ಪದ್ಯ ೪೩: ಭೀಮನನ್ನು ತಡೆಯಲು ಯಾರು ಎದುರು ಬಂದರು?

ಭಾರಿಯಂಕವು ದಳಪತಿಗೆ ಪಡಿ
ಸಾರಿಕೆಯ ಭಟರಿಲ್ಲಲಾ ಪರಿ
ವಾರಕಿದು ಪಂಥವೆ ಎನುತ ಕುರುರಾಯ ಮೂದಲಿಸೆ
ಕೂರಲಗಿನಂಬುಗಿದು ಬಳಿಯ ಮ
ಹಾರಥರ ಕೈವೀಸಿ ರವಿಸುತ
ಸಾರೆನುತ ಕೆಣಕಿದನು ದುಶ್ಯಾಸನನು ಪವನಜನ (ಕರ್ಣ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮ ಕರ್ಣರ ಯುದ್ಧವನ್ನು ನೋಡಿದ ದುರ್ಯೋಧನನು ನಮ್ಮ ಸೇನಾಧಿಪತಿಗೆ ಭಾರಿ ಕಾಳಗ ಬಿದ್ದಿವೆ. ಅವನ ಸಹಾಯಕ್ಕೆ ಯಾರೂ ಇಲ್ಲ, ಅವನ ಸಹಾಯಕ್ಕೆ ಹೋಗಬಾರದೆಂಬ ಪ್ರತಿಜ್ಞೆಯನ್ನೇನಾದರೂ ಮಾಡಿರುವಿರಾ? ಎಂದು ಕೌರವನು ತನ್ನವರನ್ನು ಮೂದಲಿಸಿದಲು, ಕರ್ಣ, ಪಕ್ಕಕ್ಕೆ ಸರಿ ಎಂದು ಮಹಾರಥರನ್ನು ಕೈಬೀಸಿಕರೆದು ದುಶ್ಯಾಸನನು ಭೀಮನನ್ನು ತಡೆದನು.

ಅರ್ಥ:
ಭಾರಿ: ದೊಡ್ಡದಾದ, ಭಯಂಕರ; ಅಂಕ: ಕಾಳಗ; ದಳಪತಿ: ಸೈನ್ಯ; ಪಡಿಸಾರಿಕೆ: ಪ್ರತಿಭಟಿಸುವಂತ; ಭಟ: ಸೈನಿಕರು; ಪರಿವಾರ: ಸುತ್ತಲಿನವರು, ಪರಿಜನ; ಪಂಥ: ಸ್ಪರ್ಧೆ; ರಾಯ: ರಾಜ; ಮೂದಲಿಸು: ಹಂಗಿಸು; ಕೂರಲಗು: ಹರಿತವಾದ ಬಾಣ; ಅಂಬು: ಬಾಣ; ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ಕೈ: ಕರ; ವೀಸಿ: ಬೀಸು, ತೂಗುವಿಕೆ; ರವಿಸುತ: ಸೂರ್ಯನ ಮಗ (ಕರ್ಣ); ಸಾರು: ಪಕ್ಕಕ್ಕೆ ಸರಿ; ಕೆಣಕು: ಪ್ರಚೋದಿಸು; ಪವನಜ: ಭೀಮ;

ಪದವಿಂಗಡಣೆ:
ಭಾರಿ+ಅಂಕವು +ದಳಪತಿಗೆ +ಪಡಿ
ಸಾರಿಕೆಯ +ಭಟರಿಲ್ಲಲ್+ಆ+ ಪರಿ
ವಾರಕಿದು +ಪಂಥವೆ +ಎನುತ +ಕುರುರಾಯ +ಮೂದಲಿಸೆ
ಕೂರಲಗಿನ್+ಅಂಬುಗಿದು +ಬಳಿಯ +ಮ
ಹಾರಥರ +ಕೈವೀಸಿ +ರವಿಸುತ
ಸಾರೆನುತ+ ಕೆಣಕಿದನು +ದುಶ್ಯಾಸನನು +ಪವನಜನ

ಪದ್ಯ ೪೨: ಕರ್ಣ ಭೀಮರ ಯುದ್ಧ ಹೇಗೆ ಜರುಗಿತು?

