ಪದ್ಯ ೨೩: ವಿಘಳಿಗೆಯಲ್ಲಿ ಭೀಮನು ಹೇಗೆ ಸೈನ್ಯವನ್ನು ಸದೆಬಡಿದನು?

ತುಡುಕುವಾನೆಯನೀಸಿನಲಿ ಖುರ
ವಿಡುವ ಕುದುರೆಯನೊತ್ತಿ ಹಾಯ್ಸುವ
ಬಿಡು ರಥವ ತಲೆವರಿಗೆಯಲಿ ತವಿಕುಸುವ ಕಾಲಾಳ
ಕಡಿದನಂಬಿನೊಳಾ ಗಜವನಾ
ಕಡುಹಯವನಾ ರಥವನಾ ವಂ
ಗಡದ ಕಾಲಾಳುಗಳನೊಂದು ವಿಘಳಿಗೆ ಮಾತ್ರದಲಿ (ಕರ್ಣ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಭೀಮನು ತನ್ನ ಬಳಿಗೆ ದಾಳಿ ಮಾಡಿದ ಆನೆಗಳನ್ನು ಸದೆಬಡಿದು, ಮುಂದೆ ಬಂದ ಕುದುರೆಗಳನ್ನು ನೆಲಕ್ಕೆ ಅಪ್ಪಳಿಸಿ, ವೇಗದಿಂದ ಬಂದ ರಥವನ್ನು ಗುರಾಣಿಯಲ್ಲಿ ಕಡಿದು, ಆತುರದಿ ಬಂದ ಸೈನಿಕರನ್ನು ಬಾಣಗಳಿಂದ ಸಾಯಿಸಿ, ಕೇವಲ ಕ್ಷಣಾರ್ಧದಲ್ಲಿ ಆನೆ, ಕುದುರೆ, ರಥ ಕಾಲಾಳುಗಳನ್ನು ತನ್ನ ಬಾಣದಿಂದ ಕಡಿದು ಹಾಕಿದನು.

ಅರ್ಥ:
ತುಡುಕು: ಮುಟ್ಟು, ತಾಗು, ಬೇಗನೆ ಹಿಡಿ; ಆನೆ: ಗಜ, ಕರಿ; ಈಸು: ಇಷ್ಟು; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಕುದುರೆ: ಅಶ್ವ; ಒತ್ತು: ಆಕ್ರಮಿಸು, ಮುತ್ತು; ಹಾಯ್ಸು: ಓಡಿಸು; ಬಿಡು: ತೊರೆ, ತ್ಯಜಿಸು; ರಥ: ಬಂಡಿ; ತಲೆವರಿಗೆ: ತಲೆಯಡಾಲು, ಗುರಾಣಿ; ತವಕ: ಬಯಕೆ, ಆತುರ;ಕಾಲಾಳ: ಸೈನಿಕ; ಕಡಿ: ತುಂಡು, ಹೋಳು; ಅಂಬು: ಬಾಣ; ಗಜ: ಆನೆ; ಕಡು:ವಿಶೇಷವಾಗಿ, ಹೆಚ್ಚಾಗಿ; ಹಯ: ಕುದುರೆ; ವಂಗಡ: ಭೇದ, ವ್ಯತ್ಯಾಸ; ವಿಘಳಿಗೆ: ಗಳಿಗೆಯ ಅರು ವತ್ತನೆಯ ಒಂದು ಭಾಗ; ಮಾತ್ರ: ಅಷ್ಟು, ಕೇವಲ;

ಪದವಿಂಗಡಣೆ:
ತುಡುಕುವ್+ಆನೆಯನ್+ಈಸಿನಲಿ+ ಖುರ
ವಿಡುವ +ಕುದುರೆಯನ್+ಒತ್ತಿ +ಹಾಯ್ಸುವ
ಬಿಡು+ ರಥವ +ತಲೆವರಿಗೆಯಲಿ +ತವಿಕುಸುವ +ಕಾಲಾಳ
ಕಡಿದನ್+ಅಂಬಿನೊಳ್+ಆ+ ಗಜವನ್
ಆ+ಕಡುಹಯವನ್+ಆ+ ರಥವನ್+ಆ+ ವಂ
ಗಡದ +ಕಾಲಾಳುಗಳನ್+ಒಂದು +ವಿಘಳಿಗೆ +ಮಾತ್ರದಲಿ

ಅಚ್ಚರಿ:
(೧) ಗಜ, ಆನೆ; ಹಯ, ಕುದುರೆ – ಸಮನಾರ್ಥಕ ಪದ

ಪದ್ಯ ೨೨: ಭೀಮನ ಪರಾಕ್ರಮದ ಯುದ್ಧ ಹೇಗಿತ್ತು?

