ಪದ್ಯ ೨೧: ಶಲ್ಯನು ಕರ್ಣನಿಗೆ ಹೇಗೆ ಧೈರ್ಯ ತುಂಬಿದನು?

ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಯ್ಯೋ ಕರ್ಣ, ಛೇ, ನೀನೇನು ಮರುಳೇ, ಹುಚ್ಚನಂತೆ ಮನಸ್ಸನ್ನು ಕುಂದುಗೊಳಿಸಬೇಡ. ಸೋಲು ಗೆಲುವುಗಳು ದೈವಾಧೀನವಾಗಿರುವವು. ಒಂದು ಸೋಲಿನಿಂದ ನಿನ್ನ ಪರಾಕ್ರಮಕ್ಕೆ ಕುಂದುಂಟಾಗುವುದಿಲ್ಲ. ದೇವ ದಾನವರಲ್ಲಿ ಕಲಹವಾದಾಗ ಅನೇಕ ವೀರರಿದ್ದರೂ ಮಹಾಬಲಶಾಲಿಗಳೇ ದುರ್ಬಲಗಾರಿ ಸೋತರು. ಹೆದರಬೇಡ, ನಿನ್ನ ಬಿಲ್ಲನ್ನು ಹಿಡಿ ಎಂದು ಕರ್ಣನನ್ನು ಶಲ್ಯನು ಹುರಿದುಂಬಿಸಿದನು.

ಅರ್ಥ:
ಮರುಳ: ಮೂಢ; ರಾಧೇಯ: ಕರ್ಣ; ಫಡ: ಛೀ, ಮೂದಲಿಸುವ ಶಬ್ದ; ಮನ: ಮನಸ್ಸು; ಇಳುಹು: ಇಳಿಸು; ತಪ್ಪು:ಸುಳ್ಳಾಗು; ಸೋಲು: ಅಪಜಯ; ಗೆಲುವು: ಜಯ; ದೈವ: ಭಗವಂತ; ಅಧೀನ: ವಶ; ಆಳುತನ: ಪರಾಕ್ರಮ; ಕುಂದು: ಲೋಪ; ಹಲಬರು: ಅನೇಕ ಜನರು; ಅಮರ: ದೇವ; ಅಸುರ: ದಾನವ, ರಾಕ್ಷಸ; ಹೆಬ್ಬಲ: ಮಹಾಬಲಶಾಲಿ; ದುರ್ಬಲ: ನಿಶ್ಯಕ್ತ; ಮನ: ಮನಸ್ಸು; ಅಳುಕು: ಹೆದರು; ಹಿಡಿ: ತೆಗೆದುಕೋ; ಧನು: ಧನಸ್ಸು; ಅನುವಾಗು: ತಯಾರಾಗು, ಸಿದ್ಧನಾಗು;

ಪದವಿಂಗಡಣೆ:
ಎಲೆ +ಮರುಳೆ +ರಾಧೇಯ +ಫಡ +ಮನವ್
ಇಳುಹದಿರು +ತಪ್ಪೇನು +ಸೋಲವು
ಗೆಲವು+ ದೈವಾಧೀನ+ ನಿನ್+ಆಳ್ತನಕೆ +ಕುಂದೇನು
ಹಲಬರ್+ಅಮರ್+ಅಸುರರೊಳಗೆ+ ಹೆ
ಬ್ಬಲವೆ+ ದುರ್ಬಲವಾಯ್ತು +ನೀ +ಮನವ್
ಅಳುಕದಿರು+ ಹಿಡಿ+ ಧನುವನ್+ಅನುವಾಗ್+ಎಂದನಾ +ಶಲ್ಯ

ಅಚ್ಚರಿ:
(೧) ಹುರಿದುಂಬಿಸುವ ಪದಗಳು – ಮನವಿಳುಹದಿರು ತಪ್ಪೇನು ಸೋಲವು ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು; ನೀ ಮನವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ
(೨) ಸೋಲು, ಗೆಲುವು; ಹೆಬ್ಬಲ, ದುರ್ಬಲ; ಅಮರ, ಅಸುರ – ವಿರುದ್ಧ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