ಪದ್ಯ ೧೩: ಭೀಮನು ರಣರಂಗಕ್ಕೆ ಹೇಗೆ ನುಗ್ಗಿದನು?

ಬೀಳ ಹೊಯ್ ಹೊಯ್ ಬಿಡೆಯದಲಿ ಹೊ
ಕ್ಕಾಳುತೆಗೆಯಲಿ ಧರ್ಮಪುತ್ರನ
ಮೇಲುನೋಟದಲಿರಲಿ ನೋಡಲಿ ನಮ್ಮ ನಾಟಕವ
ಆಳ ನಿಲಿಸೋ ನಿಲಿಸೆನುತ ಸಂ
ಸ್ಫಾಳಿತೋದ್ಧತ ಚಪಳ ಚಾಪಕ
ರಾಳ ಮೌರ್ವೀನಾದ ಭೀಷಣನಾದನಾ ಭೀಮ (ಕರ್ಣ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೇವಲ ಛಲಕ್ಕೆ ಯುದ್ಧಮಾಡುತ್ತಿರುವ ಸೈನಿಕರು ಬೀಳುವಂತೆ ಹೊಡೆಯಿರಿ. ಎಲ್ಲರೂ ಧರ್ಮಜನ ಕಾವಲಿನಲ್ಲಿರಲಿ, ನಮ್ಮ ನಾಟಕವನ್ನು ನೋಡಲಿ, ಯೋಧರನ್ನು ನಿಲ್ಲಿಸಿರಿ ಎನ್ನುತ್ತಾ ಬಿಲ್ಲನ್ನೆತ್ತಿ ಹೆದೆಯನ್ನು ಮಿಡಿದು ಶತ್ರುಗಳನ್ನು ಭಯಗೊಳಿಸುತ್ತಾ ಭೀಮನು ನುಗ್ಗಿದನು.

ಅರ್ಥ:
ಬೀಳು: ಬೀಳುವಿಕೆ; ಹೊಯ್: ಹೊಡೆ; ಬಿಡೆಯ: ದಾಕ್ಷಿಣ್ಯ, ಸೆಣಸು; ಹೊಕ್ಕು: ಸೇರು; ಆಳು: ಸೈನಿಕ; ತೆಗೆ: ಹೊರಹಾಕು; ಪುತ್ರ: ಮಗ; ಮೆಳುನೋಟ: ವಿಚಾರಣೆ; ನೋಡು: ವೀಕ್ಷಿಸು; ನಾಟಕ: ಪ್ರದರ್ಶನ; ನಿಲಿಸು: ತಡೆ; ಸಂಸ್ಫಾಳಿತೋದ್ಧತ: ತೊಡೆಯನ್ನು ಚಪ್ಪರಿಸುವ ಅಹಂಕಾರಿ; ಚಪಳ: ಚಂಚಲ ಸ್ವಭಾವದವನು; ಚಾಪ:ಬಿಲ್ಲು; ಕರಾಳ: ಭಯಂಕರ; ಮೌರ್ವೀ: ಬಿಲ್ಲಿನಹಗ್ಗ, ಹೆದೆ; ನಾದ: ಶಬ್ದ; ಭೀಷಣ: ಭಯಂಕರವಾದ, ಭೀಕರವಾದ;

ಪದವಿಂಗಡಣೆ:
ಬೀಳ +ಹೊಯ್ ಹೊಯ್ +ಬಿಡೆಯದಲಿ +ಹೊಕ್ಕ್
ಆಳು+ತೆಗೆಯಲಿ +ಧರ್ಮಪುತ್ರನ
ಮೇಲು+ನೋಟದಲ್+ಇರಲಿ +ನೋಡಲಿ +ನಮ್ಮ +ನಾಟಕವ
ಆಳ +ನಿಲಿಸೋ +ನಿಲಿಸೆನುತ+ ಸಂ
ಸ್ಫಾಳಿತೋದ್ಧತ +ಚಪಳ +ಚಾಪ+ಕ
ರಾಳ +ಮೌರ್ವೀನಾದ +ಭೀಷಣನಾದನಾ+ ಭೀಮ

ಅಚ್ಚರಿ:
(೧) ನ ಕಾರದ ಸಾಲು ಪದ – ನೋಟದಲಿರಲಿ ನೋಡಲಿ ನಮ್ಮ ನಾಟಕವ
(೨) ನಾದ ಪದದ ಬಳಕೆ – ಮೌರ್ವೀನಾದ ಭೀಷಣನಾದನಾ

ಪದ್ಯ ೧೨: ಭೀಮನು ಯುದ್ಧಕ್ಕೆ ಹೇಗೆ ನಡೆದನು?

