ಪದ್ಯ ೨೬: ದುರ್ಯೋಧನನು ವಿದುರನಿಗೆ ಏನು ಹೇಳಿದ?

ಓಲಗದೊಳಿರ್ದಖಿಳ ಮೂರ್ಖರ
ಮೌಳಿಯನು ಕಂಡವಧರಿಸು ಸಿರಿ
ಲೋಲ ಬಿಜಯಂಗೈಯಲವಸರವುಂಟೆ ಹೇಳೆನಲು
ನಾಳೆ ಕಾಣಿಸಿ ಕೊಂಬೆವಿನ್ನೇ
ನಾಳಿಕಾರನ ಬರವು ಹಗೆವರ
ಪಾಲಿಸುವ ಭರ ಸಂಧಿಕಾರ್ಯಕೆ ಬಾರದಿರನೆಂದ (ಉದ್ಯೋಗ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿದುರನು ದುರ್ಯೋಧನನ ಅರಮನೆಗೆ ಹೋದನು. ಮೂರ್ಖರಗುಂಪಿನ ಶಿಖರಪ್ರಾಯನಾಗಿದ್ದ ದುರ್ಯೋಧನನ್ನು ಕಂಡು ವಿದುರನು ಕೃಷ್ಣನು ಬಂದಿರುವನು ಎಂದು ಹೇಳಿದನು. ಅದಕ್ಕೇನು ಅವಸರ, ನಾಳೆ ನಾವು ಅವನನ್ನು ನೋಡುವೆವು ನಮ್ಮ ವೈರಿಗಳಾದ ಪಾಂಡವರನ್ನು ಪಾಲಿಸುವ ಭರದಿಂದ ಸಂಧಿಕಾರ್ಯಕ್ಕೆ ಬಾರದೇ ಹೋಗುವವನೇ ಎಂದು ದುರ್ಯೋಧನನು ನುಡಿದನು.

ಅರ್ಥ:
ಓಲಗ: ದರ್ಬಾರು; ಅಖಿಳ: ಎಲ್ಲಾ; ಮೂರ್ಖ: ಅವಿವೇಕಿ; ಮೌಳಿ: ಶಿರ, ಕಿರೀಟ; ಕಂಡು: ನೋಡಿ; ಅವಧರಿಸು: ಮನಸ್ಸಿಟ್ಟು ಕೇಳು; ಸಿರಿ: ಲಕ್ಷ್ಮಿ; ಲೋಲ: ಪ್ರೀತಿಯುಳ್ಳವನು; ಬಿಜಯಂಗೈ: ದಯಮಾಡಿಸು; ಅವಸರ: ಬೇಗ, ಕಾರ್ಯ; ಹೇಳು: ತಿಳಿಸು; ಕಾಣಿಸು: ತೋರು; ಆಳಿ: ಸಮೂಹ, ಗುಂಪು; ಬರವು: ಆಗಮನ; ಹಗೆ: ವೈರತ್ವ; ಪಾಲಿಸು: ಕಾಪಾಡು; ಭರ: ಅಧಿಕ, ಹೊತ್ತುಕೊಳ್ಳುವುದು ; ಸಂಧಿ: ಸಂಧಾನ; ಕಾರ್ಯ: ಕೆಲಸ; ಬಾರದಿರು: ಬರಬೇಡ;

ಪದವಿಂಗಡಣೆ:
ಓಲಗದೊಳಿರ್ದ+ಅಖಿಳ+ ಮೂರ್ಖರ
ಮೌಳಿಯನು +ಕಂಡ್+ಅವಧರಿಸು +ಸಿರಿ
ಲೋಲ +ಬಿಜಯಂಗೈಯಲ್+ಅವಸರವುಂಟೆ+ ಹೇಳ್+ಎನಲು
ನಾಳೆ +ಕಾಣಿಸಿ +ಕೊಂಬೆವ್+ಇನ್ನೇನ್
ಆಳಿಕಾರನ +ಬರವು +ಹಗೆವರ
ಪಾಲಿಸುವ +ಭರ +ಸಂಧಿಕಾರ್ಯಕೆ +ಬಾರದಿರನೆಂದ

ಅಚ್ಚರಿ:
(೧) ದುರ್ಯೋಧನನನ್ನು ಅಖಿಳ ಮೂರ್ಖರಮೌಳಿ ಎಂದು ಕರೆದಿರುವುದು
(೨) ಕೃಷ್ಣನನ್ನು ಸಿರಿಲೋಲ ಎಂದು ಕರೆದಿರುವುದು

ಪದ್ಯ ೨೫: ವಿದುರನು ಕೃಷ್ಣನ ಆಜ್ಞೆಯನ್ನು ಪಡೆದು ಯಾರ ಮನೆಗೆ ಬಂದನು?

