ಪದ್ಯ ೪೦: ಸಭೆಯಲ್ಲಿ ಕರಣಿಕರ ಪಾತ್ರವೇನು?

ಬರೆದ ಬಳಿಕದು ವಿಧಿಯ ಸೀಮೆಯ
ಬರಹ ನಿಜಕಾರ್ಯಾರ್ಥ ಲಾಭವು
ದೊರಕಿದೊಡೆ ಪತಿಯರ್ಥ ನೀರಲಿ ಬರೆದ ಲಿಪಿಯಂತೆ
ಕರಗುಪಿತ ಲೋಲುಪರು ಲಂಚದ
ಪರಮಜೀವನ ಜಾಣರಾ ಸಿರಿ
ಕರಣದವರೊಪ್ಪಿದರು ಭೂಪಾಲಕನ ಸಭೆಯೊಳಗೆ (ಉದ್ಯೋಗ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕರಣಿಕರು ತಾವು ಲೆಕ್ಕವನ್ನು ಬರೆದ ಬಳಿಕ ಅದು ವಿಧಿಯ (ಆಜ್ಞೆಯ) ಬರಹ ಆದುದರಿಂದ ಅದು ನಿಜವಾದ ಕಾರ್ಯಾರ್ಥವನ್ನು ತೋರುತ್ತದೆ, ಆದರೆ ಅದರಿಂದ ಲಾಭವು ದೊರಕಿದೊಡೆ ಅದು ಒಡೆಯನ ಅರ್ಥ ವೆಂದು ಭಾವಿಸಿ ನೀರಿನಲ್ಲಿ ಬರೆದಂತೆ ಅದು ಸಹ ಅಳಿಸಲಾಗುತ್ತದೆ, ತೆರಿಗೆಯನ್ನು ವಂಚಿಸುವರಲ್ಲಿ ನಿಸ್ಸೀಮರಾದವರು ಲಂಚನವನ್ನು ಕರಣಿಕರಿಗೆ ನೀಡುತ್ತಿದ್ದರು. ಲಂಚದಿಂದ ಜೀವನ ಮಾಡುವ ಜಾಣರಾದ ಕರಣಿಕರು ಸಭೆಯಲ್ಲಿ ನೆರೆದಿದ್ದರು.

ಅರ್ಥ:
ಬರೆ: ಅಕ್ಷರದಲ್ಲಿರಿಸು, ಲೇಖಿಸು; ಬಳಿಕ: ನಂತರ; ವಿಧಿ: ಆಜ್ಞೆ, ಆದೇಶ; ಸೀಮೆ: ಎಲ್ಲೆ, ಗಡಿ, ಮೇರೆ; ಬರಹ: ಬರವಣಿಗೆ; ನಿಜ: ಸತ್ಯ, ನೈಜ; ಕಾರ್ಯ: ಕೆಲಸ; ಪತಿ: ಒಡೆಯ; ಅರ್ಥ: ಅಭಿಪ್ರಾಯ; ಲಾಭ: ಪ್ರಯೋಜನ; ದೊರಕು: ಪಡೆ; ಕರ: ತೆರಿಗೆ; ಕರಗುಪಿತ ಲೋಲುಪರು: ತೆರಿಗೆಯನ್ನು ಬಚ್ಚಿಡುವುದರಲ್ಲಿ ಆಸಕ್ತಿಯುಳ್ಳವರು; ಲಂಚ: ಕಾರ್ಯಸಾಧನೆಗಾಗಿ ಅಕ್ರಮವಾಗಿ ಪಡೆಯುವ ಅಥವ ಕೊಡುವ ಹಣ; ಪರಮ: ಶ್ರೇಷ್ಠ; ಜೀವನ: ಬದುಕು; ಜಾಣ: ಬುದ್ಧಿವಂತ; ಸಿರಿ: ಐಶ್ವರ್ಯ; ಕರಣ: ಕೆಲಸ, ಸಾಮಗ್ರಿ; ಒಪ್ಪು: ಒಪ್ಪಿಗೆ, ಸಮ್ಮತಿ; ಭೂಪಾಲಕ: ರಾಜ; ಸಭೆ: ದರ್ಬಾರು; ಸಿರಿಕರಣ: ಶ್ರೇಷ್ಠವಾದ ಕರಣಿಕರು, ಲೆಕ್ಕಬರೆಯುವವರು;

ಪದವಿಂಗಡಣೆ:
ಬರೆದ +ಬಳಿಕದು +ವಿಧಿಯ +ಸೀಮೆಯ
ಬರಹ+ ನಿಜಕಾರ್ಯಾ+ಅರ್ಥ +ಲಾಭವು
ದೊರಕಿದೊಡೆ +ಪತಿಯರ್ಥ+ ನೀರಲಿ+ ಬರೆದ+ ಲಿಪಿಯಂತೆ
ಕರಗುಪಿತ+ ಲೋಲುಪರು+ ಲಂಚದ
ಪರಮಜೀವನ +ಜಾಣರಾ+ ಸಿರಿ
ಕರಣದವರ್+ಒಪ್ಪಿದರು +ಭೂಪಾಲಕನ+ ಸಭೆಯೊಳಗೆ

ಅಚ್ಚರಿ:
(೧) ಉಪಮಾನದ ಬಳಕೆ – ನೀರಲ್ಲಿ ಬರೆದ ಲಿಪಿಯಂತೆ
(೨) ಜೋಡಿ ಪದಗಳ ಬಳಕೆ – ಬರೆದ ಬಳಿಕದು, ಲೋಲುಪರು ಲಂಚದ

ಪದ್ಯ ೩೯: ವಿದ್ವಾಂಸರ ಗುಂಪು ಯಾವ ರೀತಿ ಪ್ರತಿಕ್ರಯಿಸಿತು?