ವೈರಿ ಕರ್ಣನ ಕಾಂತೆಯರ ದೃಗು
ವಾರಿ ಧಾರೆಯಲೆನ್ನ ಭಾರಿಯ
ಭೂರಿ ಕೋಪಾನಳನ ಲಳಿಯನು ತಗ್ಗಿಸುವೆನೆನುತ
ಧಾರುಣೀಪತಿಗೆರಗಿ ನಿಜ ಪರಿ
ವಾರವನು ಸುಯ್ದಾನವರಸೆನು
ತಾರುಭಟೆಯಲಿ ಭೀಮ ಮೊಳಗಿದನಹಿತ ಮೋಹರಕೆ (ಕರ್ಣ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ನನ್ನ ಶತ್ರುವಾದ ಕರ್ಣನ ಮಡದಿಯರ ಕಣ್ಣೀರಿನಿಂದ ನನ್ನ ಮಹಾಕೋಪವೆಂಬ ಬೆಂಕಿಯ ಜ್ವಾಲೆಯ ರಭಸವನ್ನು ಕಡಿಮೆ ಮಾಡಿಕೊಳ್ಳುತ್ತೇನೆ ಎಂದು ಭೀಮನು ನಿಶ್ಚಯಿಸಿದನು. ಧರ್ಮರಾಯರಿಗೆ ನಮಸ್ಕರಿಸಿ ತನ್ನ ಪರಿವಾರದವರಿಗೆ ದೊರೆಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳಿ ಭೀಮನು ಆರ್ಭಟೆಯಿಂದ ಶತ್ರು ಸೈನ್ಯದತ್ತ ನುಗ್ಗಿದನು.

ಅರ್ಥ:
ವೈರಿ: ಅರಿ, ಶತ್ರು; ಕಾಂತೆ: ಹೆಣ್ಣು; ದೃಗುವಾರಿ: ಕಣ್ಣೀರು; ಧಾರೆ: ರಭಸ; ಭಾರಿ: ಭೀಕರವಾದ; ಭೂರಿ: ಹೆಚ್ಚು, ಅಧಿಕ; ಕೋಪ: ರೋಷ; ಅನಲ: ಬೆಂಕಿ; ಲಳಿ:ರಭಸ, ಆವೇಶ; ತಗ್ಗಿಸು: ಕಡಿಮೆ ಮಾಡು; ಧಾರುಣಿ: ಭೂಮಿ; ಧಾರುಣೀಪತಿ: ರಾಜ; ಪರಿವಾರ: ಬಾಂಧವರು; ಸುಯ್ದಾನ: ರಕ್ಷಣೆ, ಕಾಪು; ಅರಸು: ಹುಡುಕು; ಆರುಭಟೆ: ಗರ್ಜನೆ; ಮೊಳಗು: ಧ್ವನಿ, ಸದ್ದು; ಮೋಹರ: ಯುದ್ಧ; ಅಹಿತ: ವೈರಿ;

ಪದವಿಂಗಡಣೆ:
ವೈರಿ+ ಕರ್ಣನ +ಕಾಂತೆಯರ +ದೃಗು
ವಾರಿ +ಧಾರೆಯಲ್+ಎನ್ನ +ಭಾರಿಯ
ಭೂರಿ +ಕೋಪ+ ಅನಳನ+ ಲಳಿಯನು +ತಗ್ಗಿಸುವೆನೆನುತ
ಧಾರುಣೀಪತಿಗ್+ಎರಗಿ+ ನಿಜ +ಪರಿ
ವಾರವನು +ಸುಯ್ದಾನವರಸೆನುತ್
ಆರುಭಟೆಯಲಿ+ ಭೀಮ +ಮೊಳಗಿದನ್+ಅಹಿತ+ ಮೋಹರಕೆ

ಅಚ್ಚರಿ:
(೧) ಕಣ್ಣೀರಿಗೆ ದೃಗುವಾರಿ ಪದದ ಬಳಕೆ
(೨) ಭಾರಿಯ ಭೂರಿ – ಪದಗಳ ಬಳಕೆ

ಪದ್ಯ ೧೧: ಧರ್ಮರಾಯನ ರಕ್ಷಣೆಯನ್ನು ಭೀಮನು ಹೇಗೆ ಮಾಡಿದ?