ಎಚ್ಚನವರವರೆಚ್ಚ ಬಾಣವ
ಕೊಚ್ಚಿದನು ಕೋಲಳವಿಗೊಡ್ಡಿದ
ನಿಚ್ಚಟರ ನೀಗಿದನು ತಾಗಿದನರಸು ಮೋಹರವ
ಹೆಚ್ಚಿ ವೀರಾವೇಶದಲಿ ಬಹ
ಬಿಚ್ಚು ರಥಿಕರನಾಯ್ದು ಧೈರ್ಯದ
ಕೆಚ್ಚ ಮುರಿದನು ಕದಡಿದನು ರಿಪುಸುಭಟ ಸಾಗರವ (ಕರ್ಣ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅವರೆಲ್ಲರೂ ಬಿಟ್ಟ ಬಾಣಗಳನ್ನು ಭೀಮನು ಕೊಚ್ಚಿಹಾಕಿದನು. ಅವರ ಮೇಲೆ ಮತ್ತೆ ತನ್ನ ಬಾಣಗಳನ್ನು ಬಿಟ್ಟನು. ತನ್ನ ಬಾಣಗಳಿಗೆದಿರಾಗಿ ಬಂದ ಶತ್ರುಸೈನ್ಯದವರನ್ನು ಕೊಂದನು. ಕೌರವನ ಸೈನ್ಯವನ್ನು ಮುಟ್ಟಿ ವೀರಾವೇಶದಿಂದ ಬಂದ ರಥಿಕರ ಧೈರ್ಯವನ್ನು ಮುರಿದು ಶತ್ರು ಸೈನ್ಯದ ಸುಭಟ ಸಾಗರವನ್ನು ಮುರಿದನು.

ಅರ್ಥ:
ಎಚ್ಚು: ಬಾಣ ಬಿಡು; ಬಾಣ: ಶರ, ಸರಳು; ಕೊಚ್ಚು: ತುಂಡು ಮಾಡು; ಕೋಲು: ಬಾಣ; ಕೋಲಳವಿ: ಬಾಣದ ಶಕ್ತಿ; ಒಡ್ಡು: ತೋರು; ನಿಚ್ಚಟ: ಸ್ಥಿರಚಿತ್ತವುಳ್ಳ; ನೀಗು: ನಿವಾರಿಸಿಕೊಳ್ಳು, ಬಿಡು; ತಾಗು: ಮುಟ್ಟು; ಅರಸು: ರಾಜ; ಮೋಹರ: ಯುದ್ಧ; ಹೆಚ್ಚಿ: ಅಧಿಕ; ವೀರಾವೇಶ: ಪರಾಕ್ರಮ; ಬಹ: ಬಹಳ; ಬಿಚ್ಚು: ಕಳಚು; ರಥಿಕ: ರಥದಿಂದ ಹೋರಾಡುವ ಭಟ; ಆಯ್ದು: ಆರಿಸಿ; ಧೈರ್ಯ: ಎದೆಗಾರಿಕೆ, ಕೆಚ್ಚು; ಕೆಚ್ಚ: ಧೈರ್ಯ, ಸಾಹಸ; ಮುರಿ: ಸೀಳು; ಕದಡು: ಕಲಕು; ರಿಪು: ವೈರಿ; ಸುಭಟ: ಪರಾಕ್ರಮಿ; ಸಾಗರ: ಸಮುದ್ರ;

ಪದವಿಂಗಡಣೆ:
ಎಚ್ಚನ್+ಅವರ್+ಎಚ್ಚ +ಬಾಣವ
ಕೊಚ್ಚಿದನು +ಕೋಲಳವಿಗ್+ಒಡ್ಡಿದ
ನಿಚ್ಚಟರ +ನೀಗಿದನು +ತಾಗಿದನ್+ಅರಸು +ಮೋಹರವ
ಹೆಚ್ಚಿ+ ವೀರಾವೇಶದಲಿ +ಬಹ
ಬಿಚ್ಚು +ರಥಿಕರನ್+ಆಯ್ದು +ಧೈರ್ಯದ
ಕೆಚ್ಚ +ಮುರಿದನು +ಕದಡಿದನು +ರಿಪು+ಸುಭಟ+ ಸಾಗರವ

