ಪದ್ಯ ೪೬: ಧರ್ಮಜನ ಮೇಲೆ ಕರ್ಣನ ಆಕ್ರಮಣ ಹೇಗಿತ್ತು?

ಇರಿತ ಮುನ್ನವೊ ಸುಭಟರಿಗೆ ಬೊ
ಬ್ಬಿರಿತ ಮುನ್ನವೊ ನಿಮ್ಮ ನುಡಿಯಲಿ
ಮುರಿವಡೆದಿರೈ ನೀವೆನುತ ನೃಪನಂಬ ಹರೆಗಡಿದು
ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ
ಯೆರಗಿದವು ತುರುಗಿದವು ತೆತ್ತಿಸಿದವು ರಥಾಂಗದಲಿ (ಕರ್ಣ ಪರ್ವ, ೧೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜನು ಬಾಣಗಳನ್ನು ಕರ್ಣನ ಮೇಲೆ ಹೊಡೆಯಲು, ಕರ್ಣನು ಅವನ ಬಾಣಗಳನ್ನು ತುಂಡು ಮಾಡಿ ವೀರರಿಗೆ ಶತ್ರುವನ್ನಿರಿಯುವುದು ಮುಖ್ಯವೋ, ಬೊಬ್ಬಿರಿಯುವುದು ಮುಖ್ಯವೋ ನಿಮ್ಮ ಮಾತಿನಲ್ಲಿ ನೀವೇ ಸಿಕ್ಕಿದಿರಿ, ಎಂದು ಹೇಳುತ್ತಾ ಧರ್ಮರಾಯನಿಗೆ ಅವಕಾಶವೇ ಕೊಡದೆ ಬಾಣಗಳಿಂದ ಮತ್ತೆ ಮತ್ತೆ ಹೊಡೆದನು. ಅವನ ಬಾಣಗಳು ಧರ್ಮಜನ ರಥದ ಗಾಲಿಯಲ್ಲಿ ನೆಟ್ಟವು.

ಅರ್ಥ:
ಇರಿ: ಚುಚ್ಚು; ಮುನ್ನ: ಮುಂಚೆ; ಸುಭಟ: ಸೈನಿಕ; ಬೊಬ್ಬಿರಿ: ಕೂಗು; ನುಡಿ: ಮಾತು; ಮುರಿ: ಸೀಳು; ಅಂಬು: ಬಾಣ; ಹರೆಗಡಿ:ಚೆಲ್ಲಾಪಿಲ್ಲಿಯಾಗುವಂತೆ ಕತ್ತರಿಸು; ತೆರಹು: ಸಮಯ, ಬಿಚ್ಚು; ಕೊಡದೆ: ನೀಡದೆ; ನೃಪ: ರಾಜ; ಅಸ್ತ್ರ: ಆಯುಧ, ಶಸ್ತ್ರ; ತರಿ: ಕಡಿ, ಕತ್ತರಿಸು; ಮಗುಳು:ಪುನಃ, ಮತ್ತೆ; ಎಚ್ಚು: ಬಾಣಬಿಡು; ಶರಾವಳಿ: ಬಾಣಗಳ ಗುಂಪು/ಸಾಲು; ಎರಗು: ಬೀಳು; ತುರುಗು:ಸಂದಣಿಸು, ಹೆಚ್ಚಾಗು; ತೆತ್ತಿಸು: ಕೂಡಿಸು; ರಥಾಂಗ: ರಥದ ಭಾಗ;

ಪದವಿಂಗಡಣೆ:
ಇರಿತ +ಮುನ್ನವೊ +ಸುಭಟರಿಗೆ+ ಬೊ
ಬ್ಬಿರಿತ +ಮುನ್ನವೊ +ನಿಮ್ಮ +ನುಡಿಯಲಿ
ಮುರಿವಡೆದಿರೈ +ನೀವೆನುತ+ ನೃಪನ್+ಅಂಬ +ಹರೆಗಡಿದು
ತೆರಹುಗೊಡದ್+ಎಚ್ಚನು +ನೃಪ+ಅಸ್ತ್ರವ
ತರಿದು +ಮಗುಳ್+ಎಚ್ಚನು +ಶರಾವಳಿ
ಎರಗಿದವು +ತುರುಗಿದವು +ತೆತ್ತಿಸಿದವು +ರಥಾಂಗದಲಿ

ಅಚ್ಚರಿ:
(೧) ಬಾಣ ತಾಗಿದ ಪರಿ – ಎರಗಿದವು , ತುರುಗಿದವು, ತೆತ್ತಿಸಿದವು
(೨) ಒಂದೇ ಸಮನೆ ಬಾಣ ಪ್ರಯೋಗವನ್ನು ತಿಳಿಸಲು – ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ ಯೆರಗಿದವು

ಪದ್ಯ ೪೫: ಧರ್ಮರಾಯನು ಕರ್ಣನಿಗೆ ಹೇಗೆ ಮರು ಉತ್ತರವನ್ನು ನೀಡಿದನು?

