ಪದ್ಯ ೧೦೩: ಯಮನ ಆಲಯದಲ್ಲಿ ಏನನ್ನು ಯಾರು ಒಪ್ಪಿಸುತ್ತಾರೆ?

ಲೋಕದೊಳಗಣ ಪುಣ್ಯ ಪಾಪಾ
ನೀಕವನು ಯಮರಾಜನಾಲಯ
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ
ನಾಲ್ಕು ಕಡೆಯಲಿ ಕವಿದು ಬರಿಸುವ
ರೌಕಿ ದಿನದಿನದಲ್ಲಿ ಗರ್ವೋ
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಲೋಕದ ಜನರ ಪುಣ್ಯ ಪಾಪಗಳ ವಿವರವನ್ನು ಯಮನ ನಗರಿಗೆ ಶೂರರು ಹದಿನಾಲ್ಕು ದಿಕ್ಕುಗಳಿಂದ ತರುತ್ತಾರೆ, ನಾಲ್ಕು ಕಡೆಯಿಂದಲೂ ಪುಣ್ಯ ಪಾಪಗಳನ್ನು ಒತ್ತಿ ತರುತ್ತಾರೆ ಎಂಬ ಗರ್ವದಿಂದ ಮೈಮರೆತು ಕೆಡಬೇಡ ಎಂದು ಸನತ್ಸುಜಾತರು ಎಚ್ಚರದ ನುಡಿಯನ್ನು ತಿಳಿಸಿದರು.

ಅರ್ಥ:
ಲೋಕ: ಜಗತ್ತು; ಅಗಣ: ಗಣನೆಗಿಲ್ಲದ; ಪುಣ್ಯ: ಸದಾಚಾರ; ಪಾಪ: ಕೆಟ್ಟ ಕೆಲಸ, ದುರಾಚಾರ; ಅನೀಕ: ಗುಂಪು; ಯಮ: ಮೃತ್ಯುದೇವತೆ; ಆಲಯ: ಮನೆ; ಆಕೆವಾಳ: ವೀರ, ಪರಾಕ್ರಮಿ; ಅರುಹು: ತಿಳಿಸು, ಹೇಳು; ಹದಿನಾಲ್ಕು: ಚತುರ್ದಶ; ಮುಖ: ಕಡೆ, ಆನನ; ನಾಲ್ಕು: ಚತುರ್; ಕಡೆ: ದಿಶೆ; ಕವಿ: ಮುಚ್ಚಳ; ಬರಿಸು: ತುಂಬು; ರೌಕುಳ: ಅಧಿಕ್ಯ, ಹೆಚ್ಚಳ; ದಿನ: ವಾರ; ಗರ್ವ: ಅಹಂಕಾರ; ಉದ್ರೇಕ: ಉದ್ವೇಗ, ಆವೇಗ, ತಳಮಳ; ಮೈಮರೆ: ತಿಳುವಳಿಕೆ ಇಲ್ಲದೆ, ಗೊತಾಗದೆ; ಕೆಡು: ಹಾಳಾಗು, ಅಳಿ; ಮುನಿ: ಋಷಿ;

ಪದವಿಂಗಡಣೆ:
ಲೋಕದೊಳ್+ಅಗಣ +ಪುಣ್ಯ +ಪಾಪ
ಅನೀಕವನು +ಯಮರಾಜನ್+ಆಲಯದ್
ಆಕೆವಾಳಂಗ್ + ಅರುಹುವರು +ಹದಿನಾಲ್ಕು +ಮುಖವಾಗಿ
ನಾಲ್ಕು +ಕಡೆಯಲಿ +ಕವಿದು +ಬರಿಸುವ
ರೌಕಿ +ದಿನದಿನದಲ್ಲಿ +ಗರ್ವ
ಉದ್ರೇಕದಲಿ +ಮೈಮರೆದು +ಕೆಡಬೇಡೆಂದನಾ +ಮುನಿಪ

ಅಚ್ಚರಿ:
(೧) ಪುಣ್ಯ, ಪಾಪ – ವಿರುದ್ಧ ಪದಗಳು
(೨) ನುಡಿಮುತ್ತು – ಗರ್ವೋದ್ರೇಕದಲಿ ಮೈಮರೆದು ಕೆಡಬೇಡ

ಪದ್ಯ ೧೦೨: ಮೃತ್ಯುದೇವತೆ ಯಾರನ್ನು ಬಿಡುವುದಿಲ್ಲ?

ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಹಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಉತ್ತಮರನ್ನು ನಿಂದಿಸುತ್ತಾ, ಎಣಿಸಲಾಗದಷ್ಟು ಅಧರ್ಮವನ್ನಾಚರಿಸುವುದೇ ತನ್ನ ನಿತ್ಯವಿಧಿಯಾಗಿ, ಧರ್ಮದ ತಾರತಮ್ಯವನ್ನು ಅರಿಯದೇ, ಜಡಾತ್ಮರಾಗಿರುವ ವೇದಗಳನ್ನು ದೂರುವವರನ್ನು ಮೃತ್ಯುದೇವತೆ ಮುರಿದು ಆನಂದಿಸದೆ ಬಿಡುವಳೇ ಹೇಳೆಂದು ಸನತ್ಸುಜಾತರು ಧೃತರಾಷ್ಟ್ರನನ್ನು ಕೇಳಿದರು.

