ಪದ್ಯ ೧೨: ಅರ್ಜುನನು ಕೃಷ್ಣನಿಗೆ ಏನು ಹೇಳಿದ?

ಧರಣಿಪತಿ ಸಪ್ರಾಣನೇ ಗಜ
ಪುರದ ರಾಜ್ಯಕೆ ನಿಲಿಸುವೆನು ಮೇಣ್
ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ
ಅರೆಘಳಿಗೆ ಧರ್ಮಜನ ಬಿಟ್ಟಾ
ನಿರೆನು ಮುರಹರ ರಥವ ಮರಳಿಚು
ಮರಳಿಚೈ ರಥ ಮುಂಚುವುದೊ ಮನ ಮುಂಚುವುದೊ ಎಂದ (ಕರ್ಣ ಪರ್ವ, ೧೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರಸನು ಪ್ರಾಣದಿಂದಿದ್ದರೆ ಅವನಿಗೆ ಹಸ್ತಿನಾಪುರದ ದೊರೆಯ ಪಟ್ಟವನ್ನು ಕಟ್ಟುತ್ತೇನೆ, ಅವನೇನಾದರೂ ಸ್ವರ್ಗಸ್ತನಾದರೆ, ನಾನು ಅರ್ಧಗಳಿಗೆಯೂ ಜೀವಿಸಿರುವುದಿಲ್ಲ. ಕೃಷ್ಣ ರಥವನ್ನು ಹಿಂದಿರುಗಿಸು, ಹಿಂದಿರುಗಿಸು, ರಥ ಮುಂದೆ ಹೋಗುವುದೋ ಇಲ್ಲ ನನ್ನ ಮನಸ್ಸು ಮುಂದೆಹೋಗುವುದೋ ನೋಡಬೇಕು ಎಂದು ಅರ್ಜುನನು ಕೃಷ್ಣನಿಗೆ ಹೇಳಿದನು.

ಅರ್ಥ:
ಧರಣಿಪತಿ: ಭೂಮಿಯ ಒಡೆಯ, ರಾಜ; ಸಪ್ರಾಣ: ಜೀವಂತ; ಗಜಪುರ: ಹಸ್ತಿನಾಪುರ; ರಾಜ್ಯ: ರಾಷ್ಟ್ರ; ನಿಲುಸು: ತಡೆ; ಮೇಣ್: ಹಾಗೂ, ಮತ್ತು; ಸುರ: ದೇವತೆ; ಸಮ್ಮೇಳನ: ಗುಂಪು; ಅರೆಘಳಿಗೆ: ಒಂದು ಕ್ಷಣವೂ; ಬಿಟ್ಟಿರೆನು: ಬದುಕುವುದಿಲ್ಲ; ಮುರಹರ: ಮುರನೆಂಬ ರಾಕ್ಷಸನನ್ನು ಸಂಹಾರ ಮಾಡಿದವ (ಕೃಷ್ಣ); ಮರಳಿಚು: ಹಿಂದಿರುಗಿಸು; ಮುಂಚು: ಮುಂದೆ; ಮನ: ಮನಸ್ಸು; ರಥ: ಬಂಡಿ, ತೇರು;

ಪದವಿಂಗಡಣೆ:
ಧರಣಿಪತಿ +ಸಪ್ರಾಣನೇ +ಗಜ
ಪುರದ +ರಾಜ್ಯಕೆ +ನಿಲಿಸುವೆನು +ಮೇಣ್
ಸುರರೊಳಗೆ +ಸಮ್ಮೇಳವೇ +ಕುಂತೀಕುಮಾರಂಗೆ
ಅರೆಘಳಿಗೆ+ ಧರ್ಮಜನ +ಬಿಟ್ಟಾನ್
ಇರೆನು +ಮುರಹರ +ರಥವ+ ಮರಳಿಚು
ಮರಳಿಚೈ +ರಥ +ಮುಂಚುವುದೊ +ಮನ +ಮುಂಚುವುದೊ +ಎಂದ

ಅಚ್ಚರಿ:
(೧) ಮರಳಿಚು, ಮುಂಚುವುದೊ – ೨ ಬಾರಿ ಪ್ರಯೋಗ
(೨) ಸತ್ತರೆ ಎಂದು ಹೇಳಲು – ಸುರರೊಳಗೆ ಸಮ್ಮೇಳವೇ

ಪದ್ಯ ೧೧: ಅರ್ಜುನನಿಗೇಕೆ ಅಳ್ಳೆದೆಯಾಯಿತು?

ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ (ಕರ್ಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ದುಃಖವನ್ನು ತಡೆಯಲಾರದೆ, ನಮ್ಮ ಸೇನೆ ಸೋತು ಹಿಂದಿರುಗಲಿ, ಕೌರವನ ದುಮ್ಮಾನವಳಿದು ಸಂತೋಷ ಉಕ್ಕಲಿ, ನನ್ನ ಮನಸ್ಸಿನಲ್ಲಿ ಯಾವ ಅಸಂತೋಷವಿಲ್ಲ, ಹಸ್ತಿನಾವತಿಯಲ್ಲಿ ವಿಜಯಧ್ವಜವನ್ನು ಕೌರವನೇ ಕಟ್ಟಲಿ ನನಗೆ ಚಿಂತೆಯಿಲ್ಲ. ನಮ್ಮ ಅಣ್ಣನ ಸಿರಿಮುಖದಲ್ಲಿ ದುಃಖ ಮೂಡಿತೋ ಸ್ವರ್ಗದ ಸಂಧಾನವೋ ನಾನು ತಿಳಿಯೆನು, ಅಳ್ಳೆದೆಯಿಂದ ತೋಳಲುತ್ತಿದ್ದೇನೆ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಸೇನೆ: ಸೈನ್ಯ; ಮುರಿ: ಸೀಳು; ದುಮ್ಮಾನ: ಚಿತ್ತಕ್ಷೋಭೆ, ದುಃಖ; ಹರಿ: ಕೊನೆಗೊಳ್ಳು; ಚಿತ್ತ: ಮನಸ್ಸು; ಗ್ಲಾನಿ: ಅಸಂತೋಷ, ಅವನತಿ; ಕಟ್ಟು: ನಿರ್ಮಿಸು; ಗುಡಿ: ಮನೆ, ಆಲಯ; ಗಜನಗರ: ಹಸ್ತಿನಾಪುರ; ನರೇಂದ್ರ: ರಾಜ; ಮೊಗ: ಮುಖ; ಸಿರಿ: ಐಶ್ವರ್ಯ; ಸಿರಿಮೊಗ: ಚಿನ್ನದಂತ ಮುಖ; ಮೇಣ್: ಮತ್ತು; ಸುರಪುರ: ಸ್ವರ್ಗ; ಸಂಧಾನ: ಹೊಂದಿಸುವುದು, ಸಂಯೋಗ; ಅಳ್ಳೆದೆ: ಹೆದರಿಕೆ, ನಡುಗುವ ಎದೆ; ಅರಿ: ತಿಳಿ;

ಪದವಿಂಗಡಣೆ:
ಸೇನೆ+ ಮುರಿಯಲಿ +ಕೌರವನ +ದು
ಮ್ಮಾನ +ಹರಿಯಲಿ +ನನಗೆ +ಚಿತ್ತ
ಗ್ಲಾನಿಯೆಳ್+ಅನಿತಿಲ್ಲ+ ಕಟ್ಟಲಿ +ಗುಡಿಯ +ಗಜನಗರ
ಆ +ನರೇಂದ್ರನ +ಸಿರಿಮೊಗಕೆ +ದು
ಮ್ಮಾನವೋ +ಮೇಣ್ +ಸುರಪುರಕೆ+ ಸಂ
ಧಾನವೋ +ನಾನರಿಯೆನ್+ಅಳ್ಳೆದೆಯಾದುದ್+ಎನಗೆಂದ

ಅಚ್ಚರಿ:
(೧) ದುಮ್ಮಾನವೋ, ಸಂಧಾನವೋ; ಮುರಿಯಲಿ, ಹರಿಯಲಿ – ಪ್ರಾಸ ಪದಗಳು
(೨) ಪರಾಕ್ರಮಿಯಾದ ಅರ್ಜುನನಿಗೂ ಅಳ್ಳೆದೆಯಾದುದು ಎಂದು ತಿಳಿಸುವ ಪದ್ಯ

ಪದ್ಯ ೧೦: ರಥವನ್ನು ನೋಡಿದ ಅರ್ಜುನನು ಯಾವ ಭಾವದಲ್ಲಿ ಮುಳುಗಿದನು?

