ಪದ್ಯ ೩೬: ಅಂಗದೇಶದವರ ಗುಣವೆಂತಹುದು?

ವೇದಕರ್ಮವಿರೋಧಿಗಳು ಪರಿ
ವಾದಶೀಲರು ವರ್ಣಜಾತಿವಿ
ಭೇದಹೀನರು ಸಾರಸಪ್ತವ್ಯಸನಸಂಗತರು
ಕಾದುವರು ಬೆನ್ನಿನಲಿ ಗೆಲುವರು
ಪಾದದಲಿ ಪರಬಲವನಿರಿವರು
ಬೀದಿಯಲ್ಲಿ ನಿನ್ನಂಗದೇಶದ ವಿಧಿಯ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕರ್ಣನು ಮದ್ರದೇಶದವರನ್ನು ಮೂದಲಿಸಿದ ಹಾಗೆ ಶಲ್ಯನು ಅಂಗದೇಶದವರನ್ನು ಮೂದಲಿಸಿದನು. ನಿನ್ನ ಅಂಗದೇಶದವರು ವೇದೋಕ್ತವಾದ ಕರ್ಮಕ್ಕೆ ವಿರೋಧಿಗಳು, ಯಾವಾಗಲೂ ಬೈದಾಡುವವರು, ಕಂಡವರ ಮೇಲೆ ಅಪವಾದ ಹೊರಿಸುವರು ಇದರಲ್ಲೇ ಅವರು ತೊಡಗಿರುತ್ತಾರೆ. ಅವರು ಬೆನ್ನು ತೋರಿಸಿ ಹೋರಾಡುತ್ತಾರೆ, ಓಡಿ ಹೋಗಿ ಗೆಲ್ಲುತ್ತಾರೆ, ಶತ್ರು ಸೈನಿಕರು ಎಲ್ಲೋ ನೋಡುತ್ತಾ ಬೀದಿಯಲ್ಲಿ ಹೋಗುವಾಗ ಹಿಂದಿನಿಂದ್ ಇರಿಯುತ್ತಾರೆ ಎಂದು ಅಂಗದೇಶದವರನ್ನು ಹೀಯಾಳಿಸಿದನು.

ಅರ್ಥ:
ವೇದ: ಜ್ಞಾನ; ಕರ್ಮ: ಕಾಯಕ; ವಿರೋಧಿ: ಶತ್ರು, ವೈರಿ; ಪರಿವಾದ: ನಿಂದೆ, ತೆಗೆಳಿಕೆ; ಶೀಲ: ನಡತೆ, ಸ್ವಭಾವ; ವರ್ಣ: ಬಣ, ಪಂಗಡ; ಜಾತಿ:ಕುಲ; ವಿಭೇದ:ವ್ಯತ್ಯಾಸ; ಹೀನ:ಕೆಟ್ಟದು; ಸಾರ: ಸತ್ವ; ವ್ಯಸನ: ದುರಭ್ಯಾಸ; ಸಪ್ತವ್ಯಸನ: ಏಳು ದುರಭ್ಯಾಸಗಳು (ಹೆಣ್ಣಿನ ವ್ಯಸನ, ದ್ಯೂತ, ಬೇಟೆ, ಮದ್ಯಪಾನ, ಕಠಿಣ ಮಾತು, ಊರ್ಗದಂಡ,ಅರ್ಥ ಸಂದೂಷಣ); ಸಂಗತ: ಜೊತೆ; ಕಾದು: ಜಗಳ; ಬೆನ್ನು: ಹಿಂಬದಿ; ಗೆಲುವು: ಜಯ; ಪಾದ: ಅಂಘ್ರಿ; ಪರಬಲ: ಬೇರೆಯವರ ಬಲ; ಇರಿ: ಚುಚ್ಚು; ಬೀದಿ: ರಸ್ತೆ; ವಿಧಿ: ನಿಯಮ; ಕೇಳು: ಆಲಿಸು;

ಪದವಿಂಗಡಣೆ:
ವೇದ+ಕರ್ಮ+ವಿರೋಧಿಗಳು +ಪರಿ
ವಾದಶೀಲರು +ವರ್ಣ+ಜಾತಿ+ವಿ
ಭೇದ+ಹೀನರು +ಸಾರ+ಸಪ್ತವ್ಯಸನ+ಸಂಗತರು
ಕಾದುವರು +ಬೆನ್ನಿನಲಿ +ಗೆಲುವರು
ಪಾದದಲಿ +ಪರಬಲವನ್+ಇರಿವರು
ಬೀದಿಯಲ್ಲಿ +ನಿನ್+ಅಂಗದೇಶದ+ ವಿಧಿಯ +ಕೇಳೆಂದ

ಅಚ್ಚರಿ:
(೧) ಓಡಿಹೋಗಿ ಗೆಲ್ಲುತ್ತಾರೆ ಎಂದು ಹೇಳಲು – ಗೆಲುವರು ಪಾದದಲಿ
(೨) ನೇರವಾಗಿ ಎದುರು ಹೋರಾಡುವುದಿಲ್ಲವೆಂದು ಹೇಳಲು – ಕಾದುವರು ಬೆನ್ನಿನಲಿ
(೩) ಕಾದುವರು, ಗೆಲುವರು, ಇರಿವರು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