ಪದ್ಯ ೬: ಯಾವ ಸೈನಿಕರು ಹೇಗೆ ಶತ್ರು ಸೈನ್ಯದ ಮೇಲೆ ಆಕ್ರಮಣ ಮಾಡಿದರು?

ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ (ಕರ್ಣ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ರಥಗಳು ವೇಗದಿಂದ ಚಲಿಸಿದವು, ಶೂರರಾವುತರು ಹಗ್ಗಹಿಡಿದು ಕುದುರೆಗಳನ್ನೇರಿದರು, ಕಪ್ಪು ಮೋಡದ ಸೈನ್ಯವೆನ್ನುವಂತೆ ಆನೆಗಳು ಮುನ್ನುಗ್ಗಿದವು, ಅವರ ಗರ್ಜನೆಗೆ ನೆಲ ಬಿರಿಯಲು ಪೌರಕರು ಸಬಳವನ್ನು ಹಿಡಿದವರು ಬಿಲ್ಲುಗಾರರು ನುಗ್ಗಿ ಶತ್ರುಬಲವನ್ನು ಕೆಣಕಿದರು.

ಅರ್ಥ:
ತೇರು: ರಥ, ಬಂಡಿ; ಬಿಟ್ಟವು: ಹೊರಟವು; ಸೂಠಿ: ವೇಗ, ಚುರುಕುತನ; ಜಜ್ಝಾರ: ಶೂರ, ಧೀರ; ರಾವುತ: ಕುದುರೆ ಸವಾರ; ವಾಘೆ: ಲಗಾಮು; ಸರಿಸು: ಜರುಗಿಸು; ಏರು: ಹತ್ತು; ಕಾರ್ಮುಗಿಲು: ಕಪ್ಪು ಮೋಡಗಳು; ಬಲ: ಶಕ್ತಿ; ಕವಿದು: ಮುಸುಕು; ಆನೆ: ಗಜ; ಆರು: ಒಣಗು; ನೆಲ: ಭೂಮಿ; ಬಿರಿ: ಬಿರುಕು, ಸೀಳು; ಬೆರಸು: ಕೂಡಿಸು, ಮಿಶ್ರಮಾಡು ; ಪೌರ: ಪಟ್ಟಣಿಗ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಬಿಲ್ಲು: ಚಾಪ; ಭೂರಿ: ಹೆಚ್ಚು, ಅಧಿಕ;ಭಟರು: ಸೈನಿಕರು; ಇರಿ: ತಿವಿ; ಕೆಣಕು: ಪ್ರಚೋದಿಸು; ಕೆದರು: ಚದರಿಸು; ರಿಪು: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ತೇರು+ ಬಿಟ್ಟವು +ಸೂಠಿಯಲಿ +ಜ
ಜ್ಝಾರ +ರಾವ್ತರು +ವಾಘೆ +ಸರಿಸದಲ್
ಏರಿದರು +ಕಾರ್ಮುಗಿಲ +ಬಲವೆನೆ +ಕವಿದವ್+ಆನೆಗಳು
ಆರಿದರೆ+ ನೆಲ +ಬಿರಿಯೆ +ಬೆರಸಿತು
ಪೌರಕರು+ ಸಬಳಿಗರು +ಬಿಲ್ಲಿನ
ಭೂರಿ +ಭಟರಳ್ಳಿರಿದು +ಕೆಣಕಿತು+ ಕೆದರಿ +ರಿಪುಬಲವ

ಅಚ್ಚರಿ:
(೧) ಜಜ್ಝಾರ – ಶೂರನೆಂದು ಹೇಳಲು ಬಳಸಿದ ಪದ
(೨) ಉಪಮಾನದ ಪ್ರಯೋಗ – ಕಾರ್ಮುಗಿಲ ಬಲವೆನೆ ಕವಿದವಾನೆಗಳು

ಪದ್ಯ ೫: ಕೌರವ ಸೈನಿಕರು ಏನೆಂದು ಘರ್ಜಿಸಿದರು?

