ಪದ್ಯ ೯೭: ದುಷ್ಕರ್ಮ ಮಾಡಿದವರ ಸ್ಥಿತಿ ಹೇಗಿರುತ್ತದೆ?

ದುಷ್ಕೃತವನೆಸಗುವರು ಫಲದಲಿ
ಕಕ್ಕುಲಿಸುವರು ಸುಕೃತವೆಂಬುದ
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು
ಇಕ್ಕದೆರೆಯದೆ ಬಿತ್ತಿ ಬೆಳೆಯದೆ
ಪುಕ್ಕಟೆಯ ಸ್ವರ್ಗಾದಿ ಭೋಗವು
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೯೭ ಪದ್ಯ)

ತಾತ್ಪರ್ಯ:
ದುಷ್ಕರ್ಮ ಮಾಡಿದವರು ದುಃಖ ಬಂದಾಗ ಕಕ್ಕುಲಾತಿ ಪಡುತ್ತಾರೆ. ಆದರೆ ಅವರು ಸತ್ಕರ್ಮವೆಂಬುದನ್ನು ಬಗೆಯುವುದೇ ಇಲ್ಲ. ಆದರೆ ಪುಣ್ಯಫಲವಾದ ಸುಖ ಮಾತ್ರ ಬೇಕೆಂದು ಇಚ್ಛಿಸುತ್ತಾರೆ. ಸುಕೃತವನ್ನು ಬಿತ್ತದೆ ನೀರು ಹಾಕದೆ ಬೆಳಸದೆ ಸ್ವರ್ಗಭೋಗವು ಸಿಕ್ಕುವುದಾದರೂ ಹೇಗೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ದುಷ್ಕೃತ: ಕೆಟ್ಟ ಕೆಲಸ; ಫಲ: ಪರಿಣಾಮ; ಕಕ್ಕುಲತೆ: ಆಸಕ್ತಿ, ಪ್ರೀತಿ; ಚಿಂತೆ; ಸುಕೃತ: ಒಳ್ಳೆಯ ಕೆಲಸ; ಲೆಕ್ಕಿಸು: ಗಣನೆಗೆ ತೆಗೆದುಕೊ; ತತ್ಫಲ: ಆ ಪರಿಣಾಮ; ಬಯಸು: ಇಷ್ಟಪಡು; ಮಾನವರು: ಮನುಷ್ಯರು; ಇಕ್ಕದೆ: ಇರಿಸು, ಇಡು, ಹಾಕು; ಎರೆ: ಸುರಿ; ಬಿತ್ತು: ಬೀಜ ಹಾಕು, ಉಂಟುಮಾಡು; ಬೆಳೆ: ಬೆಳಸು, ಬೆಳವಣಿಗೆ; ಪುಕ್ಕಟೆ: ಉಚಿತ; ಸ್ವರ್ಗ: ನಾಕ; ಭೋಗ: ಸುಖವನ್ನು ಅನುಭವಿಸುವುದು; ಸಿಕ್ಕು: ಪಡೆ; ಅರಿ: ತಿಳಿ; ರಾಯ: ರಾಜ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ದುಷ್ಕೃತವನ್+ಎಸಗುವರು +ಫಲದಲಿ
ಕಕ್ಕುಲಿಸುವರು +ಸುಕೃತ+ವೆಂಬುದ
ಲೆಕ್ಕಿಸರು +ತತ್ಫಲವನೇ +ಬಯಸುವರು +ಮಾನವರು
ಇಕ್ಕದ್+ಎರೆಯದೆ+ ಬಿತ್ತಿ +ಬೆಳೆಯದೆ
ಪುಕ್ಕಟೆಯ +ಸ್ವರ್ಗಾದಿ +ಭೋಗವು
ಸಿಕ್ಕಲರಿವುದೆ +ರಾಯ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಎಸಗುವರು, ಕಕ್ಕುಲಿಸುವರು, ಬಯಸುವರು, ಮಾನವರು – ಅಂತ್ಯ ಪ್ರಾಸ ಪದಗಳು
(೨) ಕಷ್ಟಪಡದೆ ಎಂದು ತಿಳಿಸಲು – ಇಕ್ಕದೆರೆಯದೆ ಬಿತ್ತಿ ಬೆಳೆಯದೆ ಪುಕ್ಕಟೆಯ…

ಪದ್ಯ ೯೬: ಯಾವುದರಿಂದ ದುರ್ವ್ಯಸನ ಹೆಚ್ಚುತ್ತದೆ?

