ಪದ್ಯ ೧೯: ಕುಂತಿಯು ಯಾರ ಯೋಗಕ್ಷೇಮವನ್ನು ಕೇಳಿದಳು?

ದೇವಕಿಯ ವಸುದೇವನನು ಬಲ
ದೇವ ಸೌಭದ್ರಾದಿ ಯದು ಭೂ
ಪಾವಳಿಯ ಸುಕ್ಷೇಮ ಕುಶಲವ ಕುಂತಿ ಬೆಸಗೊಳಲು
ದೇವ ನಗೆಮೊಗದಿಂದ ವರ ವಸು
ದೇವ ದೇವಕಿಯಾದಿ ಯಾದವ
ರಾ ವಿಳಾಸ ಮಹೀಶರಿರವನು ಕುಂತಿಗರುಹಿದನು (ಉದ್ಯೋಗ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕುಂತಿಯು ಕೃಷ್ಣನನ್ನು ನೋಡಿ, ದೇವಕಿ, ವಸುದೇವ, ಬಲಭದ್ರ, ಸೌಭದ್ರ ಮತ್ತು ಯದುಕುಲದ ಎಲ್ಲರ ಕುಶಲ ಕ್ಷೇಮ ವಿಚಾರವನ್ನು ಕೇಳಿದಳು. ಕೃಷ್ಣನು ಸಂತೋಷದಿಂದ ದೇವಕಿ ವಸುದೇವಾದಿಯರ ಕ್ಷೇಮದ ವಿಚಾರವನ್ನು ತಿಳಿಸಿದನು.

ಅರ್ಥ:
ಭೂಪ: ರಾಜ; ಆವಳಿ: ಗುಂಪು; ಕ್ಷೇಮ: ನೆಮ್ಮದಿ; ಕುಶಲ: ಕ್ಷೇಮ; ಬೆಸ: ಕೇಳುವುದು; ನಗೆ: ಸಂತೋಷ; ಮೊಗ: ಮುಖ; ವರ: ಶ್ರೇಷ್ಠ; ವಿಳಾಸ: ಇರುವ ಸ್ಥಳ; ಮಹೀಶ: ರಾಜ;ಅರುಹು: ತಿಳಿಸು; ಆದಿ: ಮುಂತಾದ;

ಪದವಿಂಗಡಣೆ:
ದೇವಕಿಯ +ವಸುದೇವನನು +ಬಲ
ದೇವ+ ಸೌಭದ್ರಾದಿ +ಯದು +ಭೂ
ಪಾವಳಿಯ +ಸುಕ್ಷೇಮ +ಕುಶಲವ +ಕುಂತಿ +ಬೆಸಗೊಳಲು
ದೇವ +ನಗೆಮೊಗದಿಂದ +ವರ +ವಸು
ದೇವ +ದೇವಕಿಯಾದಿ +ಯಾದವ
ರಾ +ವಿಳಾಸ+ ಮಹೀಶರಿರವನು +ಕುಂತಿಗ್+ಅರುಹಿದನು

ಅಚ್ಚರಿ:
(೧) ದೇವಕಿ, ಬಲದೇವ, ವಸುದೇವ – ಪದಗಳ ಬಳಕೆ

ಪದ್ಯ ೧೮: ಕುಂತಿ ಕೃಷ್ಣನನ್ನು ಹೇಗೆ ಹೊಗಳಿದಳು?

