ಪದ್ಯ ೨೭: ಮಿತ್ರಭಾವದಿಂದ ಯುಧಿಷ್ಠಿರನ ಜೊತೆ ಯಾರು ಸೇರಿದರು?

ವೀರ ಪಾರ್ಥನಿಗಿರುಳು ಸೋತಂ
ಗಾರವರ್ಮನು ಗಗನಚರ ಪರಿ
ವಾರ ಬಹಳದಿ ಬಂದು ಕಂಡನು ಕಲಿ ಯುಧಿಷ್ಠಿರನ
ಕೌರವೇಂದ್ರನ ನೋಯಿಸಿದ ಧುರ
ಧೀರ ಸಾಹಸ ಚಿತ್ರಸೇನನು
ದಾರ ಗುಣನಿಧಿ ಬಂದು ಕಂಡನು ಮಿತ್ರಭಾವದಲಿ (ಉದ್ಯೋಗ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ರಾತ್ರಿಯ ಯುದ್ಧದಲ್ಲಿ ಅರ್ಜುನನಿಗೆ ಸೋತಿದ್ದ ಗಂಧರ್ವ ಅಂಗಾರವರ್ಮನು ಹೆಚ್ಚಿನ ಪರಿವಾರದೊಡನೆ ಧರ್ಮಜನನನ್ನು ಕಂಡು ಅವನ ಜೊತೆ ಸೇರಿದನು. ಘೋಷಯಾತ್ರೆಯಲ್ಲಿ ಕೌರವನನ್ನು ಸೆರೆ ಹಿಡಿದಿದ್ದ ಚಿತ್ರಸೇನನು ಮಿತ್ರಭಾವದಿಂದ ಪಾಂಡವರ ಜೊತೆಗೂಡಿದನು.

ಅರ್ಥ:
ವೀರ: ಶೂರ; ಪಾರ್ಥ: ಅರ್ಜುನ; ಇರುಳು: ರಾತ್ರಿ; ಸೋತು: ಪರಾಜಯ; ಗಗನಚರ: ಆಕಾಶದಲ್ಲಿ ಚಲಿಸುವ; ಗಗನ: ಆಕಾಶ; ಚರ: ಚಲಿಸುವ; ಪರಿವಾರ: ಕುಟುಂಬ, ಸಂಸಾರ; ಬಹಳ: ತುಂಬ;ಬಂದು: ಆಗಮಿಸಿ; ಕಂಡು: ನೋಡಿ; ಕಲಿ: ಶೂರ; ನೋಯಿಸು: ಬೇನೆ, ಅಳಲು; ಧುರ: ಯುದ್ಧ, ಕಾಳಗ; ಧೀರ: ಶೂರ; ಸಾಹಸ: ಪರಾಕ್ರಮ, ಶೌರ್ಯ; ಉದಾರ: ಧಾರಾಳ ಸ್ವಭಾವದ; ಗುಣ: ಸ್ವಭಾವ; ನಿಧಿ: ಐಶ್ವರ್ಯ; ಮಿತ್ರ: ಸ್ನೇಹ; ಭಾವ: ಭಾವನೆ;

ಪದವಿಂಗಡಣೆ:
ವೀರ+ ಪಾರ್ಥನಿಗ್+ಇರುಳು +ಸೋತ್+
ಅಂಗಾರವರ್ಮನು +ಗಗನಚರ+ ಪರಿ
ವಾರ +ಬಹಳದಿ +ಬಂದು +ಕಂಡನು +ಕಲಿ +ಯುಧಿಷ್ಠಿರನ
ಕೌರವೇಂದ್ರನ +ನೋಯಿಸಿದ+ ಧುರ
ಧೀರ +ಸಾಹಸ +ಚಿತ್ರಸೇನನ್
ಉದಾರ +ಗುಣನಿಧಿ+ ಬಂದು +ಕಂಡನು +ಮಿತ್ರ+ಭಾವದಲಿ

ಅಚ್ಚರಿ:
(೧) ವೀರ, ಧೀರ, ಕಲಿ – ಸಮನಾರ್ಥಕ ಪದ
(೨) ಬಂದು ಕಂಡನು – ೩, ೬ ಸಾಲಿನಲ್ಲಿ ಬರುವ ಪದಗಳು

ಪದ್ಯ ೨೬: ವಿಂದ್ಯಪರ್ವತದ ಯಾವ ರಾಜರು ಪಾಂಡವರ ಜೊತೆ ಸೇರಿದರು?