ದ್ಯೂತದಲಿ ಮದ್ಯದಲಿ ಘನ ಕಂ
ಡೂತಿಯಲಿ ನಿದ್ರೆಯಲಿ ಕಲಹ ವಿ
ಘಾತಿಯಲಿ ಮೈಥುನದಲಾಹಾರದಲಿ ಬಳಿ ಸಂದು
ಕೈತವದ ಉದ್ಯೋಗದಲಿ ದು
ರ್ನೀತಿಯಲಿ ಪರಸತಿಯರಲಿ ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ಭೂಪ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೬ ಪದ್ಯ)

ತಾತ್ಪರ್ಯ:
ಜೂಜಿನಲಿ, ಮದ್ಯಸೇವನೆಯಲಿ, ಹೆಚ್ಚಾದ ನೆವೆ, ನಿದ್ದೆ, ಜಗಳ, ಹೊಡೆದಾಟ, ಸಂಭೋಗ, ಆಹಾರ, ಮೋಸದ ಕೆಲಸ, ದುರ್ನೀತಿ, ಪರಸತಿಯರೊಡನೆ ಪ್ರೀತಿ ಇವುಗಳನ್ನು ಬಳಸಿದಂತೆ ಬಳಸುವ ಹಂಬಲ ಹೆಚ್ಚಿ ದುರ್ವ್ಯಸನ ಹೆಚ್ಚುತ್ತದೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ದ್ಯೂತ: ಪಗಡೆಯಾಟ, ಜೂಜು; ಮದ್ಯ: ಮಾದಕ ಪಾನೀಯ; ಘನ: ಹೆಚ್ಚು;ಕಂಡೂತಿ: ತುರಿಕೆ, ನವೆ; ನಿದ್ರೆ: ಶಯನ; ಕಲಹ: ಜಗಳ; ವಿಘಾತಿ: ಹೊಡೆದಾಟ; ಮೈಥುನ: ಸಂಭೋಗ; ಆಹಾರ: ಊಟ; ಬಳಿ: ಹತ್ತಿರ; ಸಂದು: ಮೂಲೆ, ಕೋನ, ಬಿರುಕು; ಕೈತವ:ಕಪಟ, ವಂಚನೆ; ಉದ್ಯೋಗ: ಕೆಲಸ; ದುರ್ನೀತಿ: ಕೆಟ್ಟ ನಡತೆ; ಪರಸತಿ: ಬೇರೆಯವರ ಹೆಂಡತಿ; ಸಂಪ್ರೀತಿ: ಅತಿಶಯವಾದ ಪ್ರೀತಿ; ಬಲಿವು: ಹೆಚ್ಚುವುದು, ಗಟ್ಟಿಯಾಗುವುದು; ಬೆದಕು: ಕೆದಕು, ಹುಡುಕು, ಶೋಧಿಸು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದ್ಯೂತದಲಿ +ಮದ್ಯದಲಿ+ ಘನ +ಕಂ
ಡೂತಿಯಲಿ+ ನಿದ್ರೆಯಲಿ +ಕಲಹ +ವಿ
ಘಾತಿಯಲಿ+ ಮೈಥುನದಲ್+ಆಹಾರದಲಿ +ಬಳಿ +ಸಂದು
ಕೈತವದ+ ಉದ್ಯೋಗದಲಿ +ದು
ರ್ನೀತಿಯಲಿ +ಪರಸತಿಯರಲಿ +ಸಂ
ಪ್ರೀತಿ +ಬಲಿವುದು +ಬೆದಕ +ಬೆದಕಲು +ಭೂಪ +ಕೇಳೆಂದ

ಅಚ್ಚರಿ:
(೧) ಕಂಡೂತಿ, ವಿಘಾತಿ, ದುರ್ನೀತಿ, ಸಂಪ್ರೀತಿ, ಪರಸತಿ – ಪ್ರಾಸ ಪದಗಳು
(೨) ‘ಬ’ ಕಾರದ ಸಾಲು ಪದಗಳು – ಬಲಿವುದು ಬೆದಕ ಬೆದಕಲು ಭೂಪ

ಪದ್ಯ ೯೫: ನರಮಾಂಸ ಭಕ್ಷಣೆಯ ಫಲ ಯಾವುದನ್ನು ಮಾಡದಿದ್ದರೆ ಲಭಿಸುತ್ತದೆ?

