ಪದ್ಯ ೧೩: ಕೃಷ್ಣನನ್ನು ಕಂಡ ವಿದುರನೇಕೆ ಮೌನವಾದ?

ನೆರೆಯೆ ಕೃತ್ಯಾಕೃತ್ಯ ಭಾವವ
ಮರೆದು ಕಳೆದನು ಮನ ಮುರಾರಿಯ
ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ
ಅರಿವು ಮಯಣಾಮಯದ ಭಕ್ತಿಯೊ
ಳೆರಗಿಸಿದ ಪುತ್ಥಳಿಯವೊಲು ಕಡು
ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ (ಉದ್ಯೋಗ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನ ಜೊತೆಯಲ್ಲಿದ್ದ ವಿದುರನು ಕೃತ ಅಕೃತ್ಯ ಭಾವವನ್ನು ಮರೆತು ತೊರೆದನು, ಮನವು ಮುರಾರಿಯನ್ನು ಅಪ್ಪಿಕೊಂಡಿತು ಕಣ್ಣುಗಳು ಅವನ ಚರಣಕಮಲವನ್ನು ನೋಡಿ ಪಾವನಗೊಂಡಿತು, ತಿಳುವಳಿಕೆಯು ಮೇಣಮಯವಾದ ಭಕ್ತಿಯಲ್ಲಿ ನಿರ್ಮಿಸಿದ ಬೊಂಬೆಯಂತೆ ವಿಸ್ಮಯವಾಗಿ ಕೃಷ್ಣನ ಗೆಳೆತನವನ್ನು ನೋಡುತ್ತಾ ವಿದುರನು ಮೌನಕ್ಕೆ ಶರಣಾದನು.

ಅರ್ಥ:
ನೆರೆ: ಸಮೀಪ, ಪಕ್ಕ, ಸೇರು, ಜೊತೆಗೂಡು; ಕೃತ್ಯಾಕೃತ್ಯ: ಒಳ್ಳೆಯ ಮತ್ತು ಕೆಟ್ಟ ಕೆಲಸ; ಭಾವ: ಭಾವನೆ; ಮರೆ: ನೆನಪಿನಿಂದ ದೂರ ಮಾಡು; ಕಳೆ: ಬಿಡು, ತೊರೆ; ಮನ: ಮನಸ್ಸು; ಮುರಾರಿ: ಕೃಷ್ಣ; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಕಂಗಳು: ಕಣ್ಣು, ನಯನ; ಪದಾಬ್ಜ: ಚರಣ ಕಮಲ; ಅರಿ: ತಿಳು; ಮಯಣಮಯ; ಮೇಣದಿಂದ ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಎರಗು: ನಮಸ್ಕರಿಸು; ಪುತ್ಥಳಿ: ಬೊಂಬೆ; ಕಡು: ಹೆಚ್ಚಾಗಿ, ಅಧಿಕ; ಬೆರಗು: ವಿಸ್ಮಯ, ಸೋಜಿಗ; ಕೇಣಿ:ಮೈತ್ರಿ, ಗೆಳೆತನ; ಮೌನ: ಮಾತಿಲ್ಲದ, ಸುಮ್ಮನಿರುವಿಕೆ;

ಪದವಿಂಗಡಣೆ:
ನೆರೆಯೆ +ಕೃತ್ಯ+ಅಕೃತ್ಯ+ ಭಾವವ
ಮರೆದು +ಕಳೆದನು +ಮನ +ಮುರಾರಿಯನ್
ಇರುಕಿಕೊಂಡುದು+ ಕಂಗಳ್+ಒಡೆವೆಚ್ಚುವು +ಪದಾಬ್ಜದಲಿ
ಅರಿವು +ಮಯಣಾಮಯದ +ಭಕ್ತಿಯೊಳ್
ಎರಗಿಸಿದ +ಪುತ್ಥಳಿಯವೊಲು +ಕಡು
ಬೆರಗ +ಕೇಣಿಯ +ಕೊಂಡು +ಮೌನದೊಳಿದ್ದನಾ +ವಿದುರ

ಅಚ್ಚರಿ:
(೧) ನೆರೆ, ಮರೆ – ಪ್ರಾಸ ಪದ
(೨) ಕಡು ಬೆರಗ ಕೇಣಿಯ ಕೊಂಡು – ‘ಕ’ ಕಾರದ ಸಾಲು ಪದಗಳು
(೩) ಉಪಮಾನದ ಪ್ರಯೋಗ – ಅರಿವು ಮಯಣಾಮಯದ ಭಕ್ತಿಯೊಳೆರಗಿಸಿದ ಪುತ್ಥಳಿಯವೊಲು

ನಿಮ್ಮ ಟಿಪ್ಪಣಿ ಬರೆಯಿರಿ