ಪದ್ಯ ೩೬: ಕೃಷ್ಣನು ಏಕೆ ಶಿಷ್ಟನಾದನೆಂದು ಶಿಶುಪಾಲನು ಹೀಯಾಳಿಸಿದನು?

ಬೀವಿನಾರವೆಯೊಳಗೆ ಕಳಹಂ
ಸಾವಳಿಗೆ ರಮ್ಯವೆ ಜಪಾ ಕುಸು
ಮಾವಳಿಗಳಲಿ ಮಧುಕರನ ಮೋಹರಕೆ ಮನ್ನಣೆಯೆ
ಈ ವಿಕಾರದ ಯಜ್ಞದಲಿ ರಾ
ಜಾವಳಿಗೆ ಮನ್ನಣೆಯೆ ಶಿವಶಿವ
ನೀವು ಗೋಪಿಜಾರರಿಲ್ಲಿಗೆ ಶಿಷ್ಟರಹರೆಂದ (ಸಭಾ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬೇವಿನ ವನದ ಮಧ್ಯೆ ಕಳಹಂಸಗಳಿಗೆ ಒಪ್ಪೀತೇ? ದುಂಬಿಗಳು ದಾಸವಾಳದ ಹೂವನ್ನು ಒಪ್ಪುವವೇ? ಈ ವಿಕಾರ ಯಜ್ಞದಲ್ಲಿ ರಾಜರಿಗೆ ಮನ್ನಣೆ ಸಿಕ್ಕೀತೇ? ನೀನು ಗೋಪೀಜಾರನಾದುದರಿಂದ ಇಲ್ಲಿ ಶಿಷ್ಟನಾದೆ ಎಂದು ಶಿಶುಪಾಲನು ಹೀಯಾಳಿಸಿದನು.

ಅರ್ಥ:
ಆರವೆ: ಉದ್ಯಾನ, ತೋಪು; ಕಳ: ಮಧುರವಾದ; ಹಂಸ: ಬಿಳಿಯ ಬಣ್ಣದ ಪಕ್ಷಿ, ಮರಾಲ; ಆವಳಿ: ಗುಂಪು; ಮಧುಕರ: ಜೇನು; ಮೋಹ: ಆಸೆ; ಮನ್ನಣೆ: ಗೌರವ; ವಿಕಾರ: ಬದಲಾವಣೆ; ಯಜ್ಞ: ಯಾಗ, ಕ್ರತು; ರಾಜ: ನೃಪ; ಜಾರ: ವ್ಯಭಿಚಾರಿ; ಶಿಷ್ಟ:ಒಳ್ಳೆಯ ನಡವಳಿಕೆ; ಕುಸುಮ: ಹೂವು; ಜಪಾ: ದಾಸವಾಳ;

ಪದವಿಂಗಡಣೆ:
ಬೀವಿನ್+ಆರವೆಯೊಳಗೆ +ಕಳಹಂ
ಸಾವಳಿಗೆ+ ರಮ್ಯವೆ +ಜಪಾ +ಕುಸು
ಮಾವಳಿಗಳಲಿ+ ಮಧುಕರನ +ಮೋಹರಕೆ+ ಮನ್ನಣೆಯೆ
ಈ +ವಿಕಾರದ +ಯಜ್ಞದಲಿ +ರಾ
ಜಾವಳಿಗೆ+ ಮನ್ನಣೆಯೆ +ಶಿವಶಿವ
ನೀವು +ಗೋಪಿಜಾರರಿಲ್ಲಿಗೆ +ಶಿಷ್ಟರಹರೆಂದ

ಅಚ್ಚರಿ:
(೧) ಆವಳಿ ಪದದ ಬಳಕೆ – ೩ ಬಾರಿ ಪ್ರಯೋಗ – ಹಂಸಾವಳಿ, ಕುಸುಮಾವಳಿ, ರಾಜಾವಳಿ
(೨) ಉಪಮಾನದ ಪ್ರಯೋಗ – ಬೀವಿನಾರವೆಯೊಳಗೆ ಕಳಹಂಸಾವಳಿಗೆ ರಮ್ಯವೆ; ಜಪಾ ಕುಸು
ಮಾವಳಿಗಳಲಿ ಮಧುಕರನ ಮೋಹರಕೆ ಮನ್ನಣೆಯೆ

ಪದ್ಯ ೩೫: ಕೃಷ್ಣನ ಕುಲ ಮತ್ತು ಬಲವನ್ನು ಶಿಶುಪಾಲನು ಹೇಗೆ ಅವಮಾನಿಸಿದನು?

