ಪದ್ಯ ೧೮: ರಾಜರು ಯಾವುದರ ಮರೆಯಲ್ಲಿ ಅವಿತುಕೊಂಡರು?

ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ (ಕರ್ಣ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಆ ರಾತ್ರಿ ದುರ್ಯೋಧನನ ಆಸ್ಥಾನಕ್ಕೆ ಬಂದವರು ತಮ್ಮ ಆಭರಣಗಳನ್ನು ತೆಗೆದಿಟ್ಟಿದ್ದರು. ಕೈಯಲ್ಲಿ ಕತ್ತಿಯನ್ನು ಹಿಡಿದಿರಲಿಲ್ಲ. ದುಃಖದ ಮುಸುಕು ಅವರ ಮುಖಗಳ ಮೇಲಿತ್ತು. ವಿಸ್ಮಯದಿಂದ ಕಣ್ಣುಗಳನ್ನು ಬಿಡುತ್ತಿದ್ದರು. ದೊರೆಯ ಇದಿರಿನಲ್ಲಿ ಕುಳಿತುಕೊಳ್ಳದೆ ದೀವಿಗೆಗಳ ಮರೆಯಲ್ಲಿ ಅವಿತುಕೊಂಡಿದ್ದರು.

ಅರ್ಥ:
ತೊಡರು: ಸಂಬಂಧ, ಸಂಕೋಲೆ; ತೆಗೆ: ಈಚೆಗೆ ತರು, ಹೊರತರು; ಕೈ: ಕರ; ಆಯ್ದವ: ಆಯುಧ, ಶಸ್ತ್ರ; ಜಡಿ: ಗರ್ಜಿಸು; ಹೊತ್ತ: ತೋರಿದ; ದುಗುಡ: ದುಃಖ; ನಿಡು: ದೊಡ್ಡದಾದ, ದೀರ್ಘ; ಮುಸುಕು: ಹೊದ್ದಿಕೆ; ಬಿಗಿದ: ಆವರಿಸಿದ; ಬೆರಗು: ಆಶ್ಚರ್ಯ; ಬಿಟ್ಟ: ತೋರಿದ; ಕಣ್ಣು: ನಯನ; ಒಡೆಯ: ರಾಜ; ಇದಿರು: ಎದುರು; ಕುಳ್ಳೀರು: ಆಸೀನನಾಗು; ಕೆಲ: ಮಿಕ್ಕ; ಕಡೆ: ಕೊನೆ, ಪಕ್ಕ; ಕೈದೀವಿಗೆ: ಸೊಡರು, ದೀಪಿಕೆ; ಮರೆ: ಹಿಂಭಾಗ, ಹಿಂಬದಿ; ಮಿಡುಕು: ಅಲುಗಾಟ, ಚಲನೆ; ರಾಯ: ರಾಜ; ಓಲಗ: ದರ್ಬಾರು; ಪರಿವಾರ: ಸಂಬಂಧಿಕರು;

ಪದವಿಂಗಡಣೆ:
ತೊಡರ +ತೆಗೆದರು +ಕೈಯಡ್+ಆಯ್ದವ
ಜಡಿಯಲಮ್ಮರು +ಹೊತ್ತ +ದುಗುಡದ
ನಿಡು +ಮುಸುಕುಗಳ +ಬಿಗಿದ +ಬೆರಗಿನ +ಬಿಟ್ಟ +ಕಣ್ಣುಗಳ
ಒಡೆಯನ್+ಇದಿರಲಿ +ಕುಳ್ಳಿರದೆ +ಕೆಲ
ಕಡೆಯ +ಕೈದೀವಿಗೆಯ +ಮರೆಯಲಿ
ಮಿಡುಕದಿರ್ದುದು+ ರಾಯನ್+ಓಲಗದೊಳಗೆ+ ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುಳ್ಳಿರದೆ ಕೆಲಕಡೆಯ ಕೈದೀವಿಗೆಯ
(೨) ದುರ್ಯೋಧನನ ಮೇಲಿನ ಅಂಜಿಕೆಯನ್ನು ತೋರುವ ಸಾಲು – ಒಡೆಯನಿದಿರಲಿ ಕುಳ್ಳಿರದೆ ಕೆಲ ಕಡೆಯ ಕೈದೀವಿಗೆಯ ಮರೆಯಲಿ ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ

ಪದ್ಯ ೧೭: ಸಂಜಯನು ಧೃತರಾಷ್ಟ್ರನಿಗೆ ಯಾವುದರ ಲೆಕ್ಕವನ್ನು ಹೇಳಿದನು?

