ಪದ್ಯ ೯: ರಣರಂಗ ಹೇಗೆ ತೋರಿತು?

ಬೆರಸಿದವು ಬಲವೆರಡು ಹೊಕ್ಕವು
ಕರಿಘಟೆಗಳೇರಿದವು ಕುದುರೆಗ
ಳುರವಣಿಸಿದವು ತೇರ ತಿವಿದರು ಹೊಂತಕಾರಿಗಳು
ಉರುಳ್ವ ತಲೆಗಳ ಬಸಿವ ಮಿದುಳಿನ
ಸುರಿವ ಕರುಳಿನ ಸೂಸುವೆಲುವಿನ
ಹೊರಳ್ವ ಮುಂಡದ ರೌದ್ರರಣ ರಂಜಿಸಿತು ಚೂಣಿಯಲಿ (ಕರ್ಣ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ಪಾಂಡವರ ಮತ್ತು ಕೌರವರ ಸೈನ್ಯವು ಒಬ್ಬರನೊಬ್ಬರು ಎದುರುಗೊಂಡು ಯುದ್ಧವನ್ನು ಆರಂಭಿಸಿದರು. ಆನೆಗಳು ಮುನ್ನುಗ್ಗಿದವು, ಕುದುರೆಗಳು ವೇಗದಿಂದ ಮುಂದುವರಿದವು. ಪರಾಕ್ರಮಿಗಳು ರಥಗಳಲ್ಲಿ ಕೂತು ಎದುರು ಬರುತ್ತಿದ್ದ ವೈರಿಗಳನ್ನು ತಿವಿದರು. ಉರುಳುವ ತಲೆಗಳು, ಹೊರಹೊಮ್ಮಿ ಜೋಲುವ ಮೆದುಳು, ಹೊರ ಬಂದ ಕರುಳು, ಮೇಲೆ ನುಗ್ಗಿದ ಎಲುಬುಗಳು, ಹೊರಳುವ ಮುಂಡಗಳಿಂದ ಆವರಿಸಿದ ರಣರಂಗವು ಭಯಂಕರವಾಗಿ ಕಂಡಿತು.

ಅರ್ಥ:
ಬೆರಸು: ಸೇರಿಸು; ಬಲ: ಸೈನ್ಯ; ಎರಡು: ಯುಗಳ; ಹೊಕ್ಕು: ಸೇರು; ಕರಿಘಟೆ: ಆನೆಗಳ ಗುಂಪು; ಏರು: ಮೇಲಕ್ಕ; ಕುದುರೆ: ಅಶ್ವ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ತೇರ: ಬಂಡಿ, ರಥ; ತಿವಿ: ಹೊಡೆತ, ಗುದ್ದು; ಹೊಂತಕಾರಿ: ಪರಾಕ್ರಮಿ; ಉರುಳು: ಕೆಳಕ್ಕೆ ಬೀಳು; ತಲೆ: ಶಿರ; ಬಸಿ: ಧಾರೆಯಾಗಿ ಬೀಳು, ಸುರಿ; ಮಿದುಳು: ಮಸ್ತಿಷ್ಕ; ಸುರಿ: ಸೋರು, ಸ್ರವಿಸು, ಹರಿ; ಕರುಳು: ಪಚನಾಂಗ; ಸೂಸು: ಎರಚು, ಚಲ್ಲು; ಎಲುವು: ಎಲುಬು, ಮೂಳೆ; ಹೊರಳು: ಉರುಳಾಡು, ಉರುಳು; ಮುಂಡ:ತಲೆಯಿಲ್ಲದ ದೇಹ; ರೌದ್ರ: ಭಯಂಕರ; ರಂಜಿಸು: ಉದ್ರೇಕಗೊಳಿಸು, ಆವೇಶಗೊಳ್ಳುವಂತೆ ಮಾಡು; ಚೂಣಿ: ಯುದ್ಧದಲ್ಲಿ ಮುಂದೆ ಇರುವ ಸೈನ್ಯ, ಮುಂದಳ;