ಧರಣಿಪನ ಸಂರಕ್ಷೆಗೈಸಾ
ವಿರ ರಥವನಿಪ್ಪತ್ತು ಸಾವಿರ
ತುರಗವನು ಹದಿನಾರು ಸಾವಿರ ಮತ್ತಗಜಘಟೆಯ
ದೊರೆಗಳನು ಸಹದೇವ ಸಾತ್ಯಕಿ
ವರನಕುಳ ಸುತಸೋಮ ಪಾಂಚಾ
ಲರ ಕುಮಾರಾನೀಕವನು ಕರೆಕರೆದು ನೇಮಿಸಿದ (ಕರ್ಣ ಪರ್ವ, ೧೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಧರ್ಮರಾಯನ ರಕ್ಷಣೆಗೆ ಐದು ಸಾವಿರ ರಥಗಳನ್ನು, ಇಪ್ಪತ್ತು ಸಾವಿರ ಕುದುರೆಗಳು, ಹದಿನಾರು ಸಾವಿರ ಆನೆಗಳು, ಸಹದೇವ, ನಕುಲ, ಸಾತ್ಯಕಿ, ಸುತಸೋಮ, ಪಾಂಚಾಲ ರಾಜಕುಮರರನ್ನು ಕರೆದು ನೇಮಿಸಿದನು.

ಅರ್ಥ:
ಧರಣಿಪ: ರಾಜ; ಸಂರಕ್ಷೆ: ರಕ್ಷಣೆ, ಕಾಪಾಡು; ರಥ: ಬಂಡಿ, ತೇರು; ತುರಗ: ಕುದುರೆ; ಮತ್ತಗಜ: ಮದದಾನೆ; ಘಟೆ: ಗುಂಪು; ದೊರೆ: ರಾಜ; ಕುಮಾರ: ಮಗ; ಅನೀಕ: ಗುಂಪು; ಕರೆ: ಬರೆಮಾಡು; ನೇಮಿಸು: ಅಪ್ಪಣೆ ಮಾಡು, ಗೊತ್ತು ಮಾಡು;

ಪದವಿಂಗಡಣೆ:
ಧರಣಿಪನ +ಸಂರಕ್ಷೆಗ್+ಐಸಾ
ವಿರ+ ರಥವನ್+ಇಪ್ಪತ್ತು +ಸಾವಿರ
ತುರಗವನು +ಹದಿನಾರು +ಸಾವಿರ +ಮತ್ತಗಜ+ಘಟೆಯ
ದೊರೆಗಳನು +ಸಹದೇವ +ಸಾತ್ಯಕಿ
ವರ+ನಕುಳ +ಸುತಸೋಮ +ಪಾಂಚಾ
ಲರ +ಕುಮಾರ+ಅನೀಕವನು +ಕರೆಕರೆದು +ನೇಮಿಸಿದ

ಅಚ್ಚರಿ:
(೧) ಧರಣಿಪ, ದೊರೆ – ಸಮನಾರ್ಥಕ ಪದ
(೨) ರಕ್ಷಣೆಗೆ ನಿಯಮಿಸಿದ ಸೈನ್ಯದ ಸಂಖ್ಯೆ ಯುದ್ಧದ ಪ್ರಮಾಣವನ್ನು ತಿಳಿಸುತ್ತದೆ.

ಪದ್ಯ ೧೦: ಭೀಮನು ಕೋಪಗೊಂಡ ದೃಶ್ಯವನ್ನು ಹೇಗೆ ಚಿತ್ರಿಸಬಹುದು?

