ಪದ್ಯ ೫೨: ಅರ್ಜುನನ ಪರಾಕ್ರಮವನ್ನು ಕೃಷ್ಣನು ಹೇಗೆ ವರ್ಣಿಸಿದನು?

ನರನ ಗಾಂಡೀವಪ್ರತಾಪ
ಸ್ಫುರಿತ ನಾರಾಚ ಪ್ರಚಂಡೋ
ತ್ಕರ ದವಾನಲನಿಂದವೀ ಕೌರವ ಕುಲಾರಣ್ಯ
ಉರಿದು ನಂದದೆ ಮಾಣದಧಿಕರೊ
ಳಿರದೆ ತೊಡಕುವುದಾಗದೆಂಬುದ
ನರಿಯೆಯಾ ನೀನೆಂದು ಜರೆದನು ಕೌರವಾಧಿಪನ (ಉದ್ಯೋಗ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೃಷ್ಣನು ಅರ್ಜುನನ ಪರಾಕ್ರಮವನ್ನು ಹೇಳುತ್ತಾ, ಅರ್ಜುನನ ಗಾಂಡಿವ ಧನುಸ್ಸಿನಿಂದ ಹೊರಟ ಬಾಣಗಳಿಂದ ಹೊತ್ತಿ ಆವರಿಸುವ ಪ್ರಚಂಡವಾದ ಕಾಡುಕಿಚ್ಚಿನಿಂದ ಕೌರವ ಕುಲವೆಂಬ ಅರಣ್ಯವು ಉರಿದು ಕರಿದಾಗದೆ ಬಿಡುವುದಿಲ್ಲ. ತಮಗಿಂದ ಅಧಿಕ ಪ್ರತಾಪಿಗಳೊಡನೆ ಯುದ್ಧ ಮಾಡಬಾರದೆಂಬ ತತ್ವವು ನಿನಗೆ ಗೊತ್ತಿಲ್ಲವೇ ಎಂದು ಕೃಷ್ಣನು ದುರ್ಯೋಧನನನ್ನು ನಿಂದಿಸಿದನು.

ಅರ್ಥ:
ನರ: ಅರ್ಜುನ; ಪ್ರತಾಪ: ಪರಾಕ್ರಮ; ಸ್ಫುರಿತ: ಹೊಳೆವ, ಪ್ರಕಾಶಿಸುವ; ನಾರಾಚ: ಬಾಣ; ಪ್ರಚಂಡ:ಭಯಂಕರವಾದುದು; ಉತ್ಕರ:ಸಮೂಹ; ದವ: ಕಾಡು, ಅರಣ್ಯ; ಅನಲ: ಬೆಂಕಿ; ಕುಲ: ವಂಶ; ಅರಣ್ಯ: ಕಾಡು; ಉರಿ: ಸುಡು; ನಂದು: ಆರಿಹೋಗು; ಮಾಣ್: ಬಿಡು; ಅಧಿಕ: ಹೆಚ್ಚು; ತೊಡಕು: ತೊಂದರೆ; ಅರಿ: ತಿಳಿ; ಜರೆ: ನಿಂದಿಸು; ಅಧಿಪ: ಒಡೆಯ;

ಪದವಿಂಗಡಣೆ:
ನರನ +ಗಾಂಡೀವ+ಪ್ರತಾಪ
ಸ್ಫುರಿತ +ನಾರಾಚ +ಪ್ರಚಂಡ
ಉತ್ಕರ +ದವಾನಲನಿಂದವ್+ಈ+ ಕೌರವ+ ಕುಲಾರಣ್ಯ
ಉರಿದು +ನಂದದೆ +ಮಾಣದ್+ಅಧಿಕರೊಳ್
ಇರದೆ+ ತೊಡಕುವುದಾಗದ್+ಎಂಬುದನ್
ಅರಿಯೆಯಾ +ನೀನೆಂದು +ಜರೆದನು+ ಕೌರವಾಧಿಪನ

ಅಚ್ಚರಿ:
(೧) ದವ, ಅರಣ್ಯ – ಸಮನಾರ್ಥಕ ಪದ
(೨) ಪ್ರತಾಪ, ಪ್ರಚಂಡ – ಪ್ರ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