ಹೋಗು ನೀನಾತಂಗೆ ಪಾಂಡವ
ರಾಗಸಮುದಯ ಬಂದನೆಂಬುದ
ನೀಗಳರುಹವುದಾತ ಮಾಡಿದ ಗುಣದ ಬೆಳವಿಗೆಯ
ತಾಗು ಬಾಗಿನ ಹವಣನಾತನ
ಲಾಗ ನೋಡುವೆವೆನಲು ಕುರುಕುಲ
ಸಾಗರಾಗ್ನಿಯ ಮನೆಗೆ ಬಂದನು ವಿದುರ ಹರಿ ಬೆಸಸೆ (ಉದ್ಯೋಗ ಪರ್ವ, ೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ವಿದುರ ನೀನು ದುರ್ಯೋಧನನ ಬಳಿಹೋಗಿ ಪಾಂಡವರ ಪ್ರೀತಿಪಾತ್ರನಾದ ಕೃಷ್ಣನು ಬಂದಿರುವನೆಂದು ನೀನು ಅವನಿಗೆ ತಿಳಿಸು ಬಳಿಕ ಆತ ಮಾಡಿದ ಗುಣಗಳ ಬಗ್ಗೆಯೂ ಹೇಳಿ, ಆಗುಹೋಗಿನ ಮಾತುಗಳಲ್ಲಿ ಅವನ ಮಿತಿಯನ್ನು ನೋಡುವೆ ಎಂದು ಹೇಳಿ ಕೃಷ್ಣನ ಆಜ್ಞೆಯನ್ನು ಹೊತ್ತು ದುರ್ಯೋಧನನ ಮನೆಗೆ ವಿದುರನು ಬಂದನು.

ಅರ್ಥ:
ಹೋಗು: ತೆರಳು; ಆತಂಗೆ: ಅವನಿಗೆ; ಸಮುದಯ: ಗುಂಪು; ರಾಗಸಮುದಯ: ಪ್ರೀತಿಯ ಗುಂಪು; ಬಂದನು: ಆಗಮಿಸಿದನು; ಅರುಹು: ತಿಳಿಸು, ಹೇಳು; ಗುಣ: ನಡತೆ, ಸ್ವಭಾವ; ಬೆಳವಿಗೆ: ವೃದ್ಧಿ, ಬೆಳವಣಿಗೆ; ತಾಗು: ಸಹವಾಸ, ಸಂಪರ್ಕ, ದೋಷ; ತಾಗುಬಾಗು: ಆಗಿಹೋಗು; ಹವಣ: ಮಿತಿ, ಅಳತೆ; ನೋಡುವೆ: ವೀಕ್ಷಿಸು;ಅಗ್ನಿ: ವಹ್ನಿ; ಮನೆ: ಆಲಯ; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಹೋಗು +ನೀನ್+ಆತಂಗೆ +ಪಾಂಡವ
ರಾಗಸಮುದಯ +ಬಂದನ್+ಎಂಬುದನ್
ಈಗಳ್+ಅರುಹವುದ್+ಆತ +ಮಾಡಿದ +ಗುಣದ +ಬೆಳವಿಗೆಯ
ತಾಗು +ಬಾಗಿನ +ಹವಣನ್+ಆತನಲ್
ಆಗ +ನೋಡುವೆವ್+ಎನಲು +ಕುರುಕುಲ
ಸಾಗರಾಗ್ನಿಯ +ಮನೆಗೆ +ಬಂದನು +ವಿದುರ +ಹರಿ+ ಬೆಸಸೆ

ಅಚ್ಚರಿ:
(೧) ದುರ್ಯೋಧನನನ್ನು ಕುರುಕುಲಸಾಗರಾಗ್ನಿ ಎಂದು ಕರೆದಿರುವುದು
(೨) ಕೃಷ್ಣನನ್ನು ಪಾಂಡವರಾಗಸಮುದಯ ಎಂಬು ಗುಣವಾಚಕದಿಂದ ಕರೆದಿರುವುದು

ಪದ್ಯ ೨೪: ಕೃಷ್ಣ ವಿದುರನಿಗೆ ಏನು ತಿಳಿಸಲು ಹೇಳಿದ?