ಕುಲದಲಧಿಕರು ರಾಜ್ಯದಲಿ ವೆ
ಗ್ಗಳರು ಭುಜಸತ್ವದಲಿ ಸೇನಾ
ಬಲದಲುತ್ತಮರಿವರ ಭಂಗಿಸಿ ನಿನಗೆ ಮನ್ನಣೆಯೇ
ಕುಲವು ಯದುಕುಲ ರಾಜ್ಯವೇ ಕಡ
ಲೋಳಕುರುವ ನಿನ್ನೋಟಗುಳಿತನ
ದಳವ ಮಾಗಧ ಕಾಲಯವನರು ಬಲ್ಲರವರೆಂದ (ಸಭಾ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಉತ್ತಮ ಕುಲದಲ್ಲಿ ಹುಟ್ಟಿದವರು, ವಿಶಾಲರಾಜ್ಯವನ್ನು ಆಳುವವರು, ಬಾಹುಬಲದಲ್ಲಿ ಮೀರಿದವರು, ಆದ ರಾಜರಿಲ್ಲಿ ಕುಳಿತಿದ್ದಾರೆ. ನಿನಗಾದರೋ ಕುಲವು ಯದುಕುಲ, ರಾಜ್ಯವೋ ಸಮುದ್ರ ಮಧ್ಯದ ದ್ವೀಪ. ಇನ್ನು ಬಾಹುಬಲವನ್ನು ಹೇಳಬೇಕೆಂದರೆ, ನೀನು ಸಮರ ಪಲಾಯನ ಮಾಡುವುದನ್ನು ಜರಾಸಂಧನ ಸಮಯದ ಯಮನೇ ಬಲ್ಲರು ಎಂದು ಶಿಶುಪಾಲನು ಕೃಷ್ಣನನ್ನು ಅವಮಾನಿಸಿದನು.

ಅರ್ಥ:
ಕುಲ: ವಂಶ; ಅಧಿಕ: ಶ್ರೇಷ್ಠ; ರಾಜ್ಯ: ರಾಷ್ಟ್ರ; ವೆಗ್ಗಳ:ಶ್ರೇಷ್ಠತೆ, ಹಿರಿಮೆ; ಭುಜ: ಬಾಹು; ಸತ್ವ: ರಸ, ಸಾರ; ಸೇನಾಬಲ: ಸೈನ್ಯ; ಉತ್ತಮ: ಶ್ರೇಷ್ಠ; ಅರಿ: ತಿಳಿ; ಭಂಗ: ಸೀಳು, ಕುಂದು, ದೋಷ; ಮನ್ನಣೆ: ಗೌರವ; ಕಡಲು: ಸಾಗರ; ಓಟ: ಪಲಾಯನ; ದಳ: ಸೈನ್ಯ; ಮಾಗಧ: ಜರಾಸಂಧ; ಕಾಲಯವ: ಪ್ರಳಯಕಾಲದ ಯಮ; ಬಲ್ಲವ: ತಿಳಿದವ;

ಪದವಿಂಗಡಣೆ:
ಕುಲದಲ್+ಅಧಿಕರು+ ರಾಜ್ಯದಲಿ+ ವೆ
ಗ್ಗಳರು +ಭುಜಸತ್ವದಲಿ +ಸೇನಾ
ಬಲದಲ್+ಉತ್ತಮರ್+ಇವರ+ ಭಂಗಿಸಿ+ ನಿನಗೆ +ಮನ್ನಣೆಯೇ
ಕುಲವು +ಯದುಕುಲ+ ರಾಜ್ಯವೇ +ಕಡ
ಲೊಳಕುರುವ +ನಿನ್+ಓಟಗ್+ಉಳಿತನ
ದಳವ +ಮಾಗಧ +ಕಾಲಯವನರು +ಬಲ್ಲರವರೆಂದ

ಅಚ್ಚರಿ:
(೧) ಕುಲ – ೧, ೪ ಸಾಲಿನ ಮೊದಲ ಪದ

ಪದ್ಯ ೩೪: ಗಾಜು ಮತ್ತು ಮಾಣಿಕ್ಯದ ಹೋಲಿಕೆ ನೀಡಿ ಕೃಷ್ಣನನ್ನು ಹೇಗೆ ಅವಮಾನಿಸಲಾಯಿತು?