ಪದವಿಂಗಡಣೆ:
ಬೆರಸಿದವು +ಬಲವ್+ಎರಡು +ಹೊಕ್ಕವು
ಕರಿಘಟೆಗಳ್+ಏರಿದವು +ಕುದುರೆಗಳ್
ಉರವಣಿಸಿದವು +ತೇರ +ತಿವಿದರು +ಹೊಂತಕಾರಿಗಳು
ಉರುಳ್ವ +ತಲೆಗಳ+ ಬಸಿವ +ಮಿದುಳಿನ
ಸುರಿವ+ ಕರುಳಿನ +ಸೂಸುವ್+ಎಲುವಿನ
ಹೊರಳ್ವ +ಮುಂಡದ +ರೌದ್ರರಣ+ ರಂಜಿಸಿತು +ಚೂಣಿಯಲಿ

ಅಚ್ಚರಿ:
(೧) ಯುದ್ಧದ ಭಯಂಕರ ದೃಶ್ಯವನ್ನು ಚಿತ್ರಿಸಿರುವುದು
(೨) ಉರುಳ್ವ ತಲೆ, ಬಸಿವ , ಸುರಿವ ಕರುಳು, ಸೂಸುವ ಎಲುಬು, ಹೊರಳ ಮುಂಡ
(೩) ಉರುಳ್ವ, ಹೊರಳ್ವ – ಪ್ರಾಸ ಪದ

ಪದ್ಯ ೮: ಯುದ್ಧದಲ್ಲಿ ಮೊಳಗಿದ ಶಬ್ದಗಳಾವುವು?

ಎರಡು ಬಲವುಬ್ಬೆದ್ದುದಿದರೊಳು
ಮೊರೆವ ಭೇರಿಯ ಭಟರ ಬೊಬ್ಬೆಯ
ಕರಿಯ ಗಜರಿನ ಹಯದ ಹೇಷಾರವದ ಹಲ್ಲಣೆಯ
ಜರಿವ ಕಹಳೆಯ ಝಾಡಿಸುವ ಜ
ಝ್ಝರದ ಡಿಂಡಿಮ ಡಮರು ಪಟಹದ
ಧರಧುರದ ದನಿ ಧೈರ್ಯಗೆಡಿಸಿತು ಸಕಲ ಸಾಗರವ (ಕರ್ಣ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ಎರಡು ಸೈನ್ಯದ ಸೈನಿಕರು ಹಿಗ್ಗುತ್ತಾ ಉತ್ಸಾಹದಿಂದ ಮುನ್ನಡೆದರು. ಭೇರಿಯ ಶಬ್ದ, ಭಟರ ಉತ್ತೇಜನದ ಕೂಗುಗಳು, ಆನೆಯ ಕೂಗು, ಕುದುರೆಯ ಸದ್ದು, ಯುದ್ಧರಂಗದಲ್ಲಿ ನಿಲ್ಲದೆ ಮುನ್ನುಗ್ಗುತ್ತಿದ್ದವು. ಕಹಳೆಯ ಶಬ್ದದ ಹರಿವು, ತಮ್ಮಟೆ, ಡಮರುಗಳ ಡಿಂಡಿಮ ಶಬ್ದ, ನಗಾರಿಯ ಎತ್ತರದ ಧ್ವನಿ ಈ ಎಲ್ಲಾ ಶಬ್ದಗಳು ಎಲ್ಲಾ ಸೈನಿಕರ ಧೈರ್ಯವನ್ನು ಕೆಡಿಸಿತು.