ಎಚ್ಚನೊಡನೊಡನೆಚ್ಚ ಬಾಣವ
ಕೊಚ್ಚಿದನು ಕಲಿ ಕರ್ಣನಾತನ
ನೆಚ್ಚನಂಬಿನ ಮೇಲೆ ನೂಕಿದವಂಬು ವಹಿಲದಲಿ
ಎಚ್ಚು ಕವಿಸಿದಡವನು ಪವನಜ
ನೆಚ್ಚಡವ ಪರಿಹರಿಸಿ ರವಿಸುತ
ನೆಚ್ಚಡಿಬ್ಬರು ಕಾದಿದರು ಕೈಮೈಯ ಮನ್ನಿಸದೆ (ಕರ್ಣ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಮನ ಬಾಣಗಳನ್ನು ಕೊಚ್ಚಿ ಹಾಕಿ ಕರ್ಣನು ಬಾಣಗಳನ್ನು ಬಿಟ್ಟನು. ಅತಿ ವೇಗದಿಂದ ಬಾಣಗಳು ಕವಿಯಲು ಭೀಮನು ಅವನ್ನು ಕತ್ತರಿಸಿ, ಬಾಣಗಳನ್ನು ಬಿಟ್ಟನು. ಪರಸ್ಪರರ ಬಾಣಗಳನ್ನು ಕತ್ತರಿಸುತ್ತಾ, ತಮ್ಮ ಕೈ, ಮೈಗಳನ್ನು ಲೆಕ್ಕಿಸದೆ ಇಬ್ಬರೂ ಹೋರಾಡಿದರು.

ಅರ್ಥ:
ಎಚ್ಚು:ಬಾಣಬಿಡು; ಬಾಣ: ಬಿಲ್ಲಿಗೆ ಹೂಡುವ ಅಸ್ತ್ರ, ಅಂಬು; ಕೊಚ್ಚು: ಕತ್ತರಿಸುವ ಸಾಧನ; ಕಲಿ: ಶೂರ; ಅಂಬು: ಬಾಣ; ವಹಿಲ: ಬೇಗ, ತ್ವರೆ; ಕವಿಸು: ಆವರಿಸು; ಪವನಜ: ಭೀಮ; ಪರಿಹರಿಸು: ನಿವಾರಿಸು; ರವಿಸುತ: ಕರ್ಣ; ಕಾದು: ಹೋರಾಡು; ಕೈ: ಕರ; ಮೈ: ತನು; ಮನ್ನಿಸು: ಶಮನಗೊಳಿಸು; ಒಡನೆ: ತಕ್ಷಣ; ನೂಕು: ತಳ್ಳು

ಪದವಿಂಗಡಣೆ:
ಎಚ್ಚನ್+ಒಡನ್+ಒಡನೆಚ್ಚ+ ಬಾಣವ
ಕೊಚ್ಚಿದನು +ಕಲಿ +ಕರ್ಣನ್+ಆತನನ್
ಎಚ್ಚನ್+ಅಂಬಿನ +ಮೇಲೆ +ನೂಕಿದವ್+ಅಂಬು ವಹಿಲದಲಿ
ಎಚ್ಚು +ಕವಿಸಿದಡ್+ಅವನು +ಪವನಜನ್
ಎಚ್ಚಡವ +ಪರಿಹರಿಸಿ+ ರವಿಸುತನ್
ಎಚ್ಚಡ್+ಇಬ್ಬರು +ಕಾದಿದರು +ಕೈ+ಮೈಯ +ಮನ್ನಿಸದೆ

ಅಚ್ಚರಿ:
(೧) ಎಚ್ಚನ್, ಎಚ್ಚು – ಮೊದಲನೇ ಪದವಾಗಿ ಬಳಕೆ
(೨) ಬಾಣ, ಅಂಬು – ಸಮನಾರ್ಥಕ ಪದ

ಪದ್ಯ ೪೧: ಕರ್ಣ ಭೀಮರ ಮಾತಿನ ಚಕಮಕಿ ಹೇಗಿತ್ತು?