ಕ್ಷತ್ರಧರ್ಮನು ನೀಲನು ಬೃಹ
ತ್ಕ್ಷತ್ರ ಶೌರಿಯ ತನುಜ ವತ್ಸಜ
ಚಿತ್ರವರ್ಮ ಹಿರಣ್ಯವರ್ಮನು ಚಾರು ಚೇಷ್ಟಕನು
ಶತ್ರುಮಥನನು ವಿಂಧ್ಯಗಿರಿಯ ಸು
ಹೋತ್ರನನ್ವಯದವರು ಪಾಂಡವ
ಮಿತ್ರರೊದಗಿತು ಕೇಳು ಜನಮೇಜಯ ಮಹೀಪಾಲ (ಉದ್ಯೋಗ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕ್ಷತ್ರಧರ್ಮ, ನೀಲ, ಬೃಹತ್ಕ್ಷತ್ರ, ಮನ್ಮಥ, ಅನಿರುದ್ಧ, ಚಿತ್ರವರ್ಮ, ಹಿರಣ್ಯವರ್ಮ, ಚರುಚೇಷ್ಟಕ, ವಿಂಧ್ಯಪರ್ವತದಲ್ಲಿದ್ದ ಸುಹೋತ್ರ ವಂಶದವರು ಮೊದಲಾದ ಪಾಂಡವರ ಮಿತ್ರರಾಜರು ಯುದ್ಧ ಸನ್ನದ್ಧರಾಗಿ ಬಂದಿದ್ದರು.

ಅರ್ಥ:
ಶೌರಿ: ವಿಷ್ಣು; ತನುಜ: ಮಗ; ವತ್ಸ: ಮಗ; ಗಿರಿ: ಬೆಟ್ಟ; ಅನ್ವಯ:ವಂಶ; ಮಿತ್ರ: ಸ್ನೇಹಿತ; ಮಹೀಪಾಲ; ರಾಜ;

ಪದವಿಂಗಡಣೆ:
ಕ್ಷತ್ರಧರ್ಮನು +ನೀಲನು +ಬೃಹ
ತ್ಕ್ಷತ್ರ+ ಶೌರಿಯ ತನುಜ+ ವತ್ಸಜ
ಚಿತ್ರವರ್ಮ +ಹಿರಣ್ಯವರ್ಮನು +ಚಾರು ಚೇಷ್ಟಕನು
ಶತ್ರುಮಥನನು +ವಿಂಧ್ಯಗಿರಿಯ +ಸು
ಹೋತ್ರನನ್+ಅನ್ಯಯದವರು +ಪಾಂಡವ
ಮಿತ್ರರೊದಗಿತು+ ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ಕ್ಷತ್ರ, ಬೃಹತ್ಕ್ಷತ್ರ – ಪ್ರಾಸ ಪದಗಳು
(೨) ತನುಜ, ವತ್ಸ – ಸಮನಾರ್ಥಕ ಪದ
(೩) ಹೆಸರುಗಳು – ಕ್ಷತ್ರಧರ್ಮ, ನೀಲ, ಬೃಹತ್ಕ್ಷತ್ರ, ಚಿತ್ರವರ್ಮ, ಹಿರಣ್ಯವರ್ಮ, ಚಾರುಚೇಷ್ಟಕ

ಪದ್ಯ ೨೫: ಒಟ್ಟು ಎಷ್ಟು ಅಕ್ಷೋಹಿಣಿ ಸೈನ್ಯ ಪಾಂಡವರ ಬಳಿ ಇತ್ತು?

