ ಪರಿ – ನೀನಿಲುಕಲಳವೇ ಕರ್ಣಜಯವತಿ ಸುಲಭವೇ ನಿನ್ನಂದದವರಿಗೆ ಪಾರ್ಥ

ಪದ್ಯ ೧೮: ಧರ್ಮಜನು ಅರ್ಜುನನನ್ನು ಹೇಗೆ ಹಂಗಿಸಿದನು?

ನಿನಗೆ ಮಣಿವವನಲ್ಲ ರಾಧಾ
ತನಯನವ ಹೆಚ್ಚಾಳು ಕಡ್ಡಿಯ
ಮೊನೆಗೆ ಕೊಂಬನೆ ನಿನ್ನನೀ ಹೆಮ್ಮಕ್ಕಳಿದಿರಿನಲಿ
ಕನಲಿ ಕಳವಳಿಸಿದರೆ ನೀನಾ
ತನ ವಿಭಾಡಿಸಲಾಪ ಸತ್ವದ
ಮನವ ಬಲ್ಲೆನು ಪಾರ್ಥ ನುಡಿಯದಿರೆಂದನಾ ಭೂಪ (ಕರ್ಣ ಪರ್ವ, ೧೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನು ಅರ್ಜುನನನ್ನು ಹಂಗಿಸುತ್ತಾ, ಕರ್ಣನು ನಿನಗೆ ತಲೆಬಾಗಿಸುವವನಲ್ಲ, ಆತ ಮಹಾವೀರ. ನಿನ್ನನ್ನು ಒಂದು ಹುಲುಕಡ್ಡಿಗೆ ಸಮನೆಂದು ಭಾವಿಸುವವನು. ಇಲ್ಲಿ ಹೆಣ್ಣು ಮಕ್ಕಳಿದಿರಿನಲ್ಲಿ ನೀನು ಕೋಪಗೊಂಡು ಬಡಬಡಿಸಿದರೆ ನೀನು ಅವನನ್ನು ಗೆಲ್ಲಬಲ್ಲೆಯಾ? ನಿನ್ನ ಸತ್ವ ನನಗೆ ತಿಳಿಯದೇ? ಅರ್ಜುನ ನೀನು ಸುಮ್ಮನೆ ಮಾತನಾಡಬೇಡ ಎಂದು ಛೇಡಿಸಿದನು.

ಅರ್ಥ:
ಮಣಿ: ಬಾಗು, ಬಗ್ಗು; ತನಯ: ಮಗ; ಹೆಚ್ಚು: ಅಧಿಕ; ಕಡ್ಡಿ: ಸಣ್ಣ ಸಿಗುರು; ಮೊನೆ: ತುದಿ; ಕೊಂಬು: ಹೆಮ್ಮೆ, ಹೆಚ್ಚುಗಾರಿಕೆ; ಹೆಮ್ಮಕಳು: ಹೆಣ್ಣುಮಕ್ಕಳು; ಇದಿರು: ಎದುರು; ಕನಲು: ಸಿಟ್ಟಿಗೇಳು; ಕಳವಳಿಸು: ಚಿಂತಿಸು; ವಿಭಾಡಿಸು: ನಾಶಮಾಡು; ಸತ್ವ: ಸಾರ; ಮನ: ಮನಸ್ಸು; ಬಲ್ಲೆ: ತಿಳಿ; ನುಡಿ: ಮಾತಾಡು; ಭೂಪ: ರಾಜ;

ಪದವಿಂಗಡಣೆ:
ನಿನಗೆ +ಮಣಿವವನಲ್ಲ+ ರಾಧಾ
ತನಯನವ+ ಹೆಚ್ಚಾಳು +ಕಡ್ಡಿಯ
ಮೊನೆಗೆ+ ಕೊಂಬನೆ+ ನಿನ್ನನೀ+ ಹೆಮ್ಮಕ್ಕಳ್+ಇದಿರಿನಲಿ
ಕನಲಿ+ ಕಳವಳಿಸಿದರೆ+ ನೀನ್
ಆತನ +ವಿಭಾಡಿಸಲಾಪ +ಸತ್ವದ
ಮನವ +ಬಲ್ಲೆನು +ಪಾರ್ಥ +ನುಡಿಯದಿರೆಂದನಾ +ಭೂಪ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ: ನಿನ್ನನೀ ಹೆಮ್ಮಕ್ಕಳಿದಿರಿನಲಿ ಕನಲಿ ಕಳವಳಿಸಿದರೆ ನೀನಾ
ತನ ವಿಭಾಡಿಸಲಾಪ ಸತ್ವದ ಮನವ ಬಲ್ಲೆನು

ಪದ್ಯ ೧೭: ಧರ್ಮಜನು ಅರ್ಜುನನ ಮಾತನ್ನು ಏಕೆ ನಂಬುವುದಿಲ್ಲವೆಂದು ಹೇಳಿದ?