ಆತುಕೊಳ್ಳೈ ಭ್ರೂಣಹತ್ಯಾ
ಪಾತಕಿಯೆ ಪಡಿತಳಿಸು ವಿಶಿಖ
ವ್ರಾತವಿವೆಯೆನುತೆಚ್ಚನಿನಸುತನನಿಲನಂದನನ
ಆತುಕೊಂಬರೆ ಸರಿಸನಲ್ಲ ವಿ
ಜಾತಿಯಲಿ ಸಂಭವಿಸಿದನೆ ಫಡ
ಸೂತನಂದನ ಎನುತ ಕರ್ಣನನೆಚ್ಚನಾ ಭೀಮ (ಕರ್ಣ ಪರ್ವ, ೧೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕರ್ಣನು ಭೀಮನೆದುರು ಬಂದು, ಎಲವೋ ಭೀಮನೇ, ಭ್ರೂಣಹತ್ಯ ಪಾತಕಿಯೇ? ಈ ಬಾಣಗಳನ್ನು ಬಿಟ್ಟೆ, ನೀನು ಇವನ್ನು ಸೈರಿಸು ಎನ್ನುತ್ತಾ ಭೀಮನನ್ನು ಬಾಣಗಳಿಂದ ಹೊಡೆದನು. ಭೀಮನು ಸೈರಿಸಲು ನನಗೆ ನೀನು ಸರಿಸಮನೆ. ಬೇರೆ ಜಾತಿಯಲ್ಲಿ ಹುಟ್ಟಿದವನೇ ಸೂತಪುತ್ರನೇ! ಎಂದು ಕರ್ಣನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಆತು: ಸರಿಯಾಗಿ ಹಿಡಿದು, ತಾಗಿಕೊಂಡು; ಭ್ರೂಣ: ಹುಡುಗ, ಬಾಲಕ; ಹತ್ಯ: ಮರಣ; ಪಾತಕಿ: ಪಾಪಿ; ಪಡಿ: ಸಮಾನವಾದುದು; ವಿಶಿಖ: ಬಾಣ, ಅಂಬು; ವ್ರಾತ: ಗುಂಪು; ಎಚ್ಚು: ಬಾಣಬಿಡು; ಸುತ: ಮಗ; ಅನಿಲನಂದನ: ವಾಯುಪುತ್ರ (ಭೀಮ); ಸರಿಸನಲ್ಲ: ಸಮಾನನಲ್ಲ; ವಿಜಾತಿ: ಬೇರೆ ಜಾತಿ; ಸಂಭವಿಸು: ಹುಟ್ಟು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸೂತನಂದನ: ಸೂತನ ಮಗ; ಇನಸುತ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಆತುಕೊಳ್ಳೈ +ಭ್ರೂಣಹತ್ಯಾ
ಪಾತಕಿಯೆ +ಪಡಿತಳಿಸು+ ವಿಶಿಖ
ವ್ರಾತವಿವೆ+ಎನುತ್+ಎಚ್ಚನ್+ಇನಸುತನ್+ಅನಿಲನಂದನನ
ಆತುಕೊಂಬರೆ +ಸರಿಸನಲ್ಲ+ ವಿ
ಜಾತಿಯಲಿ +ಸಂಭವಿಸಿದನೆ +ಫಡ
ಸೂತನಂದನ+ ಎನುತ +ಕರ್ಣನನ್+ಎಚ್ಚನಾ +ಭೀಮ

ಅಚ್ಚರಿ:
(೧) ಭ್ರೂಣಹತ್ರ, ಸೂತನಂದನ – ಇಬ್ಬರು ಬಯ್ಯುವ ಪರಿ
(೨) ಕರ್ಣ ಮತ್ತು ಭೀಮನನ್ನು ಕರೆದಿರುವ ಬಗೆ: ಅನಿಲನಂದನ, ಭೀಮ; ಇನಸುತನ್, ಸೂತನಂದನ

ಪದ್ಯ ೪೦: ಕೌರವ ಸೇನೆಯಲ್ಲಿ ಯಾವ ಗೊಂದಲವಾಯಿತು?

