ಪದ್ಯ ೧೦೦: ಸತ್ಪುರುಷರ ಅಭಿಮತವೇನು?

ಸರಸಿಜಾಕ್ಷನ ದಿವ್ಯನಾಮ
ಸ್ಮರಣವನು ಶ್ರುತಿಮೂಲ ವಾಕ್ಯೋ
ತ್ಕರುಷವನು ಭೂತಕ್ಕೆ ಹಿತವಹ ಮಾತನತಿಗಳೆದು
ಪರರ ವಾನವ ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ವೇದಗಳ ಸಾರವಾದ ಮಾತುಗಳು; ಭಗವನ್ನಾಮ ಸ್ಮರಣೆ, ಸಮಸ್ತ ಪ್ರಾಣಿಗಳಿಗೂ ಹಿತವನ್ನು ಬಯಸುವ ಮಾತು, ಇವುಗಳನ್ನು ಬಿಟ್ಟು ಬೇರೊಂದು ಮಾತನ್ನು ಸರ್ವಥಾ ಆಡಬಾರದು ಎನ್ನುವುದು ಸಜ್ಜನರ ಅಭಿಪ್ರಾಯವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಸರಸಿಜಾಕ್ಷ: ವಿಷ್ಣು, ಭಗವಂತ; ದಿವ್ಯ: ಶ್ರೇಷ್ಠ; ನಾಮ: ಹೆಸರು; ಸ್ಮರಣೆ: ಜ್ಞಾಪಿಸಿಕೊಳ್ಳು; ಶ್ರುತಿ: ವೇದ; ಮೂಲ: ಬೇರು, ಬುಡ, ಕಾರಣ; ವಾಕ್ಯ: ನುಡಿ; ಉತ್ಕರ್ಷ: ಹೆಚ್ಚಳ, ಮೇಲ್ಮೆ; ಭೂತಕ್ಕೆ: ಭೂಮಿಗೆ; ಹಿತ: ಒಳ್ಳೆಯದು, ಪ್ರಿಯಕರವಾದ; ಮಾತು: ನುಡಿ; ಪರರ: ಬೇರೆಯವರ; ವಚನ: ಮಾತು; ತ್ರಿಕರಣ: ಕಾಯ, ವಾಕ್ಕು ಮತ್ತು ಮನಸ್ಸು ಎಂಬ ಮೂರು ಅಂಗಗಳು; ಉಚ್ಚರಿಸು: ಹೇಳು; ಸರ್ವಥಾ: ಯಾವಾಗಲು; ಸತ್ಪುರುಷ: ಒಳ್ಳೆಯ ಮನುಷ್ಯ; ಅಭಿಮತ: ಅಭಿಪ್ರಾಯ; ಭೂಪಾಲ: ರಾಜ; ಕೇಳು: ಆಲಿಸು; ಕಣಾ: ನೋಡಾ;

ಪದವಿಂಗಡಣೆ:
ಸರಸಿಜಾಕ್ಷನ+ ದಿವ್ಯನಾಮ
ಸ್ಮರಣವನು +ಶ್ರುತಿಮೂಲ +ವಾಕ್ಯ
ಉತ್ಕರುಷವನು+ ಭೂತಕ್ಕೆ +ಹಿತವಹ +ಮಾತನ್+ಅತಿಗಳೆದು
ಪರರ+ ವಚನವ+ ತ್ರಿಕರಣದೊಳ್
ಉಚ್ಚರಿಸಲಾಗದು+ ಸರ್ವಥಾ +ಸ
ತ್ಪುರುಷರ್+ಅಭಿಮತವಿದು +ಕಣಾ +ಭೂಪಾಲ +ಕೇಳೆಂದ

ಅಚ್ಚರಿ:
(೧) ಸರಸಿಜಾಕ್ಷ, ಸ್ಮರಣ, ಸರ್ವಥಾ, ಸತ್ಪುರುಷ – ‘ಸ’ ಕಾರದ ಪದಗಳು

ಪದ್ಯ ೯೯: ಯಾರು ಬ್ರಾಹ್ಮಣರಲ್ಲ?

