ಪದ್ಯ ೯೨: ನರಕಕ್ಕೆ ಹೋಗಬಾರದೆಂದರೆ ಏನು ಮಾಡಬೇಕು?

ಚೋರನನು ಕಾಣುತ್ತ ಮರಳಿದು
ಚೋರನೆಂದರೆ ಪತಿತನನು ನಿ
ಷ್ಠೂರತನದಿಂ ಪತಿತನೆಂದೊಡೆ ಸಾಮ್ಯದೋಷವದು
ಸಾರುವುದು ಮಿಥ್ಯೋತ್ತರದಲಿ ವಿ
ಚಾರಿಸದೆ ನುಡಿದವರಿಗಿಮ್ಮಡಿ
ನಾರಕದ ಫಲ ತಪ್ಪದವನೀಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೨ ಪದ್ಯ)

ತಾತ್ಪರ್ಯ:
ಕಳ್ಳನನ್ನು ಕಳ್ಳನೆಂದು, ಪತಿತನನ್ನು ನಿಷ್ಠುರವಾಕ್ಯದಿಂದ ಪತಿತನೆಂದು ಕರೆದರೆ ಸಮಾನ ದೋಷವುಂಟಾಗುತ್ತದೆ. ಸುಳ್ಳು ಹೆಚ್ಚಾಗಿ ಪಸರಿಸುತ್ತದೆ. ನಿಜ ಸುಳ್ಳು ಎಂಬುದನ್ನು ವಿಚಾರಿಸದೆ ಮಾತನಾಡಿದರೆ ನರಕವು ತಪ್ಪುವುದಿಲ್ಲ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಚೋರ: ಕಳ್ಳ; ಕಾಣು: ನೋಡು; ಮರಳಿ:ಹಿಂತಿರುಗು; ಪತಿತ:ನೀಚ, ದುಷ್ಟ; ನಿಷ್ಠುರ: ಒರಟು, ಕಠಿಣ; ಸಾಮ್ಯ: ಒಂದೇ ತರಹ; ದೋಷ: ತಪ್ಪು; ಸಾರು: ಹರಡು; ಮಿಥ್ಯ: ಸುಳ್ಳು; ಉತ್ತರ: ಮೇಲೆ; ವಿಚಾರ: ಪರ್ಯಾಲೋಚನೆ, ವಿಮರ್ಶೆ; ನುಡಿ: ಮಾತು; ಇಮ್ಮಡಿ: ದುಪ್ಪಟ; ನಾರಕ: ಅಧೋಲೋಕ; ಫಲ: ಲಾಭ, ಪ್ರಯೋಜನ; ತಪ್ಪದು: ಬಿಡದು; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಚೋರನನು +ಕಾಣುತ್ತ +ಮರಳಿದು
ಚೋರನೆಂದರೆ+ ಪತಿತನನು +ನಿ
ಷ್ಠೂರತನದಿಂ +ಪತಿತನೆಂದೊಡೆ +ಸಾಮ್ಯ+ದೋಷವದು
ಸಾರುವುದು +ಮಿಥ್ಯ+ಉತ್ತರದಲಿ+ ವಿ
ಚಾರಿಸದೆ+ ನುಡಿದವರಿಗ್+ಇಮ್ಮಡಿ
ನಾರಕದ +ಫಲ +ತಪ್ಪದ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಸುಳ್ಳು ಹೆಚ್ಚು ಪಸರಿಸುತ್ತದೆ ಎಂದು ಹೇಳಲು – ಸಾರುವುದು ಮಿಥ್ಯೋತ್ತರದಲಿ
(೨) ಚೋರ, ನಿಷ್ಠೂರ – ಪ್ರಾಸ ಪದಗಳು

ಪದ್ಯ ೯೧: ಏತಕ್ಕಾಗಿ ಸಂತಾನಾಭಿವೃದ್ಧಿಯನ್ನು ಹೊಂದಬೇಕು?

