ಪದ್ಯ ೧೦: ಕ್ಷೇಮದೂರ್ತಿಯು ಪಲಾಯನ ಮಾಡಿದ ಸೈನ್ಯವನ್ನು ನೋಡಿ ಏನೆಂದನು?

ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರ ಗಜಸಹಿತ (ಕರ್ಣ ಪರ್ವ, ೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಲಾಯನ ಮಾಡುತ್ತಿದ್ದ ಕುರುಬಲವನ್ನು ನೋಡಿ ಕ್ಷೇಮಧೂರ್ತಿಯು (ಸಾಲ್ವರಾಜನ ಸೇನಾಧಿಪತಿ) ಇವರು ಸ್ವಾಮಿದ್ರೋಹಿಗಳು, ಎಲ್ಲಿಗೆ ಹೋಗಿ ತಮ್ಮ ಕುಲದ ಕೀರ್ತಿಯ ಬೇರುಗಳನ್ನು ಮುರಿದರೋ ಏನೋ ಇವರು ಕೌರವಸೇನೆಯ ಪಟ್ಟದಾನೆಗಳಂತೆ! ಪಾಂಡವರ ಸೈನ್ಯವು ಕೊಡದಲ್ಲಿಟ್ಟ ಕರಿನಾಗರಹಾವಿನಂತೆ ಇವರು. ಇದನ್ನು ಇದಿರಿಸಬಹುದೇ? ಎಂದು ಸಹಸ್ರ ಆನೆಗಳ ಸೈನ್ಯದೊಡನೆ ಪಾಂಡವ ಸೇನೆಯನ್ನು ತರುಬಿ ನಿಂತನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸ್ವಾಮಿ: ದೊರೆ; ದ್ರೋಹ: ಮೋಸ; ಸಿಡಿ: ಹೊರಹೊಮ್ಮು; ನಿಜ: ದಿಟ; ಕುಲ: ವಂಶ; ಬೇರು: ಮೂಲ, ಬುಡ; ಕಡಿ: ಕಿತ್ತುಹಾಕು, ಸೀಳು; ಬಲ: ಸೈನ್ಯ; ಕಾಹಿ: ರಕ್ಷಿಸುವ, ಕಾಯುವ; ಪಟ್ಟ:ಅಧಿಕಾರ ಸೂಚಕವಾದ ಚಿನ್ನದ ಪಟ್ಟಿ; ಆನೆ: ಕರಿ, ಗಜ; ಕೊಡ: ಕುಂಭ; ಫಣಿ: ಹಾವು; ಬಲ: ಸೈನ್ಯ; ತುಡುಕು: ಹೋರಾಡು, ಸೆಣಸು; ಸೇನೆ: ಸೈನ್ಯ; ತಡೆ: ಅಡ್ಡಹಾಕು; ನಿಂದು: ನಿಲ್ಲು; ಸಹಸ್ರ: ಸಾವಿರ; ಗಜ: ಆನೆ; ಸಹಿತ: ಜೊತೆ;

ಪದವಿಂಗಡಣೆ:
ಫಡಫಡ್+ಎತ್ತಲು +ಸ್ವಾಮಿ+ದ್ರೋಹರು
ಸಿಡಿದರೋ +ನಿಜಕುಲದ+ ಬೇರ್ಗಳ
ಕಡಿದರೋ +ಕುರುಬಲದ +ಕಾಹಿನ +ಪಟ್ಟದಾನೆಗಳು
ಕೊಡನ +ಫಣಿಯಿದು +ಪಾಂಡವರ +ಬಲ
ತುಡುಕಬಹುದೇ +ಎನುತ +ಸೇನೆಯ
ತಡೆದು +ನಿಂದನು +ಕ್ಷೇಮಧೂರ್ತಿ +ಸಹಸ್ರ +ಗಜ+ಸಹಿತ

ಅಚ್ಚರಿ:
(೧) ಫಡಫಡ – ಪದದ ರಚನೆ
(೨) ಕೊಡನ ಫಣಿಯಿದು – ಪದ ರಚನೆ
(೩) ಓಡುವ ಸೈನ್ಯವನ್ನು ವಿವರಿಸುವ ಬಗೆ – ಸ್ವಾಮಿದ್ರೋಹರು, ನಿಜಕುಲದ ಬೇರ್ಗಳ
ಕಡಿದರೋ, ಕುರುಬಲದ ಕಾಹಿನ ಪಟ್ಟದಾನೆಗಳು, ಕೊಡನ ಫಣಿಯಿದು

ಪದ್ಯ ೯: ಸೋಲು ಕೌರವರಿಗೆ ಹೇಗೆ ಬಂತು?

