ಪದ್ಯ ೭: ಧೃತರಾಷ್ಟ್ರನು ಯುದ್ಧದ ಬಗ್ಗೆ ಹೇಗೆ ಕುತೂಹಲಗೊಂಡಿದ್ದನು?

ಹೇಳು ಸಂಜಯ ವಿಸ್ತರಿಸಿ ಕಾ
ಲಾಳು ಮೇಲಾಳಿನಲಿ ಭೀಮನ
ಕಾಳೆಗದ ಕೌತುಕವನೀ ಹೆಬ್ಬಲದ ದುರ್ಬಲವ
ಆಳು ಹಿರಿದಿದ್ದೇನು ಫಲ ಹೀ
ಹಾಳಿ ದೈವಕೆ ಬೇರೆ ಪರಿಯ ವಿ
ತಾಳವಿಲ್ಲ ವಿಪಕ್ಷಪಾತದೊಳೆಂದನಂಧನೃಪ (ಕರ್ಣ ಪರ್ವ, ೧೫ ಸಂಧಿ, ೭ ಪದ್ಯ)

ತಾತ್ಪರ್ಯ:
ಯುದ್ಧದ ಬಗ್ಗೆ ಹೆಚ್ಚು ವಿವರವಾಗಿ ತಿಳಿಯಲು ಉತ್ಸುಕನಾದ ಧೃತರಾಷ್ಟ್ರ, ಸಂಜಯ ನಮ್ಮ ಸೈನ್ಯ ಮತ್ತು ಸೇನಾನಾಯಕರೊಡನೆ ಭೀಮನ ಯುದ್ಧವನ್ನು ವಿಸ್ತಾರವಾಗಿ ವಿವರಿಸು, ನಮ್ಮ ಮಹಾಸೈನ್ಯದ ದೌರ್ಬಲ್ಯವನ್ನೂ ವಿವರಿಸು, ಹೆಚ್ಚು ಜನರಿದ್ದರೇನು, ದೈವವು ಬೇರೆಯೇ
ರೀತಿಯಲ್ಲಿ ನಿರ್ಧರಿಸುತ್ತ, ದೈವವು ಪಕ್ಷಪಾತಿಯಾಗಿದ್ದಾನೆ, ಎಂದು ಧೃತರಾಷ್ಟ್ರನು ಬೇಜಾರಿನಿಂದ ಹೇಳಿದನು.

ಅರ್ಥ:
ವಿಸ್ತರಿಸು: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಕಾಲಾಳು: ಸೈನಿಕರು; ಮೇಲಾಳು: ಸೇನಾನಾಯಕರು; ಕಾಳೆಗ: ಯುದ್ಧ; ಕೌತುಕ: ಅಚ್ಚರಿ; ಹೆಬ್ಬಲ: ದೊಡ್ಡ ಸೈನ್ಯ; ದುರ್ಬಲ: ಬಲಹೀನನಾದವನು, ಅಶಕ್ತ; ಆಳು: ಸೈನಿಕ; ಹಿರಿ: ಹೆಚ್ಚು; ಫಲ: ಪ್ರಯೋಜನ; ಹೀಹಾಳಿ: ತೆಗಳಿಕೆ, ಅವಹೇಳನ; ದೈವ: ವಿಧಿ, ಭಗವಂತ; ಬೇರೆ: ಅನ್ಯ; ಪರಿ: ರೀತಿ; ವಿತಾಳ: ಚಿಂತೆ, ಅಳಲು; ವಿಪಕ್ಷ: ವಿರೋಧಿಯಾದ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಹೇಳು +ಸಂಜಯ +ವಿಸ್ತರಿಸಿ+ ಕಾ
ಲಾಳು +ಮೇಲಾಳಿನಲಿ+ ಭೀಮನ
ಕಾಳೆಗದ +ಕೌತುಕವನ್+ಈ+ ಹೆಬ್ಬಲದ +ದುರ್ಬಲವ
ಆಳು +ಹಿರಿದಿದ್ದೇನು +ಫಲ +ಹೀ
ಹಾಳಿ +ದೈವಕೆ +ಬೇರೆ +ಪರಿಯ +ವಿ
ತಾಳವಿಲ್ಲ+ ವಿಪಕ್ಷಪಾತದೊಳ್+ಎಂದನ್+ಅಂಧನೃಪ

ಅಚ್ಚರಿ:
(೧) ಕಾಲಾಳು, ಮೇಲಾಳು; ಹೆಬ್ಬಲ, ದುರ್ಬಲ – ಪದಗಳ ಬಳಕೆ
(೨), ಆಳು, ಕಾಲಾಳು, ಹೇಳು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