ಪರಮ ಪರಿತೋಷದಲಿ ಕೃಷ್ಣನ
ವರಸುಧಾಮಯ ವಚನವನು ಪಂ
ಕರುಹಮುಖಿ ಕೇಳುತ್ತೆ ನೆನೆದಳು ನಯನವಾರಿಯಲಿ
ಮುರಮಥನನಾ ಕುಂತಿಗೆಲ್ಲವ
ನೊರೆದು ವಿದುರನ ಕರೆದು ಕೌರವ
ನರಮನೆಯ ಸಮಯವನು ನೋಡಿದು ತಮಗೆ ಹೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕುಂತಿಯು ಅತ್ಯಂತ ಆನಂದಪರವಶರಾಗಿ ಕೃಷ್ಣನ ಅಮೃತಮಯ ಮಾತನ್ನು ಕೇಳುತ್ತ ಪಾಂಡವರನ್ನು ನೆನೆಯುತ್ತಿದ್ದಂತೆ ಅವಳ ಕಣ್ಣಲ್ಲಿ ನೀರು ತುಂಬಿತು. ಕೃಷ್ಣನು ಕುಂತಿಗೆ ಎಲ್ಲಾ ವಿಚಾರವನ್ನು ತಿಳಿಸಿ ವಿದುರನನ್ನು ಕರೆದು ದುರ್ಯೋಧನನ್ನು ಭೇಟಿಯಾಗಲು ಅವನ್ ಅರಮನೆಯ ಸಮಯವನ್ನು ತಿಳಿಯಲು ಹೇಳಿದ.

ಅರ್ಥ:
ಪರಮ: ಶ್ರೇಷ್ಠ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ, ಅತಿಯಾದ ಆನಂದ; ವರ: ಶ್ರೇಷ್ಠ; ಸುಧ: ಅಮೃತ; ವಚನ: ಮಾತು, ವಾಣಿ; ಪಂಕರುಹ: ಕಮಲ; ಮುಖ: ಆನನ; ಪಂಕರುಹಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು; ಕೇಳು: ಆಲಿಸು; ನೆನೆ: ಜ್ಞಾಪಿಸು; ನಯನ: ಕಣ್ಣು; ವಾರಿ: ನೀರು; ಮುರಮಥ: ಕೃಷ್ಣ; ಒರೆ: ಮಾತು; ಕರೆ: ಬರೆಮಾಡು; ಅರಮನೆ: ಆಲಯ; ಸಮಯ: ಕಾಲ; ನೋಡು: ವೀಕ್ಷಿಸು; ಹೇಳು: ತಿಳಿಸು;

ಪದವಿಂಗಡಣೆ:
ಪರಮ +ಪರಿತೋಷದಲಿ+ ಕೃಷ್ಣನ
ವರಸುಧಾಮಯ +ವಚನವನು +ಪಂ
ಕರುಹಮುಖಿ +ಕೇಳುತ್ತೆ +ನೆನೆದಳು +ನಯನ+ವಾರಿಯಲಿ
ಮುರಮಥನನ್+ಆ+ ಕುಂತಿಗ್+ಎಲ್ಲವನ್
ಒರೆದು +ವಿದುರನ +ಕರೆದು +ಕೌರವನ್
ಅರಮನೆಯ +ಸಮಯವನು +ನೋಡ್+ಇದು +ತಮಗೆ +ಹೇಳೆಂದ

ಅಚ್ಚರಿ:
(೧) ಕಣ್ಣೀರು ಎಂದು ಹೇಳಲು – ನಯನವಾರಿ ಪದದ ಬಳಕೆ
(೨) ಪರಮ, ವರ – ಸಮನಾರ್ಥಕ ಪದ
(೩) ಕೃಷ್ಣ, ಮುರಮಥನ – ಕೃಷ್ಣನಿಗೆ ಬಳಸಿದ ಪದಗಳು
(೪) ಪಂಕರುಹಮುಖಿ, ಕುಂತಿ – ಕುಂತಿಗೆ ಬಳಸಿದ ಪದಗಳು