ಪದ್ಯ ೧೨: ಅಶ್ವತ್ಥಾಮಾದಿಗಳು ಏನು ಹೇಳುತ್ತಾ ಮುಂದುವರೆದರು?

ಪೂತು ಮಝ ಧಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು (ಕರ್ಣ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಓಹೋ ಭಲೆ ಭಲೆ ಸೇನಾಪತಿಯು ಕೋಪ ಗೊಂಡಿರುವನಲ್ಲಾ, ನಮ್ಮ ಬಾಹುಬಲವು ಇದ್ದೇನು ಪ್ರಯೋಜನ? ಸಾತ್ಯಕಿಯನ್ನು ನಾವು ಸರಿಗಟ್ಟಬಲ್ಲವರೇ? ನಾವು ಶಿವನನ್ನು ಎದುರಿಸಬಲ್ಲ ಶಕ್ತಿಯುಳ್ಳ ಉತ್ತಮಕುಲದಲ್ಲಿ ಹುಟ್ಟಿರುವ ಶ್ರೇಷ್ಠರಲ್ಲವೇ ಎಂದು ಹೇಳುತ್ತಾ ಅಶ್ವತ್ಥಾಮಾದಿಗಳು ರಣರಂಗದಲ್ಲಿ ಮುಂದುವರೆದರು.

ಅರ್ಥ:
ಪೂತು: ಭಲೇ; ಮಝ:ಕೊಂಡಾಟದ ಒಂದು ಮಾತು; ದಳಪತಿ: ಸೇನಾಧಿಪತಿ; ಚಿತ್ತ: ಮನಸ್ಸು; ಖಾತಿ: ಕೋಪ, ಕ್ರೋಧ; ಕೊಬ್ಬು: ಸೊಕ್ಕು, ಅಹಂಕಾರ; ಭುಜಬಲ: ಶಕ್ತಿ, ಬಾಹುಬಲ; ಬಳಿಕ: ನಂತರ; ಸರಸ:ಚೆಲ್ಲಾಟ, ವಿನೋದ; ಭೂತನಾಥ: ಶಿವ; ಕಡು:ವಿಶೇಷ, ಅಧಿಕ; ತಡೆ: ನಿಲ್ಲಿಸು; ಅಭಿಜಾತ: ಶ್ರೇಷ್ಠವಾದ, ಉತ್ತಮಕುಲದಲ್ಲಿ ಹುಟ್ಟಿದವನು; ನಿಜ: ದಿಟ; ಸೂತ: ಸಾರಥಿ; ಬೋಳೈಸು: ಸಂತೈಸು, ಸಮಾಧಾನ ಮಾಡು; ನೂಕು: ತಳ್ಳು; ಗುರು: ಆಚಾರ್ಯ; ಸುತ: ಮಗ; ಗುರುಸುತ: ಅಶ್ವತ್ಥಾಮ; ಆದಿ: ಮುಂತಾದ;

ಪದವಿಂಗಡಣೆ:
ಪೂತು +ಮಝ +ಧಳಪತಿಯ +ಚಿತ್ತದ
ಖಾತಿ +ಕೊಬ್ಬಿತು +ನಮ್ಮ +ಭುಜಬಲವ್
ಏತಕಿದು +ಬಳಿಕೇನು +ಸಾತ್ಯಕಿ +ಸರಸವೇ +ತಮಗೆ
ಭೂತನಾಥನ+ ಕಡುಹ +ತಡೆವ್+ಅಭಿ
ಜಾತರಲ್ಲಾ +ತಾವೆನುತ +ನಿಜ
ಸೂತರನು +ಬೋಳೈಸಿ +ನೂಕಿತು +ಗುರುಸುತಾದಿಗಳು

ಅಚ್ಚರಿ:
(೧) ಶಿವನನ್ನು ಭೂತನಾಥ, ಅಶ್ವತ್ಥಾಮನನ್ನು ಗುರುಸುತ ಎಂದು ಕರೆದಿರುವುದು
(೨) ಕೊಂಡಾಟದ ಮಾತುಗಳ ಪ್ರಯೋಗ – ಪೂತು, ಮಝ

ಪದ್ಯ ೧೧: ಕರ್ಣನು ಯಾರನ್ನು ಜರೆದನು?