ಗಂಡುಗರ್ವವನೆಮ್ಮೊಡನೆ ಕೋ
ದಂಡದಲಿ ಮೆರೆ ಸಾಕು ನಿನ್ನಯ
ಭಂಡ ವಿದ್ಯವ ಮೆರೆವಡಿದೆಲಾ ಕೌರವಾಸ್ಥಾನ
ದಿಂಡುದರಿವೆನು ಸೈರಿಸೆನುತವ
ಖಂಡ ಶರನಿಕರದಲಿ ರಿಪು ಮಾ
ರ್ತಾಂಡ ತನಯನನೆಚ್ಚು ಬೊಬ್ಬಿರಿದನು ಮಹೀಪಾಲ (ಕರ್ಣ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳನ್ನು ಕೇಳಿದ ಧರ್ಮರಾಯನು ಸಹ ಅದೇ ಧಾಟಿಯಲ್ಲೇ ಉತ್ತರವನ್ನು ನೀಡಿದನು. ಎಲೈ ಕರ್ಣ ಬಿಲ್ಲಿನಿಂದ ನಿನ್ನ ಗಂಡುಗರ್ವವನ್ನು ನಮ್ಮಲ್ಲಿ ತೋರಿಸು, ಸಾಕು, ನಿನ್ನ ಭಂಡ ವಿದ್ಯೆಯನ್ನು ಮೆರೆಯುವುದಕ್ಕೆ ಕೌರವನ ಆಸ್ಥಾನವಿದ್ದೇ ಇದೆ. ನಿನ್ನನ್ನು ಒಟ್ಟಾಗಿ ಸಂಹರಿಸುತ್ತೇನೆ, ಸ್ವಲ್ಪ ತಾಳು ಎಂದು ಧರ್ಮಜನು ಬಾಣಗಳಿಂದ ಕರ್ಣನನ್ನು ಹೊಡೆದು ಗರ್ಜಿಸಿದನು.

ಅರ್ಥ:
ಗಂಡು: ಪೌರುಷ; ಗರ್ವ:ಅಹಂಕಾರ; ಎಮ್ಮೊಡನೆ: ನಮ್ಮೊಡನೆ; ಕೋದಂಡ: ಬಿಲ್ಲು; ಮೆರೆ: ಪ್ರದರ್ಶಿಸು, ತೋರಿಸು; ಸಾಕು: ನಿಲ್ಲಿಸು; ಭಂಡ: ನಾಚಿಕೆ, ಲಜ್ಜೆ; ವಿದ್ಯ: ಜ್ಞಾನ; ಸ್ಥಾನ: ಜಾಗ; ದಿಂಡುದರಿ: ಒಟ್ಟಾಗಿ ಸಂಹರಿಸು; ಸೈರಿಸು: ತಾಳು, ಸಹಿಸು; ಖಂಡ: ತುಂಡು, ಚೂರು; ಶರ: ಬಾಣ; ನಿಕರ: ಗುಂಪು; ರಿಪು: ವೈರಿ; ಮಾರ್ತಾಂಡ: ಸೂರ್ಯ; ತನಯ: ಮಗ; ಎಚ್ಚು: ಬಾಣಬಿಡು; ಬೊಬ್ಬಿರಿ: ಗರ್ಜಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಗಂಡುಗರ್ವವನ್+ಎಮ್ಮೊಡನೆ +ಕೋ
ದಂಡದಲಿ+ ಮೆರೆ +ಸಾಕು +ನಿನ್ನಯ
ಭಂಡ +ವಿದ್ಯವ +ಮೆರೆವಡಿದೆಲಾ +ಕೌರವಾಸ್ಥಾನ
ದಿಂಡುದರಿವೆನು+ ಸೈರಿಸೆನುತ್+ಅವ
ಖಂಡ +ಶರ+ನಿಕರದಲಿ +ರಿಪು +ಮಾ
ರ್ತಾಂಡ+ ತನಯನನ್+ಎಚ್ಚು +ಬೊಬ್ಬಿರಿದನು +ಮಹೀಪಾಲ

ಅಚ್ಚರಿ:
(೧) ಕರ್ಣನನ್ನು ಮಾರ್ತಾಂಡ ತನಯ ಎಂದು ಕರೆದಿರುವುದು
(೨) ಧರ್ಮರಾಯನ ನೇರ ನುಡಿ – ಗಂಡುಗರ್ವವನೆಮ್ಮೊಡನೆ ಕೋದಂಡದಲಿ ಮೆರೆ ಸಾಕು ನಿನ್ನಯ ಭಂಡ ವಿದ್ಯವ ಮೆರೆವಡಿದೆಲಾ ಕೌರವಾಸ್ಥಾನ

ಪದ್ಯ ೪೪: ಯುಧಿಷ್ಠಿರನ ಮಾತಿಗೆ ಕರ್ಣನು ಯಾವ ರೀತಿ ಉತ್ತರಿಸಿದನು?

