ಪದ್ಯ ೧೬: ಕುಂತಿ ಕೃಷ್ಣನನ್ನು ನೋಡಲು ಬಂದಾಗ ಅವಳಿಗಾದ ಅನುಭವವೇನು?

ತೊಲಗಿದಸು ಬಂದಂತೆ ತರಣಿಯ
ಹೊಳಹು ಸೋಂಕಿದ ಜಕ್ಕವಕ್ಕಿಯ
ಬಳಗದಂತಿರೆ ಕೃಷ್ಣರಾಯನ ಬರವ ತಾ ಕೇಳ್ದು
ಪುಳಕ ಪಸರಿಸಿ ಪರಮಹರುಷವ
ತಳೆದು ದೇವನ ಕಾಣಿಕೆಯ ಕಂ
ಗಳಿಗೆ ಕಡುಲೋಲುಪತೆ ಮಿಗೆ ಹರಿತಂದಳಾ ಕುಂತಿ (ಉದ್ಯೋಗ ಪರ್ವ, ೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಹೋದ ಪ್ರಾಣವು ಮತ್ತೆ ಬಂದಂತೆ, ಸೂರ್ಯನ ರಶ್ಮಿಯ ಕಾಂತಿಯನ್ನು ಸ್ಪರ್ಶಿಸಿದ ಚಕ್ರವಾಕ ಪಕ್ಷಿಗಳ ಬಳಗದಂತೆ, ಕೃಷ್ಣನ ಆಗಮನವನ್ನು ಕೇಳಿದ ಕುಂತಿಯು ರೋಮಾಂಚನಗೊಂಡು ಅತ್ಯಂತ ಹರುಷದಿಂದ ಕೃಷ್ಣನನ್ನು ನೋಡುವ ಭಾಗ್ಯವನ್ನು ತನ್ನ ಕಣ್ಣುಗಳಿಗೆ ಕಾಣಿಕೆಯಾಗಿ ನೀಡಲು ಅತ್ಯಂತ ಆಸೆಯಿಂದ ಓಡೋಡಿ ಬಂದಳು.

ಅರ್ಥ:
ತೊಲಗು: ಹೋಗು; ಅಸು: ಪ್ರಾಣ; ಬಂದು: ಆಗಮಿಸು; ತರಣಿ: ಸೂರ್ಯ; ಹೊಳಹು: ಕಾಂತಿ; ಸೋಂಕು: ಸ್ಪರ್ಶ; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಬಳಗ: ಗುಂಪು; ಬರವ: ಆಗಮನ; ಕೇಳು: ಆಲಿಸು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಪಸರಿಸು: ಹರಡು; ಪರಮ: ಶ್ರೇಷ್ಠ; ಹರುಷ: ಸಂತೋಷ; ತಳೆದು: ತಾಳಿ; ದೇವ: ಭಗವಂತ; ಕಾಣಿಕೆ: ಉಡುಗೊರೆ; ಕಂಗಳು: ಕಣ್ಣು; ಕಡು: ಹೆಚ್ಚು; ಲೋಲುಪ: ಅತಿಯಾಸೆಯುಳ್ಳವನು; ಮಿಗೆ: ಹೆಚ್ಚಾಗಿ; ಹರಿ: ಪ್ರವಾಹ;

ಪದವಿಂಗಡಣೆ:
ತೊಲಗಿದ್+ಅಸು +ಬಂದಂತೆ +ತರಣಿಯ
ಹೊಳಹು +ಸೋಂಕಿದ +ಜಕ್ಕವಕ್ಕಿಯ
ಬಳಗದಂತಿರೆ+ ಕೃಷ್ಣರಾಯನ +ಬರವ +ತಾ +ಕೇಳ್ದು
ಪುಳಕ+ ಪಸರಿಸಿ+ ಪರಮ+ಹರುಷವ
ತಳೆದು +ದೇವನ +ಕಾಣಿಕೆಯ+ ಕಂ
ಗಳಿಗೆ+ ಕಡುಲೋಲುಪತೆ+ ಮಿಗೆ +ಹರಿತಂದಳಾ +ಕುಂತಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತೊಲಗಿದಸು ಬಂದಂತೆ; ತರಣಿಯ ಹೊಳಹು ಸೋಂಕಿದ ಜಕ್ಕವಕ್ಕಿಯ ಬಳಗದಂತಿರೆ
(೨) ‘ಪ’ ಕಾರದ ತ್ರಿವಳಿ ಪದ – ಪುಳಕ ಪಸರಿಸಿ ಪರಮಹರುಷವ
(೩) ಬೇಗ ಬಂದಳು ಎಂದು ಹೇಳಲು – ‘ಹರಿತಂದಳಾ’ ಪದ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