ವಿನುತ ಮಧುಕೈಟಭರ ಮೇದ
ಸ್ಸಿನಲಿ ಮೇದಿನಿಯಾದುದಿದ ನೀ
ನನುಭವಿಸುವೊಡೆ ಪುಣ್ಯ ಕೀರುತಿಯೆಂಬ ಪರಿಮಳದ
ಹೊನಲಿನಲಿ ತರವಿಡಿದು ಲೇಸಾ
ಗನುಭವಿಸುವುದದಲ್ಲದಿದ್ದೊಡೆ
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೫ ಪದ್ಯ)

ತಾತ್ಪರ್ಯ:
ಈ ಭೂಮಿಯು ಮಧಿಕೈಟಭರ ಮೇದಸ್ಸಿನಿಂದಾಯಿತು. ಇಲ್ಲಿ ನೀನು ಬಾಳುವಾಗ ಪುಣ್ಯಕಾರ್ಯಗಳನ್ನು ಮಾಡಿ, ಅದರ ಸುಗಂಧವಾಹಿನಿಯನ್ನು ಅನುಭವಿಸಬೇಕು. ಇಲ್ಲದಿದ್ದರೆ ನರ ಮಾಂಸ ಭಕ್ಷಿಸಿದ ಫಲ ಬರುತ್ತದೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಮಧುಕೈಟಭ: ರಾಕ್ಷಸರ ಹೆಸರು; ಮೇದಸ್ಸು: ದೇಹದ ಸಪ್ತ ಧಾತುಗಳಲ್ಲಿ ಒಂದು, ಕೊಬ್ಬು; ಮೇದಿನಿ: ಭೂಮಿ; ಅನುಭವಿಸು: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಪುಣ್ಯ: ಸದಾಚಾರ, ಪರೋಪಕಾರ; ಕೀರುತಿ: ಖ್ಯಾತಿ; ಪರಿಮಳ: ಸುಗಂಧ; ಹೊನಲು: ಪ್ರವಾಹ, ನೀರೋಟ; ಲೇಸು: ಒಳ್ಳೆಯದು; ತರವಿಡಿ: ಆ ರೀತಿ; ಮನುಜ: ಮನುಷ್ಯ; ಮಾಂಸ: ಅಡಗು, ಬಾಡು; ಭಕ್ಷಿಸು: ಊಟಮಾಡು; ಫಲ:ಪರಿಣಾಮ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವಿನುತ +ಮಧುಕೈಟಭರ+ ಮೇದ
ಸ್ಸಿನಲಿ +ಮೇದಿನಿಯಾದುದ್+ಇದ+ ನೀನ್
ಅನುಭವಿಸುವೊಡೆ +ಪುಣ್ಯ +ಕೀರುತಿಯೆಂಬ +ಪರಿಮಳದ
ಹೊನಲಿನಲಿ +ತರವಿಡಿದು+ ಲೇಸ್+ಆಗ್
ಅನುಭವಿಸುವುದದ್+ಅಲ್ಲದಿದ್ದೊಡೆ
ಮನುಜ +ಮಾಂಸವ +ಭಕ್ಷಿಸಿದ+ ಫಲವರಸ+ ಕೇಳೆಂದ

ಅಚ್ಚರಿ:
(೧) ‘ಮ’ಕಾರದ ತ್ರಿವಳಿ ಪದ, ಭೂಮಿಯಾದ ಪರಿಯನ್ನು ತಿಳಿಸುವ ಪದ್ಯ – ಮಧುಕೈಟಭರ ಮೇದಸ್ಸಿನಲಿ ಮೇದಿನಿಯಾದುದಿದ
(೨) ಅನುಭವಿಸು – ೩, ೫ ಸಾಲಿನ ಮೊದಲ ಪದ

ಪದ್ಯ ೯೪: ಸ್ವರ್ಗ ನರಕಕ್ಕೆ ಯಾವುದು ಕಾರಣ?