ಚೈದ್ಯದೇಶದ ಧೃಷ್ಟಕೇತು ಬ
ಲೋದಧಿಯನಕ್ಷೋಹಿಣಿಯ ಮೊದ
ಲಾದುದೆನೆ ತೋರಿದನು ಕುಂತೀಭೋಜನಕ್ಷೋಣಿ
ಆದವೇಳಕ್ಷೋಣಿ ಬಲ ಬೇ
ರಾದ ನಾಯಕ ವಾಡಿಯಲಿ ಹಿರಿ
ದಾದುದಾಹವ ಸೇನೆ ಗೋಚರವಲ್ಲ ಗಣನೆಯಲಿ (ಉದ್ಯೋಗ ಪರ್ವ, ೧೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಚೈದ್ಯದೇಶದ ಧೃಷ್ಟಕೇತು, ಕುಂತೀಭೋಜ ಇವರು ಒಂದೊಂದು ಅಕ್ಷೋಹಿಣಿ ಸೈನ್ಯವನ್ನು ತೋರಿಸಿದರು. ಏಳು ಅಕ್ಷೋಹಿಣಿ ಸೈನ್ಯವಲ್ಲದೆ ಸೇನಾ ನಾಯಕರ ಕೈಕೆಳಗೆ ಯುದ್ಧ ಸನ್ನದ್ಧ ಸೇನೆ ಬೇಕಾದಷ್ಟಿದ್ದಿತು, ಅದರ ಎಣಿಕೆಯಿರಲಿಲ್ಲ.

ಅರ್ಥ:
ದೇಶ: ರಾಷ್ಟ್ರ; ಬಲ: ಸೈನ್ಯ; ಉದಧಿ: ಸಾಗರ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ;ಮೊದಲಾದ: ಮುಂತಾದ; ತೋರು: ಪ್ರದರ್ಶಿಸು; ಬಲ: ಶಕ್ತಿ, ಸೈನ್ಯ; ಬೇರೆ: ಅನ್ಯ; ನಾಯಕ: ಒಡೆಯ; ವಾಡಿ: ಬಿಡಾರ, ವಾಸಸ್ಥಳ; ಹಿರಿದು: ಹೆಚ್ಚು; ಆಹವ:ಯುದ್ಧ, ಕಾಳಗ; ಸೇನೆ: ಸೈನ್ಯ; ಗೋಚರ: ಕಾಣುವುದು; ಗಣನೆ: ಲೆಕ್ಕ;

ಪದವಿಂಗಡಣೆ:
ಚೈದ್ಯ+ದೇಶದ +ಧೃಷ್ಟಕೇತು +ಬಲ
ಉದಧಿಯನ್+ಅಕ್ಷೋಹಿಣಿಯ +ಮೊದ
ಲಾದುದೆನೆ+ ತೋರಿದನು +ಕುಂತೀಭೋಜನ್+ಅಕ್ಷೋಣಿ
ಆದವ್+ಏಳ್+ಅಕ್ಷೋಣಿ +ಬಲ +ಬೇ
ರಾದ +ನಾಯಕ +ವಾಡಿಯಲಿ +ಹಿರಿ
ದಾದುದ್+ಆಹವ +ಸೇನೆ +ಗೋಚರವಲ್ಲ +ಗಣನೆಯಲಿ

ಅಚ್ಚರಿ:
(೧) ಅಕ್ಷೋಣಿ – ೩ ಬಾರಿ ಪ್ರಯೋಗ

ಪದ್ಯ ೨೪: ಯಾವ ರಾಜರು ತಮ್ಮ ಅಕ್ಷೋಹಿಣೀ ಸೈನ್ಯವನ್ನು ತೋರಿದರು?