ಮುರಿದುದಿದು ನಮ್ಮವರು ಸಾತ್ಯಕಿ
ಯುರುಬೆಗಾನುವರಿಲ್ಲ ದೊರೆ ಕೈ
ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ
ಜರೆದು ಮೂದಲಿಸಿದನು ಮಾದ್ರೇ
ಶ್ವರನ ದುಶ್ಯಾಸನನ ಸೌಬಲ
ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ (ಕರ್ಣ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸಾತ್ಯಕಿಯ ಆರ್ಭಟವನ್ನು ತಡೆಯುವವರು ಯಾರು ಇಲ್ಲವಾದರು, ಕೌರವರ ಸೈನ್ಯವು ದೊರೆಯು ಯುದ್ಧವನ್ನು ಮರೆತನೇ ಎಂದು ಕತ್ತಲಲ್ಲಿ ಮುಳುಗಿ ಕಳವಳಿಸ ತೊಡಗಿತು, ಸೇನಾಧಿಪತಿಯಾದ ಕರ್ಣನು ಇದನ್ನು ನೋಡಿ ತನ್ನ ಪರಿವಾರದವರಾದ ಶಲ್ಯ, ದುಶ್ಯಾಸನ, ಶಕುನಿ, ಅಶ್ವತ್ಥಾಮ, ಕೃತವರ್ಮರನ್ನು ಕರ್ಣನು ಜರೆದು ಮೂದಲಿಸಿದನು.

ಅರ್ಥ:
ಮುರಿ: ಸೀಳು; ಉರುಬೆ: ಅಬ್ಬರ; ಆನು: ಎದುರಿಸು; ದೊರೆ: ರಾಜ; ಕೈ: ಹಸ್ತ; ಮರೆ: ಜ್ಞಾಪಕದಿಂದ ದೂರಮಾಡು; ಕಾಳ: ಕತ್ತಲೆ, ಕಪ್ಪು; ಸೇನೆ: ಸೈನ್ಯ; ಕಳವಳ: ತಳಮಳ, ಭ್ರಾಂತಿ; ಜರೆ: ತೆಗಳು, ಬಯ್ಯುವಿಕೆ; ಮೂದಲಿಸು: ಹಂಗಿಸು; ಮಾದ್ರೇಶ್ವರ: ಶಲ್ಯ; ಗುರುಜ: ಗುರುವಿನ ಮಗ (ಅಶ್ವತ್ಥಾಮ); ಪರಿವಾರ: ಸಂಬಂಧಿಕರು; ಕಲಿ: ಶೂರ; ಆದಿ: ಮುಂತಾದ;

ಪದವಿಂಗಡಣೆ:
ಮುರಿದುದ್+ಇದು +ನಮ್ಮವರು +ಸಾತ್ಯಕಿ
ಯುರುಬೆಗ್+ಆನುವರಿಲ್ಲ+ ದೊರೆ+ ಕೈ
ಮರೆದನೋ +ಕಾಳಾಯ್ತೆನುತ +ಕುರುಸೇನೆ +ಕಳವಳಿಸೆ
ಜರೆದು +ಮೂದಲಿಸಿದನು +ಮಾದ್ರೇ
ಶ್ವರನ +ದುಶ್ಯಾಸನನ+ ಸೌಬಲ
ಗುರುಜ +ಕೃತವರ್ಮಾದಿ +ಪರಿವಾರವನು +ಕಲಿಕರ್ಣ

ಅಚ್ಚರಿ:
(೧) ಪರಿವಾರದವರು – ಮಾದ್ರೇಶ್ವರ (ಶಲ್ಯ), ದುಶ್ಯಾಸನ, ಸೌಬಲ, ಗುರುಜ(ಅಶ್ವತ್ಥಾಮ), ಕೃತವರ್ಮ;
(೨) ಕ ಕಾರದ ತ್ರಿವಳಿ ಪದ – ಕಾಳಾಯ್ತೆನುತ ಕುರುಸೇನೆ ಕಳವಳಿಸೆ

ಪದ್ಯ ೧೦: ಸಾತ್ಯಕಿಯ ಹೊಡೆತಕ್ಕೆ ಯಾರು ಪ್ರಾಣಗಳನ್ನು ಕಳೆದುಕೊಂಡರು?