ಕರಣ ಮೂರರೊಳಿತ್ತ ವಸ್ತುವ
ನಿರಿಸಿಕೊಂಡರೆ ಮಾಸ ಮಾಸಾಂ
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ
ಹಿರಿದಹುದು ದಾನ ಪ್ರಶಂಸೆಯ
ನರಸಕೇಳೈ ಸ್ವರ್ಗ ನರಕವಿ
ದೆರಡಕೊಂದೇ ದಾನ ಕಾರಣವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೯೪ ಪದ್ಯ)

ತಾತ್ಪರ್ಯ:
ತ್ರಿಕರಣ (ಕಾಯ, ವಾಕ್ಕು ಮತ್ತು ಮನಸ್ಸು) ಎಂಬ ಮೂರು ಅಂಗಗಳಿಂದ ಪೂರ್ವಕವಾಗಿ ಮಾದಿದ ದಾನ ವಸ್ತುವನ್ನು ಇಟ್ಟುಕೊಂಡರೆ, ಅದು ಕಾಲಾನುಕ್ರಮವಾಗಿ ಹೆಚ್ಚುತ್ತದೆ. ಕೊಟ್ಟು ಕೊಡದವನಿಗೆ ಪಾಪ ಘಟಿಸುತ್ತದೆ. ಸ್ವರ್ಗಕ್ಕೂ ನರಕಕ್ಕೂ ದಾನವೊಂದೇ ಕಾರಣ ಎಂದು ಸನತ್ಸುಜಾತರು ದಾನದ ಮಹಿಮೆಯನ್ನು ತಿಳಿಸಿದರು.

ಅರ್ಥ:
ಕರಣ: ಜ್ಞಾನೇಂದ್ರಿಯ; ಮೂರು: ತ್ರಿ, ತ್ರಯ; ವಸ್ತು: ಸಾಮಗ್ರಿ; ಇತ್ತ: ನೀಡಿದ; ಇರಿಸು: ಇಟ್ಟುಕೊಳ್ಳು; ಮಾಸ:ತಿಂಗಳು; ಅಂತರ: ದೂರ; ಒಂದು: ಏಕ; ನೂರು: ಶತ; ಗುಣ: ಲೆಕ್ಕ; ಪರಿಯಂತ: ವರೆಗೆ, ತನಕ; ಹಿರಿದು: ಹೆಚ್ಚು; ದಾನ: ಕೊಡುಗೆ; ಪ್ರಶಂಸೆ: ಹೊಗಳಿಕೆ; ಸ್ವರ್ಗ: ನಾಕ; ನರಕ: ಅಧೋಲೋಕ; ಎರಡು: ಉಭಯ; ಕಾರಣ: ನಿಮಿತ್ತ, ಹೇತು; ಮುನಿ: ಋಷಿ;

ಪದವಿಂಗಡಣೆ:
ಕರಣ +ಮೂರರೊಳ್+ಇತ್ತ +ವಸ್ತುವನ್
ಇರಿಸಿಕೊಂಡರೆ+ ಮಾಸ +ಮಾಸಾಂ
ತರದೊಳ್+ಒಂದಕೆ +ನೂರು +ಗುಣದಲಿ +ಕೋಟಿ +ಪರಿಯಂತ
ಹಿರಿದಹುದು +ದಾನ +ಪ್ರಶಂಸೆಯನ್
ಅರಸಕೇಳೈ +ಸ್ವರ್ಗ +ನರಕವಿದ್
ಎರಡಕ್+ಒಂದೇ +ದಾನ +ಕಾರಣವೆಂದನಾ +ಮುನಿಪ

ಅಚ್ಚರಿ:
(೧) ಸ್ವರ್ಗ, ನರಕ – ಜೋಡಿ ಪದ
(೨) ಧ್ಯೇಯ ವಾಕ್ಯ – ಸ್ವರ್ಗ ನರಕವಿದೆರಡಕೊಂದೇ ದಾನ ಕಾರಣ

ಪದ್ಯ ೯೩: ದತ್ತಾಪಹಾರ ಮಾಡಿದರೇನಾಗುತ್ತದೆ?