ಅರ್ಥ:
ಎರಡು: ಯುಗಳ, ದ್ವಿ; ಬಲ: ಸೈನ್ಯ; ಉಬ್ಬು: ಹಿಗ್ಗು, ಗರ್ವಿಸು; ಇದಿರ: ಎದುರು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ನಗಾರಿ, ದುಂದುಭಿ; ಭಟ: ಸೈನಿಕ; ಬೊಬ್ಬೆ: ಎತ್ತರದ ಕೂಗು, ಅರಚು; ಕರಿ: ಆನೆ; ಗಜರು: ಆನೆಯ ಕೂಗು; ಹಯ: ಕುದುರೆ; ಹೇಷಾರ: ಕುದುರೆಯ ಕೂಗು; ಹಲ್ಲಣೆ: ನಿಲ್ಲದೆ ಪ್ರಯಾಣ ಮಾಡು; ಜರಿ: ಬೀಳು, ಹರಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಝಾಡಿ: ರಾಶಿ; ಝಾಡಿಸು: ಜೋರಾದ ಶಬ್ದ; ಜಝ್ಝರ: ರಣವಾದ್ಯ; ಡಿಂಡಿಮ: ಶಬ್ದವನ್ನು ವಿವರಿಸುವ ಪದ; ಡಮರು: ಒಂದು ಬಗೆಯ ವಾದ್ಯ; ಪಟಹ: ನಗಾರಿ; ಧರಧುರ:ಆಧಿಕ್ಯ, ಹೆಚ್ಚಳ, ಆರ್ಭಟ; ದನಿ: ಧ್ವನಿ; ಧೈರ್ಯ: ಎದೆಗಾರಿಕೆ; ಕೆಡಿಸು: ಹಾಳುಮಾಡು; ಸಕಲ: ಎಲ್ಲಾ; ಸಾಗರ:ಒಂದು ದೊಡ್ಡ ಸಂಖ್ಯೆ, ಸೈನ್ಯ; ರವ: ಶಬ್ದ;

ಪದವಿಂಗಡಣೆ:
ಎರಡು +ಬಲವ್+ಉಬ್ಬೆದ್ದುದ್+ಇದರೊಳು
ಮೊರೆವ+ ಭೇರಿಯ +ಭಟರ +ಬೊಬ್ಬೆಯ
ಕರಿಯ +ಗಜರಿನ +ಹಯದ +ಹೇಷಾರವದ +ಹಲ್ಲಣೆಯ
ಜರಿವ +ಕಹಳೆಯ+ ಝಾಡಿಸುವ +ಜ
ಝ್ಝರದ +ಡಿಂಡಿಮ +ಡಮರು +ಪಟಹದ
ಧರಧುರದ +ದನಿ +ಧೈರ್ಯಗೆಡಿಸಿತು +ಸಕಲ +ಸಾಗರವ

ಅಚ್ಚರಿ:
(೧) ವಾದ್ಯಗಳ ಹೆಸರು – ಕಹಳೆ, ಡಮರು, ಜಝ್ಝರ
(೨) ಜೋಡಿ ಪದಗಳ ಬಳಕೆ – ಭೇರಿಯ ಭಟರ ಬೊಬ್ಬೆಯ; ಹಯದ ಹೇಷಾರವದ ಹಲ್ಲಣೆಯ; ಡಿಂಡಿಮ ಡಮರು;ಸಕಲ ಸಾಗರವ

ಪದ್ಯ ೭: ಯಾವ ಮೂವರ ಪರಾಕ್ರಮದೆದುರು ಅನ್ಯರು ನಗಣ್ಯರಾದರು?