ಅಚ್ಚರಿ:
(೧) ಎಚ್ಚ – ಪದದ ಬಳಕೆ – ಎಚ್ಚನವರವರೆಚ್ಚ
(೨) ಶೌರ್ಯ ರಸವನ್ನು ತೋರಿಸುವ ಪದ್ಯ

ಪದ್ಯ ೨೧: ಭೀಮನು ವೈರಿ ರಥಗಳ ಮೇಲೆ ಹೇಗೆ ಎರಗಿದನು?

ಅರಸ ಕೇಳೈ ನಿಮ್ಮ ಭೀಮನ
ಪರಿಯನೀ ಸರ್ವಾಸ್ತ್ರಘಾತ
ಸ್ಫುರಣ ಮದಕರಿ ಮಕ್ಷಿಕಾ ಸಂಘಾತದಂದದಲಿ
ಕೆರಳಿ ಕವಿದನು ಕೆದರಿದುರಿ ಕ
ರ್ಪುರಕೆ ಕವಿವಂದದಲಿ ಕರ್ಣನ
ಗುರುಸುತನ ಕುರುಪತಿಯ ದುಶ್ಯಾಸನನ ರಥಕ್ಕಾಗಿ (ಕರ್ಣ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು ನಿಮ್ಮ ಭೀಮನ ಪರಾಕ್ರಮದ ಪರಿ, ಅವನ ಮೇಲೆ ಎಲ್ಲರಿಂದ ಬಗೆ ಬಗೆಯ ಆಯುಧಗಳು ಎರಗಲು, ಆನೆಯ ಮೇಲೆ ನೊಣಗಳು ನುಗ್ಗಿದಂತಾಯಿತು. ಭೀಮನು ಕೆರಳಿ ಉರಿಯು ಕರ್ಪೂರದ ಮೇಲೆ ನುಗ್ಗಿದಂತೆ ಕರ್ಣ ಅಶ್ವತ್ಥಾಮ, ಕೌರವ ದುಶ್ಯಾಸನರ ರಥಗಳ ಮೇಳೆ ಹಾಯ್ದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪರಿ: ರೀತಿ; ಸರ್ವಾಸ್ತ್ರ: ಎಲ್ಲಾ ಆಯುಧ; ಘಾತ: ಹೊಡೆತ; ಸ್ಫುರಣ: ನಡುಗುವುದು; ಮದಕರಿ: ಸೊಕ್ಕಿದ ಆನೆ; ಮಕ್ಷಿ: ನೊಣ ಸಂಘಾತ: ಗುಂಪು, ಸಮೂಹ; ಕೆರಳು: ರೇಗು, ಕನಲು; ಕವಿ: ಆವರಿಸು; ಕೆದರು: ಹರಡಿ; ಉರಿ: ಬೆಳಗು; ಕರ್ಪುರ: ಸುಗಂಧ ದ್ರವ್ಯ; ಕವಿ: ಮುತ್ತಿಗೆ; ರಥ: ಬಂಡಿ;

ಪದವಿಂಗಡಣೆ:
ಅರಸ +ಕೇಳೈ +ನಿಮ್ಮ +ಭೀಮನ
ಪರಿಯನ್+ಈ+ ಸರ್ವಾಸ್ತ್ರ+ಘಾತ
ಸ್ಫುರಣ+ ಮದಕರಿ+ ಮಕ್ಷಿಕಾ+ ಸಂಘಾತದಂದದಲಿ
ಕೆರಳಿ+ ಕವಿದನು+ ಕೆದರಿದ್+ಉರಿ+ ಕ
ರ್ಪುರಕೆ +ಕವಿವಂದದಲಿ +ಕರ್ಣನ
ಗುರುಸುತನ +ಕುರುಪತಿಯ+ ದುಶ್ಯಾಸನನ +ರಥಕ್ಕಾಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆನೆಯ ಮೇಲೆ ನೊಣಬಂದಂತೆ ಹೇಳುವಾಗ ಭೀಮನ ಪೌರುಷವನ್ನು ಊಹಿಸಬಹುದು…ಮದಕರಿ ಮಕ್ಷಿಕಾ ಸಂಘಾತದಂದದಲಿ;
ಭೀಮನ ಪರಾಕ್ರಮ: ಕೆರಳಿ ಕವಿದನು ಕೆದರಿದುರಿ ಕರ್ಪುರಕೆ ಕವಿವಂದದಲಿ
(೨) ಕ ಕಾರದ ಸಾಲು ಪದಗಳು – ಕೆರಳಿ ಕವಿದನು ಕೆದರಿದುರಿ ಕರ್ಪುರಕೆ ಕವಿವಂದದಲಿ ಕರ್ಣನ