ಅರ್ಥ:
ಉತ್ತಮ: ಶ್ರೇಷ್ಠ; ನಿಂದಿಸು: ಬಯ್ಗಳು, ದೂಷಣೆ; ದುರ್ವೃತ್ತ: ಕೆಟ್ಟ ನಡತೆ; ಅಧರ್ಮ: ನ್ಯಾಯವಲ್ಲದುದು; ಕೋಟಿ: ಬಹಳ; ನಿತ್ಯ: ಯಾವಾಗಲು; ವಿಧಿ:ನಿಯಮ; ಧರ್ಮ: ಧಾರಣೆ ಮಾದಿದುದು, ನಿಯಮ, ಆಚಾರ; ತಾರತಮ್ಯ: ಹೆಚ್ಚು-ಕಡಿಮೆ, ಭೇದಭಾವ; ಅರಿ: ತಿಳಿ; ಜಗ: ಜಗತ್ತು; ಜಡ: ಚಲನೆಯಿಲ್ಲದ; ವೇದ: ಶೃತಿ; ಬಾಹ್ಯ: ಹೊರಗೆ; ಮೃತ್ಯು: ಸಾವು; ದೇವತೆ: ಸುರರು; ಮುರಿ: ಸೀಳು; ಮೋದ: ಸಂತೋಷ; ಬಿಡು: ತೊರೆ;

ಪದವಿಂಗಡಣೆ:
ಉತ್ತಮರುಗಳ +ನಿಂದಿಸುತ +ದು
ರ್ವೃತ್ತ+ನಾಗಿ+ಅಧರ್ಮ+ಕೋಟಿಯೆ
ನಿತ್ಯವಿಧಿ+ ತನಗಾಗಿ+ ಧರ್ಮದ +ತಾರತಮ್ಯವನು
ಎತ್ತಲೆಂದ್+ಅರಿಯದೆ +ಜಗಕ್ಕೆ+ ಜ
ಡಾತ್ಮರಾಹಿಹ +ವೇದ+ಬಾಹ್ಯರ
ಮೃತ್ಯುದೇವತೆ +ಮುರಿದು +ಮೋದದೆ +ಬಿಡುವಳೇಯೆಂದ

ಅಚ್ಚರಿ:
(೧) ‘ಮ’ಕಾರದ ಸಾಲು ಪದಗಳು – ಮೃತ್ಯುದೇವತೆ ಮುರಿದು ಮೋದದೆ
(೨) ಧರ್ಮ, ಅಧರ್ಮ – ವಿರುದ್ಧ ಪದಗಳು

ಪದ್ಯ ೧೦೧: ಅವಿವೇಕಿಗಳ ಲಕ್ಷಣವೇನು?

ಲೋಕಸಮ್ಮತವಾವುದದನು ನಿ
ರಾಕರಿಸುವವರುಗಳು ತಾವೇ
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು
ಬೇಕು ಬೇಡೆಂಬುದಕೆ ತಾವವಿ
ವೇಕಿಗಳು ಮೊದಲಿಂಗೆ ಪ್ರಾಮಾ
ಣೀಕರುಗಳವರಲ್ಲ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಜಗತ್ತು ಒಪ್ಪಿರುವುದನ್ನು, ಪರಂಪರೆಯಿಂದ ಒಪ್ಪಿಕೊಂಡು ಬಂದಿರುವುದನ್ನು ಅಲ್ಲಗಳೆಯುವವರು ಲೋಕದಲ್ಲಿ ಮಹಾಶೂರರೋ? ಅವರು ಮೊದಲಿಗೆ ತಮ್ಮ ನಡತೆಯನ್ನು ತಾವು ಅರಿತುಕೊಂಡಿರುವವರೇ? ಅವಿವೇಕಿಗಳೂ ಅಪ್ರಮಾಣಿಕರೂ ಆಗಿರುವವರು ಅಂತಹ ಮಾತುಗಳನ್ನಾಡುತ್ತಾರೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಲೋಕ: ಜಗತ್ತು; ಸಮ್ಮತ: ಒಪ್ಪಿರುವ; ನಿರಾಕರಿಸು: ಅಲ್ಲಗಳೆ; ಆಕೆವಾಳ: ಶೂರ; ಜಗ: ಲೋಕ, ಜಗತ್ತು; ಬಲ್ಲವ: ತಿಳಿ; ಬೇಕು: ಪಡೆ, ಆಸೆ; ಬೇಡ: ಅಪೇಕ್ಷೆಯಿಲ್ಲ; ಅವಿವೇಕಿ:ವಿವೇಚನೆ ಇಲ್ಲದಿರುವವ; ಮೊದಲು: ಆದಿ; ಪ್ರಾಮಾಣಿಕ: ನಂಬಿಕಸ್ತ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ಲೋಕ+ಸಮ್ಮತವಾವುದ್+ಅದನು +ನಿ
ರಾಕರಿಸುವವರುಗಳು +ತಾವೇನ್
ಆಕೆವಾಳರೆ +ಜಗಕೆ+ ತಮ್ಮನದ್+ಆರು +ಬಲ್ಲವರು
ಬೇಕು +ಬೇಡೆಂಬುದಕೆ+ ತಾವ್+ಅವಿ
ವೇಕಿಗಳು +ಮೊದಲಿಂಗೆ +ಪ್ರಾಮಾ
ಣೀಕರುಗಳ್+ಅವರಲ್ಲ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಬೇಕು ಬೇಡ – ವಿರುದ್ಧ ಪದಗಳು
(೨) ಲೋಕ, ಜಗತ್ತು – ಸಮಾನಾರ್ಥಕ ಪದ