ನೂಕಿತೊಂದೇ ವಾಘೆಯಲಿ ರಥ
ನಾಕು ಸಾವಿರ ಬಲುಗುದುರೆ ಹದಿ
ನಾಕು ಸಾವಿರ ನೂರು ಕರಿಘಟೆ ಲಕ್ಕ ಪಾಯದಳ
ಜೋಕೆ ಜವಗೆಡೆ ಮುರಿವಡೆದು ಬಲ
ದಾಕೆವಾಳರು ಸರಿಯೆ ಸೋಲದ
ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ (ಕರ್ಣ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ಒಂದೇ ಸಮಯದಲ್ಲಿ ನಾಲ್ಕು ಸಾವಿರ ರಥಗಳು, ಹದಿನಾಲ್ಕು ಸಾವಿರ ಕುದುರೆಗಳು, ನೂರು ಆನೆಗಳು ಲಕ್ಷ ಕಾಲಾಳುಗಳು ನುಗ್ಗಿ ಕೌರವರ ಮೇಲೆ ಬೀಳಲು, ಕೌರವರ ಲೆಕ್ಕ ತಪ್ಪಿ ವೀರರು ಹಿಮ್ಮೆಟ್ಟಿದರು, ಕೌರವರ ಸೈನದಲ್ಲಿ ಸೋಲು ನೂಕಿ ನೂಕಿ ಬಂತು.

ಅರ್ಥ:
ನೂಕು: ತಳ್ಳು; ವಾಘೆ: ಲಗಾಮು; ರಥ: ಬಂಡಿ, ತೇರು; ನಾಕು: ನಾಲ್ಕು; ಸಾವಿರ: ಸಹಸ್ರ; ಬಲು: ಶಕ್ತಿ; ಕುದುರೆ: ಅಶ್ವ; ನೂರು: ಶತ; ಕರಿ: ಆನೆ; ಘಟೆ: ಆನೆಗಳ ಗುಂಪು; ಲಕ್ಕ: ಲಕ್ಷ; ಪಾಯದಳ: ಕಾಲಾಳು, ಸೈನ್ಯ; ದಳ: ಸೇನೆ; ಪಾಯ: ಪಾದ; ಜೋಕೆ: ಹುಷಾರು; ಜವ: ಯಮ; ಎಡೆ:ಸುಲಿ, ತೆಗೆ, ಬಿಚ್ಚಿ; ಮುರಿ: ಸೀಳು; ಬಲ: ಶಕ್ತಿ; ಆಕೆವಾಳ: ವೀರ, ಪರಾಕ್ರಮಿ; ಸರಿ: ಪಕ್ಕಕ್ಕೆ ಹೋಗು; ಸೋಲು: ಅಪಜಯ; ನೂಕು: ತಳ್ಳು; ರಾಯ: ರಾಜ; ಸೇನೆ: ಸೈನ್ಯ;

ಪದವಿಂಗಡಣೆ:
ನೂಕಿತ್+ಒಂದೇ+ ವಾಘೆಯಲಿ +ರಥ
ನಾಕು +ಸಾವಿರ +ಬಲು+ಕುದುರೆ +ಹದಿ
ನಾಕು ಸಾವಿರ+ ನೂರು +ಕರಿಘಟೆ +ಲಕ್ಕ +ಪಾಯದಳ
ಜೋಕೆ +ಜವಗೆಡೆ+ ಮುರಿವಡೆದು +ಬಲದ್
ಆಕೆವಾಳರು +ಸರಿಯೆ +ಸೋಲದ
ನೂಕು +ನೂಕಾಯಿತ್ತು +ಕೌರವರಾಯ +ಸೇನೆಯಲಿ

ಅಚ್ಚರಿ:
(೧) ನಾಕು ಸಾವಿರ – ೨, ೩ ಸಾಲಿನ ಮೊದಲೆರಡು ಪದ
(೨) ಸೋಲು ಬಂದ ರೀತಿ – ಬಲದಾಕೆವಾಳರು ಸರಿಯೆ ಸೋಲದ ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ

ಪದ್ಯ ೮: ಏನು ಹೇಳುತ್ತ ಪಾಂಡವರು ಯುದ್ಧಕ್ಕೆ ಬಂದರು?