ಪದ್ಯ ೨೦: ಭೀಮನ ಮೇಲಿನ ಆಕ್ರಮಣ ಹೇಗಿತ್ತು?

ಕೀರಿ ಕಾಲಿಡೆ ದಿಕ್ಕರಿಗಳೆದೆ
ಡೋರುವೋಗಲು ಸರ್ವ ಲಗ್ಗೆಯ
ಲೇರೀತೀ ದಳ ದಳವುಳಿಸಿ ದಳಪತಿಯ ನೇಮದಲಿ
ಏರು ಸೂರೆಗೆ ಹಾರಿ ಮೀಸಲಿ
ನೇರು ನಮ್ಮದು ತಮ್ಮದೆನುತು
ಬ್ಬೇರಿ ಭೀಮನ ಮುತ್ತಿದರು ಮೆತ್ತಿದರು ಸರಳಿನಲಿ (ಕರ್ಣ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ದುರ್ಯೋಧನಾದಿಯಾಗಿ ದಾಳಿಮಾಡುತ್ತಿದ್ದ ಕುರುಸೇನೆಯು ಕೂಗಿ ಕೇಕೇ ಹಾಕುತ್ತಾ ನುಗುತ್ತಿದ್ದವು, ದಿಗ್ಗಜರುಗಳ ಎದೆಗಳಲ್ಲಿ ಗುಳಿ ಬಿದ್ದವು, ಕರ್ಣನ ಅಪ್ಪಣೆಯಂತೆ ಸಮಸ್ತ ಕುರುಬಲವೂ ದಾಳಿ ಮಾಡಿತು. ಭೀಮನನ್ನು ಗಾಯಗೊಳಿಸಲು ನುಗ್ಗಿರಿ ಎಂದು ಹೇಳಲು, ಭೀಮನು ತಮಗೇ ಮೀಸಲು ಎನ್ನುತ್ತಾ ಭೀಮನ ಮೇಲೆ ಬಾಣಗಳನ್ನು ಬಿಟ್ಟರು.

ಅರ್ಥ:
ಕೀರಿ: ಕಿರುಚು, ಆರ್ಭಟ; ಕಾಲಿಡಿ: ಮೆಟ್ಟು, ತುಳಿ; ದಿಕ್ಕರಿ: ದಿಗ್ಗಜ; ಎದೆ: ವಕ್ಷಸ್ಥಳ; ಡೋರುವೋಗು: ತೂತಾಗು; ಸರ್ವ: ಎಲ್ಲಾ; ಲಗ್ಗೆ: ಆಕ್ರಮಣ, ಮುತ್ತಿಗೆ; ಏರು: ಹೆಚ್ಚಾಗು; ದಳ: ಸೈನ್ಯ; ದಳವುಳಿ: ಸೂರೆಮಾಡುವವ; ದಳಪತಿ: ಸೇನಾಧಿಪತಿ; ನೇಮ: ನಿರ್ದೇಶನ; ಏರು: ಮೇಲೇಳು; ಸೂರೆ: ಕೊಳ್ಳೆ, ಲೂಟಿ; ಹಾರಿ: ಬೀಳು; ಮೀಸಲು: ಮುಡಿಪು; ಉಬ್ಬೇರಿ: ಕೋಪ, ಆಶ್ಚರ್ಯದ ಭಾವನೆಯನ್ನು ವಿವರಿಸುವ ಪದ; ಮುತ್ತು: ಆವರಿಸು; ಮೆತ್ತು: ಚುಚ್ಚು; ಸರಳು: ಬಾಣ;