ಇಹಪರದ ಗತಿ ದಾನ ಧರ್ಮದ
ಬಹುಳತೆಗಳ ತಪಃ ಪ್ರಭಾವದ
ವಿಹಿತ ಪುಣ್ಯದ ಫಲದ ಬಳವಿಗೆಯೊಂದು ನೂರಾಗಿ
ಬಹುದು ಸದ್ವಂಶದೊಳು ಜನಿಸಿದ
ಮಹಿಮನಿರೆ ಲೋಕಾಂತರದ ಸುಖ
ವಹುದು ಸಂತಾನಾಭಿವೃದ್ಧಿಯನೈದಬೇಕೆಂದ (ಉದ್ಯೋಗ ಪರ್ವ, ೪ ಸಂಧಿ, ೯೧ ಪದ್ಯ)

ತಾತ್ಪರ್ಯ:
ಸದ್ವಂಶದಲ್ಲಿ ಜನಿಸಿದ ಮಹಿಮಾವಂತನಿಗೆ ಇಹಪರದ ಲೋಕಗಳ ಸದ್ಗತಿ, ದಾನ ಧರ್ಮಗಳ ಹೆಚ್ಚಳ, ತಪಃ ಪ್ರಭಾವ, ಉಚಿತವಾದ ಪುಣ್ಯದ ಹೆಚ್ಚಳ, ಲೋಕಾಂತರದ ಸುಖಗಳು ದೊರಕುತ್ತವೆ. ಆದುದರಿಂದ ಸಂತಾನಾಭಿವೃದ್ಧಿಯನ್ನು ಹೊಂದಬೇಕು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಇಹಪರ: ಈ ಲೋಕ ಮತ್ತು ಪರಲೋಕ; ಗತಿ: ಇರುವ ಸ್ಥಿತಿ, ಅವಸ್ಥೆ; ದಾನ: ಕೊಡುಗೆ; ಧರ್ಮ: ಧಾರಣೆ ಮಾಡಿದುದು; ಬಹುಳ: ಹೆಚ್ಚಳ; ತಪಃ: ತಪಸ್ಸು; ಪ್ರಭಾವ: ಘನತೆ, ಹಿರಿಮೆ; ವಿಹಿತ: ಯೋಗ್ಯವಾದುದು, ಔಚಿತ್ಯಪೂರ್ಣ; ಪುಣ್ಯ: ಸದಾಚಾರ, ಪರೋಪಕಾರ; ಫಲ: ಪರಿಣಾಮ, ಫಲಿತಾಂಶ; ಬಳವಿ: ಬೆಳವಣಿಗೆ, ವೃದ್ಧಿ; ಒಂದು: ಏಕ; ನೂರು: ಶತ; ಸದ್ವಂಶ: ಒಳ್ಳೆಯ ಕುಲ; ಜನಿಸು: ಹುಟ್ಟು; ಮಹಿಮ: ಮಹಿಮಾನ್ವಿತ, ಗೌರವಾನ್ವಿತ; ಲೋಕ: ಜಗತ್ತು; ಲೋಕಾಂತರ: ಈ ಲೋಕ ಮತ್ತು ಪರಲೋಕ; ಸುಖ: ಸಂತೋಷ; ಸಂತಾನ: ವಂಶ, ತಲೆಮಾರು, ಅಪತ್ಯ; ಅಭಿವೃದ್ಧಿ: ಹೆಚ್ಚಳ;

ಪದವಿಂಗಡಣೆ:
ಇಹಪರದ+ ಗತಿ +ದಾನ +ಧರ್ಮದ
ಬಹುಳತೆಗಳ+ ತಪಃ +ಪ್ರಭಾವದ
ವಿಹಿತ +ಪುಣ್ಯದ +ಫಲದ +ಬಳವಿಗೆ +ಒಂದು +ನೂರಾಗಿ
ಬಹುದು +ಸದ್ವಂಶದೊಳು +ಜನಿಸಿದ
ಮಹಿಮನಿರೆ+ ಲೋಕಾಂತರದ+ ಸುಖ
ವಹುದು +ಸಂತಾನ+ಅಭಿವೃದ್ಧಿಯನ್+ಐದಬೇಕೆಂದ