ಜಯಸಮರ ಸಾಮಗ್ರ ಬಲ ಕೈ
ಕಯ ನೃಪಾಲರು ತಮ್ಮೊಳಕ್ಷೋ
ಣಿಯನು ತೋರಿದರಿಅವರಿಭಕಂದರದ ಭೂಪತಿಗೆ
ಭಯವಿಹೀನನು ಪಾಂಡ್ಯನೃಪ ಸೃಂ
ಜಯರು ಸೋಮಕ ಭೂಪರಕ್ಷೋ
ಣಿಯನು ತೋರಿದರವನಿ ಕುಸಿದುದು ದಳದ ಪದಹತಿಗೆ (ಉದ್ಯೋಗ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸಮರದಲ್ಲಿ ಗೆಲ್ಲುವ ಸಮಗ್ರತೆಯನ್ನುಳ್ಳ ಕೈಕಯ ರಾಜರು ಆನೆಯ ಮೇಲೆ ಕುಳಿತ ಧರ್ಮಜನಿಗೆ ಅಕ್ಷೋಹಿಣಿ ಸೈನ್ಯವನ್ನು ತೋರಿಸಿದರು. ಭಯವನ್ನು ತೊರೆದಿದ್ದ (ಅತಿ ಶೂರನಾದ) ಪಾಂಡ್ಯ ರಾಜರು, ಸೃಂಜಯರು, ಸೋಮಕರು ಇವರು ಸಹ ತಮ್ಮ ಅಕ್ಷೋಹಿಣೀ ಸೈನ್ಯವನ್ನು ತೊರಿದರು,ಈ ಅಕ್ಷೋಹಿಣೀ ಸೈನ್ಯದ ಪೆಟ್ಟಿಗೆ ಧರೆಯು ಕುಸಿಯಿತೋ ಎಂಬಂತೆ ತೋರುತ್ತಿತ್ತು.

ಅರ್ಥ:
ಜಯ: ವಿಜಯ, ಗೆಲುವು; ಸಮರ: ಯುದ್ಧ; ಸಾಮಗ್ರ: ಪೂರ್ಣ; ಬಲ: ಸೈನ್ಯ; ನೃಪ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ತೋರು: ಪ್ರದರ್ಶಿಸು; ಇಭ: ಆನೆ; ಕಂದರ: ಕುತ್ತಿಗೆ; ಭೂಪತಿ: ರಾಜ; ಭಯ:ಆಂಜಿಕೆ; ವಿಹೀನ: ಇಲ್ಲದ; ಭೂಪ: ರಾಜ; ಅವನಿ: ಭೂಮಿ; ಕುಸಿ: ಬೀಳು; ದಳ: ಸೈನ್ಯ; ಪದ: ಚರಣ; ಪದಹತ: ಕಾಲಿನಿಂದ ತುಳಿಯಲ್ಪಟ್ಟ; ಹತಿ: ಪೆಟ್ಟು, ಹೊಡೆತ;

ಪದವಿಂಗಡಣೆ:
ಜಯಸಮರ +ಸಾಮಗ್ರ +ಬಲ +ಕೈ
ಕಯ +ನೃಪಾಲರು+ ತಮ್ಮೊಳ್+ಅಕ್ಷೋ
ಣಿಯನು +ತೋರಿದರ್+ಇವರ್+ಇಭ+ಕಂದರದ +ಭೂಪತಿಗೆ
ಭಯವಿಹೀನನು +ಪಾಂಡ್ಯ+ನೃಪ+ ಸೃಂ
ಜಯರು +ಸೋಮಕ +ಭೂಪರ್+ಅಕ್ಷೋ
ಣಿಯನು +ತೋರಿದರ್+ಅವನಿ +ಕುಸಿದುದು +ದಳದ +ಪದಹತಿಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅವನಿ ಕುಸಿದುದು ದಳದ ಪದಹತಿಗೆ
(೨) ೨, ೫ ಸಾಲಿನ ಕೊನೆಯ ಪದ – ಅಕ್ಷೋಣಿ
(೩) ಜಯ, ಭಯ, ಕೈಕಯ – ಪ್ರಾಸ ಪದಗಳು
(೪) ಭೂಪತಿ, ಭೂಪ, ನೃಪ, ನೃಪಾಲ – ಸಮನಾರ್ಥಕ ಪದ