ಈ ಮಹಾ ಮೋಹರವನತಿ ನಿ
ಸ್ಸೀಮರಾಂತರು ಮೂವರೇ ಬಳಿ
ಕಾ ಮಹಾರಥ ರಾಜಿಯಡಗಿದುದವರ ರಶ್ಮಿಯಲಿ
ಸೋಮಸೂರ್ಯಾಗ್ನಿಗಳಿದಿರೊಳು
ದ್ದಾಮ ತೇಜಸ್ವಿಗಳೆ ದಿಟ ಕುರು
ಭೂಮಿಪತಿ ಹೇಳೆಂದು ನುಡಿದನು ಸಂಜಯನು ನಗುತ (ಕರ್ಣ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ಈ ಮಹಾ ಯುದ್ಧದಲ್ಲಿ ಪಾಂಡವರ ಈ ಮೂವರೇ ನಮ್ಮ ಮಹಾಸೈನ್ಯವನ್ನು ಎದುರಿಸಿ ನಿಂತರು, ಅವರ ಪರಾಕ್ರಮ ಕಿರಣದ ಎದುರು ಮಹಾರಥರ ಶೌರ್ಯವು ಕುಂದು ಮೂಲೆಗುಂಪಾದರು. ಅಗ್ನಿ, ಸೂರ್ಯ, ಚಂದ್ರರ ಮುಂದೆ ಯಾರ ತೇಜಸ್ಸು ಹೊಳೆದೀತು ಎಂದು ಸಂಜಯನು ನಗುತ್ತಾ ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮಹಾ: ಶ್ರೇಷ್ಠ; ಮೋಹರ: ಯುದ್ಧ; ನಿಸ್ಸೀಮ: ಎಲ್ಲೆಯಿಲ್ಲದುದು; ಬಳಿಕ: ನಂತರ; ಮಹಾರಥ: ಪರಾಕ್ರಮಿ; ರಾಜಿ: ಗುಂಪು, ಸಮೂಹ; ಅಡಗು: ಮರೆಯಾಗು; ರಶ್ಮಿ: ಕಾಂತಿ; ಸೋಮ: ಚಂದ್ರ; ಸೂರ್ಯ: ರವಿ; ಅಗ್ನಿ: ಬೆಂಕಿ; ಇದಿರು: ಎದುರು; ಉದ್ದಾಮ: ಶ್ರೇಷ್ಠವಾದ; ತೇಜಸ್ವಿ: ಸಮರ್ಥ, ಪ್ರಭಾವಶಾಲಿ; ದಿಟ: ಸತ್ಯ; ಭೂಪತಿ: ರಾಜ; ಹೇಳು: ತಿಳಿಸು; ನುಡಿ: ಮಾತು; ನಗುತ: ಸಂತಸ;

ಪದವಿಂಗಡಣೆ:
ಈ +ಮಹಾ +ಮೋಹರವನ್+ಅತಿ+ ನಿ
ಸ್ಸೀಮರಾಂತರು+ ಮೂವರೇ+ ಬಳಿಕ್
ಆ +ಮಹಾರಥ+ ರಾಜಿ +ಅಡಗಿದುದ್+ಅವರ +ರಶ್ಮಿಯಲಿ
ಸೋಮ+ಸೂರ್ಯ+ಅಗ್ನಿಗಳ್+ಇದಿರೊಳ್
ಉದ್ದಾಮ +ತೇಜಸ್ವಿಗಳೆ+ ದಿಟ+ ಕುರು
ಭೂಮಿಪತಿ +ಹೇಳೆಂದು +ನುಡಿದನು+ ಸಂಜಯನು +ನಗುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೋಮಸೂರ್ಯಾಗ್ನಿಗಳಿದಿರೊಳುದ್ದಾಮ ತೇಜಸ್ವಿಗಳೆ ದಿಟ
(೨) ಮಹಾ ಮೋಹರ, ಮಹಾರಥ – ಮಹಾ ಪದದ ಬಳಕೆ

ಪದ್ಯ ೬: ಕೃಷ್ಣನು ಯಾರನ್ನು ಎಲ್ಲಿ ನಿಲ್ಲಿಸಿದನು?