ಹೇಳಿದನು ಬಳಿಕೆರಡು ಥಟ್ಟಿನೊ
ಳಾಳು ಕುದುರೆಯ ಗಜ ರಥವ ಭೂ
ಪಾಲರಳಿದುಳಿದವರ ಲೆಕ್ಕವನೈದೆ ವಿಸ್ತರಿಸಿ
ಕೇಳು ನಿನ್ನಾತನ ವಿನೋದದ
ಖೂಳ ಬೋಳೆಯತನದಲೊದಗಿದ
ಬಾಳಿಕೆಯ ಬೀಸರವನೆಂದನು ಸಂಜಯನು ನಗುತ (ಕರ್ಣ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳಲ್ಲಿ ಅಳಿದುಳಿದ ಆನೆ, ಕುದುರೆ, ರಥ, ಸೈನಿಕರು, ರಾಜರು ಎಲ್ಲರ ಲೆಕ್ಕವನ್ನು ಹೇಳಿದನು. ಎಲೈ ರಾಜನೇ ನಿನ್ನ ಮಗನ ನೀಚತನದ ವಿನೋದದಿಂದ ಬಂದೊದಗಿದ ಬಾಳಿಕೆಯ ನಾಶವನ್ನು ಕೇಳು ಎಂದು ತನ್ನ ಮಾತನ್ನು ಮುಂದುವರಿಸಿದ.

ಅರ್ಥ:
ಹೇಳು: ತಿಳಿಸು; ಬಳಿಕ: ನಂತರ; ಎರಡು: ದ್ವಂದ್ವ; ಥಟ್ಟು: ಸೈನ್ಯ, ಮೋಹರ; ಆಳು: ಸೈನಿಕರು; ಕುದುರೆ: ಅಶ್ವ; ಗಜ: ಆನೆ; ರಥ: ಬಂಡಿ; ಭೂಪಾಲ: ರಜ; ಅಳಿದುಳಿದ: ಮಿಕ್ಕ; ಲೆಕ್ಕ: ಎಣಿಕೆ; ವಿಸ್ತರಿಸು: ಹರಡು; ಕೇಳು: ಆಲಿಸು; ಆತನ: ಮಗನ; ವಿನೋದ: ಸಂತೋಷ; ಖೂಳ: ದುಷ್ಟ, ದುರುಳ; ಭೋಳೆಯತನ: ಮುಗ್ಧ, ಸರಳತನ; ಒದಗು: ಲಭ್ಯ, ದೊರೆತುದು; ಬಾಳಿಕೆ: ಜೀವನ; ಬೀಸರ:ವ್ಯರ್ಥವಾದುದು; ನಗು: ಹರುಷ, ಸಂತಸ;

ಪದವಿಂಗಡಣೆ:
ಹೇಳಿದನು+ ಬಳಿಕೆರಡು +ಥಟ್ಟಿನೊಳ್
ಆಳು +ಕುದುರೆಯ +ಗಜ +ರಥವ +ಭೂ
ಪಾಲಲ್+ಅಳಿದುಳಿದವರ +ಲೆಕ್ಕವನೈದೆ +ವಿಸ್ತರಿಸಿ
ಕೇಳು +ನಿನ್ನಾತನ+ ವಿನೋದದ
ಖೂಳ +ಬೋಳೆಯತನದಲ್+ಒದಗಿದ
ಬಾಳಿಕೆಯ +ಬೀಸರವನೆಂದನು+ ಸಂಜಯನು +ನಗುತ

ಅಚ್ಚರಿ:
(೧) ಹೇಳು, ಕೇಳು – ೧, ೪ ಸಾಲಿನ ಮೊದಲ ಪದ
(೨) ಬ ಕಾರದ ತ್ರಿವಳಿ ಪದ – ಬೋಳೆಯತನದಲೊದಗಿದ ಬಾಳಿಕೆಯ ಬೀಸರವನೆಂದನು

ಪದ್ಯ ೧೬: ಧೃತರಾಷ್ಟ್ರನು ಸುಕೃತವಾವುದು?