ಅಮಿತ ಕರುಣಾಸಿಂಧುವಿನ ಪದ
ಕಮಲದಲಿ ಬಂದೆರಗಿ ಪುಳಕೋ
ದ್ಗಮದ ತನಿ ಸುಖಪಾನರಸ ಸೌರಂಭದಲಿ ಮುಳುಗಿ
ಗಮಿಸಲರಿಯವು ಗರುವ ವೇದ
ಪ್ರಮಿತಿಗಳು ನೀವೆಂತು ನಡೆತಂ
ದೆಮಗೆ ಗೋಚರವಾದಿರೆನುತವೆ ಹೊಗಳಿದಳು ಕುಂತಿ (ಉದ್ಯೋಗ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಿತವಿಲ್ಲದ ಕರುಣೆಯ ಸಾಗರನಾದ ಶ್ರೀಕೃಷ್ಣನ ಪದಕಮಲಕ್ಕೆ ಬಂದು ನಮಸ್ಕರಿಸಿ ಅತ್ಯಂತ ರೋಮಾಂಚನ ಗೊಂಡು ಅಮಿತ ಸುಖದಸಾರವನ್ನು ಹೀರಿದನುಭವದಿಂದ ಕುಂತಿ ಸಂಭ್ರಮಿಸಿದಳು. ಶ್ರೇಷ್ಠವಾದ ವೇದಗಳಿಗೆ ನಿಮ್ಮನ್ನು ಅಳೆಯಲು ಸಾಧ್ಯವಿಲ್ಲ ಅಂತಹ ಮಹಿಮಾನ್ವಿತನಾದ ನೀವು ನಡೆದು ಇಲ್ಲಿಗೆ ಬಂದು ದರ್ಶನ ನೀಡುತ್ತಿದ್ದೀರಿ ಎಂದು ಕುಂತಿ ಕೃಷ್ಣನನ್ನು ಹೊಗಳಿದಳು.

ಅರ್ಥ:
ಅಮಿತ: ಬಹಳ; ಕರುಣ: ದಯೆ, ಕಾರುಣ್ಯ; ಸಿಂಧು: ಸಾಗರ; ಪದಕಮಲ: ಚರಣ ಪದ್ಮ; ಬಂದು: ಆಗಮಿಸಿ, ಎರಗು: ನಮಸ್ಕರಿಸಿ; ಪುಳಕ: ರೋಮಾಂಚನ; ತನಿ: ಸವಿಯಾದುದು; ಸುಖ: ಸಂತೋಷ, ನಲಿವು; ಪಾನ:ಪಾನೀಯ, ಪೇಯ; ರಸ: ಸಾರ; ಸೌರಂಭ: ಸಂಭ್ರಮ, ಸಡಗರ; ಮುಳುಗು: ಮೀಯು, ಮರೆಯಾಗು; ಗಮಿಸು: ಹೋಗು; ಅರಿ: ತಿಳಿ; ಗರುವ: ಹಿರಿಯ, ಶ್ರೇಷ್ಠ; ವೇದ: ಶೃತಿ; ಪ್ರಮಿತಿ: ಅಳತೆ, ಪ್ರಮಾಣ; ಗೋಚರ: ಕಾಣುವುದು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ಅಮಿತ +ಕರುಣಾ+ಸಿಂಧುವಿನ+ ಪದ
ಕಮಲದಲಿ +ಬಂದ್+ಎರಗಿ+ ಪುಳಕೋದ್
ಗಮದ +ತನಿ +ಸುಖಪಾನರಸ+ ಸೌರಂಭದಲಿ+ ಮುಳುಗಿ
ಗಮಿಸಲ್+ಅರಿಯವು +ಗರುವ +ವೇದ
ಪ್ರಮಿತಿಗಳು +ನೀವೆಂತು +ನಡೆತಂ
ದೆಮಗೆ+ ಗೋಚರವಾದಿರ್+ಎನುತವೆ+ ಹೊಗಳಿದಳು+ ಕುಂತಿ

ಅಚ್ಚರಿ:
(೧) ಅಮಿತ, ಪ್ರಮಿತ – ಪ್ರಾಸ ಪದಗಳು
(೨) ಸಂತೋಷಪಟ್ಟಳು ಎಂದು ಹೇಳಲು – ಪುಳಕೋದ್ಗಮದ ತನಿ ಸುಖಪಾನರಸ ಸೌರಂಭದಲಿ ಮುಳುಗಿ

ಪದ್ಯ ೧೭: ಕೃಷ್ಣನು ಕುಂತಿಯನ್ನು ಕಂಡು ಏನು ಮಾಡಿದನು?