ಅರಸ ಕೇಳೈ ಶೋಕರಸಸಾ
ಗರದೊಳೆದ್ದುದೊ ವಡಬನೆನೆ ಕ
ಣ್ಣರಳಿದವು ಕುಡಿಮೀಸೆ ಕುಣಿದವು ಸುಯ್ಲ ಹೊಗೆ ಮಸಗೆ
ಕರ ನಡುಗೆ ಮೈ ಬಲಿಯೆ ಹುಬ್ಬುಗ
ಳುರೆ ಬಿಗಿಯೆ ಕಂಗಳಲಿ ಕೆಂಗಡಿ
ಸುರಿಯೆ ವೀರಾವೇಶದಲಿ ಮಸಗಿದನು ಕಲಿಭೀಮ (ಕರ್ಣ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಭೀಮನು ಹೇಗೆ ಕೋಪಗೊಂಡನು ಎಂದು ತಿಳಿಸುತ್ತಾನೆ. ಯುಧಿಷ್ಠಿರನ ನೋವು, ತಾನು ಇದಕ್ಕೆ ಹೇಗೆ ಕಾರಣನೆಂದು ಚಿಂತಿಸಿ, ಹೀಗಾಯಿತಾಲ್ಲಾ ಎಂಬ ಕೋಪವು ಭೀಮನನ್ನು ಆವರಿಸಿತು. ಶೋಕ ಸಾಗರದಿಂದ ಏಳುವ ಬೆಂಕಿಯಂತೆ ಭೀಮನು ಎದ್ದನು, ಅವನ ಕಣ್ಣುಗಳು ಅರಳಿದವು, ಚಿಗುರಿದ ಮೀಸಿಯು ಕುಣಿಯಲಾರಂಭಿಸಿತು, ನಿಟ್ಟುಸಿರು ಹೊಗೆಯನ್ನು ಹೊರಹೊಮ್ಮುತ್ತಿತ್ತು, ಕೈಗಳು ನಡುಗುತ್ತಿತ್ತು, ಹುಬ್ಬುಗಳು ಹೆಚ್ಚಾಗಿಯೇ ಬಿಗಿದವು, ತನುವು ಗಟ್ಟಿಯಾದವು, ಕಣ್ಣಲ್ಲಿ ಕೆಂಪು ಕಿಡಿಗಳುದುರಿದವು, ಈ ರೀತಿ ವೀರಾವೇಶದಿಂದ ಶೂರನಾದ ಭೀಮನು ತೋರಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಶೋಕ: ದುಃಖ; ರಸ: ಸಾರ; ಸಾಗರ: ಸಮುದ್ರ; ಎದ್ದು: ಮೇಲೇಳು; ವಡಬ: ಸಮುದ್ರದಲ್ಲಿರುವ ಬೆಂಕಿ; ಕಣ್ಣು: ನಯನ; ಅರಳು: ಅಗಲವಾಗು; ಕುಡಿ: ಚಿಗುರು; ಮೀಸೆ: ಗಂಡಸರಿಗೆ ಬಾಯಮೇಲೆ ಬೆಳೆವ ಕೂದಲು; ಕುಣಿ: ನರ್ತಿಸು; ಸುಯ್ಲು: ನಿಟ್ಟುಸಿರು; ಹೊಗೆ: ಧೂಮ; ಮಸಗು: ಹರಡು; ಕರ: ಕೈ, ಹಸ್ತ; ನಡುಗು: ಅಲುಗಾಡು; ಬಲಿ: ಗಟ್ಟಿ; ಹುಬ್ಬು: ಕಣ್ಣಿನ ಮೇಲಿರುವ ಕೂದಲು; ಉರೆ: ಅಧಿಕವಾಗಿ; ಬಿಗಿ: ಗಟ್ಟಿ; ಕಂಗಳು: ನಯನ, ಕಣ್ಣು; ಕೆಂಗಿಡು: ಕೆಂಪಾದ ಕಿಡಿ; ಸುರಿ: ಹರಿ, ಹೊರಬೀಳು; ವೀರ: ಪರಾಕ್ರಮ; ಆವೇಶ: ರೋಷ ; ಕಲಿ: ಶೂರ;

ಪದವಿಂಗಡಣೆ:
ಅರಸ +ಕೇಳೈ +ಶೋಕರಸ+ಸಾ
ಗರದೊಳ್+ಎದ್ದುದೊ +ವಡಬನ್+ಎನೆ +ಕ
ಣ್ಣ್ +ಅರಳಿದವು +ಕುಡಿಮೀಸೆ +ಕುಣಿದವು+ ಸುಯ್ಲ +ಹೊಗೆ +ಮಸಗೆ
ಕರ +ನಡುಗೆ +ಮೈ +ಬಲಿಯೆ +ಹುಬ್ಬುಗಳ್
ಉರೆ +ಬಿಗಿಯೆ +ಕಂಗಳಲಿ +ಕೆಂಗಡಿ
ಸುರಿಯೆ +ವೀರಾವೇಶದಲಿ +ಮಸಗಿದನು +ಕಲಿಭೀಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಣ್ಣರಳಿದವು ಕುಡಿಮೀಸೆ ಕುಣಿದವು
(೨) ಕೋಪಗೊಂಡಾಗಿನ ಚಿತ್ರಣವನ್ನು ಪದಗಳಲ್ಲಿ ಬಿಡಿಸಿರುವ ಕುಮಾರವ್ಯಾಸ!