ತನ್ನ ದಾನವನಪಹರಿಸಿ ಕೊಂ
ಡನ್ಯರಿತ್ತುದಕಡ್ಡ ಬೀಳುವ
ಕುನ್ನಿಜನರರವತ್ತು ಸಾವಿರ ವರುಷ ಪರಿಯಂತ
ಭಿನ್ನವಿಲ್ಲದೆ ವಿಷ್ಠೆಯೊಳು ಕ್ರಿಮಿ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಳ್ವುದು ಧರ್ಮವಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೯೩ ಪದ್ಯ)

ತಾತ್ಪರ್ಯ:
ನಾವು ದಾನಕೊಟ್ಟದ್ದನ್ನು ಹಿಂಪಡೆಯುವುದು, ಬೇರೆಯವರು ನೀಡುವ ದಾನವನ್ನು ತಡೆಯುವುದು ಇವೆರಡನ್ನು ಮಾಡುವ ನಾಯಿಸಮಾನನಾದ ಮನುಷ್ಯನು ೬೦ ಸಾವಿರ ವರ್ಷಗಳ ಪರಿಯಂತ ಅವಿಚ್ಛಿನ್ನವಾಗಿ ಕ್ರಿಮಿಯಾಗಿರುತ್ತಾರೆ. ಇದನ್ನರಿತು ನೀನು ದತ್ತಾಪಹಾರ ಮಾಡಬೇಡ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ತನ್ನ: ಅವನ; ದಾನ: ಕೊಡುಗೆ; ಅಪಹರಿಸು: ತೆಗೆದುಕೊ; ಅನ್ಯರು: ಬೇರೆಯವರು; ಅಡ್ಡ: ಅಡಚಣೆ; ಕುನ್ನಿ: ನಾಯಿ; ಜನ: ಮನುಷ್ಯ; ಸಾವಿರ: ಸಹಸ್ರ; ವರುಷ: ಸಂವತ್ಸರ; ಪರಿ: ನಡೆ, ಸಾಗು; ಭಿನ್ನ: ತುಂಡು, ಭೇದ; ವಿಷ್ಥೆ: ಆಮೇಧ್ಯ; ಕ್ರಿಮಿ: ಕೀಟ; ಜನ್ಮ: ಜನನ; ಅರಿ: ತಿಳಿ; ಕೊಟ್ಟು: ನೀಡಿದ; ಅಳುಹು: ಬಯಸು, ಅಪೇಕ್ಷಿಸು; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಉಳುಹು: ಕಾಪಾಡು, ಸಂರಕ್ಷಿಸು;

ಪದವಿಂಗಡಣೆ:
ತನ್ನ ದಾನವನ್+ಅಪಹರಿಸಿ +ಕೊಂಡ್
ಅನ್ಯರ್+ಇತ್ತುದಕ್+ಅಡ್ಡ+ ಬೀಳುವ
ಕುನ್ನಿ+ಜನರ್+ಅರವತ್ತು +ಸಾವಿರ +ವರುಷ +ಪರಿಯಂತ
ಭಿನ್ನವಿಲ್ಲದೆ +ವಿಷ್ಠೆಯೊಳು +ಕ್ರಿಮಿ
ಜನ್ಮದಲ್ಲಿಹರ್+ಇದನ್+ಅರಿದು +ನೀ
ನಿನ್ನು +ಕೊಟ್ಟುದನ್+ಉಳುಹಿಕೊಳ್ವುದು +ಧರ್ಮವಲ್ಲೆಂದ

ಅಚ್ಚರಿ:
(೧) ಈ ಸಂಸ್ಕೃತ ಶ್ಲೋಕವನ್ನು ಉಚ್ಚರಿಸುವ ಪದ್ಯ
ಸ್ವದತ್ತತ್ ದ್ವಿಗುಣಂ ಪುಣ್ಯಂ ಪರದತ್ತನುಪಲನಂ
ಪರದತ್ತಪಹರನೇಣ ಸ್ವದತ್ತಂ ನಿಷ್ಫಲಂ ಭವೇತ್
ಸ್ವದತ್ತಂ ಪರದತ್ತಂ ವ ಯೋ ಹರೇತ ವಸುಂಧರಂ
ಷಷ್ಠಿವರ್ಷಸಹಸ್ರಾಣಿ ವಿಷ್ಟಂ ಜಾಯತೇ ಕ್ರಿಮಿಃ
(೨) ಕುಮಾರವ್ಯಾಸ ಬಯ್ಯುವ ರೀತಿ – ಕುನ್ನಿಜನರು