ಪದ್ಯ ೨೪: ಭೀಮನು ಕರ್ಣನನ್ನು ಹೇಗೆ ಎದುರಿಸಿದನು?

ಎಲವೊ ಸೂತನ ಮಗನೆ ರಾಯನ
ನಳಲಿಸಿದೆಲಾ ನಿನ್ನ ರಕುತವ
ತುಳುಕುವೆನು ಹಿಂದಿಕ್ಕಿಕೊಂಬನ ತೋರು ತೋರೆನುತ
ಬಲುಸರಿಯ ನಾರಾಚದಲಿ ಕ
ತ್ತಲಿಸೆ ದೆಸೆ ಕೈಮಾಡಿದನು ಕೈ
ಚಳಕದೆಸುಗೆಯ ಕೇಣದಳತೆಯನರಿಯೆ ನಾನೆಂದ (ಕರ್ಣ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರವನ್ನು ತಿಳಿಸುತ್ತಾ,ಭೀಮನು ಕರ್ಣನೆದುರು ಬಂದು ಎಲವೋ ಸೂತನ ಮಗನೇ, ದೊರೆಯನ್ನು ನೀನು ನೋಯಿಸಿದೆಯೆಲಾ, ನಿನ್ನ ರಕ್ತವನ್ನು ಚೆಲ್ಲುತ್ತೇನೆ. ನಿನ್ನನ್ನು ಹಿಂದಿಟ್ಟುಕೊಂಡು ರಕ್ಷಿಸುವವನನ್ನು ತೋರಿಸು ಎನ್ನುತ್ತಾ ಭೀಮನು ಬಾಣಗಳ ಮಳೆಗೆರೆಯಲು, ದಿಕ್ಕುಗಳು ಕತ್ತಲುಗೂಡಿಸಿದವು, ಭೀಮನ ಕೈಚಳಕಕ್ಕೆ ಮಿತಿಯೇ ಇರಲಿಲ್ಲ ಅವನ ಕೋಪದಮಿತಿಯನ್ನು ನಾನರಿಯೆ ಎಂದು ಸಂಜಯನು ವಿವರಿಸುತ್ತಿದ್ದನು.

ಅರ್ಥ:
ಸೂತ: ರಥವನ್ನು ಓಡಿಸುವವ; ಮಗ: ಪುತ್ರ; ರಾಯ: ರಾಜ; ಅಳಲು: ದುಃಖಿಸು; ರಕುತ: ರಕ್ತ, ನೆತ್ತರು; ತುಳುಕು: ಅಲ್ಲಾಡಿಸು; ಹಿಂದೆ: ಹಿಂಭಾಗ; ತೋರು: ಪ್ರದರ್ಶಿಸು; ಬಲು: ಬಹಳ; ನಾರಾಚ: ಬಾಣ, ಸರಳು; ಕತ್ತಲು: ಅಂಧಕಾರ; ದೆಸೆ: ದಿಕ್ಕು; ಕೈಮಾಡು: ಆಡಿಸು, ಕೈಹಾಕು; ಚಳಕ: ಚಾತುರ್ಯ; ಎಸು: ಹೊಡೆ, ಬಾಣ ಪ್ರಯೋಗ; ಕೇಣ:ಕೋಪ; ಅಳತೆ: ಪ್ರಮಾಣ; ಅರಿ: ತಿಳಿ;

ಪದವಿಂಗಡಣೆ:
ಎಲವೊ+ ಸೂತನ +ಮಗನೆ +ರಾಯನನ್
ಅಳಲಿಸಿದೆಲಾ+ ನಿನ್ನ +ರಕುತವ
ತುಳುಕುವೆನು+ ಹಿಂದಿಕ್ಕಿಕೊಂಬನ+ ತೋರು +ತೋರೆನುತ
ಬಲುಸರಿಯ+ ನಾರಾಚದಲಿ+ ಕ
ತ್ತಲಿಸೆ+ ದೆಸೆ+ ಕೈಮಾಡಿದನು+ ಕೈ
ಚಳಕದ್+ಎಸುಗೆಯ +ಕೇಣದ್+ಅಳತೆಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಕೋಪದ ನುಡಿಗಳು: ಎಲವೋ ಸೂತನ ಮಗನೆ, ತೋರು ತೋರೆನುತ, ರಕುತವ ತುಳುಕುವೆನು
(೨) ಕ ಕಾರದ ಪದಗಳು – ಕತ್ತಲಿಸೆದೆಸೆ ಕೈಮಾಡಿದನು ಕೈಚಳಕದೆಸುಗೆಯ ಕೇಣದಳತೆಯನರಿಯೆ

ಪದ್ಯ ೨೩: ಭೀಮನು ತನ್ನ ಸಾರಥಿಗೆ ಏನು ಹೇಳಿದ?