ರೂಪಿದೊಳ್ಳಿತು ರೇಖೆಯುಚಿತ ಕ
ಳಾಪವತಿ ಹಸನಾಯ್ತು ಬಾಣ
ಸ್ಥಾಪನಕೆ ಮೆಚ್ಚಿದೆನು ಮೇಲಣ ತೂಕದಾಳವನು
ಈ ಪರಿಯಲೆಂದರಿಯೆನಹುದೈ
ಚಾಪವಿದ್ಯಾ ಪಾತ್ರವಿಂದವ
ನೀಪತಿಯಲಾ ಪೂತು ಮಝ ಎಂದೆಚ್ಚನಾ ಕರ್ಣ (ಕರ್ಣ ಪರ್ವ, ೧೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಮಾತನ್ನು ಕೇಳಿದ ಕರ್ಣನು, ಭಲೆ ಭಲೆ ಯುಧಿಷ್ಠಿರ! ರೂಪ ಸರಿಯಿದೆ, ರೇಖೆ ಉಚಿತವಾಗಿದೆ, ಕಾರ್ಯ ಬಹು ಚೆನ್ನಾಗಿದೆ, ಬಾಣವನ್ನು ಹೂಡಿದುದನ್ನು ಮೆಚ್ಚಿದೆ, ಮೇಲು ನೋಟಕ್ಕೆ ಎಲ್ಲವೂ ತೂಕವುಳ್ಲದ್ದಾಗಿದೆ, ನೀನೇ ಇಂದು ಚಾಪವಿದ್ಯೆಗೆ ಅರ್ಹ. ನಿನ್ನಲ್ಲಿ ಇಂತಹ ಘನತೆಯಿದೆಯೆಂದು ನನಗೆ ತಿಳಿದೇ ಇರಲಿಲ್ಲ ಎಂದು ಕರ್ಣನು ಹೇಳಿ ಬಾಣವನ್ನು ಬಿಟ್ಟನು.

ಅರ್ಥ:
ರೂಪು: ಆಕಾರ; ಒಳ್ಳಿತು: ಚೆನ್ನಾಗಿದೆ; ರೇಖೆ: ಗೆರೆ, ಗೀಟು; ಕಳಾಪ: ಬಾಣ, ಬತ್ತಳಿಕೆ; ಹಸನು: ಒಳ್ಳಿತು, ಶುಭ; ಬಾಣ: ಶರ; ಸ್ಥಾಪನ: ಸ್ಥಿರವಾಗಿ ನಿಲ್ಲಿಸುವುದು; ಮೆಚ್ಚು: ಪ್ರಶಂಸೆ; ಮೇಲಣ: ಮೇಲು ನೋಟಕ್ಕೆ; ತೂಕ: ಭಾರ, ಗುರುತ್ವ; ಪರಿ: ರೀತಿ; ಅರಿ: ತಿಳಿ; ಅಹುದು: ಸರಿ; ಚಾಪವಿದ್ಯ: ಬಿಲ್ಲುವಿದ್ಯೆ; ಪಾತ್ರ: ಅರ್ಹನಾದವನು; ಅವನೀಪತಿ: ರಾಜ; ಪೂತು: ಭಲೆ, ಭೇಷ್; ಮಝ: ಭಲೆ, ಕೊಂಡಾಟದ ನುಡಿ; ಎಚ್ಚು: ಬಾಣಬಿಡು; ಆಳ: ಗಾಢತೆ;

ಪದವಿಂಗಡಣೆ:
ರೂಪಿದ್+ಒಳ್ಳಿತು +ರೇಖೆ+ಉಚಿತ +ಕ
ಳಾಪವ್+ಅತಿ +ಹಸನಾಯ್ತು +ಬಾಣ
ಸ್ಥಾಪನಕೆ +ಮೆಚ್ಚಿದೆನು +ಮೇಲಣ +ತೂಕದ್+ಆಳವನು
ಈ+ ಪರಿಯಲ್+ಎಂದ್+ಅರಿಯೆನ್+ಅಹುದೈ
ಚಾಪವಿದ್ಯಾ +ಪಾತ್ರವ್+ಇಂದ್+ಅವ
ನೀಪತಿಯಲಾ+ ಪೂತು +ಮಝ +ಎಂದೆಚ್ಚನಾ +ಕರ್ಣ

ಅಚ್ಚರಿ:
(೧) ಒಳ್ಳಿತು, ಉಚಿತ, ಹಸನಾಯ್ತು, ಮೆಚ್ಚು, ಮಝ, ಪೂತು – ಮೆಚ್ಚುಗೆಯ ಪದಗಳು

ಪದ್ಯ ೪೩: ಯುಧಿಷ್ಠಿರನು ಕರ್ಣನಿಗೆ ಯಾವ ಸವಾಲನ್ನು ಹಾಕಿದನು?