ಶಿವ ಶಿವಾ ಕರ್ಣಾತ್ಮಜನೆ ಮಡಿ
ದವನು ದಳಪತಿ ಮಡಿದನೋ ಕೌ
ರವನ ಕೇಡೋ ಹಾಯೆನುತ ಕುರುಸೇನೆ ಕಳವಳಿಸೆ
ಕವಿದರಶ್ವತ್ಥಾಮ ಕೃಪ ಕೌ
ರವ ಶಕುನಿ ದುಶ್ಯಾಸನಾದಿಗ
ಳವಗಡಿಸಲನಿಬರನು ತೊಲಗಿಸಿ ಕರ್ಣನಿದಿರಾದ (ಕರ್ಣ ಪರ್ವ, ೧೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವಸೇನೆಯು ಶಿವ ಶಿವಾ ಕರ್ಣನ ಮಗನು ಸತ್ತನೋ ಅಥವ ಕರ್ಣನೇ ಮಡಿದನೋ? ದುರ್ಯೋಧನನಿಗೆ ಏನೋ ಕೇಡುಂಟಾಗಿದೆ ಎಂದು ಕಳವಳಿಸಿತು. ಆಗ ಅಶ್ವತ್ಥಾಮ, ಕೃಪ, ಕೌರವ, ಶಕುನಿ, ದುಶ್ಯಾಸನಾದಿಗಳು ಭೀಮನನ್ನು ಮುತ್ತಿ ಮುನ್ನುಗಲು, ಕರ್ಣನು ಅವರನ್ನು ಆಚೆಗೆ ತಳ್ಳಿ ತಾನೇ ಭೀಮನ ಎದುರು ನಿಂತನು.

ಅರ್ಥ:
ಆತ್ಮಜ: ಮಗ; ಮಡಿ: ಸಾವು, ಮರಣ; ದಳಪತಿ: ಸೇನಾಧಿಪತಿ; ಕೇಡು: ಕೆಟ್ಟದ್ದು; ಸೇನೆ: ಸೈನ್ಯ; ಕಳವಳ: ಗೊಂದಲ; ಕವಿ: ಆವರಿಸು; ಆದಿ: ಮುಂತಾದ; ಅವಗಡಿಸು: ಅವಸರಗೊಳ್ಳು; ಇನಿಬರು: ಇಷ್ಟುಜನ; ತೊಲಗು: ಹೊರಹಾಕು; ಇದಿರು: ಎದುರು;

ಪದವಿಂಗಡಣೆ:
ಶಿವ +ಶಿವಾ +ಕರ್ಣಾತ್ಮಜನೆ+ ಮಡಿ
ದವನು+ ದಳಪತಿ+ ಮಡಿದನೋ +ಕೌ
ರವನ +ಕೇಡೋ +ಹಾ+ಎನುತ+ ಕುರುಸೇನೆ +ಕಳವಳಿಸೆ
ಕವಿದರ್+ಅಶ್ವತ್ಥಾಮ +ಕೃಪ +ಕೌ
ರವ +ಶಕುನಿ +ದುಶ್ಯಾಸನಾದಿಗಳ್
ಅವಗಡಿಸಲ್+ಅನಿಬರನು +ತೊಲಗಿಸಿ +ಕರ್ಣನ್+ಇದಿರಾದ

ಅಚ್ಚರಿ:
(೧) ಕಳವಳವನ್ನು ಸೂಚಿಸುವ ಪದ – ಶಿವ ಶಿವಾ

ಪದ್ಯ ೩೯: ಭೀಮನು ಕರ್ಣನಂದನರ ಮೇಲೆ ಹೇಗೆ ಬಾಣಪ್ರಯೋಗ ಮಾಡಿದ?