ಸುರ ನರೋರಗರರಿಯೆ ನಾವ್ ಬಾ
ಹಿರರು ಭಂಗಿಸಬೇಡ ಸಾಕಂ
ತಿರಲಿ ಕರ್ಣಾಹವದ ಕರ್ಣಾಮೃತವ ಸುರಿ ಸಾಕು
ಅರಿಗಳಭ್ಯುದಯವನು ನಮ್ಮಪ
ಸರಣವನು ಕಿವಿಯಾರೆ ಕೇಳುವ
ಪರಮ ಸುಕೃತಿಗಳಾವು ನೀ ಹೇಳಂಜಬೇಡೆಂದ (ಕರ್ಣ ಪರ್ವ, ೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ದೇವತೆಗಳು, ಮನುಷ್ಯರು, ಹಾವುಗಳು ಎಲ್ಲರೂ ನಾವು ಸನ್ಮಾರ್ಗಕ್ಕೆ ಬಾಹಿರರು ಎಂದು ಬಲ್ಲರು ಅದನ್ನು ಮತ್ತೆ ಮತ್ತೆ ಹೇಳಿ ಅವಮಾನ ಮಾಡಬೇಡ. ಕರ್ಣನ ಯುದ್ದದ ಕರ್ಣಾಮೃತವನ್ನು ಸುರಿ. ಶತ್ರುಗಳ ಏಳಿಗೆ ನಮ್ಮ ಅಧಃಪತನವನ್ನು ಕೇಳುವ ಮಹಾಪುಣ್ಯಶಾಲಿಗಳು ನಾವು, ಹೆದರದೇ ಹೇಳು ಎಂದು ತನ್ನ ನೋವನ್ನು ಹೇಳಿಕೊಂಡನು.

ಅರ್ಥ:
ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಅರಿ: ತಿಳಿ; ಬಾಹಿರ: ಹೊರಗಿನವ; ಭಂಗಿಸು: ನಾಶಮಾಡು;ಸಾಕು: ನಿಲ್ಲಿಸು; ಅಹವ:ಯುದ್ಧ, ಕಾಳಗ; ಅಮೃತ: ಸುಧೆ; ಸುರಿ: ವರ್ಷಿಸು; ಸಾಕು: ಅಷ್ಟು ಮಾಡು; ಅರಿ: ವೈರಿ; ಅಭ್ಯುದಯ: ಏಳಿಗೆ ಅಪಸರಣ: ಹಿಂದಕ್ಕೆ ಸರಿಯುವುದು;
ಕಿವಿ: ಕರಣ; ಕೇಳು: ಆಲಿಸು; ಪರಮ: ಶ್ರೇಷ್ಠ; ಸುಕೃತ: ಒಳ್ಳೆಯ ಕೆಲಸ; ಹೇಳು: ತಿಳಿಸು; ಅಂಜು: ಹೆದರು;

ಪದವಿಂಗಡಣೆ:
ಸುರ +ನರ+ಉರಗರ್+ಅರಿಯೆ +ನಾವ್ +ಬಾ
ಹಿರರು +ಭಂಗಿಸಬೇಡ +ಸಾಕ್+ಅಂ
ತಿರಲಿ +ಕರ್ಣ+ಆಹವದ +ಕರ್ಣ +ಅಮೃತವ +ಸುರಿ +ಸಾಕು
ಅರಿಗಳ್+ಅಭ್ಯುದಯವನು +ನಮ್ಮ್+ಅಪ
ಸರಣವನು +ಕಿವಿಯಾರೆ +ಕೇಳುವ
ಪರಮ +ಸುಕೃತಿಗಳಾವು +ನೀ +ಹೇಳ್+ಅಜಬೇಡೆಂದ

ಅಚ್ಚರಿ:
(೧) ಅರಿ – ತಿಳಿ ಮತ್ತು ವೈರಿ ಎಂಬ ಎರಡರ್ಥವನ್ನು ಬಳಸಿರುವ ಪದ್ಯ
(೨) ಕರ್ಣಾಹವ, ಕರ್ಣಾಮೃತ – ಪದದ ರಚನೆ
(೩) ೨, ೩ ಸಾಲಿನ ಕೊನೆ ಪದ – ಸಾಕು