ಪದ್ಯ ೩೩: ಕೃಷ್ಣನು ಅಗ್ರಪೂಜೆಗೆ ಯಾಕೆ ಯೋಗ್ಯನಲ್ಲವೆಂದು ಹೇಳಿದನು?

ಈ ಋಷಿಗಳೇ ಬಣಗುಗಳು ಬಡ
ಹಾರುವರು ದಕ್ಷಿಣೆ ಸುಭೋಜನ
ಪೂರವಾದರೆ ಸಾಕು ಮಾನ್ಯರ ವಾಸಿವಟ್ಟದಲಿ
ಹೋರುವವರಿವರಲ್ಲ ನೆರೆದೀ
ವೀರನೃಪರಭಿಮಾನಿಗಳು ನೆರೆ
ಸೈರಿಸಿದರಿದು ನಿನಗೆ ಸದರವೆ ಕೃಷ್ಣ ಹೇಳೆಂದ (ಸಭಾ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಋಷಿಗಳು ಬಲಹೀನರು, ಬಡಬ್ರಾಹ್ಮಣರು ಒಳ್ಳೆಯ ಊಟ ದಕ್ಷಿಣೆಗಾಗಿ ಬಂದವರು. ಅಷ್ಟು ಸಿಕ್ಕರೆ ಅವರಿಗೆ ಸಾಕು. ಸ್ವಾಭಿಮಾನಕ್ಕಾಗಿ ಛಲದಿಂದ ಹೋರಾಡುವುದೂ, ನಾಶವಾದರೆ ಹೆಣಗುವುದೂ ಅವರಿಗೆ ತಿಳಿಯದು. ಇಲ್ಲಿ ಸೇರಿರುವ ಕ್ಷತ್ರಿಯರಾದರೋ ಸ್ವಾಭಿಮಾನಶಾಲಿಗಳಾಗಿದ್ದರೂ, ನಿನಗೆ ಅಗ್ರ ಪೂಜೆಯಾದುದನ್ನು ಕಂಡು ಸೈರಿಸಿದರು. ಅದನ್ನು ತಿಳಿಯದೆ ಅಗ್ರಪೂಜೆ ಮಾದಿಸಿಕೊಂಡು ಹಿಗ್ಗುವುದು ಅಷ್ಟು ಸುಲಭವೆಂದು ತಿಳಿದೆಯಾ?

ಅರ್ಥ:
ಋಷಿ: ಮುನಿ; ಬಣ: ಗುಂಪು; ಹಾರು: ಬ್ರಾಹ್ಮಣ, ವಿಪ್ರ; ದಕ್ಷಿಣೆ: ಸಂಭಾವನೆ, ಕಾಣಿಕೆ; ಸುಭೋಜನ: ಒಳ್ಳೆಯ ಊಟ; ಪೂರ: ಪೂರ್ತಿಯಾಗಿ; ಸಾಕು: ತೀರಿತು; ಮಾನ್ಯ: ಗೌರವಾನ್ವಿತ; ವಾಸಿವಟ್ಟ: ಉತ್ತಮ ಪದವಿ; ಹೋರು: ಹೊತ್ತುಕೊ; ನೆರೆ: ಗುಂಪು; ವೀರ: ಶೂರ; ನೃಪ: ರಾಜ; ಅಭಿಮಾನ: ಹೆಮ್ಮೆ, ಆತ್ಮಗೌರವ; ಸೈರಿಸು: ಸಹಿಸು, ತಾಳು; ಸದರ: ಸಲಿಗೆ, ಸಸಾರ;

ಪದವಿಂಗಡಣೆ:
ಈ +ಋಷಿಗಳೇ +ಬಣಗುಗಳು +ಬಡ
ಹಾರುವರು +ದಕ್ಷಿಣೆ +ಸುಭೋಜನ
ಪೂರವಾದರೆ+ ಸಾಕು +ಮಾನ್ಯರ+ ವಾಸಿವಟ್ಟದಲಿ
ಹೋರುವವರ್+ಇವರಲ್ಲ +ನೆರೆದ್+ಈ
ವೀರ+ನೃಪರ್+ಅಭಿಮಾನಿಗಳು +ನೆರೆ
ಸೈರಿಸಿದ್+ಅರಿದು +ನಿನಗೆ +ಸದರವೆ +ಕೃಷ್ಣ +ಹೇಳೆಂದ

ಅಚ್ಚರಿ:
(೧) ಹಾರುವರು, ಹೋರುವರು – ಪ್ರಾಸ ಪದ

ಪದ್ಯ ೩೨: ಶಿಶುಪಾಲನು ಕೃಷ್ಣನನ್ನು ಯಾವ ನಾಯಕನೆಂದು ಜರೆದನು?