ಸೂತಸುತ ದಳಪತಿಯೆ ಫಡ ಮು
ಯ್ಯಾಂತರೇ ಮುಂಬಿಗರು ಬಿರುದಿನ
ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ
ಸೋತ ಸಮರದ ಕೇಣಿಕಾರರು
ಕೂತರೋ ಜಯಸಿರಿಗೆ ಹೊಯ್ ಹೊ
ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು (ಕರ್ಣ ಪರ್ವ, ೨ ಸಂಧಿ, ೮ ಪದ್ಯ)

ತಾತ್ಪರ್ಯ:
ಸೂತಪುತ್ರನು ಸೇನಾಧಿಪತಿಯೋ? ಛೆ ಮುಂದೆನಿಲ್ಲುವವರು ಮುಯ್ಯಿ ಕೊಡಲು ಬಂದರೇ? ಬಿರುದಾಂತವರೆಂಬ ದರಿದ್ರಉ ಕೂಗುತ್ತಿರುವರೇ? ಇವರು ನೋಡಿ ನೋಡಿಯೂ ಕುರುಡರು ಸೋಲನ್ನು ಕೇಣಿ ಹಿಡಿದು ಜಯಲಕ್ಷ್ಮಿಯನ್ನು ಬಯಸಿಕೂತರೇ? ಇವರನ್ನು ಹೊಯ್ಯಿರಿ ಎಂದು ಪಾಂಡವ ಮಹಾರಥರು ಯುದ್ಧಕ್ಕೆ ಬಂದರು.

ಅರ್ಥ:
ಸೂತ: ರಥವನ್ನು ನಡೆಸುವವನು; ಸುತ: ಮಗ; ಸೂತಸುತ: ಕರ್ಣ; ದಳಪತಿ: ಸೇನಾಧಿಪತಿ; ಫಡ: ಛೀ, ಮೂದಲಿಸುವ ಶಬ್ದ; ಮುಯ್ದು: ಭುಜ; ಮುಯ್: ಸೇಡು, ಪ್ರತೀಕಾರ; ಅಂತರ: ದೂರ; ಮುಂಬಿಗರು: ಮುಂಚೂಣಿ; ಬಿರುದು: ಗೌರವ ಸೂಚಕ ಹೆಸರು; ಬೂತ: ಭಂಡತನ; ಬೊಬ್ಬಾಟ: ಕೂಗುತ್ತಿರುವವರ ಆಟ; ಬಿಡು: ತ್ಯಜಿಸು; ಕಂಡು: ನೋಡಿ; ಕಾಣರು: ಗೋಚರಿಸರು; ಸೋತು: ಪರಾಜಯ; ಸಮರ: ಯುದ್ಧ; ಕೇಣಿ:ಏಣಿ, ಮೈತ್ರಿ; ಸಾಲು; ಕೂತು: ಆಸೀನರಾಗು; ಜಯ: ಗೆಲುವು; ಸಿರಿ: ಐಶ್ವರ್ಯ; ಹೊಯ್ದು: ಹೊಡೆದು; ಏರು: ನಿಲ್ಲು; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಸೂತಸುತ+ ದಳಪತಿಯೆ +ಫಡ +ಮು
ಯ್ಯಾಂತರೇ +ಮುಂಬಿಗರು +ಬಿರುದಿನ
ಬೂತುಗಳ +ಬೊಬ್ಬಾಟ +ಬಿಡದೇ+ ಕಂಡು+ ಕಾಣರಲ
ಸೋತ +ಸಮರದ+ ಕೇಣಿಕಾರರು
ಕೂತರೋ +ಜಯಸಿರಿಗೆ+ ಹೊಯ್ +ಹೊಯ್
ಈತಗಳನ್+ಎನುತ್+ಏರಿದರು +ಪಾಂಡವ +ಮಹಾರಥರು

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿರುದಿನ ಬೂತುಗಳ ಬೊಬ್ಬಾಟ ಬಿಡದೇ
(೨) ಹೊಯ್ ಹೊಯ್ – ಪದ ರಚನೆ

ಪದ್ಯ ೭:ಯಾವ ಮಹಾರಥರು ಪಾಂಡವರ ಮೇಲೆ ದಾಳಿ ಮಾಡಿದರು?

