ಪದ್ಯ ೮೭: ಅತಿಥಿ ಸತ್ಕಾರವನ್ನು ಮಾಡದಿದ್ದರೆ ಏನಾಗುತ್ತದೆ?

ಅತಿಥಿ ಪೂಜೆಯನುಳಿದ ಜೀವ
ನ್ಮೃತನ ಧರ್ಮಸ್ಥಿತಿಯನಪಹರಿ
ಸುತೆಬಹನದಲ್ಲದವನನಾ ನಿರ್ಯಾಣಕಾಲದೊಳು
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕ ನರಕದೊಳಗ
ದ್ದುತೆ ಬಹನು ಕುಲಕೋಟಿ ಸಹಿತವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೭ ಪದ್ಯ)

ತಾತ್ಪರ್ಯ:
ಅತಿಥಿಪೂಜೆಯನ್ನು ಮಾಡದಿರುವ ಜೀವನ್ಮೃತನ ಧರ್ಮವನ್ನು ಯಮನು ಅಪಹರಿಸುತ್ತಾ ಹೋಗುವುದಲ್ಲದೆ, ಅವನು ಮೃತನಾದ ಮೇಲೆ ಅವನ ಪರಲೋಕ ಗತಿಯನ್ನು ಕೆಡಿಸಿ ಮಹಾನರಕಗಳಲ್ಲಿ ಅವನ ಕುಲಕೋಟಿ ಸಹಿತ ಕೂಡಿ ಹಾಕುತ್ತಾನೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಅತಿಥಿ: ಆಮಂತ್ರಣವನ್ನು ಪಡೆದು ಯಾ ಪಡೆಯದೆ ಮನೆಗೆ ಬಂದ ವ್ಯಕ್ತಿ; ಪೂಜೆ: ಆತಿಥ್ಯ, ಅರ್ಚನೆ; ಉಳಿದ: ಮಿಕ್ಕ; ಜೀವನ್ಮೃತ: ಬದುಕಿದ್ದರೂ ಸತ್ತವನಂತೆ ನಿಶ್ಯಕ್ತನಾದವನು; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಸ್ಥಿತಿ: ಅವಸ್ಥೆ, ದೆಸೆ; ಅಪಹರಿಸು: ಕಿತ್ತುಕೊಳ್ಳು; ನಿರ್ಯಾಣ: ಹೊರಡುವುದು, ಹೊರ ಬೀಳುವುದು; ಕಾಲ: ಸಮಯ; ಗತಿ: ಗಮನ, ಸಂಚಾರ; ಗೆಡಿಸು: ತೊಂದರೆ ಒಡ್ಡು; ಕೊಂಡೊಯ್ದು: ತೆಗೆದುಕೊಂಡು ಹೋಗಿ; ವೈವಸ್ವತ: ಸೂರ‍್ಯಪುತ್ರ, ಶ್ರಾದ್ಧ ದೇವ; ನಾಯಕ: ಮುಂದಾಳು, ಮುಖಂಡ, ದೊರೆ; ನರಕ: ಅಧೋಲೋಕ; ಅದ್ದು: ಮುಳುಗಿಸು; ಕುಲಕೋಟಿ: ವಂವಾವಳಿ; ಸಹಿತ: ಜೊತೆ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅತಿಥಿ +ಪೂಜೆಯನ್+ಉಳಿದ +ಜೀವ
ನ್ಮೃತನ +ಧರ್ಮಸ್ಥಿತಿಯನ್+ಅಪಹರಿ
ಸುತೆ+ಬಹನದ್+ಅಲ್ಲದವನನಾ +ನಿರ್ಯಾಣ+ಕಾಲದೊಳು
ಗತಿಗೆಡಿಸಿ+ ಕೊಂಡೊಯ್ದು +ವೈವ
ಸ್ವತನು +ನಾಯಕ +ನರಕದೊಳಗ್
ಅದ್ದುತೆ +ಬಹನು +ಕುಲಕೋಟಿ +ಸಹಿತ್+ಅವನೀಶ +ಕೇಳೆಂದ

ಅಚ್ಚರಿ:
(೧) ಯಮನೆಂದು ಹೇಳಲು – ವೈವಸ್ವತ ನಾಯಕ
(೨) ಜೀವನ್ಮೃತ – ಪದದ ಬಳಕೆ

ಪದ್ಯ ೮೬: ಇಹಪರದ ಗತಿ ಯಾರಿಂದ ಫಲಿಸುತ್ತದೆ?