ವಾಚಿಸದೆ ವೇದಾರ್ಥನಿಚಯವ
ನಾಚರಿಸದಾಲಸ್ಯದಿಂದು
ತ್ಕೋಚಿಯಾದ ಪರಾನ್ನದೊಳು ಸಂಪುಷ್ಟ ತನುವಾದ
ನೀಚನಹ ಭೂಸುರನ ಕರುಳನು
ಬಾಚುವಳಲೈ ಮೃತ್ಯುವವನು ನಿ
ಶಾಚರನು ದ್ವಿಜನಲ್ಲ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೯೯ ಪದ್ಯ)

ತಾತ್ಪರ್ಯ:
ಯಾವ ಬ್ರಾಹ್ಮಣನು ವೇದಾಧ್ಯಯನವನ್ನು ಮಾಡದೆ, ತಾನು ಮಾಡಬೇಕಾದ ಕರ್ಮಗಳನ್ನು ಮಾಡದೆ ಸೋಮಾರಿತನದಿಂದ ಸ್ವೇಚ್ಛಾವೃತ್ತಿಯಿಂದ ಉಬ್ಬಿ ಕೈಬಿಟ್ಟು ಪರಾನ್ನದಿಂದ ಮೈಯನ್ನು ಚೆನ್ನಾಗಿ ಬೆಳೆಸಿದ ನೀಚನಾದ ಬ್ರಾಹ್ಮಣನ ಕರುಳನ್ನು ಮೃತ್ಯು ದೇವತೆಯು ಸೆಳೆದುಕೊಂಡು ಬಿಡುತ್ತಾಳೆ. ಅಂತಹವನು ಬ್ರಾಹಣನಲ್ಲ ರಾಕ್ಷಸನೇ ಸರಿ.

ಅರ್ಥ:
ವಾಚಿಸು: ಓದು, ಪಠಿಸು; ವೇದ: ಶೃತಿ, ಜ್ಞಾನ; ಅರ್ಥ:ಶಬ್ದದ ಅಭಿಪ್ರಾಯ; ನಿಚಯ:ರಾಶಿ, ಗುಂಪು; ಆಚರಿಸು: ಮಾಡು, ನೆರವೇರಿಸು; ಆಲಸ್ಯ: ಸೋಮಾರಿತನ; ಉತ್ಕೋಚ: ಮೇಲಕ್ಕೆ ಬಾಗುವುದು, ಲಂಚ, ಮೋಸ; ಪರಾನ್ನ: ಬೇರೆಯವರ ಊಟ; ಸಂಪುಷ್ಟ: ಸಂತೃಪ್ತಿ; ತನು: ದೇಹ; ನೀಚ: ಕ್ಷುದ್ರವ್ಯಕ್ತಿ, ಕ್ಷುಲ್ಲಕ ವ್ಯಕ್ತಿ; ಭೂಸುರ: ಬ್ರಾಹ್ಮಣ; ಕರುಳು: ಒಂದು ಜೀರ್ಣಾಂಗ, ಪಚನಾಂಗ; ಬಾಚು:ಎಳೆದುಕೊಳ್ಳು, ಸೆಳೆ; ಮೃತ್ಯು: ಸಾವು; ನಿಶಾಚರ: ರಾತ್ರಿಯಲ್ಲಿ ಓಡಾಡುವ, ರಾಕ್ಷಸ; ದ್ವಿಜ: ಬ್ರಾಹ್ಮಣ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ವಾಚಿಸದೆ +ವೇದ+ಅರ್ಥ+ನಿಚಯವನ್
ಆಚರಿಸದ್+ಆಲಸ್ಯದಿಂದ್
ಉತ್ಕೋಚಿಯಾದ +ಪರಾನ್ನದೊಳು +ಸಂಪುಷ್ಟ +ತನುವಾದ
ನೀಚನಹ +ಭೂಸುರನ +ಕರುಳನು
ಬಾಚುವಳಲೈ+ ಮೃತ್ಯುವ್+ಅವನು+ ನಿ
ಶಾಚರನು+ ದ್ವಿಜನಲ್ಲ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ದ್ವಿಜ, ಭೂಸುರ – ಸಮಾನಾರ್ಥಕ ಪದ
(೨) ರಾಕ್ಷಸ ಎಂದು ಹೇಳಲು ನಿಶಾಚರ ಪದದ ಬಳಕೆ
(೩) ಮೃತ್ಯುದೇವತೆ ಏನು ಮಾಡುವಳು ಎಂದು ಹೇಳಲು – ಕರುಳನು ಬಾಚುವಳಲೈ ಮೃತ್ಯುವವನು

ಪದ್ಯ ೯೮: ಬ್ರಾಹ್ಮಣರ ಕಣ್ಣುಗಳಾವುವು?

