ಪದ್ಯ ೧೩: ಕೃಷ್ಣನು ಕರ್ಣನಿಗೆ ಏನು ಹೇಳಿದ?

ಏನು ಹೇಳೈ ಕರ್ಣ ಚಿತ್ತ
ಗ್ಲಾನಿಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ದು
ಮ್ಮಾನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನು ಚಿಂತಾಕ್ರಾಂತನಾಗಿರುವುದನ್ನು ಕಂಡು ಕೃಷ್ಣನು, ಕರ್ಣ ಚಿತ್ತದಲ್ಲಿ ಏನು ದುಗುಡವಾಗಿದೆ ಏಕೆ ಸುಮ್ಮನೆ ಮೌನವಾಗಿದ್ದೀಯ? ಪಾಂಡವರನ್ನು ಓಲೈಸುವುದು ನಿನಗೆ ಇಷ್ಟವಲ್ಲವೇ? ಬೇಡವಾದರೆ ಏನೂ ಹಾನಿಯಿಲ್ಲ, ದುಃಖವೇಕೆ? ಮರುಳನಂತೆ ನೀನು ವರ್ತಿಸಬೇಡ, ನಿನ್ನ ಅಪದೆಸೆಯನ್ನು ನಾನು ಬಯಸುವವನಲ್ಲ ಎಂದು ಕೃಷ್ಣನು ಕರ್ಣನಿಗೆ ಹೇಳಿದನು.

ಅರ್ಥ:
ಹೇಳು: ಮಾತಾಡು; ಚಿತ್ತ: ಮನಸ್ಸು; ಗ್ಲಾನಿ:ಬಳಲಿಕೆ, ದಣಿವು, ನೋವು; ಮನ: ಮನಸ್ಸು; ಸೂನು: ಮಕ್ಕಳು; ಬೆಸ:ವಿಚಾರಿಸುವುದು; ಸೇರು: ಕೂಡು; ಹಾನಿ: ನಷ್ಟ; ಆಣೆ: ಪ್ರಮಾಣ; ನುಡಿ: ಮಾತು; ದುಮ್ಮಾನ: ದುಗುಡ, ದುಃಖ; ಮರುಳು:ಬುದ್ಧಿಭ್ರಮೆ, ಹುಚ್ಚು; ಬೇಡ: ಸಲ್ಲದು, ಕೂಡದು; ಅಪದೆಸೆ: ದುರ್ದಶೆ, ಕೆಟ್ಟ ಯೋಗ; ಬಯಸು: ಇಷ್ಟಪಡು; ಕೇಳು: ಆಲಿಸು;

ಪದವಿಂಗಡಣೆ:
ಏನು +ಹೇಳೈ +ಕರ್ಣ +ಚಿತ್ತ
ಗ್ಲಾನಿಯಾವುದು +ಮನಕೆ+ ಕುಂತೀ
ಸೂನುಗಳ +ಬೆಸಕೈಸಿ+ ಕೊಂಬುದು +ಸೇರದೇ +ನಿನಗೆ
ಹಾನಿಯಿಲ್+ಎನ್ನಾಣೆ +ನುಡಿ +ದು
ಮ್ಮಾನವೇತಕೆ +ಮರುಳುತನ +ಬೇಡ್
ಆನು +ನಿನ್+ಅಪದೆಸೆಯ +ಬಯಸುವನಲ್ಲ+ ಕೇಳೆಂದ

ಅಚ್ಚರಿ:
(೧) ಏನು, ಆನು – ಪ್ರಾಸ ಪದಗಳ ಬಳಕೆ
(೨) ಕರ್ಣನನ್ನು ಉತ್ತೇಜಿಸುವ ಮಾತು – ಹಾನಿಯಿಲ್ಲೆನ್ನಾಣೆ, ನಿನ್ನಪದೆಸೆಯ ಬಯಸುವವನಲ್ಲ

ನಿಮ್ಮ ಟಿಪ್ಪಣಿ ಬರೆಯಿರಿ