ಪದ್ಯ ೨೭: ಅಶ್ವತ್ಥಾಮನು ಏಕೆ ಕರ್ಣನಿಗೆ ಪಟ್ಟಕಟ್ಟಲು ಸೂಚಿಸಿದನು?

ಆ ಮಹಾರಥ ಭೀಷ್ಮನೇ ಸ್ವೇ
ಚ್ಛಾಮರಣಿಯಾಚಾರ್ಯಚಾಪ
ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ
ಆ ಮಹಾ ನಾರಾಯಣಾಸ್ತ್ರದ
ಸೀಮೆ ಸೀದುದು ಮಿಕ್ಕ ಭಟರು
ದ್ಧಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ (ಕರ್ಣ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಮಾತನ್ನು ಮುಂದುವರಿಸುತ್ತಾ, ಮಹಾರಥಿಗಳಾದ ಭೀಷ್ಮರು ಇಚ್ಛಾಮರಣಿ, ಆಚಾರ್ಯ ದ್ರೋಣರು ಧನುರ್ವಿದ್ಯೆಯಲ್ಲಿ ಶಿವನಿಗೆ ಸಮಾನರು, ಅವರಿಬ್ಬರೂ ಶತ್ರುಗಳನ್ನು ಸೋಲಿಸಲಾರದೆ ಹೋದರು. ನಾರಾಯಣಾಸ್ತ್ರದ ಪ್ರಭಾವವೂ ಶೂನ್ಯವಾಯಿತು. ಇನ್ನುಳಿದ ವೀರರು ಇವರಿಗಿಂತ ಮಿಕ್ಕವರೇ? ಕರ್ಣನಿಗೇ ಸೇನಾಧಿಪತ್ಯವನ್ನು ಕಟ್ಟು ಎಂದು ಹೇಳಿದನು.

ಅರ್ಥ:
ಮಹಾರಥ: ಪರಾಕ್ರಮಿ; ಸ್ವ: ಸ್ವಂತ; ಇಚ್ಛ: ಇಷ್ಟ; ಮರಣ: ಸಾವು; ಆಚಾರ್ಯ: ಗುರು; ಚಾಪ: ಬಿಲ್ಲು; ವ್ಯೋಮ: ಗಗನ, ಆಕಾಶ; ವ್ಯೋಮಕೇಶ: ಶಿವ; ಹೊಕ್ಕು: ಸೇರು; ಕಾಣು: ತೋರು, ಗೋಚರ; ಹಗೆ: ವೈರತ್ವ; ಹರಿವು:ರಭಸವುಳ್ಳ; ಅಸ್ತ್ರ: ಶಸ್ತ್ರ; ಸೀಮೆ: ಎಲ್ಲೆ, ಗಡಿ; ಸೀದು: ಒಟ್ಟು ಮಾಡಿಕೊಳ್ಳು; ಮಿಕ್ಕ: ಉಳಿದ; ಭಟರು: ಸೈನಿಕ; ಉದ್ಧಾಮ: ಶ್ರೇಷ್ಠ; ಸಾಕು: ನಿಲ್ಲಿಸು; ಸೇನಾಪತಿ: ದಳವಾಯಿ;

ಪದವಿಂಗಡಣೆ:
ಆ +ಮಹಾರಥ +ಭೀಷ್ಮನೇ +ಸ್ವ
ಇಚ್ಛಾಮರಣಿ+ ಆಚಾರ್ಯ+ಚಾಪ
ವ್ಯೋಮಕೇಶನು +ಹೊಕ್ಕು +ಕಾಣರು+ ಹಗೆಗೆ+ ಹರಿವುಗಳ
ಆ +ಮಹಾ +ನಾರಾಯಣ+ಅಸ್ತ್ರದ
ಸೀಮೆ +ಸೀದುದು +ಮಿಕ್ಕ +ಭಟರ್
ಉದ್ಧಾಮರೇ +ಸಾಕಿನ್ನು +ಸೇನಾಪತಿಯ +ಮಾಡೆಂದ

ಅಚ್ಚರಿ:
(೧) ಶಿವನನ್ನು ವ್ಯೋಮಕೇಶ ಎಂದು ಹೇಳಿರುವುದು
(೨) ಒಂದೇ ಅಕ್ಷರದ ಜೋಡಿ ಪದಗಳ ಬಳಕೆ – ಸೀಮೆ ಸೀದುದು; ಹಗೆಗೆ ಹರಿವುಗಳ; ಸಾಕಿನ್ನು ಸೇನಾಪತಿಯ

ನಿಮ್ಮ ಟಿಪ್ಪಣಿ ಬರೆಯಿರಿ