ಪದ್ಯ ೨೮: ಶಿಶುಪಾಲನ ಪ್ರಕಾರ ಯಾವುದ್ ಒಳಗಿನ ವಿಷಯ?

ಈ ಋಷಿಗಳೀ ಮಂತ್ರವೀ ಸಂ
ಭಾರವೀ ಪೌರಾಣಕಥೆಯೀ
ಘೂರಿ ಭೋಜನವೀ ಮಹಾಗೋರತ್ನ ಧನಧಾನ್ಯ
ಸಾರತರ ವೇದೋಕ್ತ ಮಾರ್ಗವಿ
ಚಾರವಿದ್ದುದು ಹೊರಗೆ ಗೋಪೀ
ಜಾರ ಸತ್ಕೃತಿಯೊಳಗೆ ವಿಷವಿದನರಿದುದಿಲ್ಲೆಂದ (ಸಭಾ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಇಲ್ಲಿ ನೆರೆದಿರುವ ಋಷಿಗಳ ಸಮೂಹ, ಅವರೆಲ್ಲರೂ ಹೇಳುವ ಮಂತ್ರಗಳು, ಅವರ ಸಾಧನಗಳು, ಪುರಾಣಕಥೆ, ಶ್ರೇಷ್ಠವಾದ ಭೋಜನ, ಅಪರಿಮಿತವಾದ ಗೋವುಗಳು, ರತ್ನಗಳು, ಧನ, ಧಾನ್ಯ, ಇದು ಸಾಲದೆಂಬಂತೆ ವೈದಿಕ ಮಾರ್ಗದಂತೆ ಯಜ್ಞ ನಡೆಯಿತು. ಆದರೆ ಇದೆಲ್ಲಾ ಕೃಷ್ಣನನ್ನು (ಗೋಪೀಜಾರ)ಸತ್ಕರಿಸುವುದಕ್ಕಾಗೆ ಮಾಡಿದ ಒಂದು ಮಾರ್ಗ, ಒಳಗೆ ಇಂತಹ ವಿಷಯ ಇದೆಯೆಂದು ನಮಗೆ ತಿಳಿದಿರಲಿಲ್ಲ ಎಂದು ಶಿಶುಪಾಲ ಜರಿದನು.

ಅರ್ಥ:
ಋಷಿ: ಮುನಿ, ಯೋಗಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಂಭಾರ: ಸಲಕರಣೆ; ಪೌರಾಣ: ಹಳೆಯದು, ಪ್ರಾಚೀನವಾದುದು; ಕಥೆ: ವಿಷಯವನ್ನು ಹೇಳುವ ರೀತಿ; ಭೂರಿ: ಹೆಚ್ಚು, ಅಧಿಕ; ಭೋಜನ: ಊಟ; ಮಹಾ: ಶ್ರೇಷ್ಠ; ರತ್ನ: ಮಣಿ; ಧನ: ಐಶ್ವರ್ಯ; ಧಾನ್ಯ: ಅಕ್ಕಿ, ಬೇಳೆ ಮುಂತಾದ ಪದಾರ್ಥ; ಸಾರ: ರಸ; ವೇದ: ಆಗಮ, ಜ್ಞಾನ; ಉಕ್ತ: ಹೇಳುವ; ಮಾರ್ಗ: ದಾರಿ; ವಿಚಾರ: ವಿಮರ್ಶೆ ; ಹೊರಗೆ: ಆಚೆ; ಜಾರ: ವ್ಯಭಿಚಾರಿ; ಸತ್ಕೃತಿ: ಒಳ್ಳೆಯ ಕೆಲಸ; ವಿಷ: ನಂಜು; ಅರಿ: ತಿಳಿ;

ಪದವಿಂಗಡಣೆ:
ಈ+ ಋಷಿಗಳೀ+ ಮಂತ್ರವೀ +ಸಂ
ಭಾರವೀ +ಪೌರಾಣಕಥೆಯೀ
ಘೂರಿ+ ಭೋಜನವೀ +ಮಹಾಗೋರತ್ನ +ಧನ+ಧಾನ್ಯ
ಸಾರತರ +ವೇದೋಕ್ತ +ಮಾರ್ಗ+ವಿ
ಚಾರವಿದ್ದುದು +ಹೊರಗೆ +ಗೋಪೀ
ಜಾರ+ ಸತ್ಕೃತಿಯೊಳಗೆ +ವಿಷವಿದನ್+ಅರಿದುದಿಲ್ಲೆಂದ