ಬಾಲರೆಂದೇ ಮನ್ನಿಸಿದರೆ ಛ
ಡಾಳಿಸಿತೆ ಚಪಳತ್ವವಾಗಲಿ
ಖೂಳರಾವೈ ಸಲೆಯೆನುತ ನಾರಾಚ ಶತಕದಲಿ
ಬೀಳಲೆಚ್ಚನು ರಥವ ಗಜ ಹಯ
ಜಾಳವನು ಸಾರಥಿಗಳನು ಬಲು
ಗೋಲೊಳಿಬ್ಬರೊಳೊಬ್ಬನನು ಕೆಡೆಯೆಚ್ಚು ಬೊಬ್ಬಿರಿದ (ಕರ್ಣ ಪರ್ವ, ೧೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನು ಕರ್ಣನಂದನರ ಬಾಣಪ್ರಯೋಗವನ್ನು ನೋಡಿ, ನೀವು ಹುಡುಗರೆಂದು ಮನ್ನಣೆಯನ್ನು ತೋರಿಸಿದರೆ ನಿಮಗೆ ಯುದ್ಧ ಚಾಪಲ್ಯ ಹೆಚ್ಚಿತೇ? ಆಗಲಿ ನಾವೇ ದಡ್ಡರು ಎಂದ್ ಭೀಮನು ನೂರು ಬಾಣಗಳಿಂದ ಕರ್ಣನ ಮಕ್ಕಳ ರಥ ಸುತ್ತಲಿದ್ದ ಆನೆಗಳು, ಕುದುರೆ, ಸಾರಥಿಗಳನ್ನು ಮುರಿದು, ಆ ಇಬ್ಬರಲ್ಲಿ ಒಬ್ಬನನ್ನು ಸಂಹರಿಸಿ ಗರ್ಜಿಸಿದನು.

ಅರ್ಥ:
ಬಾಲ: ಹುಡುಗ; ಮನ್ನಿಸು: ಕ್ಷಮಿಸು, ಅನುಗ್ರಹಿಸು; ಛಡಾಳ: ಹೆಚ್ಚಳ, ಆಧಿಕ್ಯ; ಚಪಳ: ಆಸೆ, ಚಂಚಲ ಸ್ವಭಾವದವನು; ಖೂಳ: ದುಷ್ಟ, ದುರುಳ; ಸಲೆ: ಒಂದೇ ಸಮನೆ; ನಾರಾಚ: ಬಾಣ, ಸರಳು; ಶತಕ: ನೂರು; ಬೀಳಲು: ಎರಗು; ಎಚ್ಚು: ಬಾಣಪ್ರಯೋಗ ರಥ: ಬಂಡಿ, ತೇರು; ಗಜ: ಆನೆ; ಹಯ: ಕುದುರೆ; ಜಾಳ:ಬಲೆ, ಸಮೂಹ; ಸಾರಥಿ: ಸೂತ, ರಥವನ್ನು ಓಡಿಸುವವ; ಬಲು: ಬಹಳ; ಕೆಡೆ: ಬೀಳು, ಕುಸಿ; ಬೊಬ್ಬೆ; ಅರಚು;

ಪದವಿಂಗಡಣೆ:
ಬಾಲರೆಂದೇ +ಮನ್ನಿಸಿದರೆ +ಛ
ಡಾಳಿಸಿತೆ +ಚಪಳತ್ವವ್+ಆಗಲಿ
ಖೂಳರಾವೈ+ ಸಲೆಯೆನುತ+ ನಾರಾಚ +ಶತಕದಲಿ
ಬೀಳಲ್+ಎಚ್ಚನು+ ರಥವ+ ಗಜ +ಹಯ
ಜಾಳವನು +ಸಾರಥಿಗಳನು +ಬಲು
ಗೋಲೊಳ್+ಇಬ್ಬರೊಳ್+ಒಬ್ಬನನು +ಕೆಡೆಯೆಚ್ಚು +ಬೊಬ್ಬಿರಿದ

ಅಚ್ಚರಿ:
(೧) ಭೀಮನ ಆವೇಶದ ಮಾತು – ಬಾಲರೆಂದೇ ಮನ್ನಿಸಿದರೆ ಛಡಾಳಿಸಿತೆ ಚಪಳತ್ವವಾಗಲಿ
ಖೂಳರಾವೈ

ಪದ್ಯ ೩೮: ಕರ್ಣನಂದನರು ಭೀಮನ ಮೇಲೆ ಹೇಗೆ ಬಾಣಪ್ರಯೋಗ ಮಾಡಿದರು?