ಏನನೆಂಬೆನು ಮೊದಲ ಲಗ್ಗೆಯ
ಲಾ ನಿಶಿತಶರ ದೈತ್ಯಭಟ ವಿಂ
ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
ಚೀನ ಭೋಟ ಕರೂಷ ಖರ್ಪರ
ಸೂನು ಜೋನೆಗ ತುರಕ ಬರ್ಬರ
ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ (ಕರ್ಣ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಏನು ಹೇಳಲಿ ಮೊದಲು ಸಾತ್ಯಕಿಯ ಪರಾಕ್ರಮದ ಹೊಡೆತಕ್ಕೆ ವಿಂದಾನುವಿಂದರ ಪ್ರಾಣಗಳು ಯಮಪುರಕ್ಕೆ ಹೋದವು. ಚೀನ, ಭೋಟ, ಕರೂಷ, ಖರ್ಪರ, ಯವನ, ತುರುಕ, ಬರ್ಬರ ದೇಶಗಳ ಸೈನ್ಯಗಳು ಸಾತ್ಯಕಿಯ ಮೇಲೆ ಬಿದ್ದು ಪ್ರಾಣವನ್ನು ಕಳೆದುಕೊಂಡರು.

ಅರ್ಥ:
ಎಂಬೆ: ಹೇಳಲಿ; ಮೊದಲು: ಆದಿ, ಮುಂಚೆ; ಲಗ್ಗೆ: ಆಕ್ರಮಣ; ನಿಶಿತ: ಹರಿತವಾದುದು, ಚೂಪಾಗಿರುವುದು; ಶರ: ಬಾಣ; ದೈತ್ಯ: ದಾನವ; ಭಟ: ಸೈನಿಕ, ಶೂರ; ಜೀವ: ಪ್ರಾಣ; ಧುಮ್ಮಿಕ್ಕು: ಹಾರು; ಜವ: ಯಮ; ಪುರಿ: ಊರು; ಸೇನೆ: ಸೈನ್ಯ; ತಾಗು: ಹೊಡೆತ, ಪೆಟ್ಟು; ಆಗಳೆ: ತಕ್ಷಣ; ನೀಗು: ಬಿಡು, ತೊರೆ, ತ್ಯಜಿಸು; ತಲೆ: ಶಿರ;

ಪದವಿಂಗಡಣೆ:
ಏನನ್+ಎಂಬೆನು +ಮೊದಲ +ಲಗ್ಗೆಯಲ್
ಆ+ ನಿಶಿತ+ಶರ +ದೈತ್ಯ+ಭಟ +ವಿಂ
ದಾನುವಿಂದರ+ ಜೀವ+ ಧುಮ್ಮಿಕ್ಕಿದುದು +ಜವಪುರಿಗೆ
ಚೀನ +ಭೋಟ +ಕರೂಷ +ಖರ್ಪರ
ಸೂನು +ಜೋನೆಗ +ತುರಕ +ಬರ್ಬರ
ಸೇನೆ +ತಾಗಿತು +ತಾಗಿದಾಗಳೆ +ನೀಗಿದುದು +ತಲೆಯ

ಅಚ್ಚರಿ:
(೧) ವಿಂದಾನುವಿಂದರು ಸತ್ತರು ಎಂದು ಹೇಳಲು – ವಿಂದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
(೨) ಸೇನೆಯರ ಪ್ರಾಣ ಹೋಯಿತು ಎಂದು ಹೇಳಲು – ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