ಸತಿಸಹಿತ ವಿರಚಿಸಿದ ಧರ್ಮ
ಸ್ಥಿತಿ ಸಮೃದ್ಧಿಕವಾಗಿ ಸಲುವುದು
ಪತಿಗದಲ್ಲದೆ ತನ್ನ ಸ್ವಾತಂತ್ರ್ಯದಲಿ ಮಾಡಿದುದು
ಅತಿಶಯವನೆಯ್ದುದು ಕಣಾಭೂ
ಪತಿಯೆ ಕೇಳಿಹಪರದ ಗತಿ ನಿಜ
ಸತಿಯ ದೆಸೆಯಿಂದಲ್ಲದೇ ಫಲಿಸುವುದು ಹುಸಿಯೆಂದ (ಉದ್ಯೋಗ ಪರ್ವ, ೪ ಸಂಧಿ, ೮೬ ಪದ್ಯ)

ತಾತ್ಪರ್ಯ:
ಹೆಂಡತಿಯೊಂದಿಗೆ ಮಾಡಿದ ಧರ್ಮವು ಪತಿಗೆ ಫಲಿಸುತ್ತದೆ. ತಾನೊಬ್ಬನೇ ಮಾಡಿದ ಧರ್ಮಕಾರ್ಯಗಳು ಸಮೃದ್ಧಿಯನ್ನು ಕೊಡುವುದಿಲ್ಲ. ಇಹಪರಗಳ ಗತಿಯು ಪತ್ನಿಯಿಂದಲೇ ಫಲಿಸುತ್ತದೆ ಅವಳಿಲ್ಲದೆ ಫಲಿಸುತ್ತದೆ ಎನ್ನುವುದು ಸುಳ್ಳೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಸತಿ: ಪತ್ನಿ, ಹೆಂಡತಿ; ಸಹಿತ: ಜೊತೆ; ವಿರಚಿಸು: ರಚಿಸು; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ, ಪುಣ್ಯ; ಸ್ಥಿತಿ: ಇರವು, ಅಸ್ತಿತ್ವ; ಸಮೃದ್ಧ: ಯಥೇಚ್ಛ, ಆಧಿಕ್ಯ; ಸಲುವು: ಫಲಿಸು; ಸ್ವಾತಂತ್ರ್ಯ: ಬಿಡುಗಡೆ; ಮಾಡಿದ: ಆಚರಿಸಿದ; ಅತಿಶಯ: ಹೆಚ್ಚಳ; ಭೂಪತಿ: ರಾಜ; ಕೇಳು: ಆಲಿಸು; ಇಹಪರ: ಈ ಲೋಕ ಮತ್ತು ಪರಲೋಕ; ಗತಿ: ಇರುವ ಸ್ಥಿತಿ, ಅವಸ್ಥೆ; ನಿಜ: ಸತ್ಯ; ದೆಸೆ: ಕಾರಣ; ಫಲಿಸು: ದೊರಕು; ಹುಸಿ: ಸುಳ್ಳು;

ಪದವಿಂಗಡಣೆ:
ಸತಿಸಹಿತ+ ವಿರಚಿಸಿದ +ಧರ್ಮ
ಸ್ಥಿತಿ +ಸಮೃದ್ಧ್+ಅಧಿಕವಾಗಿ +ಸಲುವುದು
ಪತಿಗ್+ಅದಲ್ಲದೆ +ತನ್ನ +ಸ್ವಾತಂತ್ರ್ಯದಲಿ +ಮಾಡಿದುದು
ಅತಿಶಯವನ್+ಎಯ್ದುದು +ಕಣಾ+ಭೂ
ಪತಿಯೆ +ಕೇಳ್+ಇಹಪರದ +ಗತಿ +ನಿಜ
ಸತಿಯ +ದೆಸೆಯಿಂದಲ್ಲದೇ +ಫಲಿಸುವುದು+ ಹುಸಿಯೆಂದ

ಅಚ್ಚರಿ:
(೧) ಸತಿ, ಪತಿ – ಜೋಡಿ ಪದ
(೨) ಸತಿ, ಪತಿ – ೧, ೬; ೩,೫ ಸಾಲಿನ ಮೊದಲ ಪದ
(೩) ಧ್ಯೇಯ ವಾಕ್ಯದ ಪರಿ – ಇಹಪರದ ಗತಿ ನಿಜಸತಿಯ ದೆಸೆಯಿಂದಲ್ಲದೇ ಫಲಿಸುವುದು ಹುಸಿಯೆಂದ
(೪) ಸತಿ, ಪತಿ, ಗತಿ, ಸ್ಥಿತಿ – ಪ್ರಾಸ ಪದಗಳ ಬಳಕೆ

ಪದ್ಯ ೮೫: ಧೃತರಾಷ್ಟ್ರನು ಮತ್ತಾವ ಪ್ರಶ್ನೆಗಳನ್ನು ಕೇಳಿದ?

ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜಮಂತ್ರದ
ಮರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಿರೆ ಸಾಕೆಂದು ಬಿನ್ನಹ ಮಾಡಿದನು ಭೂಪ (ಉದ್ಯೋಗ ಪರ್ವ, ೪ ಸಂಧಿ, ೮೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನಲ್ಲಿದ್ದ ಶಂಕೆಗಳನ್ನು ಪ್ರಶ್ನೆಯರೂಪದಲ್ಲಿ ಸನತ್ಸುಜಾತರ ಮುಂದೆ ಇಟ್ಟನು. ಈ ಜಗತ್ತಿನಲ್ಲಿ ಧರ್ಮಯೆಂದರೇನು, ಯಾವುದನ್ನು ಧರ್ಮವೆಂದು ಕರೆಯುತ್ತಾರೆ, ಹಾಗಾದರೆ ಅಧರ್ಮ ಯಾವುದು, ರಾಜನೀತಿಯ ಮರ್ಮವೇನು, ಒಳ್ಳೆಯ ಮಾರ್ಗ ಯಾವುದು ಹಾಗೆಯೇ ಕೆಟ್ಟ ಮಾರ್ಗ ಯಾವುದು, ವಿಧಿವಿಹಿತ ದುಷ್ಕರ್ಮವಾವುದು ಇದರ ಭೇದವನ್ನು ದಯಮಾಡಿ ತಿಳಿಸಿ ಎಂದು ತನ್ನ ಕೋರಿಕೆಯನ್ನು ಸನತ್ಸುಜಾತರರ ಮುಂದಿಟ್ಟನು.

ಅರ್ಥ:
ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಮೇಣು: ಮತ್ತು; ಜಗ: ಜಗತ್ತು; ಅಧರ್ಮ: ನ್ಯಾಯವಲ್ಲದುದು; ರಾಜಮಂತ್ರ: ಮಂತ್ರಾಲೋಚನೆ; ಮರ್ಮ: ಅಂತರಾರ್ಥ; ಮಾರ್ಗ: ದಾರಿ; ಅಮಾರ್ಗ: ಅಡ್ಡದಾರಿ; ಕರ್ಮ: ಕಾರ್ಯದ ಫಲ; ಧರ್ಮ, ಕೆಲಸ; ವಿಧಿ:ಆಜ್ಞೆ, ಆದೇಶ, ಬ್ರಹ್ಮ, ಕಟ್ಟಲೆ; ದುಷ್ಕರ್ಮ: ಕೆಟ್ಟ ನಡತೆ; ಭೇದ: ಅಂತರ, ವ್ಯತ್ಯಾಸ; ನಿರ್ಮಿಸು: ರಚಿಸು; ಸಾಕು: ಕೊನೆ, ಅಂತ್ಯ; ಬಿನ್ನಹ: ಕೋರಿಕೆ; ಭೂಪ: ರಾಜ;

ಪದವಿಂಗಡಣೆ:
ಧರ್ಮ+ವಾವುದು+ ಮೇಣು +ಜಗದೊಳ್
ಅಧರ್ಮ+ವಾವುದು +ರಾಜಮಂತ್ರದ
ಮರ್ಮ+ವಾವುದು+ ಮಾರ್ಗ+ವಾವುದ್+ಅಮಾರ್ಗವೆಂದೇನು
ಕರ್ಮವಾವುದು +ವಿಧಿವಿಹಿತ+ ದು
ಷ್ಕರ್ಮ+ವಾವುದದ್+ಎಂಬ +ಭೇದವ
ನಿರ್ಮಿಸಿರೆ +ಸಾಕೆಂದು +ಬಿನ್ನಹ +ಮಾಡಿದನು +ಭೂಪ

ಅಚ್ಚರಿ:
(೧) ಧರ್ಮ, ಅಧರ್ಮ; ಮಾರ್ಗ ಅಮಾರ್ಗ; ಕರ್ಮ ದುಷ್ಕರ್ಮ – ವಿರುದ್ಧ ಪದಗಳು
(೨) ಧರ್ಮ, ಅಧರ್ಮ, ಮರ್ಮ, ಕರ್ಮ, ದುಷ್ಕರ್ಮ – ಪ್ರಾಸ ಪದಗಳು

ಪದ್ಯ ೮೪: ಯಾವ ರೀತಿ ರಾಜನಿಂದ ದೇಶಕ್ಕೆ ಹಾನಿ?