ಕಲಿತನವೆ ಹೃದಯದಲಿ ಕಾರ್ಯದ
ಬಳಕೆ ಕೈಯಲಿ ನಡುವೆ ನಾಲಗೆ
ಯುಲಿದೊಡೇನಗ್ಗಳಿಕೆಯಹುದೋ ವೀರಸಿರಿಯಹುದೊ
ಕಲಿತನದ ಕೆಚ್ಚುಳ್ಳಡೆಸುಗೆಯ
ಸುಳಿವ ತೋರಾದಡೆಯೆನುತ ನೃಪ
ತಿಲಕ ಬತ್ತಳಿಕೆಯಲಿ ಸೆಳೆದನು ಹೂಡಿದನು ಶರವ (ಕರ್ಣ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಮನಸ್ಸಿನಲ್ಲಿ ಪರಾಕ್ರಮವಿದ್ದರೆ, ಕೈಯಲ್ಲಿ ಅದನ್ನು ಮಾಡಿ ತೋರಿಸಬೇಕು. ಇವೆರಡರ ನಡುವಿರುವ ನಾಲಿಗೆ ಮಾತಾಡಿದರೆ ಏನ್ ಹಿರಿಮೆ ಬರುವುದೋ? ಪರಾಕ್ರಮ ಲಕ್ಷ್ಮಿ ಒಲಿಯುವಳೋ, ನಿನ್ನಲ್ಲಿ ಪರಾಕ್ರಮದ ಕೆಚ್ಚಿದ್ದರೆ ಬಾಣ ಪ್ರಯೋಗದಲ್ಲಿ ಅದನ್ನು ತೋರಿಸು ಎಂದು ಬತ್ತಳಿಕೆಯಿಂದ ಬಾಣವನ್ನು ತೆಗೆದು ಬಿಲ್ಲಿನಲ್ಲಿ ಹೂಡಿದನು.

ಅರ್ಥ:
ಕಲಿ: ಶೂರ, ಪರಾಕ್ರಮಿ; ಹೃದಯ: ವಕ್ಷಸ್ಥಳ, ಉರ; ಕಾರ್ಯ: ಕೆಲಸ; ಬಳಕೆ: ಉಪಯೋಗಿಸುವಿಕೆ; ಕೈ: ಕರ, ಹಸ್ತ; ನಡುವೆ: ಮಧ್ಯ; ನಾಲಗೆ: ಜಿಹ್ವೆ; ಉಲಿ: ಧ್ವನಿ, ಮಾತು; ಅಗ್ಗಳಿಕೆ: ಹೆಚ್ಚುಗಾರಿಕೆ, ಶ್ರೇಷ್ಠತೆ; ವೀರ: ಸಾಹಸಿ; ಸಿರಿ: ಐಶ್ವರ್ಯ; ಕೆಚ್ಚು: ಧೈರ್ಯ, ಸಾಹಸ; ಎಸುಗೆ: ಬಾಣದ ಹೊಡೆತ; ಸುಳಿ: ಕಾಣಿಸಿಕೊಳ್ಳು, ಗೋಚರವಾಗು; ತೋರು: ಕಾಣಿಸಿಕೋ; ನೃಪ: ರಾಜ; ತಿಲಕ: ಶ್ರೇಷ್ಠ; ಬತ್ತಳಿಕೆ: ಬಾಣಗಳನ್ನಿಡುವ ಸ್ಥಳ; ಸೆಳೆ: ಎಳೆತ, ಸೆಳೆತ; ಹೂಡು: ತೊಡಗಿಸು; ಶರ: ಬಾಣ;

ಪದವಿಂಗಡಣೆ:
ಕಲಿತನವೆ +ಹೃದಯದಲಿ +ಕಾರ್ಯದ
ಬಳಕೆ +ಕೈಯಲಿ +ನಡುವೆ +ನಾಲಗೆ
ಉಲಿದೊಡ್+ಏನ್+ಅಗ್ಗಳಿಕೆ+ಅಹುದೋ +ವೀರಸಿರಿಯಹುದೊ
ಕಲಿತನದ+ ಕೆಚ್ಚುಳ್ಳಡ್+ಎಸುಗೆಯ
ಸುಳಿವ+ ತೋರಾದಡೆ+ಎನುತ +ನೃಪ
ತಿಲಕ+ ಬತ್ತಳಿಕೆಯಲಿ+ ಸೆಳೆದನು +ಹೂಡಿದನು +ಶರವ