ಇಂದು ಬರಹೇಳರ್ಜುನನ ರಣ
ವಿಂದಲೇ ಭೀಮಂಗೆ ಮನದಲಿ
ಕಂದುಕಸರಿಕೆ ಬೇಡ ಕಾದಲಿ ಧರ್ಮನಂದನನು
ಹಿಂದೆ ನಂಬಿಸಿ ಭೀಷ್ಮ ಗುರುವನು
ಕೊಂದ ಗೆಲುವಿನಲುಬ್ಬ ಬೇಡೆಮ
ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರುದು (ಕರ್ಣ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಕೌರವ ವೀರರು ಆರ್ಭಟಿಸುತ್ತಾ, ಇಂದು ಅರ್ಜುನನು ಬರಲಿ, ಭೀಮನಿಗೆ ಇಂದೇ ನಿಜವಾದ ಯುದ್ಧ, ಮನಸ್ಸಿನಲ್ಲಿ ಕಸಿವಿಸಿ ಬೇಡ, ಯುಧಿಷ್ಠಿರನು ಯುದ್ಧ ಮಾಡಲಿ, ಹಿಂದೆ ಭೀಷ್ಮನನ್ನು ದ್ರೋಣನನ್ನು ಕೊಂದ ಗೆಲುವಿನಿಂದ ಬೀಗುವುದು ಬೇಡ. ಇಂದು ಕರ್ಣನು ಸೇನಾಧಿಪತಿ ಎಂದು ಕೂಗಿದರು.

ಅರ್ಥ:
ಇಂದು: ಇವತ್ತು; ಬರಹೇಳು: ಕರೆ, ಆಗಮಿಸು; ರಣ: ಯುದ್ಧ; ಮನ: ಮನಸ್ಸು; ಕಂದು: ಕಳಾಹೀನ; ಕಂದುಕಸರಿಕೆ: ಮನಸ್ಸಿನಲ್ಲಿ ಕಸಿವಿಸಿ; ಬೇಡ: ಅವಶ್ಯಕತೆ ಇಲ್ಲದ; ಕಾದಲಿ: ಯುದ್ಧಮಾಡಲಿ; ನಂದನ: ಮಗ; ಹಿಂದೆ: ಪೂರ್ವ; ನಂಬು: ವಿಶ್ವಾಸವಿಡು; ಗುರು: ಆಚಾರ್ಯ; ಕೊಂದು: ಸಾಯಿಸು; ಗೆಲುವು: ಜಯ; ಉಬ್ಬು: ಹಿಗ್ಗು; ದಳವಾಯಿ: ಸೇನಾಧಿಪತಿ; ಭಟರು: ಸೈನಿಕರು; ಬೊಬ್ಬೆ: ಆರ್ಭಟ;

ಪದವಿಂಗಡಣೆ:
ಇಂದು +ಬರಹೇಳ್+ಅರ್ಜುನನ +ರಣವ್
ಇಂದಲೇ +ಭೀಮಂಗೆ +ಮನದಲಿ
ಕಂದುಕಸರಿಕೆ +ಬೇಡ +ಕಾದಲಿ +ಧರ್ಮನಂದನನು
ಹಿಂದೆ+ ನಂಬಿಸಿ+ ಭೀಷ್ಮ +ಗುರುವನು
ಕೊಂದ +ಗೆಲುವಿನಲ್+ಉಬ್ಬ+ ಬೇಡ್+ಎಮ
ಗಿಂದು +ದಳವಾಯ್+ ಕರ್ಣನೆಂದುದು +ಭಟರು +ಬೊಬ್ಬಿರುದು

ಅಚ್ಚರಿ:
(೧) ಇಂದು – ೧, ೬ ಸಾಲಿನ ಮೊದಲ ಪದ್ಯ
(೨) ಕುಂದುಕಸರಿಕೆ ಬೇಡ, ಗೆಲುವಿನಲುಬ್ಬ ಬೇಡ – ಪದಗಳ ರಚನೆ