ಪದವಿಂಗಡಣೆ:
ಕೀರಿ +ಕಾಲಿಡೆ +ದಿಕ್ಕರಿಗಳ್+ಎದೆ
ಡೋರುವೋಗಲು +ಸರ್ವ +ಲಗ್ಗೆಯಲ್
ಏರೀತ್+ಈ+ ದಳ +ದಳವುಳಿಸಿ +ದಳಪತಿಯ +ನೇಮದಲಿ
ಏರು+ ಸೂರೆಗೆ +ಹಾರಿ +ಮೀಸಲಿನ್
ಏರು +ನಮ್ಮದು +ತಮ್ಮದೆನುತ್
ಉಬ್ಬೇರಿ +ಭೀಮನ +ಮುತ್ತಿದರು +ಮೆತ್ತಿದರು +ಸರಳಿನಲಿ

ಅಚ್ಚರಿ:
(೧) ದಳ ದಳವುಳಿಸಿ ದಳಪತಿ – ದಳ ಪದದ ಬಳಕೆ
(೨) ಮುತ್ತಿದರು ಮೆತ್ತಿದರು – ಪದಗಳ ಬಳಕೆ

ಪದ್ಯ ೧೯: ಗೋಗ್ರಹಣದಲ್ಲಿ ಯಾರು ಕುರುಸೈನ್ಯವನ್ನು ತಡೆದಿದ್ದರು?

ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ (ಕರ್ಣ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಒಂದು ಕಡೆಯಿಂದ ದುರ್ಯೋಧನನು ಇಪ್ಪತ್ತೊಂದು ಸಾವಿರ ರಥಿಕರ ಜೊತೆ ಭೀಮನ ಮೇಲೆ ಉಘೇ ಉಘೇ ಎಂದು ಹೇಳುತ್ತಾ ಆಕ್ರಮಣ ಮಾಡಿದನು. ಈ ಹಿಂದೆ ವಿರಾಟ ರಾಜನ ಮೇಲೆ ಆಕ್ರಮಣ ಮಾಡುವಾಗ ಗೋಗ್ರಹಣದಲ್ಲಿ ಅರ್ಜುನನೊಬ್ಬನೇ ನಮ್ಮನ್ನು ಎದುರಿಸಿದನು, ಇಂದು ಭೀಮನೊಬ್ಬನೇ ಕುರುಸೇನೆಯನ್ನು ಎದುರುನೋಡುತ್ತಿದ್ದಾನೆ ಎಂದು ಸೈನ್ಯದ ರಥಿಕರು ಕುರುರಾಯನಿಗೆ ನುಡಿದನು.

ಅರ್ಥ:
ದೆಸೆ: ದಿಕ್ಕು; ರಾಯ: ರಾಜ; ರಥ: ಬಂಡಿ; ಸಹಿತ: ಜೊತೆ; ಉಘೇ: ಜಯಘೋಷದ ಪದ; ಸಮ್ಮುಖ: ಎದುರು; ಗೋಗ್ರಹಣ: ಗೋವುಗಳನ್ನು ಸರೆಹಿಡಿಯುವುದು; ಫಲುಗುಣ: ಅರ್ಜುನ; ನಿಂದನು: ನಿಲ್ಲಿಸು, ಎದುರು ನಿಲ್ಲು; ಅನಿಬರು: ಅಷ್ಟು ಜನ; ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಇಂದು: ಇವತ್ತು; ಸೈರಿಸು: ತಾಳು;

ಪದವಿಂಗಡಣೆ:
ಒಂದು+ ದೆಸೆಯಲಿ +ರಾಯನ್+ಇಪ್ಪ
ತ್ತೊಂದು +ಸಾವಿರ +ರಥಸಹಿತ+ಉಘೇ
ಯೆಂದು +ಬಿಟ್ಟನು +ಭೀಮಸೇನನ +ರಥದ +ಸಮ್ಮುಖಕೆ
ಅಂದು +ಗೋಗ್ರಹಣದಲಿ+ ಫಲಗುಣನ್
ಇಂದನ್+ಅನಿಬರಿಗ್+ಅರಸ+ ಚಿತ್ತೈಸ್
ಇಂದು +ಸೈರಿಸಿ +ನಿಂದನ್+ಅನಿಬರಿಗ್+ಒಬ್ಬನೇ +ಭೀಮ

ಅಚ್ಚರಿ:
(೧) ಎಂದು, ಒಂದು, ಅಂದು, ಇಂದು – ಪ್ರಾಸ ಪದಗಳು

ಪದ್ಯ ೧೮: ಸಮಸಪ್ತಕರು ಹೇಗೆ ಭೀಮನನ್ನು ಆವರಿಸಿದರು?

