ಪದ್ಯ ೫೦: ಕೃಷ್ಣನ ದರುಶನ ಯಾವ ಭಯವನ್ನು ದೂರಮಾಡಿತು?

ಕಲಿಮಲದಿ ಹೊಲೆಗಲಸಿದಿಭಪುರಿ
ಯೊಳಗೆ ನಿರ್ಮಳವಾಯ್ತು ಕೃಷ್ಣನ
ಚೆಲುವ ದರುಶನದಿಂದ ಬೆಂದವು ಭವದ ಭಯಬೀಜ
ಲಲನೆಯರು ತಮತಮ್ಮ ನಯನಂ
ಗಳಿಗೆ ದೇವನ ತೆಗೆದು ಸನುಮತ
ಪುಳಕರಾದರು ಕೇಳು ಜನಮೇಜಯ ಮಹೀಪಾಲ (ಉದ್ಯೋಗ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಕಲಿಕಾಲದ ಕಲ್ಮಶಗಳಿಂದ ಕೂಡಿದ ಹಸ್ತಿನಾಪುರವು ಕೃಷ್ಣನ ಆಗಮನದಿಂದ ಪಾವನಗೊಂಡಿತು, ಕೃಷ್ಣನ ಸುಂದರ ರೂಪವನ್ನು ನೋಡಿ ಭವಸಾಗರದ ಭಯವು ದೂರವಾಯಿತು, ಸುಂದರಿಯರು ತಮ್ಮ ನಯನಗಳಿಂದ ಕೃಷ್ಣನ ದಿವ್ಯ ಸ್ವರೂಪವನ್ನು ಅಚ್ಚಿಳಿಸಿ ಒಳ್ಳೆಯ ಭಾವನೆಗಳಿಂದ ಆನಂದಭರಿತರಾದರು ಎಂದು ವೈಶಂಪಾಯನರು ಜನಮೇಜಯ ಮಹಾರಾಜನಿಗೆ ಹೇಳಿದರು.

ಅರ್ಥ:
ಕಲಿಮಲ: ಕಲಿಕಾಲದ ದುಷ್ಟ ವಾಸನೆಗಳು; ಹೊಲೆ:ಕೊಳಕು; ಇಭಪುರಿ: ಹಸ್ತಿನಾಪುರ; ನಿರ್ಮಳ: ಸ್ವಚ್ಛ; ಚೆಲುವು: ಸೌಂದರ್ಯ; ದರುಶನ: ನೋಟ; ಬೆಂದು: ಪಕ್ವಮಾಡು; ಭವ: ಜೀವಿತ ಕಾಲ; ಭಯ: ಅಂಜಿಕೆ; ಲಲನೆ: ಹೆಂಗಸರು; ನಯನ: ಕಣ್ಣು; ದೇವ: ಭಗವಂತ; ತೆಗೆ:ಎತ್ತಿಕೊಳ್ಳು; ಸನುಮತ: ಒಳ್ಳೆಯ ಮತ; ಪುಳಕ: ಮೈನವಿರೇಳುವಿಕೆ; ಮಹೀಪಾಲ: ರಾಜ;

ಪದವಿಂಗಡಣೆ:
ಕಲಿಮಲದಿ +ಹೊಲೆಗಲಸಿದ್+ಇಭಪುರಿ
ಯೊಳಗೆ +ನಿರ್ಮಳವಾಯ್ತು +ಕೃಷ್ಣನ
ಚೆಲುವ+ ದರುಶನದಿಂದ+ ಬೆಂದವು +ಭವದ+ ಭಯಬೀಜ
ಲಲನೆಯರು+ ತಮತಮ್ಮ+ ನಯನಂ
ಗಳಿಗೆ+ ದೇವನ+ ತೆಗೆದು+ ಸನುಮತ
ಪುಳಕರಾದರು +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ‘ಬ’ ಕಾರದ ತ್ರಿವಳಿ ಪದ – ಬೆಂದವು ಭವದ ಭಯಬೀಜ

ಪದ್ಯ ೪೯: ಶ್ರೀಕೃಷ್ಣನು ಓಲಗಕೆ ಹೇಗೆ ಬಂದನು?

