ಪದ್ಯ ೧೫: ಸೋಲಿಗೆ ಯಾವ ಕಾರಣವೆಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು?

ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡಾರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ (ಕರ್ಣ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಪ್ರಶ್ನೆಗಳಿಗೆ ಸಂಜಯನು ಉತ್ತರಿಸುತ್ತಾ, ಕರ್ಣನ ರಥವು ಕುಗ್ಗಿ ಹೋಯಿತು, ಸಾರಥಿಯು ಮರ್ಮಗೆಡಿಸಿ ಭಂಗಿಸಿದನು. ಬಾಣಗಳ ಕೊರತೆ ಮೊದಲೇ ಆಗಿತ್ತು, ದೈವದ್ರೋಹಿಗಳಾದ ನೀವು ಶತ್ರುಗಳನ್ನು ಹೇಗೆ ಗೆಲ್ಲಲು ಸಾಧ್ಯ? ನಿಮ್ಮದು ಬರುಡಾದ ಮನಸ್ಸು ಆದ್ದರಿಂದ ನಿಮ್ಮ ವಂಶವನ್ನೇ ನಾಶಮಾಡಿದಿರಿ ಎಂದು ಸಂಜಯನು ತಲೆದೂಗುತ್ತಾ ತಿಳಿಸಿದನು.

ಅರ್ಥ:
ಹರುಹು: ವಿಸ್ತಾರ, ವೈಶಲ್ಯ; ತೇರು: ರಥ; ಸಾರಥಿ: ರಥವನ್ನು ಓಡಿಸುವವ; ಹುರುಳು:ತಿರುಳು, ಸಾರ, ಸಾಮರ್ಥ್ಯ; ಕೆಡಿಸು: ಹಾಳು ಮಾಡು; ನುಡಿ: ಮಾತು; ಅಂಬು: ಬಾಣ; ಕೊರತೆ: ನೂನ್ಯತೆ; ಮುನ್ನ: ಮುಂದಿನ; ದೈವ: ಭಗವಂತ; ದ್ರೋಹ: ವಿಶ್ವಾಸಘಾತ, ವಂಚನೆ; ಅರಿ: ರಿಪು, ವೈರಿ; ವಿಜಯ: ಗೆಲುವು; ಮನ: ಮನಸ್ಸು; ಬರಡು: ವ್ಯರ್ಥವಾದುದು; ಅನ್ವಯ: ಸಂಬಂಧ; ಸಂಹರಿಸು: ನಾಶಮಾಡು; ಸಾಕು: ನಿಲ್ಲಿಸು; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ಹರುಹು+ಕೆಟ್ಟುದು +ತೇರು +ಸಾರಥಿ
ಹುರುಳು+ಕೆಡಿಸಿಯೆ +ನುಡಿದನ್+ಅಂಬಿನ
ಕೊರತೆ+ ತಾ +ಮುನ್ನಾಯ್ತು +ದೈವದ್ರೋಹಿಗಳು+ ನಿಮಗೆ
ಅರಿ+ವಿಜಯವ್+ಎಲ್ಲಿಯದು +ನೀವ್ +ಮನ
ಬರಡಾರೈ +ನಿಮ್ಮ+ಅನ್ವಯವ +ಸಂ
ಹರಿಸಿದಿರಿ+ ಸಾಕೆಂದು +ಸಂಜಯ +ತೂಗಿದನು +ಶಿರವ

ಅಚ್ಚರಿ:
(೧) ಹುರುಹು, ಹುರುಳು- ಪ್ರಾಸ ಪದಗಳು
(೨) ಸಂಜಯನು ಬಯ್ಯುವ ಪರಿ – ದೈವದ್ರೋಹಿಗಳು, ಬರಡಾರೈ, ಅನ್ವಯವ ಸಂಹರಿಸಿದಿರಿ

ಪದ್ಯ ೧೪: ಯಾವ ಕಾರಣಗಳನ್ನು ಧೃತರಾಷ್ಟ್ರ ಹುಡುಕುತಿದ್ದನು?

ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ (ಕರ್ಣ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಾತುಗಳನ್ನು ಮುಂದುವರೆಸುತ್ತಾ, ಏಕೆ ಹೀಗಾಯಿತು ನಮಗೆ, ಬಾಣಗಳ ಕೊರತೆಯೇ, ಸಾರಥಿಯ ಮತ್ಸವಏ, ರಥಕ್ಕೆ ಹೊಡೆತ ಬಿದ್ದು ಹಾಳಾಯಿತೇ? ಧನುಸ್ಸು ಮುರಿಯಿತೇ? ಮಹಾಸ್ತ್ರದ ವ್ಯಥೆಯೇ? ಕರ್ಣನನ್ನು ಹೇಗೆ ಕೊಂದರು? ಶತ್ರುಗಳಿಗೆ ನಮ್ಮನ್ನು ಕೊಲ್ಲುವ ಶಕ್ತಿ ಎಲ್ಲಿಂದ ಬರಬೇಕು? ನಮ್ಮ ಪಾಪ ಕರ್ಮಗಳಿಂದಾದ ಕಷ್ಟವೇ ನಮ್ಮನ್ನು ಕೆಡಿಸಿತು ಅಯ್ಯೋ ದೇವರೆ ಶಿವ ಶಿವಾ ಎಂದು ದುಃಖಿಸಿದನು ಧೃತರಾಷ್ಟ್ರ.

ಅರ್ಥ:
ಸರಳ: ಬಾಣ; ಕೊರತೆ: ನ್ಯೂನತೆ; ಸಾರಥಿ: ರಥ ಓಡಿಸುವವ; ಮತ್ಸರ: ಹೊಟ್ಟೆಕಿಚ್ಚು; ರಥ: ಬಂಡಿ; ವಿಘಾತಿ: ಹಾಳು; ದುರ್ಧರ: ಕಠಿಣವಾದ; ಧನುರ್ಭಂಗ: ಬಿಲ್ಲು ಮುರಿದ ಸ್ಥಿತಿ; ಅಸ್ತ್ರ: ಶಸ್ತ್ರ; ವ್ಯಥೆ: ದುಃಖ; ರವಿ: ಭಾನು; ಸುತ; ಮಗ; ಹುರುಳು: ಸತ್ವ, ಸಾಮರ್ಥ್ಯ; ಕೆಡಿಸು: ಹಾಳುಮಾಡು; ರಿಪು: ವೈರಿ; ರಾಯ: ರಾಜ; ಗೋಚರ: ಕಾಣಿಸು; ದುರಿತ: ದುಃಖ, ಕಷ್ಟ; ಉತ್ಕರ್ಷ: ಹೆಚ್ಚಳ; ಕೆಡಿಸು: ಹಾಳು; ಐಸಲೇ: ಅಲ್ಲವೇ;

ಪದವಿಂಗಡಣೆ:
ಸರಳ +ಕೊರತೆಯೊ+ ಸಾರಥಿಯ +ಮ
ತ್ಸರವೊ +ರಥದ +ವಿಘಾತಿಯೋ +ದು
ರ್ಧರ +ಧನುರ್ಭಂಗವೊ +ಮಹಾಸ್ತ್ರ+ವ್ಯಥೆಯೊ +ರವಿಸುತನ
ಹುರುಳು+ ಕೆಡಿಸಿದರೆಂತು +ರಿಪು +ರಾ
ಯರಿಗೆ+ ನಾವ್ +ಗೋಚರವೆ +ದುರಿತ
ಉತ್ಕರುಷವ್+ಐಸಲೆ +ನಮ್ಮ +ಕೆಡಿಸಿತು+ ಶಿವಶಿವಾ +ಎಂದ

ಅಚ್ಚರಿ:
(೧) ಕರ್ಣನನ್ನು ರವಿಸುತ ಎಂದು ಕರೆದಿರುವುದು
(೨) ಆಡು ಭಾಷೆಯ ಪದ ಪ್ರಯೋಗ – ಶಿವ ಶಿವಾ
(೩) ಕೊರತೆ, ಮತ್ಸರ, ವಿಘಾತಿ, ಭಂಗ, ವ್ಯಥೆ – ಪದಪ್ರಯೋಗಗಳು

ಪದ್ಯ ೧೩: ಧೃತರಾಷ್ಟ್ರನು ಯಾವ ವಿಷವಯವನ್ನು ತಿಳಿಯಲು ಬಯಸಿದನು?

ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ (ಕರ್ಣ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ದುಃಖದಿಂದ ಧೃತರಾಷ್ಟ್ರ ಸಂಜಯನನ್ನು ಕೇಳುತ್ತಾ, ಭೀಷ್ಮ ಪಿತಾಮಹರು ಗಾಯಗೊಂಡು ಬಾಣಗಳ ಮೇಲೆ ಮಲಗಿದರು, ದ್ರೋಣಾಚಾರ್ಯರ ಪ್ರಾಣದ ತೊಟ್ಟು ಉದುರಿತು, ಕರ್ಣನು ನಮ್ಮನ್ನು ಈ ಸ್ಥಿತಿಗೆ ತಂದನು, ಇನ್ನೂ ದುರ್ಯೋಧನನು ಸಾಯಲಿಲ್ಲವೇ? ಹೋಗಲಿ ಆ ನಾಯಿಯ ಸುದ್ದಿ ಬೇಡ, ಕರ್ಣನು ಅಳಿದನೇ? ಆ ದುಃಖವಾರ್ತೆಯನ್ನು ವಿಸ್ತಾರವಾಗಿ ತಿಳಿಸು ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಘಾಯ: ನೋವು, ಹುಣ್ಣು; ಬಳಿಕ: ನಂತರ; ಆಯುಧ: ಶಸ್ತ್ರ; ಗುರು: ಆಚಾರ್ಯ; ತೊಡಬೆಗಳಚು: ಆಯುಧದ ಸಮೂಹವನ್ನು ಕಳಚು; ಅವಸ್ಥೆ: ಸ್ಥಿತಿ; ತಂದು: ಬರೆಮಾಡು; ಭಾನು: ಸೂರ್ಯ; ನಂದನ: ಮಗ; ಸಾಯನೇ: ಮರಣ ಹೊಂದಿದನೇ; ಮಗ: ಸುತ; ನಾಯ: ನಾಯಿ, ಶ್ವಾನ; ನುಡಿ: ಮಾತು; ಕಡೆ: ಕೊನೆ; ಶೋಕ: ದುಃಖ; ವಿಸ್ತರಿಸು: ವಿವರಣೆ, ವ್ಯಾಪ್ತಿ; ಹೇಳು: ತಿಳಿಸು;

ಪದವಿಂಗಡಣೆ:
ಘಾಯವಡೆದನು +ಭೀಷ್ಮ+ ಬಳಿಕಿನೊಳ್
ಆಯುಧದ +ಗುರು +ತೊಡಬೆಗಳಚಿದನ್
ಈ+ ಅವಸ್ಥೆಗೆ +ನಮ್ಮ +ತಂದನು +ಭಾನು+ನಂದನನು
ಸಾಯನೇ +ಮಗನ್+ಇನ್ನು +ಸಾಕ್+ಆ
ನಾಯ +ನುಡಿಯಂತಿರಲಿ+ ಕರ್ಣಂಗ್
ಆಯಿತೇ +ಕಡೆ +ಶೋಕವನು +ವಿಸ್ತರಿಸಿ+ ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ದುರ್ಯೋಧನನನ್ನು ಬಯ್ಯುವ ಪರಿ – ಸಾಕಾ ನಾಯ ನುಡಿಯಂತಿರಲಿ
(೨) ಕರ್ಣನನ್ನು ಭಾನುನಂದನ ಎಂದು ಕರೆದಿರುವುದು
(೩) ದ್ರೋಣರನ್ನು ಆಯುಧದ ಗುರು ಎಂದು ಕರೆದಿರುವುದು