ಪದ್ಯ ೧೩: ಕೃಷ್ಣನನ್ನು ಕಂಡ ವಿದುರನೇಕೆ ಮೌನವಾದ?

ನೆರೆಯೆ ಕೃತ್ಯಾಕೃತ್ಯ ಭಾವವ
ಮರೆದು ಕಳೆದನು ಮನ ಮುರಾರಿಯ
ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ
ಅರಿವು ಮಯಣಾಮಯದ ಭಕ್ತಿಯೊ
ಳೆರಗಿಸಿದ ಪುತ್ಥಳಿಯವೊಲು ಕಡು
ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ (ಉದ್ಯೋಗ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನ ಜೊತೆಯಲ್ಲಿದ್ದ ವಿದುರನು ಕೃತ ಅಕೃತ್ಯ ಭಾವವನ್ನು ಮರೆತು ತೊರೆದನು, ಮನವು ಮುರಾರಿಯನ್ನು ಅಪ್ಪಿಕೊಂಡಿತು ಕಣ್ಣುಗಳು ಅವನ ಚರಣಕಮಲವನ್ನು ನೋಡಿ ಪಾವನಗೊಂಡಿತು, ತಿಳುವಳಿಕೆಯು ಮೇಣಮಯವಾದ ಭಕ್ತಿಯಲ್ಲಿ ನಿರ್ಮಿಸಿದ ಬೊಂಬೆಯಂತೆ ವಿಸ್ಮಯವಾಗಿ ಕೃಷ್ಣನ ಗೆಳೆತನವನ್ನು ನೋಡುತ್ತಾ ವಿದುರನು ಮೌನಕ್ಕೆ ಶರಣಾದನು.

ಅರ್ಥ:
ನೆರೆ: ಸಮೀಪ, ಪಕ್ಕ, ಸೇರು, ಜೊತೆಗೂಡು; ಕೃತ್ಯಾಕೃತ್ಯ: ಒಳ್ಳೆಯ ಮತ್ತು ಕೆಟ್ಟ ಕೆಲಸ; ಭಾವ: ಭಾವನೆ; ಮರೆ: ನೆನಪಿನಿಂದ ದೂರ ಮಾಡು; ಕಳೆ: ಬಿಡು, ತೊರೆ; ಮನ: ಮನಸ್ಸು; ಮುರಾರಿ: ಕೃಷ್ಣ; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಕಂಗಳು: ಕಣ್ಣು, ನಯನ; ಪದಾಬ್ಜ: ಚರಣ ಕಮಲ; ಅರಿ: ತಿಳು; ಮಯಣಮಯ; ಮೇಣದಿಂದ ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಎರಗು: ನಮಸ್ಕರಿಸು; ಪುತ್ಥಳಿ: ಬೊಂಬೆ; ಕಡು: ಹೆಚ್ಚಾಗಿ, ಅಧಿಕ; ಬೆರಗು: ವಿಸ್ಮಯ, ಸೋಜಿಗ; ಕೇಣಿ:ಮೈತ್ರಿ, ಗೆಳೆತನ; ಮೌನ: ಮಾತಿಲ್ಲದ, ಸುಮ್ಮನಿರುವಿಕೆ;

ಪದವಿಂಗಡಣೆ:
ನೆರೆಯೆ +ಕೃತ್ಯ+ಅಕೃತ್ಯ+ ಭಾವವ
ಮರೆದು +ಕಳೆದನು +ಮನ +ಮುರಾರಿಯನ್
ಇರುಕಿಕೊಂಡುದು+ ಕಂಗಳ್+ಒಡೆವೆಚ್ಚುವು +ಪದಾಬ್ಜದಲಿ
ಅರಿವು +ಮಯಣಾಮಯದ +ಭಕ್ತಿಯೊಳ್
ಎರಗಿಸಿದ +ಪುತ್ಥಳಿಯವೊಲು +ಕಡು
ಬೆರಗ +ಕೇಣಿಯ +ಕೊಂಡು +ಮೌನದೊಳಿದ್ದನಾ +ವಿದುರ