ನಾಲಗೆಯ ನೆಣಗೊಬ್ಬು ಮಿಕ್ಕು ಛ
ಢಾಳಿಸಿದರೇನಹುದು ಕರ್ಣನ
ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ
ವೀಳೆಯವ ತಾ ಕರ್ಣನಾಯುಷ
ಕೋಳುವೋಯಿತ್ತೆಂಬ ಗರ್ವನ
ಗಾಳುತನವನು ನಂಬಲರಿವೆನೆ ಪಾರ್ಥ ಹೇಳೆಂದ (ಕರ್ಣ ಪರ್ವ, ೧೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧರ್ಮಜನು ಅರ್ಜುನನನಿಗೆ ಮತ್ತಷ್ಟು ತೀವ್ರವಾಗಿ ಹೇಳುತ್ತಾ, ಅರ್ಜುನ ಕೇಳು ನಾಲಗೆಯ ನೆಣಗೊಬ್ಬು ಹೆಚ್ಚಾದರೆ ಅದು ಏನೇನನ್ನೋ ನುಡಿಸುತ್ತದೆ. ಅದರಿಂದೇನು ಫಲ. ಕರ್ಣನ ಬಾಣಗಳ ಗಾಳಿ ಬೀಸಿದರೆ ನಿನ್ನ ಬಿಳುಪಾದ ಕುದುರೆಗಳ ರಥ ಸೀದು ಕಪ್ಪಾಗುತ್ತದೆ. ವೀಳೆಯನ್ನು ಕೊಡು, ಕರ್ಣನ ಆಯುಷ್ಯ ಮುಗಿಯಿತು ಎಂಬ ಗರ್ವದ ಮಾತನ್ನು ನಾನು ನಂಬಿಯೇನೇ ಎಂದು ಧರ್ಮಜನು ನುಡಿದನು.

ಅರ್ಥ:
ನಾಲಗೆ: ಜಿಹ್ವೆ; ನೆಣ: ಕೊಬ್ಬು, ಮೇದಸ್ಸು; ಮಿಕ್ಕ: ಹೆಚ್ಚಾದ; ಛಢಾಳಿಸು: ಅತಿಶಯವಾಗು; ಕೋಲು: ಬಾಣ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೀಯದು: ನಾಶವಾಗು, ಅಳಿ; ಸಿತ: ಬಿಳುಪು; ವೀಳೆ: ತಾಂಬೂಲ; ಆಯುಷ: ಜೀವಿತ ವರ್ಷಗಳು; ಕೋಳು:ಹೊಡೆತ; ಗರ್ವ:ಸೊಕ್ಕು;
ಆಳುತನ: ಸೈನಿಕ; ನಂಬು: ವಿಶ್ವಾಸವಿಡು; ಅರಿ: ತಿಳಿ; ಹೇಳು: ತಿಳಿಸು;

ಪದವಿಂಗಡಣೆ:
ನಾಲಗೆಯ +ನೆಣಗೊಬ್ಬು +ಮಿಕ್ಕು +ಛ
ಢಾಳಿಸಿದರ್+ಏನಹುದು +ಕರ್ಣನ
ಕೋಲಗರಿ+ ಸೋಂಕಿದರೆ+ ಸೀಯದೆ +ಸಿತಗತನ+ ನಿನಗೆ
ವೀಳೆಯವ +ತಾ +ಕರ್ಣನಾಯುಷ
ಕೋಳುವೋಯಿತ್ತೆಂಬ+ ಗರ್ವನಗ್
ಆಳುತನವನು +ನಂಬಲ್+ಅರಿವೆನೆ+ ಪಾರ್ಥ +ಹೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೋಂಕಿದರೆ ಸೀಯದೆ ಸಿತಗತನ
(೨) ಅರ್ಜುನನು ವೀರನೆಂದು ತಿಳಿದಿದ್ದರೂ ಧರ್ಮಜನು ನಂಬದ ಸ್ಥಿತಿ, ಕರ್ಣನ ಪರಾಕ್ರಮವನ್ನು ತೋರಿಸುತ್ತದೆ