ಆಯಿತಿದು ಜಡ ಧರ್ಮಜನು ಗಾಂ
ಗೇಯ ಜಡನೀ ತಾರುಥಟ್ಟಿನ
ದಾಯವರಿಯದೆ ನಿನ್ನ ಕರೆದರೆ ಕೃಷ್ಣ ಬೆರೆತೆಯಲಾ
ರಾಯರತುನದ ನಡುವೆ ನೀನನು
ನಾಯಕವೊ ನಾಯಕವೊ ಮೇಣುಪ
ನಾಯಕವೊ ನೀನಾವನೆಂದನು ಜರೆದು ಮುರಹರನ (ಸಭಾ ಪರ್ವ, ೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆಗಲಿ, ಈ ಯುಧಿಷ್ಠಿರ, ಭೀಷ್ಮರೆಲ್ಲರೂ ಜಡವ್ಯಕ್ತಿಗಳು, ಇಲ್ಲಿ ನೆರೆದಿರುವ ರಾಜರ ಗುಂಪಿನ ಲೆಕ್ಕವನ್ನು ತಿಳಿದಿರುವೆಯಾ? ನಿನ್ನನ್ನು ಅಗ್ರಪೂಜೆಗೆ ಕರೆದರೆ ಹೋಗಿ ಕುಳಿತುಕೊಳ್ಳುವುದೆ? ಇಲ್ಲಿ ನೆರೆದಿರುವ ರಾಜರತ್ನಗಳಲ್ಲಿ ನೀನು ನಾಯಕರತ್ನವೋ, ರತ್ನವೋ ಅಥವ ಉಪರತ್ನವೋ? ನೀನು ಯಾವನೆಂದು ಕೃಷ್ಣನನ್ನು ಜರೆದನು.

ಅರ್ಥ:
ಆಯಿತು: ತೀರಿತು; ಜಡ: ಅಚೇತನವಾದ, ಭಾವನಾರಹಿತವಾದ; ಗಾಂಗೇಯ: ಭೀಷ್ಮ; ತಾರುಥಟ್ಟು: ಚೆಲ್ಲಾಪಿಲ್ಲಿ; ಆಯ: ರೀತಿ; ಅರಿ: ತಿಳಿ; ಕರೆ: ಬರೆಮಾಡು; ಬೆರೆತು: ಸೇರು; ರಾಯ: ರಾಜ; ನಡುವೆ: ಮಧ್ಯೆ; ನಾಯಕ: ಮುಖಂಡ; ಉಪನಾಯಕ: ಮುಖಂಡನ ಸಹಾಯಕ; ಮೇಣ್: ಅಥವ; ಜರೆ: ಬಯ್ಯು; ಮುರಹರ: ಕೃಷ್ಣ;

ಪದವಿಂಗಡಣೆ:
ಆಯಿತಿದು+ ಜಡ +ಧರ್ಮಜನು +ಗಾಂ
ಗೇಯ +ಜಡನ್+ಈ+ ತಾರುಥಟ್ಟಿನದ್
ಆಯವ್+ಅರಿಯದೆ +ನಿನ್ನ +ಕರೆದರೆ+ ಕೃಷ್ಣ +ಬೆರೆತೆಯಲಾ
ರಾಯರತುನದ +ನಡುವೆ +ನೀನ್+ಅನು
ನಾಯಕವೊ +ನಾಯಕವೊ +ಮೇಣ್+ಉಪ
ನಾಯಕವೊ +ನೀನಾವನೆಂದನು +ಜರೆದು+ ಮುರಹರನ

ಅಚ್ಚರಿ:
(೧) ನಾಯಕವೊ – ೩ ಬಾರಿ ಪ್ರಯೋಗ
(೨) ಅನುನಾಯಕ, ಉಪನಾಯಕ – ಪದಪ್ರಯೋಗ