ಅಚ್ಚರಿ:
(೧) ನೆರೆ, ಮರೆ – ಪ್ರಾಸ ಪದ
(೨) ಕಡು ಬೆರಗ ಕೇಣಿಯ ಕೊಂಡು – ‘ಕ’ ಕಾರದ ಸಾಲು ಪದಗಳು
(೩) ಉಪಮಾನದ ಪ್ರಯೋಗ – ಅರಿವು ಮಯಣಾಮಯದ ಭಕ್ತಿಯೊಳೆರಗಿಸಿದ ಪುತ್ಥಳಿಯವೊಲು

ಪದ್ಯ ೧೨: ಕೃಷ್ಣನು ವಿದುರನಿಗೆ ಏನು ಹೇಳಿ ಮನೆಯನ್ನು ಪ್ರವೇಶಿಸಿದನು?

ಹಸಿದು ನಾವೈತಂದರೀ ಪರಿ
ಮಸಗಿ ಕುಣಿದಾಡಿದೊಡೆ ಮೇಣೀ
ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ
ವಸುಮತಿಯ ವಲ್ಲಭರು ಮಿಗೆ ಪ್ರಾ
ರ್ಥಿಸಿದೊಡೊಲ್ಲದೆ ಬಂದೆವೈ ನಾ
ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ (ಉದ್ಯೋಗ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ವಿದುರನ ಸಂತೋಷದ ಪರಿಯನ್ನು ಕಂಡು ಕೃಷ್ಣನು, ಎಲೈ ವಿದುರ ನಾವು ಹಸಿದು ಬಂದರೆ ನೀನು ಈ ರೀತಿ ಹರಿದಾಡಿ, ಕುಣಿದಾಡಿದರೆ ವಾಸವಿರುವ ನಿನ್ನೀ ಮನೆಯೇನಾದರು ಹಾನಿಹೊಂದಿದರೆ ನಾನೆಲ್ಲಿ ವಿಶ್ರಮಿಸಲಿ. ಭೂಮಿಯ ಒಡೆಯರು (ಪಾಂಡವರು) ನನ್ನ ಬಳಿ ಅಧಿಕವಾಗಿ ಪ್ರಾರ್ಥಿಸಿದುದರಿಂದ ನಾನಿಲ್ಲಿಗೆ ಬಂದಿದ್ದೇನೆ ಅದು ಬಿಟ್ಟು ಬೇರೇನು ಇಲ್ಲ. ಹೀಗೆ ನೀವು ಹೆಚ್ಚಾಗಿ ಸಂತೋಷವನ್ನು ಪ್ರಕಟಿಸಿದರೆ ನನಗೆ ನಾಚಿಕೆಯಾಗುತ್ತದೆಂದು ವಿದುರನನ್ನು ಕರೆದು ಮನೆಯ ಒಳಕ್ಕೆ ಪ್ರವೇಶಿಸಿದನು.

ಅರ್ಥ:
ಹಸಿ: ಹಸಿವು, ಆಹಾರವನ್ನು ಬಯಸು;ಐತರು: ಬಂದು ಸೇರು; ಪರಿ: ರೀತಿ; ಮಸಗು: ಹರಡು; ಕುಣಿ: ನರ್ತಿಸು; ಮೇಣ್: ಮತ್ತು; ವಸತಿ: ವಾಸಮಾಡುವಿಕೆ; ಸುಗಿ: ಸುಲಿ, ತುಂಡುಮಾಡು; ಎತ್ತು: ಮೇಲೇಳು; ಬಿಸುಟು: ಬಿಸಾಡಿದ, ತ್ಯಜಿಸಿದ; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ವಸುಮತಿ:ಭೂಮಿ; ವಲ್ಲಭ:ಒಡೆಯ, ಪ್ರಭು; ಮಿಗೆ: ಮತ್ತು, ಅಧಿಕ; ಪಾರ್ಥಿಸು: ಆರಾಧಿಸು; ನಾಚಿಸು: ಲಜ್ಜೆ, ಸಿಗ್ಗು; ಬಾ: ಆಗಮಿಸು; ಒಳಗೆ: ಆಂತರ್ಯ; ಹೊಕ್ಕು: ಸೇರು; ಅಸುರಾರಿ: ಅಸುರರ ವೈರಿ (ಕೃಷ್ಣ)