ಒಡ್ಡಿತೀ ಬಲ ರಿಪುಭಟರು ಮಾ
ರೊಡ್ಡ ಮೆರೆದರು ತಮ್ಮ ನೆರತೆಯೊ
ಳೊಡ್ಡಿಗೊಬ್ಬರ ಕರೆದು ಪರುಠವಿಸಿದನು ಮುರವೈರಿ
ಒಡ್ಡಿನೆಡದಲಿ ಭೀಮನಾ ಬಲ
ದೊಡ್ಡಿನಲಿ ಕಲಿಪಾರ್ಥ ದಳಪತಿ
ಯೊಡ್ಡಿನಲಿ ನಿಂದನು ಯುಧಿಷ್ಠಿರರಾಯ ದಳಸಹಿತ (ಕರ್ಣ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಕರ್ಣನ ಸೇನಾಧಿಪತ್ಯದಲ್ಲಿ ಕೌರವರ ಸೇನೆ ರಣಕ್ಕೇ ಅರ್ಪಿಸಿತು, ಇದನ್ನು ನೋಡಿ ವೈರಿಪಡೆಯವರು ತಮ್ಮ ಸೇನೆಯನ್ನು ಸಿದ್ಧಮಾಡಿದರು. ಶ್ರೀಕೃಷ್ಣನು ವಿಸ್ತಾರವಾಗಿ ಸೈನ್ಯವನ್ನು ರಚಿಸಿದನು, ಭೀಮನನ್ನು ಎಡಭಾಗದಲ್ಲೂ, ಅರ್ಜುನನನ್ನು ಬಲಭಾಗದಲ್ಲೂ, ಯುಧಿಷ್ಥಿರನನ್ನು ಸೇನಾಧಿಪತಿಯಾದ ದೃಷ್ಟದ್ಯುಮ್ನನ ಸೇನೆಯಲ್ಲೂ ನಿಲ್ಲಿಸಿದನು.

ಅರ್ಥ:
ಒಡ್ಡು: ರಾಶಿ, ಸಮೂಹ, ಅರ್ಪಿಸು; ಬಲ: ಸೈನ್ಯ; ರಿಪು: ವೈರಿ; ಭಟ: ಸೈನಿಕ; ಮಾರೊಡ್ಡು: ಎದುರು ಸೈನ್ಯ; ಮೆರೆ: ಹೊಳೆ, ಪ್ರಕಾಶಿಸು; ನೆರತೆ: ಪೂರೈಕೆ, ಸಮಾನ; ಕರೆ: ಬರೆಮಾಡು; ಪರುಠವ:ವಿಸ್ತಾರ; ಮುರವೈರಿ: ಕೃಷ್ಣ; ಎಡ: ವಾಮಭಾಗ; ಬಲ: ದಕ್ಷಿಣ ಪಾರ್ಶ್ವ; ಕಲಿ: ಶೂರ; ದಳಪತಿ: ಸೇನಾಧಿಪತಿ; ದಳ: ಸೈನ್ಯ;

ಪದವಿಂಗಡಣೆ:
ಒಡ್ಡಿತ್+ಈ+ ಬಲ+ ರಿಪು+ಭಟರು+ ಮಾ
ರೊಡ್ಡ +ಮೆರೆದರು +ತಮ್ಮ +ನೆರತೆಯೊಳ್
ಒಡ್ಡಿಗ್+ಒಬ್ಬರ +ಕರೆದು +ಪರುಠವಿಸಿದನು+ ಮುರವೈರಿ
ಒಡ್ಡಿನ್+ಎಡದಲಿ +ಭೀಮನ್+ಆ+ ಬಲದ್
ಒಡ್ಡಿನಲಿ +ಕಲಿ+ಪಾರ್ಥ +ದಳಪತಿ
ಯೊಡ್ಡಿನಲಿ+ ನಿಂದನು +ಯುಧಿಷ್ಠಿರರಾಯ +ದಳಸಹಿತ

ಅಚ್ಚರಿ:
(೧) ಒಡ್ಡು- ಎಲ್ಲಾ ಸಾಲಿನ ಮೊದಲ ಪದ
(೨) ದಳಪತಿ, ದಳಸಹಿತ – ದಳ ಪದದ ಬಳಕೆ

ಪದ್ಯ ೫: ಕರ್ಣಪರ್ವದಲ್ಲಿ ಎಷ್ಟು ಸೇನೆ ಸಿದ್ಧವಾಯಿತು?