ಪದ್ಯ ೯: ಭೀಮನು ಹೇಗೆ ದುಃಖಿಸಿದನು?

ನರನ ಖಾತಿಗೆ ದ್ರೌಪದಿಯ ತೊ
ತ್ತಿರುಗಳುಪಹಾಸ್ಯಕ್ಕೆ ನೃಪತಿಯ
ಮರಣ ಸಾದೃಶ್ಯ ಪ್ರಹಾರವ್ಯಥೆಯ ಕಾಣಿಕೆಗೆ
ಅರರೆ ಭಾಜನವಾದೆನೈ ಹರ
ಹರ ಮಹಾದೇವಾ ಎನುತ ತುದಿ
ವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ (ಕರ್ಣ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ಅಯ್ಯೋ ನಾನು ಅರ್ಜುನನ ಸಿಟ್ಟಿಗೆ ಪಾತ್ರನಾದೆನಲ್ಲಾ, ದ್ರೌಪದಿಯ ದಾಸಿಯರ ಹಂಗಿಸುವ ಮಾತಿಗೆ ಭಾಜಕನಾದೆ, ರಾಜನ ಮರಣ ಸದೃಶ್ಯವಾದ ನೋವಿಗೆ ನಾನೇ ಪಾತ್ರನಾದೆನಲ್ಲಾ!! ಅಯ್ಯೋ ಮಹಾದೇವ, ಎಂದು ಅಳುತ್ತಾ ತನ್ನ ತುದಿ ಬೆರಳಿನಿಂದ ಕಣ್ಣೀರನ್ನೊರಸಿಕೊಂಡು ದುಃಖಿಸಿದನು.

ಅರ್ಥ:
ನರ: ಅರ್ಜುನ; ಖಾತಿ: ಸಿಟ್ಟು; ತೊತ್ತು: ದಾಸಿ; ಉಪಹಾಸ್ಯ: ಅಪಹಾಸ್ಯ, ಹಂಗಿಸು; ನೃಪತಿ: ರಾಜ; ಮರಣ: ಸಾವು; ಸಾದೃಶ್ಯ: ಹೋಲಿಕೆ; ಪ್ರಹಾರ: ಹೊಡೆತ, ಪೆಟ್ಟು; ವ್ಯಥೆ: ದುಃಖ; ಕಾಣಿಕೆ: ಕೊಡುಗೆ; ಅರರೆ: ಅಯ್ಯೋ; ಭಾಜನ: ಅರ್ಹವ್ಯಕ್ತಿ, ಯೋಗ್ಯ; ಎನುತ: ಹೇಳು; ತುದಿ: ಅಗ್ರ; ವೆರಳು: ಬೆರಳು, ಅಂಗುಲಿ; ಆಲಿ: ಕಣ್ಣು; ನೀರು: ಜಲ; ಮಿಡಿ: ತವಕಿಸು; ಅಳಲು: ದುಃಖ; ಕಲಿ: ವೀರ;

ಪದವಿಂಗಡಣೆ:
ನರನ +ಖಾತಿಗೆ +ದ್ರೌಪದಿಯ +ತೊ
ತ್ತಿರುಗಳ+ಉಪಹಾಸ್ಯಕ್ಕೆ +ನೃಪತಿಯ
ಮರಣ+ ಸಾದೃಶ್ಯ+ ಪ್ರಹಾರ+ವ್ಯಥೆಯ +ಕಾಣಿಕೆಗೆ
ಅರರೆ +ಭಾಜನವಾದೆನೈ +ಹರ
ಹರ+ ಮಹಾದೇವಾ +ಎನುತ +ತುದಿ
ವೆರಳಲ್+ಆಲಿಯ +ನೀರ +ಮಿಡಿದ್+ಅಳಲಿದನು +ಕಲಿಭೀಮ

ಅಚ್ಚರಿ:
(೧) ಭೀಮನು ದುಃಖಿಸುವ ಚಿತ್ರಣ – ತುದಿವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ
(೨) ಖಾತಿ, ಉಪಹಾಸ್ಯ, ವ್ಯಥೆ – ಭೀಮನ ದುಃಖಕ್ಕೆ ಕಾರಣ

ಪದ್ಯ ೮: ಭೀಮನು ಚಿಂತಿಸಲು ಕಾರಣವೇನು?