ನುಸಿಗಳಳವಿಯ ಥಟ್ಟಣೆಯ ತೋ
ರಿಸಿದರೋ ಬಲುಹಾಯ್ತು ರಾಯನ
ಘಸಣಿಗಕಟ ಇಶೋಕ ನೋಡೈ ಪೂತು ವಿಧಿಯೆನುತ
ಮಸಗಿ ಮೊಗೆದನು ಹೊಗುವ ಸೇನಾ
ಪ್ರಸರವನು ಕುಡಿತೆಯಲಿ ಚೆಲ್ಲಿದ
ನಸಮಬಲನಡಹಾಯ್ಸಿ ಕೊಂಡನು ನೆಲನನಳವಿಯಲಿ (ಕರ್ಣ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಭೀಮನು ತನ್ನ ಸಾರಥಿ ವಿಶೋಕನಿಗೆ ” ನೋಡು, ಭಲೇ ವಿಧಿಯೇ, ಈ ನೊರಜುಗಳು ನನ್ನನ್ನು ಹೊಡೆದು ಹಾಕಲು ಬಂದರು. ಇವರು ಧರ್ಮಜನನ್ನು ತಡೆಯಲು ಬಂದವರು ಎನ್ನುತ್ತಾ ಒಂದೇ ಕುಡಿಗೆ ಆ ಸೈನ್ಯವನ್ನು ಓಡಿಸಿ ಅವರು ನಿಂತ ನೆಲವನ್ನು ತನ್ನದಾಗಿ ಮಾಡಿಕೊಂಡನು

ಅರ್ಥ:
ನುಸಿ: ನೊರಜು; ಅಳವಿ: ಯುದ್ಧ; ಥಟ್ಟು: ಗುಂಪು, ಸಮೂಹ; ತೋರಿಸು: ಗೋಚರ, ಕಾಣು; ಬಲುಹು: ಬಲ, ಶಕ್ತಿ; ರಾಯ: ರಾಜ; ಘಸಣೆ: ತೊಂದರೆ; ಅಕಟ: ಅಯ್ಯೋ; ನೋಡು: ವೀಕ್ಷಿಸು; ಪೂತು: ಭಲೆ; ವಿಧಿ: ಆಜ್ಞೆ, ಆದೇಶ, ನಿಯಮ; ಮಸಗು: ಹರಡು; ಮೊಗೆ: ಮುಖ; ಹೊಗು: ಪ್ರವೇಶಿಸು; ಸೇನ: ಸೈನ್ಯ; ಪ್ರಸರ: ಹರಡುವುದು; ಕುಡಿತೆ: ಬೊಗಸೆ, ಸೇರೆ; ಚೆಲ್ಲು: ಹರಡು; ಅಸಮಬಲ: ಪರಾಕ್ರಮಿ; ಹಾಯ್ಸು: ಹೊಡೆ; ಕೊಂಡನು: ತೆಗೆದುಕೊ; ನೆಲ: ಭೂಮಿ; ಅಡಹಾಯ್: ಅಡ್ಡಬರು;

ಪದವಿಂಗಡಣೆ:
ನುಸಿಗಳ್+ಅಳವಿಯ +ಥಟ್ಟಣೆಯ +ತೋ
ರಿಸಿದರೋ +ಬಲುಹಾಯ್ತು +ರಾಯನ
ಘಸಣಿಗ್+ಅಕಟ +ವಿಶೋಕ +ನೋಡೈ +ಪೂತು +ವಿಧಿಯೆನುತ
ಮಸಗಿ+ ಮೊಗೆದನು+ ಹೊಗುವ +ಸೇನಾ
ಪ್ರಸರವನು +ಕುಡಿತೆಯಲಿ +ಚೆಲ್ಲಿದನ್
ಅಸಮಬಲನ್+ಅಡಹಾಯ್ಸಿ +ಕೊಂಡನು +ನೆಲನನ್+ಅಳವಿಯಲಿ

ಅಚ್ಚರಿ:
(೧) ಅಳವಿ – ಪದ್ಯದ ಮೊದಲ ಮತ್ತು ಕೊನೆಯ ಪದ

ಪದ್ಯ ೨೨: ಕೌರವ ಸೈನ್ಯವು ಭೀಮನನ್ನು ಹೇಗೆ ತಡೆದರು?