ಅಚ್ಚರಿ:
(೧) ಲೋಕಾಂತರ, ಇಹಪರ – ಸಾಮ್ಯಾರ್ಥ ಪದಗಳು

ಪದ್ಯ ೯೦: ಯಾವ ಕಾರ್ಯಗಳು ಫಲವನ್ನು ಕೊಡುವುದಿಲ್ಲ?

ಕಾದುದಕದಾಸ್ನಾನವೆಂಬುದ
ವೈದಿಕಾಂಗದ ಮಂತ್ರಸಾಧನ
ವೇದಹೀನರಿಗಿತ್ತ ದಾನವು ಶ್ರಾದ್ಧಕಾಲದೊಳು
ಎಯ್ದದಿಹ ದಕ್ಷಿಣೆಗಳೆಂಬಿವು
ಬೂದಿಯೊಳು ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ರಾಯ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕಾಯಿಸಿದ ನೀರಿನ ಸ್ನಾನ, ವೈದಿಕವಲ್ಲದ ಮಂತ್ರದ ಸಾಧನೆ, ವೇದಾಧ್ಯಯನವಿಲ್ಲದವರಿಗಿತ್ತ ದಾನ, ಶ್ರಾದ್ಧದಲ್ಲಿ ದಕ್ಷಿಣೆ ಕೊಡದಿರುವುದು, ಇವು ಬೂದಿಯಲ್ಲಿ ಹೋಮ ಮಾಡಿದ ಹಾಗೆ, ಯಾವ ಫಲವೂ ಸಿಗುವುದಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಕಾದು: ಬಿಸಿ, ಕುದಿ; ಉದಕ: ನೀರು; ಸ್ನಾನ: ಅಭ್ಯಂಜನ; ವೈದಿಕ: ವೇದಗಳನ್ನು ಬಲ್ಲವನು; ಅಂಗ: ಭಾಗ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಾಧನ: ಸಿದ್ಧಿಯನ್ನು ಪಡೆಯುವ ಯತ್ನ, ಸಾಧಿಸುವಿಕೆ; ವೇದ: ಶೃತಿ, ಜ್ಞಾನ; ಹೀನ: ತಿಳಿಯದ; ದಾನ: ಕೊಡುಗೆ; ಶ್ರಾದ್ಧ: ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ; ಕಾಲ: ಸಮಯ; ಐದೆ: ವಿಶೇಷವಾಗಿ; ದಕ್ಷಿಣೆ: ಸಂಭಾವನೆ; ಬೂದಿ: ಭಸ್ಮ, ವಿಭೂತಿ; ಬೇಳು: ಹೋಮವನ್ನು ಮಾಡು, ಹವಿಸ್ಸನ್ನು ಅರ್ಪಿಸು; ಹವಿಸ್ಸು: ಹವಿ, ಚರು; ಹಾದಿ: ದಾರಿ; ಫಲ: ಪ್ರಯೋಜನ, ಪರಿಣಾಮ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕಾದ್+ಉದಕದಾ+ಸ್ನಾನ+ವೆಂಬುದ್+
ಅವೈದಿಕಾಂಗದ +ಮಂತ್ರಸಾಧನ
ವೇದಹೀನರಿಗಿತ್ತ+ ದಾನವು+ ಶ್ರಾದ್ಧ+ಕಾಲದೊಳು
ಎಯ್ದದಿಹ+ ದಕ್ಷಿಣೆಗಳೆಂಬ್+ಇವು
ಬೂದಿಯೊಳು +ಬೇಳಿದ+ ಹವಿಸ್ಸಿನ
ಹಾದಿಯಲ್ಲದೆ +ಫಲವನೀಯವು +ರಾಯ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೂದಿಯೊಳು ಬೇಳಿದ ಹವಿಸ್ಸಿನ ಹಾದಿ
(೨) ಸ್ನಾನ, ದಾನ – ಪ್ರಾಸ ಪದಗಳ ಪ್ರಯೋಗ

ಪದ್ಯ ೮೯: ರಾಜನು ಯಾವ ಮಾರ್ಗದಿಂದ ವಿದ್ಯೆಯನ್ನುಗಳಿಸಬೇಕು?