ಪದವಿಂಗಡಣೆ:
ಹಸಿದು+ ನಾವ್+ಐತಂದರ್+ಈ+ ಪರಿ
ಮಸಗಿ +ಕುಣಿದಾಡಿದೊಡೆ +ಮೇಣ್+ಈ
ವಸತಿಯನು +ಸುಗಿದೆತ್ತಿ+ ಬಿಸುಟರೆ+ ತನಗೆ+ ತಣಿವಹುದೆ
ವಸುಮತಿಯ +ವಲ್ಲಭರು+ ಮಿಗೆ+ ಪ್ರಾ
ರ್ಥಿಸಿದೊಡಲ್ಲದೆ +ಬಂದೆವೈ +ನಾ
ಚಿಸದಿರೈ+ ಬಾ +ವಿದುರ+ಯೆನುತ್+ಒಳಹೊಕ್ಕನ್+ಅಸುರಾರಿ

ಅಚ್ಚರಿ:
(೧) ‘ತ’ ಕಾರದ ಜೋಡಿ ಪದ – ತನಗೆ ತಣಿವಹುದೆ
(೨) ‘ವ’ ಕಾರದ ಜೋಡಿ ಪದ – ವಸುಮತಿಯ ವಲ್ಲಭರು
(೩) ವಸತಿ, ವಸುಮತಿ – ಪದಗಳ ಬಳಕೆ

ಪದ್ಯ ೧೧: ವಿದುರನು ಕೃಷ್ಣನ ಆಗಮನವನ್ನು ಹೇಗೆ ಅನುಭವಿಸಿದನು?

ನೋಡಿದನು ಮನದಣಿಯೆ ಮಿಗೆ ಕೊಂ
ಡಾಡಿದನು ಬೀದಿಯಲಿ ಹರಿದೆಡೆ
ಯಾಡಿದನು ಭ್ರಮೆಯಾಯ್ತು ವಿದುರಂಗೆಂಬ ಗಾವಳಿಯ
ಕೂಡೆ ಕುಣಿದನು ಮನೆಯ ಮುರಿದೀ
ಡಾಡಿದನು ಮೈಮರೆದ ಹರುಷದ
ಗಾಡಿಕೆಯಲಪ್ರತಿಮನೆಸೆದನು ಬಕುತಿ ಕೇಳಿಯಲಿ (ಉದ್ಯೋಗ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಷ್ಣನನ್ನು ತನ್ನ ಬಾಗಿಲಲ್ಲಿ ನೋಡಿ ವಿದುರನಿಗೆ ಅತ್ಯಂತ ಸಂತೋಷವಾಯಿತು. ಎಂದೂ ಸಿಗದ ಈ ಭಾಗ್ಯತನಗೆ ಒಲಿದು ಬಂದದ್ದು ಅವನಿಗೆ ರೋಮಾಂಚನದನುಭವವಾಯಿತು. ವಿದುರನು ಶ್ರೀಕೃಷ್ಣನನ್ನು ಮನಃಪೂರ್ತಿ ನೋಡಿದನು, ಎಷ್ಟು ನೋಡಿದರೂ ನೋಡಬೇಕೆನ್ನುವ ಆಸೆ ಹೆಚ್ಚಾಯಿತು, ಅವನನ್ನು ಕೊಂಡಾಡಲು ಪ್ರಾರಂಭಿಸಿ ರಸ್ತೆಯಲ್ಲಿ ಹರಿದಾಡಿ ನರ್ತಿಸಲು ಜನರು ವಿದುರನಿಗೆ ಭ್ರಾಂತು ಎಂದು ಹೇಳತೊಡಗಿದರು. ಮನೆಯೊಳಗೆ ಬಂದು ಕುಣಿದು ಕುಪ್ಪಳಿಸಲು ಮನೆಯೇ ಮುರಿದೀತೋ ಎಂಬಂತೆ ತೋರಿತು, ಮೈಮರೆದು ಹರುಷದ ಈ ಸೊಗಸಿನ ಸ್ಥಿತಿಯಲ್ಲಿ ವಿದುರನು ತನ್ನ ಭಕ್ತಿಯನ್ನು ಅಪ್ರತಿಮನಾದ ಕೃಷ್ಣನ ಮೇಲೆ ತೋರಲು ಕೃಷ್ಣನು ಸಂತೋಷದಿಂದ ಇವೆಲ್ಲವನ್ನು ನೋಡಿದನು.

