ನುಡಿಮುತ್ತುಗಳು: ಸಭಾ ಪರ್ವ, ೯ ಸಂಧಿ

  • ಹಳ್ಳಿಕಾರರ ನಾರಿಯರ ನೆರೆಮಿಂಡನಲ್ಲದೆ ಯೋಗ್ಯರಿಲ್ಲೆಂದ – ಪದ್ಯ ೨೬
  • ಕುರುಬರೂರಲಿ ಗಾಜು ಮಾಣಿಕವರಿಯದವರಿಗೆ – ಪದ್ಯ ೩೪
  • ಬೀವಿನಾರವೆಯೊಳಗೆ ಕಳಹಂಸಾವಳಿಗೆ ರಮ್ಯವೆ – ಪದ್ಯ ೩೬
  • ಜಪಾ ಕುಸುಮಾವಳಿಗಳಲಿ ಮಧುಕರನ ಮೋಹರಕೆ ಮನ್ನಣೆಯೆ – ಪದ್ಯ ೩೬

ಪದ್ಯ ೨೬: ಕೃಷ್ಣನನ್ನು ಯಾರಿಗೆ ಹೋಲಿಸಿ ಹೀಯಾಳಿಸಲಾಯಿತು?

ಭೂರಿ ಭೂರಿಶ್ರವರು ನಿಮ್ಮೊಳ
ಗಾರ ಹೊಯ್ದರು ಸೋಮದತ್ತ ಮ
ಹೀರಮಣನತಿ ಮಾನ್ಯನಲ್ಲಾ ಅಗ್ರಪೂಜೆಯಲಿ
ಸಾರಧರ್ಮವಿದೆಂದು ಬಂದೆ ವಿ
ದಾರು ಬಲ್ಲರು ಹಳ್ಳಿಕಾರರ
ನಾರಿಯರ ನೆರೆಮಿಂಡನಲ್ಲದೆ ಯೋಗ್ಯರಿಲ್ಲೆಂದ (ಸಭಾ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೂರಿ, ಭೂರಿಶ್ರವರನ್ನೇಕೆ ಪೂಜಿಸಲಿಲ್ಲ. ನಿಮ್ಮಲ್ಲಿ ಯಾರನ್ನಾದರೂ ಅವರು ಹೊಡೆದಿದ್ದರೇ? ಅಗ್ರಪೂಜೆಗೆ ಸೋಮದತ್ತನು ಅತಿ ಮಾನ್ಯನಲ್ಲವೇ? ರಾಜಸೂಯ ಯಾಗದಲ್ಲಿ ಭಾಗವಹಿಸುವುದು ಧರ್ಮದಸಾರ ಎಂದುಕೊಂಡು ನಾವಿಲ್ಲಿಗೆ ಬಂದೆವು. ಹಳ್ಳಿಯ ಹೆಣ್ಣುಗಳೊಡನೆ ವ್ಯಭಿಚಾರ ಮಾಡುವ ಜಾರನೇ ಅಗ್ರಪೂಜೆಗೆ ಪಾತ್ರನೆಂದು ಯಾರಿಗೆ ಗೊತ್ತು?

ಅರ್ಥ:
ಹೊಯ್ದು: ಹೊಡೆದು; ಮಹೀರಮಣ: ರಾಜ; ಮಹೀ:ಭೂಮಿ; ರಮಣ: ಪ್ರಿಯ, ಹಿತವನ್ನು ಉಂಟುಮಾಡುವಂತಹುದು; ಮಾನ್ಯ: ಗೌರವ; ಅಗ್ರ: ಆದಿ; ಪೂಜೆ: ಆರಾಧನೆ; ಸಾರ: ಶ್ರೇಷ್ಠವಾದ; ಧರ್ಮ: ಧಾರಣೆ ಮಾಡುವಂತಹದು; ಬಂದೆ: ಆಗಮಿಸಿದೆ; ಬಲ್ಲರು: ತಿಳಿದವರು; ಹಳ್ಳಿ: ಗ್ರಾಮ; ನಾರಿ: ಹೆಣ್ಣು; ನೆರೆ: ಜೊತೆ; ಮಿಂಡ: ವೀರ, ಶೂರ; ಯೋಗ್ಯ: ಅರ್ಹತೆ;

ಪದವಿಂಗಡಣೆ:
ಭೂರಿ +ಭೂರಿಶ್ರವರು +ನಿಮ್ಮೊಳಗ್
ಆರ+ ಹೊಯ್ದರು +ಸೋಮದತ್ತ+ ಮ
ಹೀರಮಣನ್+ಅತಿ +ಮಾನ್ಯನಲ್ಲಾ +ಅಗ್ರಪೂಜೆಯಲಿ
ಸಾರಧರ್ಮವಿದೆಂದು +ಬಂದೆ +ವಿ
ದಾರು +ಬಲ್ಲರು +ಹಳ್ಳಿಕಾರರ
ನಾರಿಯರ +ನೆರೆಮಿಂಡನಲ್ಲದೆ+ ಯೋಗ್ಯರಿಲ್ಲೆಂದ