ಅರಸ ಕೇಳೈ ಮಾರ್ಗ ಮೂರಾ
ಗಿರುತಿಹುದು ಸಂಪೂರ್ಣಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕೊಡಬೇಕಾದ ಧನವನ್ನು ನೀಡಿ, ಗುರುಗಳ ಸೇವೆ ಮಾಡಿ ಅದರಿಂದ ವಿದ್ಯಾರ್ಜನೆ ಎನ್ನುವ ಮೂರು ಮಾರ್ಗಗಳು ವಿದ್ಯಾರ್ಜನೆಗೆ ಇವೆ. ಇವನ್ನು ಬಿಟ್ಟು ನಾಲ್ಕನೆಯ ದಾರಿ ಇಲ್ಲ. ರಾಜರು ಈ ಮೂರು ಮಾರ್ಗಗಳಿಂದಲೇ ವಿದ್ಯೆಯನ್ನು ಕಲಿಯಬೇಕು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಾರ್ಗ: ದಾರಿ; ಮೂರು: ತ್ರಿ, ತ್ರಯ; ಸಂಪೂರ್ಣ: ಎಲ್ಲಾ; ಧನ: ಐಶ್ವರ್ಯ; ಗುರು: ಆಚಾರ್ಯ; ಪರಿಚರ:ಸೇವಕ; ಪರಿಚರಿಯ: ಸೇವೆ; ಪರಿವರ್ತನೆ:ಬದಲಾವಣೆ; ಇನಿತು: ಸ್ವಲ್ಪ, ಈ ಸ್ಥಿತಿ; ತಿರುಗಿ: ಮತ್ತೆ; ಬಂದೊಡೆ: ಬಂದರೆ; ನಾಲ್ಕು: ಚತುರ್; ಮತ: ಅಭಿಪ್ರಾಯ; ದೊರಕು: ಸಿಕ್ಕು; ಅರಿ: ತಿಳಿ; ಕಲೆ: ವಿದ್ಯೆ, ಲಲಿತವಿದ್ಯೆ, ಕುಶಲವಿದ್ಯೆ, ಸೂಕ್ಷ್ಮ ಪರಿಮಾಣದ ವಸ್ತು; ಸಂವರಿಸು: ಸಜ್ಜು ಮಾಡು, ಕಾಪಾಡು; ನರ: ಮನುಷ್ಯ; ಉತ್ತಮ: ಶ್ರೇಷ್ಠ; ಅವನೀಪಾಲ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಮಾರ್ಗ +ಮೂರಾ
ಗಿರುತಿಹುದು +ಸಂಪೂರ್ಣ+ಧನ+ ಗುರು
ಪರಿಚರಿಯ+ ಪರಿವರ್ತನೆಗಳೆಂಬ್+ಇನಿತನ್+ಅತಿಗಳೆದು
ತಿರುಗಿ +ಬಂದೊಡೆ +ನಾಲ್ಕನೆಯ +ಮತ
ದೊರಕಲ್+ಅರಿವುದೆ +ಕಲೆಗಳನು +ಸಂ
ವರಿಸುವ +ನರೋತ್ತಮರಿಗ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಅರಸ, ಅವನೀಪಾಲ – ಸಮಾನಾರ್ಥಕ ಪದ
(೨) ಇನಿತನತಿ – ಪದದ ಬಳಕೆ

ಪದ್ಯ ೮೮: ಕಾರ್ಯಸಿದ್ಧಿಯ ಮರ್ಮವಾವುದು?

