ಪದ್ಯ ೧೯: ದುರ್ಯೋಧನನ ಓಲಗಶಾಲೆಯ ದೃಶ್ಯ ಹೇಗಿತ್ತು?

ಸಾಲ ಸಾವಿರ ದೀವಿಗೆಯ ಹರಿ
ದಾಳಿಗಳುಕದೆ ನೃಪರ ಮೋರೆಗ
ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ
ಹೇಳಲೇನದ ಬಹಳ ದುಗುಡದ
ಪಾಳೆಯವೊ ನಿನ್ನಾತನೋಲಗ
ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ (ಕರ್ಣ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಓಲಗಶಾಲೆಯಲ್ಲಿ ಎಲ್ಲಾ ರಾಜರು ದೀವಟಿಕೆಗಳ ಹಿಂದೆ ಅವಿತುಕೊಳ್ಳಲು, ಆ ಓಲಗಶಾಲೆಯಲ್ಲಿದ್ದ ಸಾವಿರ ದೀಪಗಳ ಬೆಳಕು ಕೂಡ ರಾಜರ ಮುಖದಲ್ಲಿ ನಿಂತ ಕತ್ತಲನ್ನು ಕಳೆಯಲಿಲ್ಲ. ಆ ಆಸ್ಥಾನ ನಿನ್ನ ಮಗನ ಓಲಗಶಾಲೆಯೋ ಅಥವ ದುಃಖದ ಪಾಳೆಯವೋ ಹೇಳಲು ನನಗೆ ತಿಳಿಯುತ್ತಿಲ್ಲ ಎಂದು ಸಂಜಯನು ವಿವರಿಸಿದನು.

ಅರ್ಥ:
ಸಾಲ: ಸಾಲು, ಆವಳಿ; ಸಾವಿರ: ಸಹಸ್ರ; ದೀವಿಗೆ: ದೀಪ; ಹರಿದು: ಪಸರಿಸು; ಆಳಿ: ಸಮೂಹ; ಅಳುಕು: ಹೆದರು; ನೃಪ: ರಾಜ; ಮೋರೆ: ಮುಖ; ಓಳಿ: ಸಮೂಹ; ನೆರೆ: ಗುಂಪು; ಹೊದ್ದು: ಆವರಿಸು, ಮುಸುಕು; ಕತ್ತಲೆ: ಇರುಳು; ನಿಂದು: ನಿಲ್ಲು; ಹೇಳು: ತಿಳಿಸು; ಬಹಳ: ಹೆಚ್ಚು; ದುಗುಡ: ದುಃಖ; ಪಾಳೆ: ಸೀಮೆ; ಓಲಗ: ದರ್ಬಾರು, ಆಸ್ಥಾನ; ಶಾಲೆ: ಮನೆ, ಆಲಯ; ಅರಿ: ತಿಳಿ; ನೃಪ: ರಾಜ;

ಪದವಿಂಗಡಣೆ:
ಸಾಲ +ಸಾವಿರ +ದೀವಿಗೆಯ +ಹರಿದ್
ಆಳಿಗ್+ಅಳುಕದೆ+ ನೃಪರ +ಮೋರೆಗಳ್
ಓಳಿಗಳ +ನೆರೆ +ಹೊದ್ದಿ +ಕತ್ತಲೆ +ನಿಂದುದಲ್ಲಲ್ಲಿ
ಹೇಳಲೇನದ+ ಬಹಳ +ದುಗುಡದ
ಪಾಳೆಯವೊ +ನಿನ್ನಾತನ್+ಓಲಗ
ಶಾಲೆಯೋ +ನಾವರಿಯೆವ್+ಎಂದನು +ಸಂಜಯನು +ನೃಪಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಲ ಸಾವಿರ ದೀವಿಗೆಯ ಹರಿದಾಳಿಗಳುಕದೆ ನೃಪರ ಮೋರೆಗ
ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ
(೨) ದುಗುಡದ ಪಾಳೆಯೋ, ಓಲಗ ಶಾಲೆಯೋ – ಹೋಲಿಸುವ ಪರಿ