ಪದ್ಯ ೧: ಸೂರ್ಯೊದಯವನ್ನು ಹೇಗೆ ವಿವರಿಸಬಹುದು?

ಮಗನು ದಳಪತಿಯಾದ ಗಡ ಕಾ
ಳಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯ ಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ (ಕರ್ಣ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಸೂರ್ಯನು ಉದಯವನ್ನು ಬಹು ಸೊಗಸಾಗಿ ವಿವರಿಸುವ ಪದ್ಯ. ತನ್ನ ಮಗನಾದ ಕರ್ಣನು ಸೇನಾಧಿಪತಿಯಾಗಿದ್ದಾನೆ ಅವನು ಯುದ್ಧ ಮಾಡುವ ರೀತಿಯನ್ನು ನೋಡಬೇಕೆನ್ನುವಂತೆ ಸೂರ್ಯೋದಯದ ಸಮಯವಾಯಿತು. ಕತ್ತಲಿನ ಕಾಡು ಕಡಿದು ಹೋಯಿತು, ಕನ್ನೈದಿಲಕಾಂತಿ ಕುಂದು ಹೋಗಿ ಕಮಲಗಳ ನಕ್ಕವು. ಚಕ್ರವಾಕಗಳ ವಿರಹವು ಕೊನೆಗೊಂಡಿತು, ಸೂರ್ಯನು ಉದಯಾಚಲಕ್ಕೇರಿದನು.

ಅರ್ಥ:
ಮಗ: ಪುತ್ರ; ದಳಪತಿ: ಸೇನಾಧಿಪತಿ; ಗಡ: ತ್ವರಿತವಾಗಿ; ಸಂತೋಷ; ಕಾಳಗ: ಯುದ್ಧ; ನೋಡು: ವೀಕ್ಷಿಸು; ಜಗ: ಜಗತ್ತು, ವಿಶ್ವ; ಅಗಲ: ವಿಸ್ತಾರ; ನೆರೆ: ಗುಂಪು; ಕಡಿತ: ಕಡಿಮೆ ಮಾಡು, ಕತ್ತರಿಸು; ತಿಮಿರ: ಕತ್ತಲು; ವನ: ಕಾಡು; ಹೊಗರು: ಕಾಂತಿ, ಪ್ರಕಾಶ; ಕುವಳಯ: ಕೆನ್ನೈದಿಲೆ; ಕಳಿ:ಸಾಯು, ಬಾಡು; ಸೊಂಪು: ಸೊಗಸು, ಚೆಲುವು; ನಗೆ: ಸಂತಸ; ಸರೋರುಹ: ಕಮಲ; ವಿರಹ: ಅಗಲಿಕೆ, ವಿಯೋಗ; ಢಗೆ: ಕಾವು, ದಗೆ; ರಥಾಂಗ: ಚಕ್ರವಾಕ ಪಕ್ಷಿ, ಜಕ್ಕವಕ್ಕಿ; ; ಅಳಿ: ಕೊನೆಗೊಳ್ಳು; ರವಿ: ಭಾನು; ಉದಯ: ಹುಟ್ಟು; ಅಚಲ: ಬೆಟ್ಟ; ಬಂದ: ಆಗಮಿಸು;

ಪದವಿಂಗಡಣೆ:
ಮಗನು+ ದಳಪತಿಯಾದ +ಗಡ +ಕಾ
ಳಗವ +ನೋಡುವೆನ್+ಎಂಬವೊಲು +ಜಗ
ದಗಲದಲಿ +ನೆರೆ+ ಕಡಿತವಿಕ್ಕಿತು +ತಿಮಿರ+ವನದೊಳಗೆ
ಹೊಗರು +ಕುವಳಯ +ಕಳಿಯೆ +ಸೊಂಪಿನ
ನಗೆ +ಸರೋರುಹಕೊಗೆಯ+ ವಿರಹದ
ಢಗೆ+ ರಥಾಂಗದೊಳ್+ಅಳಿಯೆ +ರವಿ+ಉದಯ+ಅಚಳಕೆ+ ಬಂದ

ಅಚ್ಚರಿ:
(೧) ಕತ್ತಲು ಕಡಿಮೆಯಾಯಿತು ಎನಲು – ಜಗದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
(೨) ಸೂರ್ಯೋದಯದ ಸಂಕೇತ – ಹೊಗರು ಕುವಳಯ ಕಳಿಯೆ; ಸೊಂಪಿನ ನಗೆ ಸರೋರುಹಕೊಗೆಯ; ವಿರಹದ ಢಗೆ ರಥಾಂಗದೊಳಳಿಯೆ
(೩) ಸೂರ್ಯನು ಬಂದ ಬಗೆ – ರವಿಯುದಯಾಚಳಕೆ ಬಂದ

ನಿಮ್ಮ ಟಿಪ್ಪಣಿ ಬರೆಯಿರಿ