ಅಚ್ಚರಿ:
(೧) ಕಲಿತನ – ೧, ೪ ಸಾಲಿನ ಮೊದಲ ಪದ
(೨) ಮಾತಿನಿಂದ ಏನು ಪ್ರಯೋಜನವಿಲ್ಲವೆಂದು ಹೇಳುವ ಪರಿ – ಕಲಿತನವೆ ಹೃದಯದಲಿ ಕಾರ್ಯದ ಬಳಕೆ ಕೈಯಲಿ ನಡುವೆ ನಾಲಗೆ ಯುಲಿದೊಡೇನಗ್ಗಳಿಕೆಯಹುದೋ ವೀರಸಿರಿಯಹುದೊ

ಪದ್ಯ ೪೨: ಕರ್ಣನೇಕೆ ಯುಧಿಷ್ಠಿರನೆದುರು ಯುದ್ಧ ಮಾಡಲು ಹೆದರುತ್ತಾನೆ?

ಅಂಜುವೆವು ನಿಮಗರಸರೇ ಬಲ
ಪಂಜರದ ಗಿಣಿ ನೀವು ಸೊಕ್ಕಿದ
ಮಂಜರನ ಪಡಿಮುಖಕೆ ನಿಲುವುದು ಉಚಿತವೇ ನಿಮಗೆ
ಭಂಜನೆಗೆ ಬಲುಹುಳ್ಳೊಡೆಯು ನಿಮ
ಗಂಜುವರು ಗುರು ಭೀಷ್ಮರಾಪರಿ
ರಂಜಕರು ತಾವಲ್ಲೆನುತ ತಾಗಿದನು ಭೂಪತಿಯ (ಕರ್ಣ ಪರ್ವ, ೧೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನೆದುರು ಬಂದುದನ್ನು ಕಂಡ ಕರ್ಣನು, ಅರಸರೇ! ನಾವು ನಿಮಗೆ ಹೆದರುತ್ತೇವೆ, ಏಕೆಂದರೆ ನಿಮ್ಮ ಸೈನ್ಯದ ಪಂಜರದಲ್ಲಿಯ ಗಿಣಿಯಂತೆ ಇರುವವರು ನೀವು. ಸೊಕ್ಕಿದ ಬೆಕ್ಕಿಗೆದುರು ನಿಲ್ಲುವುದು ಉಚಿತವೇ? ನಿಮ್ಮನ್ನು ಭಂಜಿಸುವ ಶಕ್ತಿಯಿದ್ದರೂ ಭೀಷ್ಮ ದ್ರೋಣರು ನಿಮಗ ಹೆದರುತ್ತಿದ್ದರು. ಅವರಂತೆ ತೋರಿಕೆಯ ಯುದ್ಧ ಮಾದುವವರು ನಾವಲ್ಲ ಎಂದು ಕರ್ಣನು ಗುಡುಗಿದನು.

ಅರ್ಥ:
ಅಂಜು: ಹೆದರು; ಅರಸ: ರಾಜ; ಬಲ: ಸೈನ್ಯ; ಪಂಜರ: ಗೂಡು; ಗಿಣಿ: ಶುಕ; ಸೊಕ್ಕು: ಕೊಬ್ಬಿದ; ಮಂಜರ: ಬೆಕ್ಕು; ಪಡಿ; ವಿರುದ್ಧ; ಪಡಿಮುಖ: ಎದುರಾಳಿ; ಮುಖ: ಆನನ; ನಿಲುವು: ನಿಂತುಕೊಳ್ಳು; ಉಚಿತ: ಸರಿಯಾದ; ಭಂಜನೆ: ಸೀಳು, ಹೋರಾಡು; ಬಲುಹು: ಶಕ್ತಿ; ಅಂಜು: ಹೆದರು; ಗುರು: ದ್ರೋಣ; ಪರಿ: ರೀತಿ; ರಂಜಕ: ರಂಜಿಸುವವ,ಮನೋಹರ; ತಾಗು: ಮುಟ್ಟು, ಅಪ್ಪಳಿಸು; ಭೂಪತಿ: ರಾಜ (ಯುಧಿಷ್ಠಿರ);

ಪದವಿಂಗಡಣೆ:
ಅಂಜುವೆವು +ನಿಮಗ್+ಅರಸರೇ +ಬಲ
ಪಂಜರದ+ ಗಿಣಿ +ನೀವು +ಸೊಕ್ಕಿದ
ಮಂಜರನ+ ಪಡಿಮುಖಕೆ+ ನಿಲುವುದು +ಉಚಿತವೇ +ನಿಮಗೆ
ಭಂಜನೆಗೆ +ಬಲುಹುಳ್ಳೊಡೆಯು+ ನಿಮಗ್
ಅಂಜುವರು +ಗುರು +ಭೀಷ್ಮರ್+ಆ+ಪರಿ
ರಂಜಕರು+ ತಾವಲ್ಲೆನುತ +ತಾಗಿದನು +ಭೂಪತಿಯ

ಅಚ್ಚರಿ:
(೧) ಯುಧಿಷ್ಥಿರನನ್ನು ಬಲಪಂಜರದ ಗಿಣಿ ಎಂದು ಕರೆದಿರುವುದು
(೨) ಪಂಜರ, ಮಂಜರ – ಪ್ರಾಸ ಪದಗಳು

ಪದ್ಯ ೪೧: ಕರ್ಣನನ್ನು ಯಾರು ತಡೆಯಲು ಮುಂದೆ ಬಂದರು?