ಬರಲು ಕಂಡಸುರಾರಿ ಮಂಚದೊ
ಳಿರದೆ ಧಿಮ್ಮನೆ ನಿಂದು ನರರಾ
ಚರಣೆಗಳ ನಾಟಕವ ತಾನೇ ನಟಿಸಿ ತೋರಿದನು
ಹಿರಿಯರಿಗೆ ತಾ ಹಿರಿಯನೆಂಬೀ
ಗರುವತನವನು ಬಿಸುಟು ಕುಂತಿಗೆ
ಕರವ ಮುಗಿದೆರಗಿದನು ಮುನಿಜನನಿಕರ ಘೇಯೆನಲು (ಉದ್ಯೋಗ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕುಂತಿಯು ಕೃಷ್ಣನನ್ನು ನೋಡಲು ಬಂದಳು. ಅವಳನ್ನು ಕಂಡೊಡನೆಯೇ ತಾನು ಆಸೀನನಾಗಿದ್ದ ಆಸನದಿಂದ ಥಟ್ಟನೆ ಇಳಿದನು. ಹಿರಿಯರಿಗೆ ಗೌರವವನ್ನು ತೋರುವ ಮನುಷ್ಯರ ಆಚರಣೆಯನ್ನು ಭಗವಂತನಾದರೂ ಅಹಂಭಾವವನ್ನು ಬಿಟ್ಟು, ಆತನು ಆ ಸಂಪ್ರದಾಯವನ್ನು ಆಚರಿಸಿ ನಟಿಸಿ ಕುಂತಿಗೆ ಕೈಮುಗಿದು ಆಕೆಗೆ ಶಿರಬಾಗಿ ನಮಸ್ಕರಿಸಲು, ಅಲ್ಲಿ ನೆರೆದಿದ್ದ ಮುನಿ ಮತ್ತು ಜನರು ಜಯಘೋಷವನ್ನು ಮೊಳಗಿದರು.

ಅರ್ಥ:
ಬರಲು: ಆಗಮಿಸಲು; ಕಂಡು: ನೋಡಿ; ಅಸುರಾರಿ: ರಾಕ್ಷಸರ ವೈರಿ; ಮಂಚ: ಪೀಠಾಸನ; ಇಳಿದು: ಕೆಳೆಗೆ ಬಂದು; ಧಿಮ್ಮನೆ: ಥಟ್ಟನೆ, ಕೂಡಲೆ; ನಿಂದು: ಎದ್ದು; ನರ: ಮನುಷ್ಯ; ಆಚರಣೆ: ಅನುಸರಿಸುವುದು, ಕ್ರಮ; ನಾಟಕ: ನಟನೆ; ತಾನೇ: ಸ್ವಂತ; ನಟಿಸು: ಅಭಿನಯಿಸು; ತೋರು: ಕಾಣು; ಹಿರಿಯರು: ದೊಡ್ಡವರು; ಗರು:ಅಹಂಕಾರ, ಹೆಮ್ಮೆ ಬಿಸುಟು: ಹೊರದೂಡಿ; ಕರ: ಕೈ; ಮುಗಿ: ನಮಸ್ಕರಿಸು; ಎರಗು: ಬಾಗು; ಮುನಿ: ಋಷಿ; ಜನ: ಮನುಷ್ಯ; ನಿಕರ:ಗುಂಪು; ಘೇ: ಜಯಕಾರ, ಉಘೇ;

ಪದವಿಂಗಡಣೆ:
ಬರಲು+ ಕಂಡ್+ಅಸುರಾರಿ +ಮಂಚದೊಳ್
ಇರದೆ +ಧಿಮ್ಮನೆ +ನಿಂದು +ನರರ್
ಆಚರಣೆಗಳ+ ನಾಟಕವ+ ತಾನೇ +ನಟಿಸಿ +ತೋರಿದನು
ಹಿರಿಯರಿಗೆ +ತಾ +ಹಿರಿಯನ್+ಎಂಬ್+ಈ+
ಗರುವತನವನು+ ಬಿಸುಟು +ಕುಂತಿಗೆ
ಕರವ+ ಮುಗಿದ್+ಎರಗಿದನು +ಮುನಿಜನನಿಕರ+ ಘೇಯೆನಲು

ಅಚ್ಚರಿ:
(೧) ಹಿರಿಯರಿಗೆ ತಾ ಹಿರಿಯನು – ಹಿರಿ ಪದದ ಬಳಕೆ
(೨) ನಾಟಕವ ತಾನೇ ನಟಿಸಿ – ನಟ ಪದದ ಬಳಕೆ