ಅರಿಯದವರಾದರಿಸಿದರೆ ನೀ
ನರಿಯ ಬೇಡವೆ ನಿನ್ನ ಕುಂದಿನ
ಕೊರತೆಗಳನಾರರಿಯರೀ ಭೂಪಾಲ ಮಧ್ಯದಲಿ
ಕುರುಬರೂರಲಿ ಗಾಜು ಮಾಣಿಕ
ವರಿಯದವರಿಗೆ ಕೃಷ್ಣನೀ ಕಡು
ಬೆರೆತೆಲಾ ನೆರೆ ಮರೆದಲಾ ನಿನ್ನಂತರವನೆಂದ (ಸಭಾ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ತಿಳಿಯದವರು (ಭೀಷ್ಮ, ಪಾಂಡವರು) ನಿನಗೆ ಗೌರವಿಸಿ ನಿನಗೆ ಅಗ್ರಪೂಜೆ ಮಾಡಿದರೆ ಯೋಗ್ಯನಲ್ಲದವನೆಂದು ನೀನಾದರೂ ತಿಳಿಯಬಾರದಾಗಿತ್ತೇ? ಕುರಿಕಾಯುತ್ತಿರುವವರ ಊರಿನಲ್ಲಿ ಗಾಜಿನ ತುಂಡೇ ಮಾಣಿಕ್ಯ, ಏಕೆಂದರೆ ಅವರಿಗೆ ಮಾಣಿಕ್ಯವೆಂದರೇನೆಂದು ತಿಳಿಯದು. ಅವರು ಕರೆದರೆ ಹೋಗಿ ಮನ್ನಣೆ ಪಡೆದು ಮೆರೆಯುತ್ತಿರುವೆಯಲ್ಲಾ ಕೃಷ್ಣ? ನಿನ್ನ ಯೋಗ್ಯತೆಯೇನೆಂದು ತಿಳಿಯದೆ ಹೀಗೆ ಮಾಡಿದುದು ಸರಿಯೇ? ಮರೆತೆಯಾ ನೀನು ನಿನ್ನ ಅಂತರವ?

ಅರ್ಥ:
ಅರಿ: ತಿಳಿ; ಆದರಿಸು: ಗೌರವಿಸು; ಕುಂದು: ನೂನ್ಯತೆ, ದೋಷ; ಕೊರತೆ: ಕಡಮೆ, ಕಳಂಕ; ಭೂಪಾಲ: ರಾಜ; ಮಧ್ಯ: ನಡುವೆ; ಕುರುಬ: ಕುರಿಕಾಯುವವ; ಮಾಣಿಕ್ಯ: ರತ್ನ; ಕಡು: ಅಧಿಕ್ಯ; ಬೆರೆತೆ: ಸೇರಿಕೊಂಡೆ; ನೆರೆ: ಗುಂಪು; ಮರೆದೆ: ಮರೆತುಹೋಗು, ಮನಸ್ಸಿನಿಂದ ದೂರವಾಗು; ಅಂತರ: ದೂರ;

ಪದವಿಂಗಡಣೆ:
ಅರಿಯದವರ್+ಆದರಿಸಿದರೆ +ನೀನ್
ಅರಿಯ +ಬೇಡವೆ +ನಿನ್ನ +ಕುಂದಿನ
ಕೊರತೆಗಳನ್+ಆರ್+ಅರಿಯರ್+ಈ+ಭೂಪಾಲ +ಮಧ್ಯದಲಿ
ಕುರುಬರ್+ಊರಲಿ +ಗಾಜು +ಮಾಣಿಕವ್
ಅರಿಯದವರಿಗೆ +ಕೃಷ್ಣನೀ +ಕಡು
ಬೆರೆತೆಲಾ +ನೆರೆ +ಮರೆದಲಾ +ನಿನ್ನಂತರವನೆಂದ

ಅಚ್ಚರಿ:
(೧) ಅರಿ – ೧,೨, ೫ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ಕುರುಬರೂರಲಿ ಗಾಜು ಮಾಣಿಕವರಿಯದವರಿಗೆ