ಆ ನದೀನಂದನನ ಸಮರದಿ
ಸೇನೆ ಸವೆದುದನಂತ ಬಳಿಕಿನ
ಸೇನೆ ನುಗ್ಗಾದುದನು ಕಂಡೆನು ದ್ರೋಣ ಪರ್ವದಲಿ
ಏನನೆಂಬೆನು ಜೀಯ ಮತ್ತೀ
ಭಾನುತನಯನ ಕದನಕೊದಗಿದ
ಸೇನೆ ಸಂಖ್ಯಾತೀತವೆಂದನು ಸಂಜಯನು ನೃಪಗೆ (ಕರ್ಣ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರವನ್ನು ನೀಡುತ್ತಾ, ಭೀಷ್ಮ ಪರ್ವದಲ್ಲಿ ಸೇನೆ ಬಹಳಷ್ಟು ಪರಿ ಶಕ್ತಿಗುಂದಿತು (ಬಹಳಷ್ಟು ಮಂದಿ ಸತ್ತರು), ಇನ್ನು ದ್ರೋಣ ಪರ್ವದಲ್ಲಿ ಸೇನೆಯು ಮತ್ತಷ್ಟು ನುಚ್ಚುನೂರಾಯಿತು, ಈಗ ಕರ್ಣಪರ್ವದಲ್ಲಿ ಎಣಿಸಲಾಗದಷ್ಟು ಸೇನೆಯು ಸಿದ್ಧವಾಯಿತು ಎಂದು ಅಚ್ಚರಿ ವ್ಯಕ್ತಪಡಿಸಿದನು.

ಅರ್ಥ:
ನದೀನಂದನ: ಗಂಗೆಯ ಮಗ (ಭೀಷ್ಮ); ನಂದನ: ಮಗ; ಸಮರ: ಯುದ್ಧ; ಸೇನೆ: ಸೈನ್ಯ; ಸವೆದು: ಶಕ್ತಿಗುಂದು; ಅನಂತ: ಬಹಳ; ಬಳಿಕ: ನಂತರ; ನುಗ್ಗು: ಚೂರು, ನುಚ್ಚು, ಪುಡಿ; ಪರ್ವ: ಅಧ್ಯಾಯ; ಏನನೆಂಬೆನು: ಏನು ಹೇಳಲಿ: ಜೀಯ: ಒಡೆಯ; ಭಾನುತನಯ: ಸೂರ್ಯಪುತ್ರ (ಕರ್ಣ); ಭಾನು: ಸೂರ್ಯ; ತನಯ: ಪುತ್ರ; ಕದನ: ಯುದ್ಧ; ಒದಗು: ಲಭ್ಯ, ದೊರೆತುದು; ಸಂಖ್ಯ: ಎಣಿಕೆ; ಅತೀತ: ಎಲ್ಲೆಯನ್ನು ಮೀರಿದ; ನೃಪ: ರಾಜ;

ಪದವಿಂಗಡಣೆ:
ಆ +ನದೀ+ನಂದನನ +ಸಮರದಿ
ಸೇನೆ +ಸವೆದುದ್+ಅನಂತ +ಬಳಿಕಿನ
ಸೇನೆ+ ನುಗ್ಗಾದುದನು+ ಕಂಡೆನು+ ದ್ರೋಣ +ಪರ್ವದಲಿ
ಏನನೆಂಬೆನು +ಜೀಯ +ಮತ್ತೀ
ಭಾನುತನಯನ+ ಕದನಕ್+ಒದಗಿದ
ಸೇನೆ +ಸಂಖ್ಯಾತೀತವ್+ಎಂದನು +ಸಂಜಯನು +ನೃಪಗೆ

ಅಚ್ಚರಿ:
(೧) ನಂದನ, ಸುತ, ಸವೆ, ನುಗ್ಗು; ಸಮರ, ಕದನ – ಸಮನಾರ್ಥಕ ಪದ
(೨) ಸೇನೆ – ೨,೩ ೬ ಸಾಲಿನ ಮೊದಲ ಪದ