ಪದ್ಯ ೨೭: ಕರ್ಣನದು ಯಾವ ಪೌರುಷವೆಂದು ಶಲ್ಯ ಮೂದಲಿಸಿದನು?

ಜಲಧಿ ಗಹನವೆ ನಿನ್ನೊಡನೆ ಹೊ
ಕ್ಕಳವಿಗೊದಗುವೆನೆಂದು ವಾಯಸ
ಕಳಿನುಡಿದು ಹಾರಿತ್ತು ಹಂಸೆಯ ಕೂಡೆ ಗಗನದಲಿ
ಬಳಿಕ ತಲೆಕೆಳಗಾಗಿ ಸಾಗರ
ದೊಳಗೆ ಬಿದ್ದುದು ಹಂಸೆ ತಂದಿಳೆ
ಗಿಳುಹಿತಾ ಪರಿ ಕಾಕಪೌರುಷ ಕರ್ಣ ನೀನೆಂದ (ಕರ್ಣ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಒಂದು ಸೊಕ್ಕಿನ ಕಾಗೆ ಸಾಗರವನ್ನು ನಾನು ಹಾರಲಾಗದವನೇ ಎಂದು ಜಂಬಪಟ್ಟು ಹಂಸದೊಡನೆ ನಿನ್ನೊಡನೆ ಇದನ್ನು ನಾನು ಹಾರುತ್ತೇನೆ ಎಂದು ಪಂಥ ಕಟ್ಟಿ ಅದರೊಡನೆ ಆಕಾಶದಲ್ಲಿ ಹಾರಿತು, ಸ್ವಲ್ಪ ದೂರ ಹೋದ ಮೇಲೆ ಕಾಗೆಯು ಹಾರಲಾಗದೆ ತಲೆಕೆಳಗಾಗಿ ನೀರಿನಲ್ಲಿ ಬಿದ್ದಿತು. ಹಂಸವು ಆ ಕಾಗೆಯನ್ನು ಎತ್ತಿಕೊಂಡು ಭೂಮಿಗೆ ತಂದಿಳಿಸಿತು. ಕರ್ಣಾ, ನಿನ್ನದು ಹಾಗೆಯೇ ಕಾಗೆಯ ಪೌರುಷ ಎಂದು ಶಲ್ಯನು ಕರ್ಣನನ್ನು ಮೂದಲಿಸಿದನು.

ಅರ್ಥ:
ಜಲಧಿ: ಸಮುದ್ರ; ಗಹನ: ಸುಲಭವಲ್ಲದುದು; ಅಳವಿ:ಶಕ್ತಿ; ಒದಗು:ಲಭ್ಯ, ದೊರೆತುದು; ವಾಯಸ:ಕಾಗೆ; ಕಳಿ: ಸೊಕ್ಕು; ನುಡಿ: ವಚನ, ಮಾತು, ಹೇಳು; ಹಾರು: ಲಂಘಿಸು; ಹಂಸ:ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ಕೂಡೆ: ಜೊತೆ; ಗಗನ: ಆಕಾಶ; ಬಳಿಕ: ನಂತರ; ತಲೆಕೆಳಗೆ: ಉಲ್ಟ, ಬೀಳು; ಸಾಗರ: ಸಮುದ್ರ; ಇಳೆ: ಭೂಮಿ; ಪರಿ: ರೀತಿ; ಪೌರುಷ: ಪರಾಕ್ರಮ;

ಪದವಿಂಗಡಣೆ:
ಜಲಧಿ +ಗಹನವೆ +ನಿನ್ನೊಡನೆ +ಹೊಕ್ಕ್
ಅಳವಿಗ್+ಒದಗುವೆನೆಂದು +ವಾಯಸ
ಕಳಿ+ನುಡಿದು +ಹಾರಿತ್ತು +ಹಂಸೆಯ +ಕೂಡೆ +ಗಗನದಲಿ
ಬಳಿಕ+ ತಲೆಕೆಳಗಾಗಿ +ಸಾಗರ
ದೊಳಗೆ +ಬಿದ್ದುದು +ಹಂಸೆ +ತಂದ್+ಇಳೆ
ಗಿಳುಹಿತ್+ಆ +ಪರಿ +ಕಾಕ+ಪೌರುಷ +ಕರ್ಣ +ನೀನೆಂದ

ಅಚ್ಚರಿ:
(೧) ವಾಯಸ, ಕಾಕ; ಜಲಧಿ, ಸಾಗರ – ಸಮನಾರ್ಥಕ ಪದಗಳು
(೨) ಕಥೆಯ ಮೂಲಕ ಕರ್ಣನ ಪೌರುಷವನ್ನು ಕಾಗೆಗೆ ಹೋಲಿಸುವ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