ಗಳಹತನವಿದು ನಿಮ್ಮ ತಂದೆಯ
ಗಳಿಸಿದರ್ಥವು ನಿಮ್ಮ ಬೀಯಕೆ
ಬಳಸುವಿರಿ ತಪ್ಪಾವುದೆನುತೆಚ್ಚಂಬ ಹರೆಗಡಿದು
ಹಿಳುಕ ಕವಿಸಿದನೀತನೀತನ
ಹಿಳುಕ ಮುರಿದೊಡನೆಚ್ಚು ಭೀಮನ
ಕೆಳರಿಚಿದರೈ ಕರ್ಣನಂದನರರಸ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಕರ್ಣನಂದನರ ಉತ್ತರವನನ್ನು ಕೇಳಿ, ನಿಮ್ಮ ತಂದೆಯ ದುಡಿದ ಹಣವನ್ನು ನೀವು ವೆಚ್ಚಮಾಡುತ್ತಿದ್ದೀರಿ. ತಪ್ಪೇನು? ಎನ್ನುತ್ತಾ ಅವರ ಬಾಣಗಳನ್ನು ಕಡಿದು ಬಾಣ ಪ್ರಯೋಗ ಮಾಡಿದನು. ಅವರಿಬ್ಬರೂ ಭೀಮನ ಬಾಣಗಳನ್ನು ಕತ್ತರಿಸಿ ತಮ್ಮ ಬಾಣಗಳಿಂದ ಅವನನ್ನು ಮುಚ್ಚಿದರು ಎಂದು ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಿದ್ದನು.

ಅರ್ಥ:
ಗಳಹತನ: ಬಾಯಿಗೆ ಬಂದಂತೆ ಮಾತನಾಡುವಿಕೆ; ತಂದೆ: ಪಿತ; ಗಳಿಸು: ಸಂಪಾದಿಸು; ಅರ್ಥ: ಐಶ್ವರ್ಯ; ಬೀಗು: ಸೊಕ್ಕು, ಮೆರೆ, ಸೆಟೆದುಕೊಳ್ಳು; ಬಳಸು: ಉಪಯೋಗಿಸು; ತಪ್ಪು: ಸರಿಯಿಲ್ಲದ; ಎಚ್ಚು: ಬಾಣಪ್ರಯೋಗ ಮಾಡು; ಅಂಬು: ಬಾಣ; ಹರೆ:ವ್ಯಾಪಿಸು, ವಿಸ್ತರಿಸು; ಹಿಳುಕ: ಬಾಣದ ಹಿಂಭಾಗ; ಮುರಿ: ಸೀಳು; ನಂದನ: ಮಗ; ಅರಸ: ರಾಜ;

ಪದವಿಂಗಡಣೆ:
ಗಳಹತನವಿದು +ನಿಮ್ಮ +ತಂದೆಯ
ಗಳಿಸಿದ್+ಅರ್ಥವು +ನಿಮ್ಮ +ಬೀಯಕೆ
ಬಳಸುವಿರಿ+ ತಪ್ಪಾವುದ್+ಎನುತ್+ಎಚ್ಚಂಬ+ ಹರೆಗಡಿದು
ಹಿಳುಕ +ಕವಿಸಿದನ್+ಈತನ್+ಈತನ
ಹಿಳುಕ +ಮುರಿದೊಡನ್+ಎಚ್ಚು +ಭೀಮನ
ಕೆಳರಿಚಿದರೈ +ಕರ್ಣನಂದನರ್+ಅರಸ ಕೇಳೆಂದ

ಅಚ್ಚರಿ:
(೧) ಹಿಳುಕ – ಪದದ ಬಳಕೆ – ೪,೫ ಸಾಲಿನ ಮೊದಲ ಪದ
(೨) ಈತನೀತನ – ಪದದ ಬಳಕೆ

ಪದ್ಯ ೩೭: ಕರ್ಣನ ಪುತ್ರರು ಭೀಮನಿಗೆ ಹೇಗೆ ಉತ್ತರಿಸಿದರು?