ನುತ ಶುಭೋದಯ ಜೀಯ ಶತ್ರು
ಪ್ರತತಿ ಸಂಹಾರಕ ಸಮಸ್ತ
ಕ್ಷಿತಿಪತಿ ಬ್ರಹ್ಮಾಯುರಸ್ತುವೆನುತ್ತ ಕೈ ನೆಗಹಿ
ನುತಗುಣನ ಬಿರುದಾವಳಿಯ ಸಂ
ಗತಿಯನಭಿವರ್ಣಿಸುವ ಸಮಯೋ
ಚಿತದ ಮನ್ನಣೆವಡೆದು ಮೆರೆದುದು ಭಟ್ಟ ಸಂದೋಹ (ಉದ್ಯೋಗ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಕೃಷ್ಣನ ಆಗಮನವನ್ನು ವಿದ್ವಾಂಸರು ಕೊಂಡಾಡಿದರು. ಎಲೈ ರಾಜನೆ ಇಂದು ಮಂಗಳಕರವಾದ ದಿನದ ಉದಯ, ಶತ್ರುರಾಜರ ಗುಂಪಿನ ಸಂಹಾರಕ ಸಮಸ್ತ ರಾಜರಿಗೆ ಬ್ರಹ್ಮನ ಆಯಸ್ಸನ್ನು ದಯಪಾಲಿಸುವವನೆ ನಿನ್ನ ಹಸ್ತವನ್ನು ಮೇಲೆತ್ತುವವ, ಒಳ್ಳೆಯ ಗುಣಗಳ ಆಗರನೆಂದು ಕೃಷ್ಣನ ಹಲವಾರು ಬಿರುದಾವಳಿಯಿಂದ ವರ್ಣಿಸುತ್ತಾ, ಆ ಸಮಯಕ್ಕೆ ಸರಿಯಾದ ಗೌರವವನ್ನು ನೀಡಿ ವಿದ್ವಾಂಸರ ಗುಂಪು ಹೊಳೆಯುತ್ತಿತ್ತು.

ಅರ್ಥ:
ನುತ: ಕೊಂಡಾಡು, ಹೊಗಳು; ಶುಭ: ಮಂಗಳ; ಉದಯ: ಹುಟ್ಟು; ಶುಭೋದಯ: ಮಂಗಳ ಮುಂಜಾನೆ; ಜೀಯ: ಒಡೆಯ; ಶತ್ರು: ವೈರಿ; ಪ್ರತತಿ: ಸಮೂಹ, ಗುಂಪು; ಸಂಹಾರ: ನಾಶ; ಸಮಸ್ತ: ಎಲ್ಲ; ಕ್ಷಿತಿ: ಭೂಮಿ; ಕ್ಷಿತಿಪತಿ: ರಾಜ; ಬ್ರಹ್ಮ: ಪರಮಾತ್ಮ; ಆಯುರ್: ಆಯಸ್ಸು; ಅಸ್ತು: ಆಗಲಿ; ಕೈ: ಕರ; ನೆಗಹು: ಮೇಲೆತ್ತು; ಗುಣ: ನಡತೆ, ಸ್ವಭಾವ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಆವಳಿ: ಸಾಲು; ಸಂಗತಿ: ಸೇರುವಿಕೆ, ಸಹವಾಸ; ಅಭಿವರ್ಣನೆ: ವಿಶೇಷ ವರ್ಣನೆ; ಸಮಯೋಚಿತ: ಆಯಾ ಸಂದರ್ಭಕ್ಕೆ ತಕ್ಕುದು; ಮನ್ನಣೆ: ಗೌರವ, ಮರ್ಯಾದೆ; ಮೆರೆ: ಹೊಳೆ, ಪ್ರಕಾಶಿಸು; ಭಟ್ಟ: ವಿದ್ವಾಂಸ; ಸಂದೋಹ: ಗುಂಪು, ಸಮೂಹ;

ಪದವಿಂಗಡಣೆ:
ನುತ +ಶುಭೋದಯ+ ಜೀಯ +ಶತ್ರು
ಪ್ರತತಿ+ ಸಂಹಾರಕ+ ಸಮಸ್ತ
ಕ್ಷಿತಿಪತಿ+ ಬ್ರಹ್ಮ+ಆಯುರ್+ಅಸ್ತು+ಎನುತ್ತ +ಕೈ +ನೆಗಹಿ
ನುತಗುಣನ+ ಬಿರುದಾವಳಿಯ +ಸಂ
ಗತಿಯನ್+ಅಭಿವರ್ಣಿಸುವ +ಸಮಯೋ
ಚಿತದ +ಮನ್ನಣೆವಡೆದು+ ಮೆರೆದುದು +ಭಟ್ಟ +ಸಂದೋಹ

ಅಚ್ಚರಿ:
(೧) ಸಂಹಾರಕ, ಸಮಸ್ತ, ಸಮಯೋಚಿತ – ಸ ಕಾರದ ಪದಗಳ ಬಳಕೆ
(೨) ಪ್ರತತಿ, ಕ್ಷಿತಿಪತಿ – ಪ್ರಾಸ ಪದಗಳು
(೩) ನುತ – ೧, ೩ ಸಾಲಿನ ಮೊದಲ ಪದ