ಮುರಿಯದಹಿತರ ಥಟ್ಟು ನಮ್ಮದು
ತೆರಹುಗೊಡದೌಂಕಿತ್ತು ದೊರೆಗಳು
ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ
ಉರುಬಿದರು ವೃಷಸೇನ ಸೌಬಲ
ಗುರುಜ ಕೃಪ ಕೃತವರ್ಮ ದುರ್ಮುಖ
ವರ ವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು (ಕರ್ಣ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ವೈರಿಗಳಾದ ಪಾಂಡವರ ಸೈನ್ಯ ಭದ್ರವಾಗಿ ನಿಂತಿತ್ತು. ನಮ್ಮವರು ಸ್ವಲ್ಪವೂ ಅವಕಾಶ ಕೊಡದೆ ದಾಳಿ ಮಾಡುತ್ತಾ ಬಂದರು. ವೃಷಸೇನ, ಶಕುನಿ, ಅಶ್ವತ್ಥಾಮ, ಕೃಪಾಚಾರ್ಯ, ಕೃತವರ್ಮ, ದುರ್ಮುಖ, ವಿಕರ್ಣ, ಕ್ಷೇಮಧೂರ್ತಿ, ಬೃಹದ್ರಥರು ಪಾಂಡವರ ಮೇಲೆ ನುಗ್ಗಿದರು.

ಅರ್ಥ:
ಮುರಿ: ಸೀಳು; ಅಹಿತರು: ವೈರಿಗಳು; ಥಟ್ಟು:ಗುಂಪು, ಸೈನ್ಯ; ತೆರಹು: ಬಿಚ್ಚು, ತೆರೆ, ಎಡೆ; ಔಕು: ಒತ್ತು,ಹಿಸುಕು; ದೊರೆ: ರಾಜ; ಹೊರಗೆ: ಆಚೆ; ಲಗ್ಗೆ: ಆಕ್ರಮಣ; ತೋರು: ಗೋಚರಿಸು, ಕಾಣಿಸು; ಪಡಿ:ಸಮಾನವಾದುದು, ಸಾಟಿಯಾದ; ಬಲ: ಸೈನ್ಯ; ಉರುಬು: ಅತಿಶಯವಾದ ವೇಗ; ಆದಿ: ಮುಂತಾದವರು; ವರ: ಶ್ರೇಷ್ಠ;

ಪದವಿಂಗಡಣೆ:
ಮುರಿಯದ್+ಅಹಿತರ +ಥಟ್ಟು +ನಮ್ಮದು
ತೆರಹುಗೊಡದ್+ಔಂಕಿತ್ತು +ದೊರೆಗಳು
ಹೊರಗೆ+ ಲಗ್ಗೆಯ +ಮಾಡಿ +ತೋರಿದರ್+ಒಡನೆ +ಪಡಿಬಲವ
ಉರುಬಿದರು +ವೃಷಸೇನ +ಸೌಬಲ
ಗುರುಜ+ ಕೃಪ +ಕೃತವರ್ಮ +ದುರ್ಮುಖ
ವರ +ವಿಕರ್ಣ +ಕ್ಷೇಮಧೂರ್ತಿ +ಬೃಹದ್ರಥಾದಿಗಳು

ಅಚ್ಚರಿ:
(೧) ಪಾಂಡವರನ್ನು ಅಹಿತರು ಎಂದು ಕರೆದಿರುವುದು
(೨) ಅಶ್ವತ್ಥಾಮನನ್ನು ಗುರುಜ ಎಂದು ಬಣ್ಣಿಸಿರುವುದು
(೩) ಪಡಿಬಲ, ಸೌಬಲ – ಪದಗಳ ರಚನೆ (ಪ್ರಾಸ ಪದ)