ಪವನಸುತ ಮುಖದಿರುಹಿದನು ಯಾ
ದವನ ಕಂಡವರಾರು ಸೇನಾ
ನಿವಹಗಿವಹದ ಪಾಡೆ ಕರ್ಣನ ಖಾತಿ ಖೊಪ್ಪರಿಸೆ
ಬವರ ಮುರಿದುದು ವಿಜಯ ಲಕ್ಷ್ಮಿಯ
ಸವತಿ ಸೇರಿತು ಸುಭಟರಿಗೆ ಬಳಿ
ಕವನಿಪತಿಯೇ ತರುಬಿ ನಿಂದನು ಭಾನುನಂದನನ (ಕರ್ಣ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕರ್ಣನ ಯುದ್ಧದ ಆರ್ಭಟಕ್ಕೆ ಭೀಮನು ಸರಿದು ಹೋದನು. ಸಾತ್ಯಕಿಯನ್ನು ನೋಡಿದವರೇ ಇಲ್ಲ. ಕರ್ಣನ ಕೋಪ ಗರಿಗೆಟ್ಟಿದರೆ ಸೇನೆಗೀನೆಗಳು ತಡೆದಾವೇ? ಯುದ್ಧದಲ್ಲಿ ಪಾಂಡವ ಸೇನೆಗೆ ವಿಜಯಲಕ್ಷ್ಮಿಯ ಸವತಿಯಾದ ಅಪಜಯಲಕ್ಷ್ಮಿ ದೊರೆಕಿದಳು ಎಂಬಂತೆ ತೋರುತ್ತಿದ್ದಾಗ ಯುಧಿಷ್ಠಿರನೇ ಕರ್ಣನನ್ನು ತಡೆದನು.

ಅರ್ಥ:
ಪವನಸುತ: ವಾಯುಪುತ್ರ (ಭೀಮ); ಮುಖ: ಆನನ; ಮುಖದಿರುಹು: ಒಪ್ಪಿಗೆಯಾಗದೆ ಹೋಗು; ಯಾದವ: ಸಾತ್ಯಕಿ; ಕಂಡು: ನೋಡು; ಸೇನ: ಸೈನ್ಯ; ನಿವಹ: ಗುಂಪು; ಪಾಡು: ಸ್ಥಿತಿ; ಖಾತಿ: ಕೋಪ, ಕ್ರೋಧ; ಖೊಪ್ಪರಿಸು: ಮೀರು, ಹೆಚ್ಚು; ಬವರ: ಕಾಳಗ, ಯುದ್ಧ; ಮುರಿ: ಸೀಳು; ವಿಜಯ: ಗೆಲುವು; ಸವತಿ: ವಿರೋಧಿಯಾದವಳು; ಸೇರು: ಜೊತೆಗೂಡು; ಸುಭಟ: ಸೈನಿಕರು; ಬಳಿಕ: ನಂತರ; ಅವನಿಪತಿ: ರಾಜ; ತರುಬು: ತಡೆ, ನಿಲ್ಲಿಸು; ನಿಂದು: ಎದುರು ನಿಲ್ಲು; ಭಾನುನಂದನ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಪವನಸುತ +ಮುಖದಿರುಹಿದನು+ ಯಾ
ದವನ+ ಕಂಡವರಾರು +ಸೇನಾ
ನಿವಹಗಿವಹದ +ಪಾಡೆ +ಕರ್ಣನ +ಖಾತಿ +ಖೊಪ್ಪರಿಸೆ
ಬವರ+ ಮುರಿದುದು +ವಿಜಯ +ಲಕ್ಷ್ಮಿಯ
ಸವತಿ+ ಸೇರಿತು +ಸುಭಟರಿಗೆ +ಬಳಿಕ್
ಅವನಿಪತಿಯೇ +ತರುಬಿ +ನಿಂದನು +ಭಾನುನಂದನನ

ಅಚ್ಚರಿ:
(೧) ಸೋಲು ಎಂದು ವರ್ಣಿಸಲು – ವಿಜಯ ಲಕ್ಷ್ಮಿಯ ಸವತಿ ಸೇರಿತು
(೨) ಆಡು ಪದದ ಬಳಕೆ – ನಿವಹಗಿವಹ
(೩) ತ್ರಿವಳಿ ಪದಗಳು – ಕರ್ಣನ ಖಾತಿ ಖೊಪ್ಪರಿಸೆ; ಸವತಿ ಸೇರಿತು ಸುಭಟರಿಗೆ

ಪದ್ಯ ೪೦: ಕರ್ಣನು ಯಾವ ಬಾಣವನ್ನು ಬಿಟ್ಟು ಸೈನ್ಯವನ್ನು ಚದುರಿಸಿದನು?