ಅಚ್ಚರಿ:
(೧) ಕೃಷ್ಣನನ್ನು ಗೋಪೀಜಾರನೆಂದು ಕರೆದಿರುವುದು
(೨) ಈ ಕಾರಗಳ ಪ್ರಯೋಗ – ಋಷಿಗಳೀ, ಮಂತವೀ, ಸಂಭಾರವೀ, ಕಥೆಯೀ, ಭೋಜನವೀ

ಪದ್ಯ ೨೭: ಬಂದ ಅತಿಥಿಗಳಲ್ಲಿ ಯಾಗಕ್ಕೆ ಯಾರು ಯೋಗ್ಯರೆಂದು ಶಿಶುಪಾಲ ಹಂಗಿಸಿದನು?

ವಿಂದನನುವಿಂದಾ ಮಹೀಶರು
ಬಂದಿರೈ ಕಾಂಭೋಜ ನೃಪನೈ
ತಂದೆಲಾ ಗಾಂಧಾರ ಶಕುನಿ ಬೃಹದ್ರಥಾಗಿಗಳು
ಬಂದರಿಲ್ಲಿಗೆ ಧರ್ಮಸಾಧನ
ವೆಂದು ಬಯಸಿದಿರಿವರ ಯಾಗಕೆ
ನಂದಗೋಪನ ಮಕ್ಕಳಲ್ಲದೆ ಯೋಗ್ಯರಿಲ್ಲೆಂದ (ಸಭಾ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಮಹಾ ರಾಜಸೂಯ ಯಜ್ಞಕ್ಕೆ ವಿಂದ, ಅನುವಿಂದ, ಕಾಂಭೋಜ ಮುಂತಾದ ರಾಜರು ಆಗಮಿಸಿರುವುರು, ಗಾಂಧಾರ, ಶಕುನಿ, ಬೃಹದ್ರಥಾದಿಗಳು ಸಹ ಇಲ್ಲಿಗೆ ಬಂದಿದ್ದಾರೆ. ಇದು ಧರ್ಮಸಾಧನವಾದ ಯಾಗವೆಂದು ತಿಳಿದಿದ್ದಾರೆ, ಅದರೆ ಈ ಯಾಗಕ್ಕೆ ನಂದಗೋಪನ ಮಗನಲ್ಲದೆ ಇನ್ನಾರು ಅರ್ಹರಲ್ಲವೆಂದು ತಿಳಿಯುತ್ತದೆ ಎಂದು ಶಿಶುಪಾಲ ಹಂಗಿಸಿದನು.

ಅರ್ಥ:
ಮಹಿ: ಭೂಮಿ; ಮಹೀಶ್ವರ: ರಾಜ; ಬಂದು: ಆಗಮಿಸು; ನೃಪ: ರಾಜ; ಐತಂದು: ಆಗಮಿಸು;
ಧರ್ಮ: ಧಾರಣ ಮಾಡಿದುದು; ಸಾಧನ: ಗುರಿಮುಟ್ಟುವ ಪ್ರಯತ್ನ; ಬಯಸು: ಇಷ್ಟಪಡು; ಯಾಗ: ಯಜ್ಞ, ಕ್ರತು; ಮಕ್ಕಳು: ತನುಜ; ಯೋಗ್ಯ: ಅರ್ಹತೆ;

ಪದವಿಂಗಡಣೆ:
ವಿಂದನ+ಅನುವಿಂದಾ +ಮಹೀಶರು
ಬಂದಿರೈ +ಕಾಂಭೋಜ +ನೃಪನೈ
ತಂದೆಲಾ +ಗಾಂಧಾರ +ಶಕುನಿ+ ಬೃಹದ್ರಥಾಗಿಗಳು
ಬಂದರಿಲ್ಲಿಗೆ+ ಧರ್ಮಸಾಧನ
ವೆಂದು +ಬಯಸಿದಿರ್+ಇವರ +ಯಾಗಕೆ
ನಂದಗೋಪನ +ಮಕ್ಕಳಲ್ಲದೆ +ಯೋಗ್ಯರಿಲ್ಲೆಂದ

ಅಚ್ಚರಿ:
(೧) ರಾಜ ಮತ್ತು ರಾಜ್ಯರ ಹೆಸರು – ವಿಂದ, ಅನುವಿಂದ, ಕಾಂಭೋಜ, ಗಾಂಧಾರ, ಶಕುನಿ, ಬೃಹದ್ರಥ
(೨)ಮಹೀಶ, ನೃಪ – ಸಮನಾರ್ಥಕ ಪದ