ಅರಸ ಮುರಿವಡೆದಲ್ಲಿ ದಿಕ್ಕನೆ
ಬೆರಸಿದನೆ ಬವರವನೆನುತ ನ
ಮ್ಮರಸಿನಗಳೇ ಭಂಡವೀರನ ಮಾತ ತೆಗೆಯೆನುತ
ಅರಸ ತಾನಿನ್ನಾವ ಪರಿ ಹೇ
ವರಿಸುವನೊ ತಾ ಮುನ್ನ ಕರ್ಣನ
ಶರಹತಿಯಲೇಕಳಿದುದಿಲ್ಲಾ ಎನುತ ಚಿಂತಿಸಿದ (ಕರ್ಣ ಪರ್ವ, ೧೨ ಸಂಧಿ, ೮ ಪದ್ಯ)

ತಾತ್ಪರ್ಯ:
ರಾಜನು ಯುದ್ಧದಲ್ಲಿ ಸೋಲುವಾಗ ಇವನು ಯಾವ ದಿಕ್ಕಿನಲ್ಲಿದ್ದ, ಏನು ಯುದ್ಧ ಮಾಡಿದ ಎಂದು ದ್ರೌಪದಿಯು ನನ್ನನ್ನು ಭಂಡವೀರ ನೆಂದು ಕರೆದು ಹಂಗಿಸದಿರುವಳೇ? ಅಣ್ಣನು ನನ್ನನ್ನು ಕಂಡು ಎಷ್ಟು ಅಸಹ್ಯ ಪಡುವನೋ? ಅಯ್ಯೋ ನಾನೇಕೆ ಈ ಹಿಂದೆಯೇ ಕರ್ಣನ ಬಾಣಗಳಿಂದ ಸಾಯಲಿಲ್ಲ ಎಂದು ಭೀಮನು ಚಿಂತಿಸಿದನು?

ಅರ್ಥ:
ಅರಸ: ರಾಜ; ಮುರಿ: ಸೀಳು; ದಿಕ್ಕು: ದಿಸೆ; ಬೆರಸು: ಕೂಡಿಸು, ಸೇರು; ಬವರ: ಕಾಳಗ, ಯುದ್ಧ; ಅರಸಿ: ರಾಣಿ; ಭಂಡ: ನಾಚಿಕೆಗೆಟ್ಟವನು; ವೀರ: ಶೂರ; ಭಂಡವೀರ: ನೆಪ ಮಾತ್ರದ ವೀರ, ವೀರನಲ್ಲದವ; ಮಾತು: ವಾಣಿ; ತೆಗೆ: ಹೊರತರು; ಪರಿ: ರೀತಿ; ಹೇವರಿಸು: ಅಸಹ್ಯಪಡು; ಮುನ್ನ: ಮುಂದೆ; ಶರ: ಬಾಣ: ಹತಿ: ಹೊಡೆತ; ಅಳಿ: ಮರೆಯಾಗು, ಸಾವು; ಚಿಂತಿಸು: ವಿಚಾರಿಸು;

ಪದವಿಂಗಡಣೆ:
ಅರಸ +ಮುರಿವಡೆದಲ್ಲಿ+ ದಿಕ್ಕನೆ
ಬೆರಸಿದನೆ +ಬವರವನ್+ಎನುತ +ನ
ಮ್ಮರಸಿ+ನಗಳೇ +ಭಂಡವೀರನ+ ಮಾತ +ತೆಗೆಯೆನುತ
ಅರಸ +ತಾನ್+ಇನ್ನಾವ +ಪರಿ +ಹೇ
ವರಿಸುವನೊ +ತಾ +ಮುನ್ನ +ಕರ್ಣನ
ಶರಹತಿಯಲ್+ಏಕ್+ಅಳಿದುದಿಲ್ಲಾ+ ಎನುತ+ ಚಿಂತಿಸಿದ

ಅಚ್ಚರಿ:
(೧) ದ್ರೌಪದಿಯು ಹಂಗಿಸುವ ಬಗೆ – ಭಂಡವೀರನ ಮಾತ ತೆಗೆಯೆನುತ
(೨) ಭೀಮನ ನೋವು – ತಾ ಮುನ್ನ ಕರ್ಣನಶರಹತಿಯಲೇಕಳಿದುದಿಲ್ಲಾ

ಪದ್ಯ ೭: ಭೀಮನು ಅಳಲು ಕಾರಣವೇನು?

