ಪದ್ಯ ೧೨: ಕೃಷ್ಣನು ವಿದುರನಿಗೆ ಏನು ಹೇಳಿ ಮನೆಯನ್ನು ಪ್ರವೇಶಿಸಿದನು?

ಹಸಿದು ನಾವೈತಂದರೀ ಪರಿ
ಮಸಗಿ ಕುಣಿದಾಡಿದೊಡೆ ಮೇಣೀ
ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ
ವಸುಮತಿಯ ವಲ್ಲಭರು ಮಿಗೆ ಪ್ರಾ
ರ್ಥಿಸಿದೊಡೊಲ್ಲದೆ ಬಂದೆವೈ ನಾ
ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ (ಉದ್ಯೋಗ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ವಿದುರನ ಸಂತೋಷದ ಪರಿಯನ್ನು ಕಂಡು ಕೃಷ್ಣನು, ಎಲೈ ವಿದುರ ನಾವು ಹಸಿದು ಬಂದರೆ ನೀನು ಈ ರೀತಿ ಹರಿದಾಡಿ, ಕುಣಿದಾಡಿದರೆ ವಾಸವಿರುವ ನಿನ್ನೀ ಮನೆಯೇನಾದರು ಹಾನಿಹೊಂದಿದರೆ ನಾನೆಲ್ಲಿ ವಿಶ್ರಮಿಸಲಿ. ಭೂಮಿಯ ಒಡೆಯರು (ಪಾಂಡವರು) ನನ್ನ ಬಳಿ ಅಧಿಕವಾಗಿ ಪ್ರಾರ್ಥಿಸಿದುದರಿಂದ ನಾನಿಲ್ಲಿಗೆ ಬಂದಿದ್ದೇನೆ ಅದು ಬಿಟ್ಟು ಬೇರೇನು ಇಲ್ಲ. ಹೀಗೆ ನೀವು ಹೆಚ್ಚಾಗಿ ಸಂತೋಷವನ್ನು ಪ್ರಕಟಿಸಿದರೆ ನನಗೆ ನಾಚಿಕೆಯಾಗುತ್ತದೆಂದು ವಿದುರನನ್ನು ಕರೆದು ಮನೆಯ ಒಳಕ್ಕೆ ಪ್ರವೇಶಿಸಿದನು.

ಅರ್ಥ:
ಹಸಿ: ಹಸಿವು, ಆಹಾರವನ್ನು ಬಯಸು;ಐತರು: ಬಂದು ಸೇರು; ಪರಿ: ರೀತಿ; ಮಸಗು: ಹರಡು; ಕುಣಿ: ನರ್ತಿಸು; ಮೇಣ್: ಮತ್ತು; ವಸತಿ: ವಾಸಮಾಡುವಿಕೆ; ಸುಗಿ: ಸುಲಿ, ತುಂಡುಮಾಡು; ಎತ್ತು: ಮೇಲೇಳು; ಬಿಸುಟು: ಬಿಸಾಡಿದ, ತ್ಯಜಿಸಿದ; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ವಸುಮತಿ:ಭೂಮಿ; ವಲ್ಲಭ:ಒಡೆಯ, ಪ್ರಭು; ಮಿಗೆ: ಮತ್ತು, ಅಧಿಕ; ಪಾರ್ಥಿಸು: ಆರಾಧಿಸು; ನಾಚಿಸು: ಲಜ್ಜೆ, ಸಿಗ್ಗು; ಬಾ: ಆಗಮಿಸು; ಒಳಗೆ: ಆಂತರ್ಯ; ಹೊಕ್ಕು: ಸೇರು; ಅಸುರಾರಿ: ಅಸುರರ ವೈರಿ (ಕೃಷ್ಣ)

ಪದವಿಂಗಡಣೆ:
ಹಸಿದು+ ನಾವ್+ಐತಂದರ್+ಈ+ ಪರಿ
ಮಸಗಿ +ಕುಣಿದಾಡಿದೊಡೆ +ಮೇಣ್+ಈ
ವಸತಿಯನು +ಸುಗಿದೆತ್ತಿ+ ಬಿಸುಟರೆ+ ತನಗೆ+ ತಣಿವಹುದೆ
ವಸುಮತಿಯ +ವಲ್ಲಭರು+ ಮಿಗೆ+ ಪ್ರಾ
ರ್ಥಿಸಿದೊಡಲ್ಲದೆ +ಬಂದೆವೈ +ನಾ
ಚಿಸದಿರೈ+ ಬಾ +ವಿದುರ+ಯೆನುತ್+ಒಳಹೊಕ್ಕನ್+ಅಸುರಾರಿ

ಅಚ್ಚರಿ:
(೧) ‘ತ’ ಕಾರದ ಜೋಡಿ ಪದ – ತನಗೆ ತಣಿವಹುದೆ
(೨) ‘ವ’ ಕಾರದ ಜೋಡಿ ಪದ – ವಸುಮತಿಯ ವಲ್ಲಭರು
(೩) ವಸತಿ, ವಸುಮತಿ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