ಈತನೇ ನಮಗರ್ಜುನನು ಕೊ
ಳ್ಳೀತನನು ಹೊಯ್ ಹೊಯೈನುತ ಗತ
ಭೀತರಿಟ್ಟಣಿಸಿದರು ಸಮಸಪ್ತಕರು ವಂಗಡಿಸಿ
ಪೂತು ಮಝರೇ ಭೀಮ ಎನುತವೆ
ಸೂತಸುತನೌಕಿದನು ಕೃಪ ಗುರು
ಜಾತ ಕೃತವರ್ಮಾದಿ ರಥಿಕರು ಹೊಕ್ಕರುರವಣಿಸಿ (ಕರ್ಣ ಪರ್ವ, ೧೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸಂಶಪ್ತಕರು ಭೀಮನನ್ನು ನೋಡಿ, ನಿರ್ಭೀತರಾಗಿ ಇವನೇ ನಮಗೆ ಅರ್ಜುನ ಇವನನ್ನು ಹೊಡೆಯಿರಿ ಎಂದು ಹೊಯ್ ಹೊಯ್ ಎನ್ನುತ್ತಾ ಆವೇಶಭರಿತರಾಗಿ ನುಗ್ಗಿದರು. ಭೇಷ್, ಭಲೇ ಭೀಮ ಎನುತ ಕರ್ಣ, ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮ ಮೊದಲಾದ ಪರಾಕ್ರಮಿಗಳು ಆತುರದಿಂದ ಭೀಮನ ಮೇಲೆ ಎರಗಿದರು.

ಅರ್ಥ:
ಕೊಳ್ಳು: ತೆಗೆದುಕೋ; ಹೊಯ್:ಓಡಿಸುವುದಕ್ಕೆ ಗುಂಪಿನಲ್ಲಿ ಬಳಸುವ ಶಬ್ದ; ಗತಭೀತ: ಭಯತೊಲಗಿದ; ಅಟ್ಟು: ಓಡಿಸು, ಹಿಂಬಾಲಿಸು; ಅಣಿ: ಸಿದ್ಧ, ಸೈನ್ಯವ್ಯೂಹ; ಸಮಸಪ್ತಕ: ಯುದ್ಧದಲ್ಲಿ ಶಪಥಮಾಡಿ ಹೋರಾಡುವವರು; ವಂಗಡ: ಭೇದ, ವ್ಯತ್ಯಾಸ; ಪೂತು: ಭಲೆ, ಭೇಷ್; ಸೂತಸುತ: ಸಾರಥಿಯ ಮಗ (ಕರ್ಣ); ಔಕು: ಒತ್ತು, ನುಗ್ಗು; ಜಾತ: ಹುಟ್ಟಿದ; ರಥಿಕ: ರಥದಿಂದ ಹೋರಾಡುವ ಪರಾಕ್ರಮಿ; ಹೊಕ್ಕು: ಸೇರು; ಉರವಣಿಸು: ಆತುರಿಸು

ಪದವಿಂಗಡಣೆ:
ಈತನೇ +ನಮಗ್+ಅರ್ಜುನನು +ಕೊಳ್
ಈತನನು +ಹೊಯ್ +ಹೊಯೈನುತ+ ಗತ
ಭೀತರ್+ಅಟ್ಟಣಿಸಿದರು+ ಸಮಸಪ್ತಕರು+ ವಂಗಡಿಸಿ
ಪೂತು +ಮಝರೇ +ಭೀಮ +ಎನುತವೆ
ಸೂತಸುತನ್+ಔಕಿದನು +ಕೃಪ +ಗುರು
ಜಾತ +ಕೃತವರ್ಮಾದಿ +ರಥಿಕರು+ ಹೊಕ್ಕರ್+ಉರವಣಿಸಿ

ಅಚ್ಚರಿ:
(೧) ಅಟ್ಟಣಿಸಿ, ಉರವಣಿಸಿ – ಪದಗಳ ಬಳಕೆ
(೨) ಭೀಮನನ್ನು ಹೊಗಳುವ ಪದಗಳು – ಪೂತು, ಮಝ