ಅಚ್ಚರಿ:
(೧) ರಾಜರ ಹೆಸರುಗಳ ಪರಿಚಯ: ಭೂರಿ, ಭೂರಿಶ್ರವ, ಸೋಮದತ್ತ
(೨) ಕೃಷ್ಣನನ್ನು ಬಯ್ಯುವ ಪರಿ – ಹಳ್ಳಿಕಾರರ ನಾರಿಯರ ನೆರೆಮಿಂಡನಲ್ಲದೆ ಯೋಗ್ಯರಿಲ್ಲೆಂದ

ಪದ್ಯ ೨೫: ಯಾವ ರಾಜರು ಯಾಗಕ್ಕೆ ಯೋಗ್ಯರು?

ಉರುವ ನೃಪನಲ್ಲಾ ಸುದಕ್ಷಿಣ
ನರಿಯಿರೇ ಮಾಳವನನೀತನ
ಮರೆದಿರೇ ಸಾಲ್ವನನು ಭೀಷ್ಮಕ ರುಕ್ಮ ಭೂಪತಿಯ
ಮೊರೆಯ ಮರೆದಿರೆ ಶಲ್ಯಭೂಪತಿ
ಹೊರಗಲಾ ವರ ರಾಜಸೂಯಕೆ
ಕರುವ ಕಾವವನಲ್ಲದುಳಿದರು ಯೋಗ್ಯರಲ್ಲೆಂದ (ಸಭಾ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸುದಕ್ಷಿಣನು ಶ್ರೇಷ್ಠನಾದ ನೃಪನಲ್ಲವೇ? ತಿಳಿಯಿರೇ ನೀವು ಮಾಳವನು, ಅವನನ್ನು ಮರೆತಿರೇ? ಸಾಲ್ವ, ಭೀಷ್ಮಕ, ರುಕ್ಮ ರಾಜರುಗಳನ್ನು ಮರೆತಿರಾ? ಶಲ್ಯನು ಹೊರಗಿನವನಾದನೇ? ಈ ಯಾಗಕ್ಕೆ ಈ ಕರುಗಳನ್ನು ಕಾಯುವವರನ್ನು ಬಿಟ್ಟರೆ ಇನ್ನಾರು ಯೋಗ್ಯರಲ್ಲವೆಂದು ತೋರುತ್ತದೆ.

ಅರ್ಥ:
ಉರುವ: ಶ್ರೇಷ್ಠ; ನೃಪ: ರಾಜ; ಅರಿ: ತಿಳಿ; ಮರೆ: ನೆನಪಿನಿಂದ ದೂರ ಮಾಡು; ಭೂಪತಿ: ರಾಜ; ಮೊರೆ: ದುಂಬಿಯ ಧ್ವನಿ; ಹೊರಗೆ: ಆಚೆ; ವರ: ಶ್ರೇಷ್ಠ; ರಾಜಸೂಯ: ಚಕ್ರವರ್ತಿಯು ಮಾಡುವ ಒಂದು ಬಗೆಯ ಯಾಗ; ಕರು: ಗೋವಿನ ಮರಿ; ಕಾವವ: ಕಾಯುವ; ಉಳಿದರು: ಮಿಕ್ಕವರು; ಯೋಗ್ಯ: ಅರ್ಹತೆ;

ಪದವಿಂಗಡಣೆ:
ಉರುವ +ನೃಪನಲ್ಲಾ +ಸುದಕ್ಷಿಣನ್
ಅರಿಯಿರೇ +ಮಾಳವನನ್+ಈತನ
ಮರೆದಿರೇ +ಸಾಲ್ವನನು +ಭೀಷ್ಮಕ +ರುಕ್ಮ +ಭೂಪತಿಯ
ಮೊರೆಯ+ ಮರೆದಿರೆ+ ಶಲ್ಯಭೂಪತಿ
ಹೊರಗಲಾ+ ವರ+ ರಾಜಸೂಯಕೆ
ಕರುವ +ಕಾವವನಲ್ಲದ್+ಉಳಿದರು +ಯೋಗ್ಯರಲ್ಲೆಂದ

ಅಚ್ಚರಿ:
(೧) ರಾಜರ ಪರಿಚಯ – ಸುದಕ್ಷಿಣ, ಮಾಳವ, ಸಾಲ್ವ, ಭೀಷ್ಮಕ, ರುಕ್ಮ
(೨) ನೃಪ, ಭೂಪತಿ – ಸಮನಾರ್ಥಕ ಪದ
(೩) ಭೂಪತಿ – ೩, ೪ ಸಾಲಿನ ಕೊನೆಯ ಪದ