ಪೂತು ಮಝರೇ ಭೀಮ ಸಾತ್ಯಕಿ
ಯಾತರೋ ತಮ್ಮೊಡೆಯನಿದಿರಲಿ
ಘಾತಕರ ಘಟ್ಟಿಸುವೆನೀಗಳೆ ಶಲ್ಯ ನೊಡೆನುತ
ಭೂತನಾಥನ ಭಾಳನಯನೋ
ದ್ಧೂತ ಧೂಮಧ್ವಜ ಶಿಖಾ ಸಂ
ಘಾತವಿವೆಯೆನೆ ಕೆದರಿದನು ಮಾರ್ಗಣ ಮಹೋದಧಿಯ (ಕರ್ಣ ಪರ್ವ, ೧೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭಲೇ ಭೇಷ ಭೀಮ ಮತ್ತು ಸಾತ್ಯಕಿಯರೇ! ತಮ್ಮ ಒಡೆಯನಿಗೆ ಒತ್ತಾಸೆಯಾಗಿ ಬಂದಿದ್ದಾರೆ. ಈ ಘಾತಕರನ್ನು ಈಗಲೇ ಬಡಿದು ಹಾಕುತ್ತೇನೆ, ಶಲ್ಯ ನೋಡುತ್ತಿರು ಎಂದು ಹೇಳಿ ಕರ್ಣನು ಶಿವನ ಹಣೆಗಣ್ಣಿನ ಅಗ್ನಿಯಿಂದ ಬಂದ ಧೂಮಜ್ವಾಲೆಗಳೆಂಬಂತಹ ಬಾಣಗಳನ್ನು ಎದುರು ನಿಂತಿದ್ದ ಭೀಮ ಸಾತ್ಯಕಿಯರ ಸೈನ್ಯದ ಮೇಲೆ ಬಾಣಗಳ ಅಲೆಗಳಿಂದ ಸೈನ್ಯವನ್ನು ಚದುರಿಸಿದನು.

ಅರ್ಥ:
ಪೂತು: ಭಲೇ ಭೇಷ್; ಮಝರೆ: ಕೊಂಡಾಟದ ನುಡಿ; ಒಡೆಯ: ರಾಜ; ಇದಿರು: ಎದುರು; ಘಾತ: ಹೊಡೆತ; ಘಟ್ಟಿಸು: ಹೊಡೆ, ಅಪ್ಪಳಿಸು; ನೋಡು: ವೀಕ್ಷಿಸು; ಭೂತನಾಥ: ಶಿವ; ಭಾಳ: ಹಣೆ; ನಯನ: ಕಣ್ಣು; ಉದ್ಧೂತ: ಹೊರಹೊಮ್ಮಿದ; ಧೂಮ: ಹೊಗೆ; ಧ್ವಜ: ಪತಾಕೆ; ಶಿಖ: ಬೆಂಕಿ; ಸಂಘಾತ: ಗುಂಪು, ಸಮೂಹ; ಕೆದರು: ಚದರು; ಮಾರ್ಗಣ: ಬಾಣ, ಅಂಬು; ಮಹ: ದೊಡ್ಡ ಉದಧಿ: ಸಮುದ್ರ;

ಪದವಿಂಗಡಣೆ:
ಪೂತು +ಮಝರೇ +ಭೀಮ +ಸಾತ್ಯಕಿ
ಯಾತರೋ +ತಮ್ಮ್+ಒಡೆಯನ್+ಇದಿರಲಿ
ಘಾತಕರ+ ಘಟ್ಟಿಸುವೆನ್+ಈಗಳೆ +ಶಲ್ಯ +ನೊಡೆನುತ
ಭೂತನಾಥನ+ ಭಾಳ+ನಯನ
ಉದ್ಧೂತ +ಧೂಮಧ್ವಜ +ಶಿಖಾ +ಸಂ
ಘಾತವಿವೆ+ಎನೆ+ ಕೆದರಿದನು+ ಮಾರ್ಗಣ +ಮಹ+ಉದಧಿಯ

ಅಚ್ಚರಿ:
(೧) ಪೂತು, ಮಝರೆ – ಹಂಗಿಸುವ/ಪ್ರಶಂಶಿಸುವ ನುಡಿ
(೨) ಕರ್ಣನ ಬಾಣ ಪ್ರಯೋಗದ ರೀತಿ (ಶಿವ ಮತ್ತು ಸಮುದ್ರಕ್ಕೆ ಹೋಲಿಕೆ) – ಭೂತನಾಥನ ಭಾಳನಯನೋ
ದ್ಧೂತ ಧೂಮಧ್ವಜ ಶಿಖಾ ಸಂಘಾತವಿವೆಯೆನೆ ಕೆದರಿದನು ಮಾರ್ಗಣ ಮಹೋದಧಿಯ

ಪದ್ಯ ೩೯: ಸಹದೇವಾದಿಗಳು ಕರ್ಣನಿಗೆ ಹೇಗೆ ಉತ್ತರವನಿತ್ತರು?

