ಪದ್ಯ ೮೫: ಧೃತರಾಷ್ಟ್ರನು ಮತ್ತಾವ ಪ್ರಶ್ನೆಗಳನ್ನು ಕೇಳಿದ?

ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜಮಂತ್ರದ
ಮರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಿರೆ ಸಾಕೆಂದು ಬಿನ್ನಹ ಮಾಡಿದನು ಭೂಪ (ಉದ್ಯೋಗ ಪರ್ವ, ೪ ಸಂಧಿ, ೮೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನಲ್ಲಿದ್ದ ಶಂಕೆಗಳನ್ನು ಪ್ರಶ್ನೆಯರೂಪದಲ್ಲಿ ಸನತ್ಸುಜಾತರ ಮುಂದೆ ಇಟ್ಟನು. ಈ ಜಗತ್ತಿನಲ್ಲಿ ಧರ್ಮಯೆಂದರೇನು, ಯಾವುದನ್ನು ಧರ್ಮವೆಂದು ಕರೆಯುತ್ತಾರೆ, ಹಾಗಾದರೆ ಅಧರ್ಮ ಯಾವುದು, ರಾಜನೀತಿಯ ಮರ್ಮವೇನು, ಒಳ್ಳೆಯ ಮಾರ್ಗ ಯಾವುದು ಹಾಗೆಯೇ ಕೆಟ್ಟ ಮಾರ್ಗ ಯಾವುದು, ವಿಧಿವಿಹಿತ ದುಷ್ಕರ್ಮವಾವುದು ಇದರ ಭೇದವನ್ನು ದಯಮಾಡಿ ತಿಳಿಸಿ ಎಂದು ತನ್ನ ಕೋರಿಕೆಯನ್ನು ಸನತ್ಸುಜಾತರರ ಮುಂದಿಟ್ಟನು.

ಅರ್ಥ:
ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಮೇಣು: ಮತ್ತು; ಜಗ: ಜಗತ್ತು; ಅಧರ್ಮ: ನ್ಯಾಯವಲ್ಲದುದು; ರಾಜಮಂತ್ರ: ಮಂತ್ರಾಲೋಚನೆ; ಮರ್ಮ: ಅಂತರಾರ್ಥ; ಮಾರ್ಗ: ದಾರಿ; ಅಮಾರ್ಗ: ಅಡ್ಡದಾರಿ; ಕರ್ಮ: ಕಾರ್ಯದ ಫಲ; ಧರ್ಮ, ಕೆಲಸ; ವಿಧಿ:ಆಜ್ಞೆ, ಆದೇಶ, ಬ್ರಹ್ಮ, ಕಟ್ಟಲೆ; ದುಷ್ಕರ್ಮ: ಕೆಟ್ಟ ನಡತೆ; ಭೇದ: ಅಂತರ, ವ್ಯತ್ಯಾಸ; ನಿರ್ಮಿಸು: ರಚಿಸು; ಸಾಕು: ಕೊನೆ, ಅಂತ್ಯ; ಬಿನ್ನಹ: ಕೋರಿಕೆ; ಭೂಪ: ರಾಜ;

ಪದವಿಂಗಡಣೆ:
ಧರ್ಮ+ವಾವುದು+ ಮೇಣು +ಜಗದೊಳ್
ಅಧರ್ಮ+ವಾವುದು +ರಾಜಮಂತ್ರದ
ಮರ್ಮ+ವಾವುದು+ ಮಾರ್ಗ+ವಾವುದ್+ಅಮಾರ್ಗವೆಂದೇನು
ಕರ್ಮವಾವುದು +ವಿಧಿವಿಹಿತ+ ದು
ಷ್ಕರ್ಮ+ವಾವುದದ್+ಎಂಬ +ಭೇದವ
ನಿರ್ಮಿಸಿರೆ +ಸಾಕೆಂದು +ಬಿನ್ನಹ +ಮಾಡಿದನು +ಭೂಪ

ಅಚ್ಚರಿ:
(೧) ಧರ್ಮ, ಅಧರ್ಮ; ಮಾರ್ಗ ಅಮಾರ್ಗ; ಕರ್ಮ ದುಷ್ಕರ್ಮ – ವಿರುದ್ಧ ಪದಗಳು
(೨) ಧರ್ಮ, ಅಧರ್ಮ, ಮರ್ಮ, ಕರ್ಮ, ದುಷ್ಕರ್ಮ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