ಕವಿದವಾನೆಗಳಟ್ಟಿ ರಾವ್ತರು
ತಿವಿದರಂಬಿನ ಸರಿಯ ಸಾರದೊ
ಳವಘಡಿಸಿದರು ರಥಿಕರುರವಣಿಸಿದರು ಸಬಳಿಗರು
ಸವಗ ಖಂಡಿಸಲೊದಗಿದರು ಬಿ
ಲ್ಲವರು ಕಟ್ಟಿರಿಕಾರರಾತನ
ಜವಗೆಡಿಸಿದರು ಕಡಲುವಡಬನ ತಡೆದು ನಿಲುವಂತೆ (ಕರ್ಣ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಮನನ್ನು ತಡೆಯಲು ಕೌರವ ಸೇನೆಯು ಸಜ್ಜಾಯಿತು. ಆನೆಗಳು ಭೀಮನನ್ನು ಕವಿದವು, ರಾವುತರು ಮುನ್ನುಗ್ಗಿ ಅವನ ಮೇಲೆ ಬಾಣಗಳನ್ನು ಬಿಟ್ಟು ಅವನನ್ನು ಆಚೆ ಸರಿಸಲು ಯತ್ನಿಸಿದರು. ಸಬಳಿಗರು ಅವನನ್ನು ಇರಿದರು. ಬಿಲ್ಲುಗಾರರು ಬಾಣವನ್ನು ಜೋಡಿಸಿ ಬಿಟ್ಟು ಅವನ ವೇಗವನ್ನು ತಡೆದರು. ಸಮುದ್ರವು ಬಡಬಾಗ್ನಿಯನ್ನು ತಡೆದಂತಾಯಿತು.

ಅರ್ಥ:
ಕವಿದು: ಆವರಿಸು, ಮುಚ್ಚು; ಆನೆ: ಗಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ತಿವಿ: ಚುಚ್ಚು; ಅಂಬು: ಬಾಣ; ಸರಿ: ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು, ರಥಿ; ಉರವಣಿಸು: ಆತುರಿಸು; ಸಬಳ: ಈಟಿ; ಸರಿ: ಸಮಾನ; ಸಾರ:ಬಳಿ; ಸವಗ: ಮೈಜೋಡು, ಕವಚ; ಖಂಡಿಸು:ಕಡಿ, ಕತ್ತರಿಸು; ಒದಗು: ಉಂಟಾಗು, ದೊರಕು; ಬಿಲ್ಲವ: ಬಿಲ್ಲನ್ನು ಹಿಡಿದವ; ಕಟ್ಟು: ಜೋಡಿಸು; ಇರಿ: ತಿವಿ, ಚುಚ್ಚು; ಜವ: ವೇಗ, ರಭಸ; ಕೆಡಿಸು: ಅಡ್ಡಿಮಾಡು; ಕಡಲು: ಸಾಗರ; ವಡಬನ: ಸಮುದ್ರದಲ್ಲಿರುವ ಬೆಂಕಿ; ತಡೆ: ಅಡ್ಡ; ನಿಲು: ನಿಲ್ಲಿಸು;

ಪದವಿಂಗಡಣೆ:
ಕವಿದವ್+ಆನೆಗಳ್+ಅಟ್ಟಿ +ರಾವ್ತರು
ತಿವಿದರ್+ಅಂಬಿನ +ಸರಿಯ +ಸಾರದೊಳ್
ಅವಘಡಿಸಿದರು +ರಥಿಕರ್+ಉರವಣಿಸಿದರು +ಸಬಳಿಗರು
ಸವಗ +ಖಂಡಿಸಲ್+ಒದಗಿದರು +ಬಿ
ಲ್ಲವರು+ ಕಟ್ಟ್+ಇರಿಕಾರರ್+ಆತನ
ಜವಗೆಡಿಸಿದರು +ಕಡಲು+ವಡಬನ +ತಡೆದು +ನಿಲುವಂತೆ

ಅಚ್ಚರಿ:
(೧) ರಾವ್ತರು, ರಥಿಕ, ಸಬಳಿ, ಬಿಲ್ಲವರು – ಭೀಮನನ್ನು ತಡೆದವರು