ಪದ್ಯ ೧: ಸಂಜಯನು ಯಾರ ಮರಣದ ವಾರ್ತೆಯನ್ನು ಧೃತರಾಷ್ಟ್ರನಿಗೆ ತಿಳಿಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಕೆ ಪರಿತೋಷ ಖೇದಸ್ತಿಮಿತವಿಕ್ರಮರು
ಕೋಲಗುರುವಿನ ಮರಣವಾರ್ತಾ
ಕಾಲಸರ್ಪನ ತಂದು ಸಂಜಯ
ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಿನಲಿ (ಕರ್ಣ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯ ರಾಜನಿಗೆ ಮಹಾಭಾರತದ ಕಥೆಯನ್ನು ಮುಂದುವರಿಸುತ್ತಾ, ಎರಡು ಸೈನ್ಯಗಳೂ ಪಾಳಯಕ್ಕೆ ಹಿಂದಿರುಗಿದವು. ಒಂದು ಪಾಳಯದಲ್ಲಿ ಸಂತೋಷವಿದ್ದರೆ, ಮತ್ತೊಂದರಲ್ಲಿ ದುಃಖ, ಕುರುಕ್ಷೇತ್ರದ ವೃತ್ತಾಂತವನ್ನು ಧೃತರಾಷ್ಟ್ರನಿಗೆ ತಿಳಿಸುತ್ತಿದ್ದ ಸಂಜಯನು ದ್ರೋಣನ ಸಾವಿನ ಸುದ್ದಿಯನ್ನು ಕಾಲಸರ್ಪದ ಬುಟ್ಟಿಯನ್ನು ತಂದು ಈಡಾಡಿದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ತೆಗೆ: ಹೊರಹಾಕು; ಬಲ: ಸೈನ್ಯ; ನಿಜ: ದಿಟ; ಪಾಳಯ: ಗುಂಪು; ಪರಿತೋಷ: ಸಂತೋಷ; ಖೇದ: ದುಃಖ; ಸ್ತಿಮಿತ: ಭದ್ರವಾದ ನೆಲೆ, ಸ್ಥಿರತೆ; ವಿಕ್ರಮ: ಶೂರ; ಕೋಲ: ಬಾಣವಿದ್ಯೆ, ಬಿಲ್ಲುವಿದ್ಯೆ; ಗುರು: ಆಚಾರ್ಯ; ಮರಣ: ಸಾವು; ವಾರ್ತೆ: ಸುದ್ದಿ; ಕಾಲಸರ್ಪ: ಹಾವಿನ ಒಂದು ಜಾತಿ; ಹೇಳು: ತಿಳಿಸು; ಈಡಾಡು: ಕಿತ್ತು, ಒಗೆ, ಚೆಲ್ಲು; ಇದಿರು: ಎದುರು;

ಪದವಿಂಗಡಣೆ:
ಕೇಳು +ಜನಮೇಜಯ+ ಧರಿತ್ರೀ
ಪಾಲ +ತೆಗೆದವು +ಬಲವೆರಡು +ನಿಜ
ಪಾಳಯಕೆ +ಪರಿತೋಷ +ಖೇದಸ್ತಿಮಿತ+ವಿಕ್ರಮರು
ಕೋಲಗುರುವಿನ+ ಮರಣ+ವಾರ್ತಾ
ಕಾಲಸರ್ಪನ +ತಂದು +ಸಂಜಯ
ಹೇಳಿಗೆಯನ್+ಈಡಾಡಿದನು +ಧೃತರಾಷ್ಟ್ರನ್+ಇದಿರಿನಲಿ

ಅಚ್ಚರಿ:
(೧) ಪರಿತೋಷ, ಖೇದ – ವಿರುದ್ಧಾರ್ಥ ಪದ
(೨) ಉಪಮಾನದ ಪ್ರಯೋಗ – ಕೋಲಗುರುವಿನ ಮರಣವಾರ್ತಾ ಕಾಲಸಪ್ರನ ತಂದು