ಪದ್ಯ ೨೩: ಅಹಂಕಾರಕ್ಕೆ ಮಕ್ಕಳಾರು?

ಪರಮತತ್ತ್ವವೆ ತದ್ವಚನಗೋ
ಚರವವಿದ್ಯಾಶಕ್ತಿ ಬೊಮ್ಮದ
ವರಮಹತ್ತೆಂದೆನಿಸಿತಾತನ ಮಗನಹಂಕಾರ
ಸ್ಪುರದಹಂಕಾರಕ್ಕೆ ಮಕ್ಕಳು
ಮೆರೆದರಿವರು ಭೂತವೆಸರೊಳು
ಹರಹಿದಾವನ ದೆಸೆಯೊಳುದಿಸಿದುದಾತ ನೋಡೀತ (ಉದ್ಯೋಗ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇವನ ಮಾತೇ ಪರಮತತ್ತ್ವವು, ಇದು ಮಾತಿಗೆ ಸಿಲುಕದು, ಮಾತಿಗೆ ಸಿಲುಕುವುದು ಅವಿದ್ಯಾಶಕ್ತಿ. ಇದು ಬ್ರಹ್ಮನ ಮಹತತ್ವವೆನಿಸಿಕೊಂಡಿತು, ಈ ಮಹಾತತ್ವಕ್ಕೆ ಮಗನಾದವನೇ ಅಹಂಕಾರ, ಜಗತ್ತಿನಲ್ಲಿ ಈ ವಿಚಾರ ಯಾರ ದೆಸೆಯಿಂದಾಯಿತೋ ಅವನೇ ಇವನು (ಕೃಷ್ಣ) ಅಹಂಕಾರಕ್ಕೆ ಮಕ್ಕಳು ಪಂಚಮಹಾ ಭೂತಗಳು ಎಂದು ವಿವರ ಕೃಷ್ಣನ ಪರಮತತ್ವ ವಿಚಾರವನ್ನು ವಿವರಿಸಿದ.

ಅರ್ಥ:
ಪರಮ: ಶ್ರೇಷ್ಠ; ತತ್ತ್ವ: ಸಿದ್ಧಾಂತ; ವಚನ: ನುಡಿ, ಮಾತು; ಗೋಚರ: ಕಾಣುವ; ವಿದ್ಯ: ಜ್ಞಾನ; ಶಕ್ತಿ: ಬಲ; ಬೊಮ್ಮ: ಬ್ರಹ್ಮ; ವರ: ಅನುಗ್ರಹ; ಮಹತ್ತು: ಶ್ರೇಷ್ಠ; ಮಗ: ಸುತ; ಅಹಂಕಾರ: ದರ್ಪ; ಸ್ಪುರ: ಎದ್ದುಕಾಣುವ; ಮಕ್ಕಳು: ಸುತರು; ಮೆರೆ: ಹೊಳೆ; ಭೂತ: ಚರಾಚರಾತ್ಮಕ ಜೀವರಾಶಿ; ಹರಹು:ವಿಸ್ತಾರ, ವೈಶಾಲ್ಯ; ದೆಸೆ: ದಿಕ್ಕು; ಉದಿಸು: ಹುಟ್ಟು; ನೋಡು: ವೀಕ್ಷಿಸು;

ಪದವಿಂಗಡಣೆ:
ಪರಮ+ತತ್ತ್ವವೆ +ತದ್+ವಚನ+ಗೋ
ಚರವ್+ಅವಿದ್ಯಾಶಕ್ತಿ+ ಬೊಮ್ಮದ
ವರ+ಮಹತ್ತೆಂದ್+ಎನಿಸಿತ್+ಆತನ +ಮಗನ್+ಅಹಂಕಾರ
ಸ್ಪುರದ್+ಅಹಂಕಾರಕ್ಕೆ +ಮಕ್ಕಳು
ಮೆರೆದರ್+ಇವರು +ಭೂತವೆಸರೊಳು
ಹರಹಿದ್+ಆವನ +ದೆಸೆಯೊಳ್+ಉದಿಸಿದುದ್+ಆತ +ನೋಡೀತ

ನಿಮ್ಮ ಟಿಪ್ಪಣಿ ಬರೆಯಿರಿ