ವರಶ್ರುತಿ ಸ್ಮೃತಿಗಳು ಕಣಾ ಭೂ
ಸುರರ ದೃಷ್ಟಿಗಳಿವರೊಳೊಂದಕೆ
ಕೊರತೆಯಾಗಲು ಕಾಣನೆನಿಸುವನೆರಡನರಿಯದಿರೆ
ನಿರುತವಿದು ಜಾತ್ಯಂಧನೆನಿಸುವ
ನರಸ ಕೇಳೀ ಮಾಂಸ ದೃಷ್ಟಿಗ
ಳಿರವಲೇ ಸರ್ವತ್ರ ಸಾಧಾರಣವು ಲೋಕದೊಳು (ಉದ್ಯೋಗ ಪರ್ವ, ೪ ಸಂಧಿ, ೯೮ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಶೃತಿ ಸ್ಮೃತಿಗಳು ಭೂಮಿಯಲ್ಲಿ ಬ್ರಾಹ್ಮಣರ ಕಣ್ಣುಗಳಿದ್ದಂತೆ, ಇದರಲ್ಲಿ ಒಂದಕ್ಕೆ ಊನವಾದರೂ ಅವನಿಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ, ಇನ್ನೂ ಶೃತಿ ಸ್ಮೃತಿಗಳೆರಡರ ಜ್ಞಾನವಿಲ್ಲದಿದ್ದರೆ ಅವನು ಹುಟ್ಟುಕುರುಡನೇ ಸರಿ. ನಿನಗಿದುತಿಳಿದಿರಲಿ ಲೋಕದ ಜನರಿಗೆಲ್ಲಾ ದೃಷ್ಟಿಯು ಸರ್ವೇ ಸಾಮಾನ್ಯ ಆದರೆ ಬ್ರಾಹ್ಮಣರಿಗೆ ಮಾಂಸದ ಕಣ್ಣಿನ ಜೊತೆಗೆ ಜ್ಞಾನದ ಕಣ್ಣುಗಳಿರಬೇಕು ಎಂದು ತಿಳಿಸಿದನು.

ಅರ್ಥ:
ವರ: ಶ್ರೇಷ್ಠ; ಶೃತಿ: ವೇದ; ಸ್ಮೃತಿ:ಧರ್ಮಶಾಸ್ತ್ರ;ಕಣಾ: ನೋಡಾ; ಭೂಸುರ: ಬ್ರಾಹ್ಮಣ; ದೃಷ್ಟಿ: ನೋಟ; ಕೊರತೆ: ನ್ಯೂನತೆ; ಕಾಣು: ನೋಡು; ಎರಡು: ದ್ವಿ, ಯುಗಳ; ಅರಿ: ತಿಳಿ; ನಿರುತ: ಸದಾ ಧರ್ಮಶ್ರದ್ಧೆಉಳ್ಳವನು; ಜಾತ್ಯಂಧ: ಹುಟ್ಟುಕುರುಡ; ಅರಸ: ರಾಜ; ಮಾಂಸ: ಬಾಡು; ಇರವು: ಇರುವುದು; ಸರ್ವತ್ರ: ಎಲ್ಲಾ ಕಡೆ; ಸಾಧಾರಣ: ಸಾಮಾನ್ಯ; ಲೋಕ: ಜಗತ್ತು;

ಪದವಿಂಗಡಣೆ:
ವರ+ಶ್ರುತಿ +ಸ್ಮೃತಿಗಳು+ ಕಣಾ +ಭೂ
ಸುರರ+ ದೃಷ್ಟಿಗಳ್+ಇವರೊಳ್+ಒಂದಕೆ
ಕೊರತೆಯಾಗಲು +ಕಾಣನೆನಿಸುವನ್+ಎರಡನ್+ಅರಿಯದಿರೆ
ನಿರುತವಿದು+ ಜಾತ್ಯಂಧನೆನಿಸುವನ್
ಅರಸ +ಕೇಳ್+ಈ+ ಮಾಂಸ +ದೃಷ್ಟಿಗಳ್
ಇರವಲೇ +ಸರ್ವತ್ರ +ಸಾಧಾರಣವು +ಲೋಕದೊಳು

ಅಚ್ಚರಿ:
(೧)ಶೃತಿ ಸ್ಮೃತಿಗಳನ್ನು ಕಣ್ಣಿಗೆ ಹೋಲಿಸಿರುವುದು – ಜ್ಞಾನದ ಕಣ್ಣುಗಳು