ಅರ್ಥ:
ನೋಡು: ವೀಕ್ಷಿಸು; ಮನ: ಮನಸ್ಸು; ದಣಿ: ತೃಪ್ತಿಹೊಂದು; ಮಿಗೆ: ಅಧಿಕವಾಗಿ;ಕೊಂಡಾಡು: ಹೊಗಳು, ಸ್ತುತಿಸು; ಬೀದಿ: ರಸ್ತೆ; ಹರಿ: ಚೆಲ್ಲು; ಆಡು: ನರ್ತಿಸು, ಕ್ರೀಡಿಸು; ಭ್ರಮೆ: ಭ್ರಾಂತಿ, ಹುಚ್ಚು; ಗಾವಳಿ: ಘೋಷಣೆ, ದೊಂಬಿ; ಕೂಡೆ: ಸಂಗಡ, ಕೂಡಲೆ; ಕುಣಿ: ನರ್ತಿಸು; ಮನೆ: ಆಲಯ; ಮುರಿ: ಸೀಳು; ಮೈಮರೆದು: ಎಚ್ಚರವಿಲ್ಲದ ಸ್ಥಿತಿ; ಹರುಷ: ಸಂತೋಷ; ಗಾಡಿಕೆ: ಗಾಂಬೀರ್ಯ, ರೀತಿ, ಸೊಗಸು; ಅಪ್ರತಿಮ: ಎಣೆಯಿಲ್ಲದ, ಸಮಾನವಿಲ್ಲದ; ಎಸೆ: ಶೋಭಿಸು; ಬಕುತಿ: ಭಕ್ತಿ, ಗುರುಹಿರಿಯರಲ್ಲಿ ತೋರುವ ನಿಷ್ಠೆ; ಕೇಳಿ:ವಿನೋದ, ಕ್ರೀಡೆ; ಈಡಾಡು: ಒಗೆ, ಚೆಲ್ಲು;

ಪದವಿಂಗಡಣೆ:
ನೋಡಿದನು +ಮನದಣಿಯೆ +ಮಿಗೆ+ ಕೊಂ
ಡಾಡಿದನು+ ಬೀದಿಯಲಿ+ ಹರಿದೆಡೆ
ಯಾಡಿದನು +ಭ್ರಮೆಯಾಯ್ತು +ವಿದುರಂಗೆಂಬ+ ಗಾವಳಿಯ
ಕೂಡೆ+ ಕುಣಿದನು +ಮನೆಯ +ಮುರಿದ್
ಈಡಾಡಿದನು +ಮೈಮರೆದ+ ಹರುಷದ
ಗಾಡಿಕೆಯಲ್+ಅಪ್ರತಿಮನ್+ಎಸೆದನು +ಬಕುತಿ +ಕೇಳಿಯಲಿ

ಅಚ್ಚರಿ:
(೧) ಕೊಂಡಾಡು, ಎಡೆಯಾಡು, ಈಡಾಡು – ಪ್ರಾಸ ಪದಗಳ ಬಳಕೆ
(೨) ‘ಮ’ ಕಾರದ ತ್ರಿವಳಿ ಪದ – ಮನೆಯ ಮುರಿದೀಡಾಡಿದನು ಮೈಮರೆದ