ನೋಡಿ ನೋಡಿ ಕಿರೀಟವನು ತೂ
ಗಾಡಿದನು ಕಂಬನಿಗಳಾಲಿಯೊ
ಳೀಡಿರಿದು ಸೋರಿದವು ಸೊಂಪಡಗಿತು ಮುಖಾಂಬುಜದ
ಹೂಡಿದಂಬಿನ ತೋಳ ತೆಗಹಿನ
ಬಾಡಿದುತ್ಸಾಹದ ವಿತಾಳದ
ಬೀಡಿಕೆಯ ಬೇಳುವೆಗೆ ಬೆಬ್ಬಳೆವೋದನಾ ಪಾರ್ಥ (ಕರ್ಣ ಪರ್ವ, ೧೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಅತ್ತ ನೋಡಿ ಕಿರೀಟವನ್ನು ತೂಗಾಡಿದನು. ಕಣ್ಣಿನಲ್ಲಿ ಕಂಬನಿಗಳು ತುಂಬಿ ಸುರಿದವು. ಮುಖದಲ್ಲಿದ್ದ ಪ್ರಸನ್ನತೆ ಅಡಗಿತು. ಬಾಣವನ್ನು ಹೂಡಿದ ಕೈಯನ್ನು ತೆಗೆದು, ಉತ್ಸಾಹ ಮಾಯವಾಗಿ, ಮನಸ್ಸಿನಲ್ಲಿ ಅಳಲು ತುಂಬಿ ಕಳವಳಗೊಂಡನು.

ಅರ್ಥ:
ನೋಡು: ವೀಕ್ಷಿಸು; ಕಿರೀಟ: ಮುಕುಟ; ತೂಗಾಡು: ಅಲ್ಲಾಡಿಸು; ಕಂಬನಿ: ಕಣ್ಣೀರು; ಆಲಿ: ಕಣ್ಣು; ಸೋರು: ಜಿನುಗು, ಸುರಿಸು; ಸೊಂಪು: ಕಾಂತಿ, ಹೊಳಪು; ಅಡಗು: ಅವಿತುಕೊಳ್ಳು; ಮುಖ: ಆನನ; ಅಂಬುಜ: ತಾವರೆ; ಹೂಡು: ಜೋಡಿಸು, ಸೇರಿಸು; ಅಂಬು: ಬಾಣ; ತೋಳ: ತೆಗೆದು: ಈಚೆಗೆ ತರು; ಬಾಡು: ಒಣಗು, ಕಳೆಗುಂದು; ಉತ್ಸಾಹ: ಹುರುಪು, ಆಸಕ್ತಿ; ವಿತಾಳ: ಚಿಂತೆ, ಅಳಲು; ಬೇಳು: ಕಕ್ಕಾಬಿಕ್ಕಿ; ಬೆಬ್ಬಳೆ: ಸೋಜಿಗ, ಗಾಬರಿ;

ಪದವಿಂಗಡಣೆ:
ನೋಡಿ +ನೋಡಿ +ಕಿರೀಟವನು+ ತೂ
ಗಾಡಿದನು +ಕಂಬನಿಗಳ್+ಆಲಿಯೊಳ್
ಈಡಿರಿದು +ಸೋರಿದವು +ಸೊಂಪಡಗಿತು+ ಮುಖಾಂಬುಜದ
ಹೂಡಿದಂಬಿನ+ ತೋಳ +ತೆಗಹಿನ
ಬಾಡಿದ್+ಉತ್ಸಾಹದ +ವಿತಾಳದ
ಬೀಡಿಕೆಯ +ಬೇಳುವೆಗೆ+ ಬೆಬ್ಬಳೆವೋದನಾ +ಪಾರ್ಥ

ಅಚ್ಚರಿ:
(೧)ಕಣ್ಣೀರು ಸುರಿಯಿತು ಎನ್ನಲು – ಕಂಬನಿಗಳಾಲಿಯೊಳೀಡಿರಿದು ಸೋರಿದವು
(೨) ಬ ಕಾರದ ತ್ರಿವಳಿ ಪದ – ಬೀಡಿಕೆಯ ಬೇಳುವೆಗೆ ಬೆಬ್ಬಳೆವೋದನಾ