ಎನುತ ಮಂಚವನಿಳಿದು ವರ ಕಾಂ
ಚನ ವರೂಥಕೆ ಕೈಗೊಡುವ ಯದು
ಜನಪರುಗ್ಗಡಣೆಯಲಿ ಬಿಜಯಂಗೈದನಸುರಾರಿ
ಮುನಿ ನಿಕರ ಸಂದಣಿಸಿತಭ್ರದೊ
ಳನಿಮಿಷಾವಳಿ ನೆರೆದುದಿಭಪುರ
ಜನವೊಡನೆ ನಡೆತರಲು ಹರಿ ಬರುತಿರ್ದನೋಲಗಕೆ (ಉದ್ಯೋಗ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ವಿದುರನಿಗೆ ದುರ್ಯೋಧನನು ಸಾವಿಗಂಜುವವನಲ್ಲ ಎಂದು ಹೇಳುತ್ತಾ ತನ್ನ ಆಸನದಿಂದ ಕೆಳಗಿಳಿದು, ಶ್ರೇಷ್ಠವಾದ ಚಿನ್ನದ ರಥವನ್ನು ಏರಿ ಇಬ್ಬದಿಯಲ್ಲಿ ನಿಂತ ಜನರ ಉತ್ಕಟತೆಯನ್ನು ನೋಡುತ್ತ ಹೊರಟನು. ಋಷಿ ಸಮೂಹವು ಸೇರಿದವು, ಆಗಸದಲ್ಲಿ ದೇವತೆಗಳ ಗುಂಪು, ಹಸ್ತಿನಾಪುರದ ಜನರು ಕೃಷ್ಣನು ಓಲಗಕೆ ಹೋಗುವುದನ್ನು ನೋಡಲಾರಂಭಿಸಿದರು.

ಅರ್ಥ:
ಎನುತ: ಹೀಗೆ ಹೇಳುತ್ತಾ; ಮಂಚ: ಆಸನ; ಇಳಿ: ಕೆಳಗಡೆ ಬಂದು; ವರ: ಶ್ರೇಷ್ಠ; ಕಾಂಚನ: ಚಿನ್ನ; ವರೂಥ: ತೇರು, ರಥ; ಜನಪ: ರಾಜ; ಯದು: ಯಾದವ; ಉಗ್ಗಡ: ಉತ್ಕಟತೆ, ಅತಿಶಯ; ಬಿಜಯಂಗೈ: ಆಗಮಿಸು, ಹೊರಡು; ಅಸುರಾರಿ: ಕೃಷ್ಣ; ಮುನಿ: ಋಷಿ; ನಿಕರ: ಗುಂಪು; ಸಂದಣಿ:ಗುಂಪು, ಸಮೂಹ; ಅನಿಮಿಷಾವಳಿ: ದೇವತೆಗಳ ಸಮೂಹ; ಅಭ್ರ: ಮೋಡ, ಆಗಸ; ನೆರೆ: ಸೇರು; ಇಭಪುರ: ಹಸ್ತಿನಾಪುರ; ವೊಡನೆ: ಜೊತೆ; ನಡೆ: ಚಲಿಸು; ಹರಿ: ಕೃಷ್ಣ; ಬರು: ಆಗಮಿಸು; ಓಲಗ: ದರ್ಬಾರು;

ಪದವಿಂಗಡಣೆ:
ಎನುತ +ಮಂಚವನ್+ಇಳಿದು +ವರ+ ಕಾಂ
ಚನ +ವರೂಥಕೆ+ ಕೈಗೊಡುವ +ಯದು
ಜನಪರ್+ಉಗ್ಗಡಣೆಯಲಿ+ ಬಿಜಯಂಗೈದನ್+ಅಸುರಾರಿ
ಮುನಿ +ನಿಕರ+ ಸಂದಣಿಸಿತ್+ಅಭ್ರದೊಳ್
ಅನಿಮಿಷಾವಳಿ +ನೆರೆದುದ್+ಇಭಪುರ
ಜನವೊಡನೆ+ ನಡೆತರಲು +ಹರಿ +ಬರುತಿರ್ದನ್+ಓಲಗಕೆ

ಅಚ್ಚರಿ:
(೧) ಕೃಷ್ಣನನ್ನು ಯದುಜನಪ, ಅಸುರಾರಿ ಎಂದು ಕರೆದಿರುವುದು
(೨) ದೇವತೆಗಳನ್ನು – ಅನಿಮಿಷಾವಳಿ ಎಂಬ ಪದದ ಬಳಕೆ
(೩) ನಿಕರ, ಆವಳಿ – ಸಮನಾರ್ಥಕ ಪದ