ನೀತಿವಿದನಲ್ಲದ ಕುಮಂತ್ರಿ ವಿ
ನೀತಿಪರನಲ್ಲದ ಪುರೋಹಿತ
ನೇತಕವರಿಂದಾವ ಪುರುಷಾರ್ಥಂಗಳೆಯ್ದುವುವು
ಕಾತರಿಸಿ ಸಮರಾಂಗಣಕೆ ಭಯ
ಭೀತನಹ ಭೂಭುಜನ ದೆಸೆಯಿಂ
ಬೀತು ಹೋಗದೆ ಸಕಲ ಸಂಪದವರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೪ ಪದ್ಯ)

ತಾತ್ಪರ್ಯ:
ರಾಜನೀತಿಯನ್ನು ಅರಿಯದ ದುಷ್ಟಮಂತ್ರಿ, ಒಳ್ಳೆಯ ನಡತೆಗಳನ್ನೊಳಗಿಸಿಗೊಳ್ಳದ ಪುರೋಹಿತ ಇವರುಗಳಿಂದ ಯಾವ ಪುರುಷಾರ್ಥಗಳು ಸಿದ್ಧಿಸುತ್ತವೆ? ಯುದ್ಧಕ್ಕೆ ಭಯಪಡುವ ರಾಜನಿಂದ ದೇಶದ ಸಕಲ ಸಂಪತ್ತು ನಾಶವಾಗದೆ ಇರುತ್ತದೆಯೆ? ಎಂದು ಸನತ್ಸುಜಾತರು ಧೃತರಾಷ್ಟ್ರನನ್ನು ಪ್ರಶ್ನಿಸಿದರು.

ಅರ್ಥ:
ನೀತಿ: ಒಳ್ಳೆಯ ನಡತೆ, ಶಿಷ್ಟಾಚಾರ; ಕುಮಂತ್ರಿ: ಕೆಟ್ಟ ಸಚಿವ; ವಿನೀತಿ: ಒಳ್ಳೆಯ ನಡತೆ; ಪರ: ಕಡೆ, ಪಕ್ಷ; ಪುರೋಹಿತ: ವೇದೋಕ್ತ ವಿಧಿ, ಧಾರ್ಮಿಕ ವ್ರತ ಮಾಡಿಸುವವ; ಏತಕೆ: ಯಾಕೆ; ಪುರುಷಾರ್ಥ: ಉಪಕಾರ, ಸಹಾಯ ; ಕಾತರಿಸು:ತವಕಗೊಳ್ಳು; ಸಮರಾಂಗಣ: ಯುದ್ಧ; ಭಯ: ಅಂಜಿಕೆ; ಭೀತಿ: ಹೆದರಿಕೆ; ಭೂಭುಜ: ರಾಜ; ದೆಸೆ: ಕಾರಣ; ಹೋಗು: ತೆರಳು; ಸಕಲ: ಎಲ್ಲಾ; ಸಂಪದ: ಐಶ್ವರ್ಯ, ಸಂಪತ್ತು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀತಿವಿದನ್+ಅಲ್ಲದ +ಕುಮಂತ್ರಿ +ವಿ
ನೀತಿ+ಪರನಲ್ಲದ+ ಪುರೋಹಿತನ್
ಏತಕ್+ಅವರಿಂದಾವ+ ಪುರುಷಾರ್ಥಂಗಳೆಯ್ದುವುವು
ಕಾತರಿಸಿ+ ಸಮರಾಂಗಣಕೆ+ ಭಯ
ಭೀತನಹ +ಭೂಭುಜನ +ದೆಸೆಯಿಂ
ಬೀತು+ ಹೋಗದೆ +ಸಕಲ +ಸಂಪದವ್+ಅರಸ +ಕೇಳೆಂದ

ಅಚ್ಚರಿ:
(೧) ನೀತಿ, ವಿನೀತಿ – ಸಮನಾರ್ಥಕ ಪದ
(೨) ಭೀತ, ಬೀತು- ೫, ೬ ಸಾಲಿನ ಮೊದಲ ಪದ
(೩) ‘ಭ’ ಕಾರದ ತ್ರಿವಳಿ ಪದ – ಭಯ ಭೀತನಹ ಭೂಭುಜ

ಪದ್ಯ ೮೨: ಉತ್ತಮಪುರುಷರಾರು?