ಮರುಳಲಾ ಪವಮಾನಸುತ ನಿ
ನ್ನೊರೆಗೆ ಪಡಿಯೊರೆ ತೂಕ ತೂಕಕೆ
ಸರಿಸರಾವಿರೆ ಕನಕಗಿರಿಪರಿಯಂತ ಮಾತೇಕೆ
ತರಣಿಬಿಂಬದ ತತ್ತಿಗಳನು
ತ್ತರಿಸಿ ತೋರುವ ತಿಮಿರವುಂಟೇ
ತರಹರಿಸಿ ತೋರಾ ಎನುತ ಕವಿದೆಚ್ಚರನಿಲಜನ (ಕರ್ಣ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ಕಜ್ಜಾಯದ ನುಡಿಗಳನ್ನು ಕೇಳಿದ ಕರ್ಣಪುತ್ರರು, ಭೀಮ ನಿನ್ನ ಒರೆಗೆ ನಾವು ಪ್ರತಿಯಾದ ಅದೇ ಒರೆಯುಳ್ಳವರು. ನಿನ್ನ ತೂಕಕ್ಕೆ ಸರಿತೂಕವುಳ್ಳ ನಾವಿರಲು ಮೇರು ಪರ್ವತದ (ಕರ್ಣನ) ಮಾತೇಕೆ. ಸೂರ್ಯ ಬಿಂಬದ ಕಿರಣಗಳನ್ನು ಮೀರಿಸುವ ಕತ್ತಲಿದಿಯೇ? ನಮ್ಮ ಏಟನ್ನು ಸಹಿಸಿಕೋ ಎಂದು ಭೀಮನ ಮೇಲೆ ಬಾಣಪ್ರಯೋಗವನ್ನು ಮಾಡಿದರು.

ಅರ್ಥ:
ಮರುಳು: ಮೂಢ, ಬುದ್ಧಿಭ್ರಮೆ; ಪವಮಾನ: ವಾಯು; ಸುತ: ಮಗ; ಒರೆ: ಸಾಮ್ಯತೆ; ಪಡಿ:ಸಮಾನವಾದುದು, ಎಣೆ; ತೂಕ: ಭಾರ; ಸರಿಸ: ಸಮಾನವಾದ; ಕನಕಗಿರಿ: ಮೇರು ಪರ್ವತ; ಮಾತು: ನುಡಿ; ತರಣಿ: ಸೂರ್ಯ; ಬಿಂಬ: ಕಿರಣ; ತತ್ತಿ: ಕಾಂತಿ; ಉತ್ತರ: ಮರುನುಡಿ; ತೋರು: ಗೋಚರಿಸು; ತಿಮಿರ: ಕತ್ತಲು; ತರಹರಿಸು: ಕಳವಳಿಸು; ಕವಿ: ಆವರಿಸು; ಎಚ್ಚು: ಬಾಣಪ್ರಯೋಗ ಮಾಡು; ಅನಿಲಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ಮರುಳಲಾ +ಪವಮಾನಸುತ+ ನಿ
ನ್ನೊರೆಗೆ +ಪಡಿಯೊರೆ +ತೂಕ +ತೂಕಕೆ
ಸರಿಸರ್+ಆವಿರೆ +ಕನಕಗಿರಿ+ಪರಿಯಂತ +ಮಾತೇಕೆ
ತರಣಿಬಿಂಬದ+ ತತ್ತಿಗಳನ್
ಉತ್ತರಿಸಿ+ ತೋರುವ +ತಿಮಿರವುಂಟೇ
ತರಹರಿಸಿ+ ತೋರಾ +ಎನುತ +ಕವಿದೆಚ್ಚರನಿಲಜನ

ಅಚ್ಚರಿ:
(೧) ತ ಕಾರದ ಸಾಲು ಪದಗಳು – ತರಣಿಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ
ತರಹರಿಸಿ ತೋರಾ
(೨) ಉಪಮಾನದ ಪ್ರಯೋಗ – ತರಣಿಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ;
(೩) ಕರ್ಣನನ್ನು ಕನಕಗಿರಿಗೆ ಹೋಲಿಸುವ ನುಡಿ – ಪವಮಾನಸುತ ನಿನ್ನೊರೆಗೆ ಪಡಿಯೊರೆ ತೂಕ ತೂಕಕೆ ಸರಿಸರಾವಿರೆ ಕನಕಗಿರಿಪರಿಯಂತ ಮಾತೇಕೆ
(೪) ಭೀಮನನ್ನು ಪವಮಾನಸುತ, ಅನಿಲಜ ಎಂದು ಕರೆದಿರುವುದು