ತಮ್ಮ ಕಾರ್ಯನಿಮಿತ್ತ ಗರ್ವವ
ನೆಮ್ಮಿದೊಡೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಕೃತಿಯೊ
ಳಮ್ಮಹವನೈದುವ ವೊಲೊದಗುವ
ಕರ್ಮಿಗಳನೊಳಹೊಯ್ದುಕೊಳ್ವುದು ಮರ್ಮ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ತನ್ನ ಕಾರ್ಯ ಸಾಧನೆಯಾಗಬೇಕೆಂದರೆ, ಗರ್ವವನ್ನು ಬಿಡಬೇಕು, ಏಕೆಂದರೆ ಗರ್ವದಿಂದ ಕಾರ್ಯವು ಕಠಿಣವಾಗುತ್ತದೆ. ಮನುಷ್ಯರಾಗಲಿ, ಪ್ರಾಣಿಗಳಾಗಲಿ, ಚರಾಚರಗಳಾಗಲಿ ಅವುಗಳ ಬಳಿಗೆ ಹೋಗಿ ಅವರ ಉಪಕಾರವನ್ನು ಪಡೆದು ಅದರಿಂದ ಪರಮ ಸಂತೋಷಗೊಂಡು ಅವರ ಸೌಹಾರ್ದವನ್ನು ಗಳಿಸಿಕೊಳ್ಳುವುದೇ ಕಾರ್ಯಸಿದ್ಧಿಯ ಮರ್ಮವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ತಮ್ಮ: ಅವರ; ಕಾರ್ಯ: ಕೆಲಸ; ನಿಮಿತ್ತ: ನೆಪ, ಕಾರಣ; ಗರ್ವ: ಅಹಂಕಾರ; ಉರೆ: ವಿಶೇಷವಾಗಿ; ದಿಮ್ಮಿತು: ದೊಡ್ಡದಾದ, ಬಲಿಷ್ಠವಾದ; ಮರ್ತ್ಯ: ಭೂಮಿ; ಚರಾಚರ: ಜೀವಿಸುವ ಮತ್ತು ಜೀವಿಸದ; ಮಮತೆ: ಪ್ರೀತಿ, ಅಭಿಮಾನ; ನಡೆದು: ಸಾಗಿ; ಉಪಕೃತಿ: ಉಪಕಾರ, ನೆರವು; ಐದು:ಹೊಂದು, ಸೇರು, ಹೋಗು; ಒದಗು: ಸಿಗುವ; ಕರ್ಮಿ: ಕೆಲಸಗಾರ; ಒಳಹೊಯ್ದು: ಸೇರಿಸಿಕೊಳ್ಳು; ಮರ್ಮ: ರಹಸ್ಯವಾಗಿ ಕಾರ್ಯ ನಿರ್ವಹಿಸುವವನು;

ಪದವಿಂಗಡಣೆ:
ತಮ್ಮ+ ಕಾರ್ಯ+ನಿಮಿತ್ತ +ಗರ್ವವನ್
ಎಮ್ಮಿದೊಡೆ +ತದ್ಗರ್ವದಿಂದ್+ಉರೆ
ದಿಮ್ಮಿತಹುದಾ +ಕಾರ್ಯ +ಮರ್ತ್ಯ +ಚರಾಚರಂಗಳಲಿ
ನಿರ್ಮಮತೆಯಲಿ +ನಡೆದ್+ಉಪಕೃತಿಯೊಳ್
ಅಮ್ಮಹವನ್+ಐದುವ +ವೊಲ್+ಒದಗುವ
ಕರ್ಮಿಗಳನ್+ಒಳಹೊಯ್ದುಕೊಳ್ವುದು +ಮರ್ಮ +ಕೇಳೆಂದ

ಅಚ್ಚರಿ:
(೧)ನಿರ್ಮಮತೆ, ಮರ್ಮ, ಕರ್ಮಿ, ಕರ್ಮ – ಪದಗಳ ಬಳಕೆ