ಮುಡಿಯನೋಸರಿಸುತ್ತ ಮೇಲುದ
ನಡಿಗಡಿಗೆ ಸರಿವುತ್ತ ಮೌನವ
ಹಿಡಿದಧೋಮುಖಿಯಾಗಿ ಕಿಗ್ಗಣ್ಣಿಕ್ಕಿ ಕೆಲಬಲನ
ಬಿಡದೆ ನೋಡುತ ಮುಗುಳು ನಗೆಯಲಿ
ಜಡಿದು ಜಾರುವ ಜಾರವನಿತೆಯ
ಗೊಡವೆಗೊಳಗಾಗದವರುತ್ತಮ ಪುರುಷರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೨ ಪದ್ಯ)

ತಾತ್ಪರ್ಯ:
ತಲೆಗೂದಲನ್ನು ಮತ್ತೆ ಮತ್ತೆ ಓರೆ ಮಾಡುತ್ತಾ, ಸೆರಗನ್ನು ಮತ್ತೆ ಮತ್ತೆ ಸರಿಮಾಡಿಕೊಳ್ಳುತ್ತಾ, ಕೆಳ ಮುಖಮಾಡಿ ಮೌನದಿಂದಿರುತ್ತಾ, ಅಕ್ಕ ಪಕ್ಕದವರನ್ನು ಯಾವಾಗಲೂ ಓರೆ ಕಣ್ಣುಗಳಿಂದ ನೋಡುತ್ತಾ, ಮುಗುಳು ನಗುತ್ತಾ ಜಾರಿ ಹೋಗುವ ಜಾರೆಯ ಪ್ರಭಾವಕ್ಕೆ ಒಳಗಾಗದವರೇ ಉತ್ತಮ ಪುರುಷರೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಮುಡಿ: ತಲೆ; ಓಸರಿಸು: ಓರೆಮಾಡು; ಮೇಲುದ: ಸೆರಗು, ಮೇಲಿನ ವಸ್ತ್ರ; ಅಡಿಗಡಿ: ಯಾವಾಗಲೂ; ಸರಿ: ಸರಿಸು, ಸರಿಮಾಡಿಕೊಳ್ಳು; ಮೌನ: ಮಾತಿಲ್ಲದ; ಹಿಡಿದು: ಬಂಧಿಸಿ; ಅಧೋ: ಕೆಳಗೆ ಮುಖ: ಆನನ; ಅಧೋಮುಖಿ: ಕೆಳಗೆ ನೋಡುತ್ತಾ; ಕಿಗ್ಗಣ್ಣು: ಓರೆಕಣ್ಣು; ಕೆಲಬಲ: ಅಕ್ಕಪಕ್ಕ; ಬಿಡದೆ: ಯಾವಾಗಲು; ನೋಡು: ವೀಕ್ಷಿಸು; ಮುಗುಳುನಗೆ: ಮಂದಹಾಸ; ಜಡಿ: ಎಳೆ, ಸೆಳೆ; ಜಾರುವ: ಕೆಳಬೀಳುವ; ಜಾರ: ವ್ಯಭಿಚಾರಿ, ಹಾದರಿಗ; ವನಿತೆ: ಹೆಂಗಸು; ಒಳಗಾಗು: ಅಧೀನ, ವಶ; ಉತ್ತಮ: ಶ್ರೇಷ್ಠ; ಪುರುಷ: ಮನುಷ್ಯ;

ಪದವಿಂಗಡಣೆ:
ಮುಡಿಯನ್+ಓಸರಿಸುತ್ತ +ಮೇಲುದನ್
ಅಡಿಗಡಿಗೆ +ಸರಿವುತ್ತ +ಮೌನವ
ಹಿಡಿದ್+ಅಧೋಮುಖಿಯಾಗಿ +ಕಿಗ್ಗಣ್ಣಿಕ್ಕಿ +ಕೆಲಬಲನ
ಬಿಡದೆ +ನೋಡುತ +ಮುಗುಳು +ನಗೆಯಲಿ
ಜಡಿದು +ಜಾರುವ +ಜಾರವನಿತೆಯ
ಗೊಡವೆಗೊಳಗ್+ಆಗದವರ್+ಉತ್ತಮ +ಪುರುಷರುಗಳೆಂದ

ಅಚ್ಚರಿ:
(೧) ಕೆಳೆಗೆನೋಡುವುದನ್ನು ವರ್ಣಿಸಲು ಬಳಸಿದ ಪದ – ಅಧೋಮುಖಿ
(೨) ೫ ಸಾಲಿನ ಎಲ್ಲಾ ಪದ ‘ಜ’ ಕಾರದಿಂದ ಪ್ರಾರಂಭ – ಜಡಿದು ಜಾರುವ ಜಾರವನಿತೆ
(೩) ಸೆರಗನ್ನು ಹೇಳಲು ಬಳಸಿದ ಪದ ಮೆಲುದನು