ನೊಂದನೇ ಧರ್ಮಜನು ಭಂಗಕೆ
ತಂದನೇ ರಾಧೇಯನಕಟಕ
ಟಿಂದು ಮಡಿದರೆ ಭೀಮಪಾರ್ಥರು ಭೀತಿಯೇಕಿದಕೆ
ನೊಂದನೀ ಪರಿ ತನ್ನ ಕಂಗಳ
ಮುಂದೆ ನರಪತಿ ಪಾರ್ಥನಿನ್ನೇ
ನೆಂದು ಮುನಿವನೊ ಶಿವಶಿವಾ ಎಂದಳಲಿದನು ಭೀಮ (ಕರ್ಣ ಪರ್ವ, ೧೨ ಸಂಧಿ, ೭ ಪದ್ಯ)

ತಾತ್ಪರ್ಯ:
ಅಯ್ಯೋ ಧರ್ಮಜನು ಯುದ್ಧದಲ್ಲಿ ನೋವನ್ನುಂಡನೇ? ಕರ್ಣನು ಅವನನ್ನು ಭಂಗಿಸಿದನೇ? ಅಯ್ಯೋ ಭೀಮಾರ್ಜುನರೇನು ಇಂದು ಸತ್ತು ಹೋದರೇ? ಹಾಗೆನ್ನೆಲು ಭಯವೇಕೆ, ನನ್ನ ಕಣ್ಣ ಮುಂದೆ ದೊರೆಯು ನೊಂದನಲ್ಲವೇ? ಅರ್ಜುನನು ನನ್ನ ಮೇಲೆ ಕೋಪಗೊಳ್ಳುವನೋ ಶಿವ ಶಿವಾ ಎಂದು ದುಃಖಿಸಿದನು.

ಅರ್ಥ:
ನೊಂದು: ನೋವುಂಡು, ತೊಂದರೆ, ದುಃಖ; ಧರ್ಮಜ: ಯುಧಿಷ್ಠಿರ; ಭಂಗ: ಮುರಿಯುವಿಕೆ, ಚೂರು ಮಾಡು; ರಾಧೇಯ: ಕರ್ಣ; ಅಕಟ: ಅಯ್ಯೋ; ಮಡಿ: ಸಾವು; ಭೀತಿ: ಭಯ; ಪರಿ: ರೀತಿ; ಕಂಗಳು: ಕಣ್ಣು; ನರಪತಿ: ರಾಜ; ಪಾರ್ಥ: ಅರ್ಜುನ; ಮುನಿ: ಕೋಪ; ಅಳಲು: ದುಃಖಿಸು;

ಪದವಿಂಗಡಣೆ:
ನೊಂದನೇ +ಧರ್ಮಜನು +ಭಂಗಕೆ
ತಂದನೇ +ರಾಧೇಯನ್+ಅಕಟಕಟ್
ಇಂದು +ಮಡಿದರೆ +ಭೀಮ+ಪಾರ್ಥರು +ಭೀತಿ+ಯೇಕಿದಕೆ
ನೊಂದನ್+ಈ+ ಪರಿ+ ತನ್ನ +ಕಂಗಳ
ಮುಂದೆ +ನರಪತಿ+ ಪಾರ್ಥನ್+ಇನ್ನೇನ್
ಎಂದು +ಮುನಿವನೊ +ಶಿವಶಿವಾ +ಎಂದ್+ಅಳಲಿದನು +ಭೀಮ

ಅಚ್ಚರಿ:
(೧) ನೊಂದು, ಅಳಲು – ಸಮನಾರ್ಥಕ ಪದ
(೨) ಅಕಟಕಟ, ಶಿವ ಶಿವಾ – ಭಾವನೆಗಳನ್ನು ಸೂಚಿಸುವ ಪದ