ಆಳನೋಯಿಸಿ ನೋಡುತಿಹ ಹೀ
ಹಾಳಿ ತಾನೇಕಕಟಕಟ ದೊರೆ
ಯಾಳ ಧೀವಶವೆನುತ ಸಹದೇವಾದಿಗಳು ಜರೆದು
ತೋಳು ಬಳಲದೆ ತೆಗೆದೆಸುತ ಸಮ
ಜೋಳಿಯಲಿ ನೂಕಿದರು ಕರ್ಣನ
ಮೇಲೆ ಸಾತ್ಯಕಿ ಭೀಮರವನೀಪಾಲನಿದಿರಿನಲಿ (ಕರ್ಣ ಪರ್ವ, ೧೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೈ ಕರ್ಣ ನಮ್ಮ ಸೈನಿಕರನ್ನು ನೋಯಿಸಿ ಸುಮ್ಮನೆ ನೋಡುತ ಕುಳಿತುಕೊಳ್ಳುವ ಹೀನಾಯ ಸ್ಥಿತಿ ನಮಗೇಕೆ ಅಯ್ಯೋ! ದೊರೆಯು ತನ್ನ ಯೋಧರ ಬುದ್ಧಿಮತ್ತೆಗೆ ತಕ್ಕಂತಿರುತ್ತಾನೆ ಎಂದು ಹೇಳುತ್ತಾ ಕರ್ಣನನ್ನು ಜರೆದರು. ಭುಜಗಳ ಆಯಾಸಗೊಳ್ಲದೆ ತಮ್ಮ ಬತ್ತಳಿಕೆಯಿಂದ ಬಾಣಗಳನ್ನು ತೆಗೆದು ತಮ್ಮ ಜೊತೆಯವರೊಡನೆ ಕೂಡಿ ಸಾತ್ಯಕಿ ಭೀಮರು ಕರ್ಣನೆದುರಿಗೆ ತಮ್ಮ ರಥಗಳನ್ನು ನೂಕಿದರು.

ಅರ್ಥ:
ಆಳು: ಸೈನಿಕ; ನೋಯಿಸು: ಕಷ್ಟಕ್ಕೆ ಒಡ್ಡು, ತೊಂದರೆ ನೀಡು; ನೋಡು: ವೀಕ್ಷಿಸು; ಹೀಹಾಳಿ: ತೆಗಳಿಕೆ, ಅವಹೇಳನ; ಅಕಟಕಟ: ಅಯ್ಯೋ; ದೊರೆ: ರಾಜ; ಧೀ: ಬುದ್ಧಿ; ವಶ: ಅಧೀನ, ಅಂಕೆ; ಆದಿ: ಮುಂತಾದ; ಜರೆ: ಬಯ್ಯು; ತೋಳು: ಭುಜ; ಬಳಲು: ಆಯಾಸಗೊಳ್ಳು; ತೆಗೆ: ಹೊರತರು; ಎಸು: ಬಾಣಬಿಡು, ಹೋರಾಡು; ಜೋಳಿ: ಜೋಡಿ, ಗುಂಪು; ನೂಕು: ತಳ್ಳು; ಅವನೀಪಾಲ: ರಾಜ; ಇದಿರು: ಎದುರು;

ಪದವಿಂಗಡಣೆ:
ಆಳನೋಯಿಸಿ +ನೋಡುತಿಹ +ಹೀ
ಹಾಳಿ +ತಾನೇಕ್+ಅಕಟಕಟ +ದೊರೆ
ಯಾಳ +ಧೀವಶವ್+ಎನುತ +ಸಹದೇವಾದಿಗಳು +ಜರೆದು
ತೋಳು +ಬಳಲದೆ +ತೆಗೆದ್+ಎಸುತ +ಸಮ
ಜೋಳಿಯಲಿ +ನೂಕಿದರು +ಕರ್ಣನ
ಮೇಲೆ +ಸಾತ್ಯಕಿ +ಭೀಮರ್+ಅವನೀಪಾಲನ್+ಇದಿರಿನಲಿ

ಅಚ್ಚರಿ:
(೧) ದೊರೆಯ ಲಕ್ಷಣ – ದೊರೆಯಾಳ ಧೀವಶ